ETV Bharat / state

Sudeep: ನಿರ್ಮಾಪಕರ ವಿರುದ್ಧ ಮಾನಹಾನಿ ಆರೋಪ ಕೇಸ್; ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ ನಟ ಸುದೀಪ್

author img

By

Published : Aug 10, 2023, 10:23 PM IST

Actor Sudeep: ನಿರ್ಮಾಪಕರ ಮಾನಹಾನಿ ಹೇಳಿಕೆ ಮತ್ತು ಸುಳ್ಳು ಆರೋಪ ಪ್ರಕರಣ ಸಂಬಂಧ ನ್ಯಾಯಾಲಯ ಇಂದು ನಟ ಸುದೀಪ್​ ಅವರ ಹೇಳಿಕೆ ದಾಖಲಿಸಿಕೊಂಡಿದೆ. ಶುಕ್ರವಾರಕ್ಕೆ ಆದೇಶ ಕಾಯ್ದಿರಿಸಿದೆ.

defamation-allegation-against-the-producer-actor-sudeep-filed-a-statement-in-the-court
ನಿರ್ಮಾಪಕರ ವಿರುದ್ಧ ಮಾನಹಾನಿ ಆರೋಪ : ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಟ ಸುದೀಪ್

ಬೆಂಗಳೂರು : ಚಿತ್ರ ನಿರ್ಮಾಪಕ ಎಂ.ಎನ್.ಕುಮಾರ್ ಮತ್ತು ಎಂ.ಎನ್.ಸುರೇಶ್ ಅವರ ವಿರುದ್ಧ ಮಾನಹಾನಿ ದಾವೆ ದಾಖಲಿಸಬೇಕು ಹಾಗೂ 10 ಸಾವಿರ ರೂಪಾಯಿ ದಂಡ ಪಾವತಿಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಖಾಸಗಿ ದೂರಿನ ಸಂಬಂಧ ನಟ ಸುದೀಪ್ ಅವರ ಪ್ರಮಾಣೀಕೃತ ಹೇಳಿಕೆಯನ್ನು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ ಇಂದು ದಾಖಲಿಸಿಕೊಂಡಿದೆ.

ಎಂ.ಎನ್.ಕುಮಾರ್ ಮತ್ತು ಎಂ.ಎನ್.ಸುರೇಶ್ ಅವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ಮತ್ತು ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಸುದೀಪ್ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ 13ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ ಆದೇಶ ಕಾಯ್ದಿರಿಸಿದರು.

ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ತಮ್ಮ ವಕೀಲರೊಂದಿಗೆ ಗುರುವಾರ ವಿಚಾರಣೆಗೆ ಹಾಜರಾದ ಸುದೀಪ್, ಎಂ.ಎನ್.ಕುಮಾರ್ ಮತ್ತು ಎಂ.ಎನ್.ಸುರೇಶ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ತಮಗೆ ಹಣದ ನೆರವು ನೀಡಿರುವುದಾಗಿ ಸುದ್ದಿಗೋಷ್ಠಿ ನಡೆಸಿ ಸುಳ್ಳು ಹೇಳಿದ್ದಾರೆ. ಇದರಿಂದ ಹಲವರು ತಮ್ಮನ್ನು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ 22 ವರ್ಷಗಳಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಗಳಿಸಿದ್ದ ಹೆಸರು ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂಬುದೂ ಸೇರಿದಂತೆ ಖಾಸಗಿ ದೂರಿನಲ್ಲಿ ಉಲ್ಲೇಖಿಸಿರುವ ವಿಚಾರಗಳ ಬಗ್ಗೆ ಪ್ರಮಾಣೀಕೃತ ಹೇಳಿಕೆ ದಾಖಲಿಸಿ, ಕೆಲವೊಂದು ದಾಖಲೆ ಒದಗಿಸಿದ್ದಾರೆ.

ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಿರ್ಮಾಪಕರು ಕ್ಷಮೆ ಕೋರಿದರೆ ಅವರನ್ನು ಕ್ಷಮಿಸುವಿರಾ? ಅವರೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳುವಿರಾ ಎಂದು ಸುದೀಪ್‌ಗೆ ಕೇಳಿದರು. ಈ ಪ್ರಶ್ನೆಗೆ ಸುದೀಪ್ ಯಾವುದೇ ಹೇಳಿಕೆ ನೀಡದಿದ್ದರೂ, ಅವರ ಪರ ವಕೀಲರು ಉತ್ತರಿಸಿ, ಯಾವುದೇ ರೀತಿಯಲ್ಲಿಯೂ ರಾಜಿ ಸಂಧಾನ ಮಾಡಿಕೊಳ್ಳುವುದಿಲ್ಲ. ಈ ರೀತಿ ಮಾನಹಾನಿ ಮಾಡಿದವರಿಗೆ ಪಾಠ ಕಲಿಸಬೇಕಿದೆ ಎಂದು ಹೇಳಿದರು.

ನಂತರ ಸುದೀಪ್ ನೀಡಿದ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ಈ ಸಂಬಂಧದ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದರು.

ಇದನ್ನೂ ಓದಿ : ಕಿಚ್ಚ- ಕುಮಾರ್​ ವಾರ್​: ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವೆಂದ ನಿರ್ಮಾಪಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.