ETV Bharat / state

ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭ : ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಯು ಬಿ ವೆಂಕಟೇಶ್

author img

By

Published : Feb 15, 2022, 3:07 PM IST

ಕೇವಲ ಹಸಿರು ಮತ್ತು ಕೇಸರಿ ಮಾತ್ರ ಚರ್ಚೆಯಲ್ಲಿದೆ. ಬಿಳಿಯ ಬಣ್ಣ ವಿಚಾರ ಬರ್ತಿಲ್ಲ. ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಹಿಜಾಬ್ ವಿಚಾರ ಇಷ್ಟು ದೊಡ್ಡ ಚರ್ಚೆ ಆಗುತ್ತಿರುವುದು ವಿಪರ್ಯಾಸ. ಸಚಿವರೊಬ್ಬರು ಗರ್ಭ ಸಂಸ್ಕಾರ ವಿಚಾರ ಪ್ರಸ್ತಾಪವಾಗಿದೆ. ಇದು ಪ್ರಸ್ತುತವೇ ಎಂದು ಚರ್ಚಿಸಬೇಕು. ಧಾರ್ಮಿಕತೆ ಒಂದು ಪರಿದಿಯಲ್ಲಿರಲಿ..

Debate over Governor's speech start
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭ

ಬೆಂಗಳೂರು : ಕೋವಿಡ್ ವ್ಯಾಕ್ಸಿನೇಷನ್‌ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡಿರುವ ಸಾಧನೆಗೆ ವಂದಿಸುತ್ತೇನೆ ಎಂದು ಬಿಜೆಪಿ ಸದಸ್ಯ ಅರುಣ್ ಶಹಾಪೂರ್ ತಿಳಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮಂಡಿಸಿ ಅದರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತಮ ರೀತಿಯಲ್ಲಿ ವ್ಯಾಕ್ಸಿನೇಷನ್‌ ಮಾಡಿದ್ದರಿಂದ ಕೋವಿಡ್ 3ನೇ ಅಲೆ ಅಷ್ಟು ದೊಡ್ಡ ಪರಿಣಾಮ ಬೀರಲಿಲ್ಲ.

ಆರಂಭದ ಮೊದಲ ಅಲೆ, ಡೆಲ್ಟಾ ಮಾರಕ ವೈರಸ್ ವ್ಯಾಪಿಸಿದ ಎರಡನೇ ಅಲೆ ಸಂದರ್ಭದಲ್ಲಿ ಸಾಕಷ್ಟು ಆತಂಕ, ಸಮಸ್ಯೆ ಎದುರಾಗಿತ್ತು. ಆದರೆ, ಮೂರನೇ ಸಲೆ ಸಮರ್ಥವಾಗಿ ಎದುರಿಸಿದ್ದೇವೆ.

ವೆಂಟಿಲೇಟರ್ ಕೊರತೆ ನಿವಾರಣೆ, ತಪಾಸಣೆಯಲ್ಲಿ ದೊಡ್ಡ ಸಾಧನೆ, ಯಶಸ್ವಿಯಾಗಿ ಹೋಮ್​​ ಕ್ವಾರಂಟೈನ್ ಜಾರಿ, ಇವು ನಮ್ಮ ರಾಜ್ಯ ಕೋವಿಡ್​​ನನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಿವೆ. ಕೋವಿಡ್ ವಾರಿಯರ್​​ಗಳಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇದರ ಬಗ್ಗೆ ರಾಜ್ಯಪಾಲರು ಗಮನ ಸೆಳೆದಿದ್ದಾರೆ ಎಂದರು.

ಆರೋಗ್ಯದ ನಂತರ ದೊಡ್ಡದಾಗಿ ಸಮಸ್ಯೆಗೆ ಒಳಗಾಗಿದ್ದು ಶಿಕ್ಷಣ ವ್ಯವಸ್ಥೆ. ವಿದ್ಯಾಗಮ ಯಶಸ್ವಿಯಾಗಿ ಜಾರಿಗೆ ತರಲಾಯಿತು. ರಾಜ್ಯ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಅದನ್ನು ಎದುರಿಸಲು ಸರ್ಕಾರ ದಿಟ್ಟ ಕ್ರಮಕೈಗೊಂಡಿದೆ. ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆರಂಭಿಸಿರುವುದು ಅತ್ಯಂತ ದೊಡ್ಡ ವಿಚಾರ. ಇದರ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಕೋರುತ್ತೇನೆ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಮಾತನಾಡಿ, ರಾಜ್ಯಪಾಲರ ಔಪಚಾರಿಕ ಭಾಷಣ ಇದಾಗಿದೆ. ಓದಿದ್ದು ಮಾತ್ರ ಅವರು. ಅಲ್ಲಾವುದ್ದೀನ್ ಅದ್ಭುತ ದ್ವೀಪದಂತೆ ಭಾಷಣ ಓದಿಸಲಾಗಿದೆ. ಏಪ್ರಿಲ್​ನಿಂದ 1 ಕೆಜಿ ಅಕ್ಕಿ ಹೆಚ್ಚಿಸುತ್ತೇವೆ ಎನ್ನುದನ್ನು ಬಿಟ್ಟರೆ ಬೇರೆ ವಿಚಾರ ಇಲ್ಲ.

ಸರ್ಕಾರದ ದಿಕ್ಸೂಚಿ ಆಗಬೇಕಿದ್ದ ಭಾಷಣ ಹಳೆ ವಿಚಾರಗಳ ಪ್ರಸ್ತಾಪಕ್ಕೆ ಸೀಮಿತವಾಗಿದ್ದು ವಿಷಾದನೀಯ. ಕೋವಿಡ್ ಹೆಸರಲ್ಲಿ ಎರಡು ವರ್ಷದಲ್ಲಿ ಯಾವುದೇ ಕೆಲಸ ಆಗಿಲ್ಲ. ಇದರ ಖರ್ಚು-ವೆಚ್ಚದ ಶ್ವೇತಪತ್ರ ಹೊರಡಿಸುವಂತೆ ಕೋರಿದೆವು, ಅದಕ್ಕೂ ಉತ್ತರ ಸಿಕ್ಕಿಲ್ಲ. ಸಾವಿನ ಸಂಖ್ಯೆಯನ್ನೂ ಮುಚ್ಚಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎತ್ತಿನಹೊಳೆ ವಿಚಾರ ರಾಜ್ಯಪಾಲರ ಮೂಲಕ ಪ್ರಸ್ತಾಪಿಸಿದ್ದೀರಿ. 9 ತಿಂಗಳಿಂದ ಹಣ ಬಿಡುಗಡೆ ಆಗಿಲ್ಲ. 9 ಸಾವಿರ ಕೋಟಿ ಯೋಜನೆ 25 ಸಾವಿರ ಕೋಟಿಗೆ ತಲುಪಿದೆ. ಕೋವಿಡ್ ವಾರಿಯರ್ ಸತ್ತರೆ 30 ಲಕ್ಷ ನೀಡುತ್ತೇವೆ ಎಂದಿರಿ. ಎಷ್ಟು ಜನರಿಗೆ ಸಿಕ್ಕಿದೆ. ಅನಗತ್ಯ ಮಾಹಿತಿಯನ್ನು ಕೋವಿಡ್ ಮೃತರ ಕುಟುಂಬದಿಂದ ಕೇಳಲಾಗುತ್ತಿದೆ.

ಮನೆ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ಮೂರು ವರ್ಷದಿಂದ ಬೆಳಗಾವಿ ಭಾಗದ ಮನೆ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಭರವಸೆ ನೀಡಿದರೆ ಸಾಲದು. ಕಲ್ಯಾಣ ಕರ್ನಾಟಕ ಬೋರ್ಡ್ ಈಗ ಆಗಿದೆ. ಮೂರು ವರ್ಷ ಬೇಕಾಯಿತು. ಅಧ್ಯಕ್ಷರ ನೇಮಕಕ್ಕೆ ಒಂದೂವರೆ ವರ್ಷ ಬೇಕಾಯಿತು.

ಉಸ್ತುವಾರಿ ಸಚಿವರ ನೇಮಕ‌ ಆಗಬೇಕಿತ್ತು. ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಈ ಸರ್ಕಾರ ಅನೈತಿಕವಾಗಿ ಬಂತು. ಯಡಿಯೂರಪ್ಪ ಬಂದಾಗೆಲ್ಲಾ ಇದೇ ರೀತಿ ಆಗಿದೆ. ಬಸವರಾಜ್ ಬೊಮ್ಮಾಯಿ ಏನು ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಯು.ಬಿ. ವೆಂಕಟೇಶ್ ಹೇಳಿದರು.

ಇದನ್ನೂ ಓದಿ:ಸಚಿವ ಈಶ್ವರಪ್ಪ ಹೇಳಿಕೆ ಭಾರತ ಮಾತೆಗೆ ಮಾಡಿದ ದ್ರೋಹ : ಯು ಟಿ ಖಾದರ್

ಆಗ ಆಡಳಿತ ಪಕ್ಷದ ಸದಸ್ಯ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿ, ಅನೈತಿಕ ಪದ ತೆಗೆಯುವಂತೆ ಒತ್ತಾಯಿಸಿದರು. ಆಡಳಿತ- ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಭೈರತಿ ಬಸವರಾಜು ಸಹ ಆಕ್ರೋಶ ವ್ಯಕ್ತಪಡಿಸಿದರು. ಸಭಾಪತಿ ಪೀಠದಲ್ಲಿದ್ದ ಶ್ರೀಕಂಠೇಗೌಡರು, ಅನೈತಿಕ ಸರ್ಕಾರ ಎನ್ನುವುದು ಅಸಂಸದೀಯ ಪದ ಅಲ್ಲ. ಇದನ್ನು ಕಡತದಿಂದ ತೆಗೆಯುವ ಅಗತ್ಯವಿಲ್ಲ. ನಿಮ್ಮ ಚರ್ಚೆ ಸಂದರ್ಭದಲ್ಲಿ ಉತ್ತರ ನೀಡಿ ಎಂದರು.

ಮಾತು ಮುಂದುವರಿಸಿದ ಯು.ಬಿ. ವೆಂಕಟೇಶ್, ಭೂತ, ಭವಿಷ್ಯ, ವರ್ತಮಾನದ ಅರಿವು ಸರ್ಕಾರಕ್ಕೆ ಇಲ್ಲ. ಕೋವಿಡ್ ವಿಚಾರ ಮುಂದಿಟ್ಟು ರಾಜ್ಯವನ್ನು ಮುಗಿಸಿ ಬಿಟ್ಟಿರಿ. ಭವಿಷ್ಯದ ವಿಚಾರ ಯಾಕೆ ಪ್ರಸ್ತಾಪಿಸುತ್ತಿಲ್ಲ. ಸರ್ಕಾರಕ್ಕೆ ಇನ್ನೂ ಒಂದು ವರ್ಷ ಕಾಲಾವಕಾಶ ಇದೆ. ತಿದ್ದಿಕೊಳ್ಳಿ, ಮುಖ್ಯಮಂತ್ರಿಗಳು ಬದಲಾದರೂ ಅದೇ ವೇಶ ಮುಂದುವರಿಯುತ್ತಿದೆ.

ಯಾವುದೇ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಸರ್ಕಾರದಲ್ಲಿ ಶೇ. 50ರಷ್ಟು ಕೆಲಸಗಾರರಿಲ್ಲ. ಶೇ.20ಕ್ಕೂ ಹೆಚ್ಚು ಮಂದಿ ಗುತ್ತಿಗೆ ಕೆಲಸಗಾರರಾಗಿದ್ದಾರೆ. ವಿದೇಶದಲ್ಲಿರುವವರ ಜಮೀನನ್ನು ಬೇನಾಮಿಯಾಗಿ ಬೇರೆಯವರಿಗೆ ಪರಬಾರೆ ಮಾಡಲಾಗುತ್ತಿದೆ. ಅಧಿಕಾರಿಗಳು ಶಾಮೀಲಾಗಿದ್ದಾರೆ. ಆಡಳಿತ ಯಾಕೆ ನಡೆಸಲ್ಲ. ನೇಮಕ ಯಾಕೆ ಆಗುತ್ತಿಲ್ಲ. ಯಾವ ವಿಭಾಗದಲ್ಲಿ ಸರ್ಕಾರ ಉದ್ಧಾರ ಮಾಡಿದೆ. ಶಿಕ್ಷಣ, ಆರೋಗ್ಯದಲ್ಲಿ ಯಾವ ಸಾಧನೆ ಆಗಿದೆ ಎಂದು ಪ್ರಶ್ನಿಸಿದರು.

ಬೀದರ್, ಕಲಬುರಗಿ ಭಾಗದಲ್ಲಿ ವಿದ್ಯುತ್, ಇಂಟರ್​​ನೆಟ್ ಸೇವೆ ಸಮರ್ಪಕವಾಗಿ ಸಿಗಲ್ಲ. ಶಿಕ್ಷಣ ಹೇಗೆ ಗುಣಮಟ್ಟ ಪಡೆಯಲಿದೆ ಎಂದ ಯು.ಬಿ. ವೆಂಕಟೇಶ್​​ಗೆ ರಘುನಾಥ್ ವಲ್ಯಾಪುರೆ ಮಧ್ಯಪ್ರವೇಶಿಸಿ ಆಕ್ಷೇಪ ವ್ಯಕ್ತಪಡಿಸಿದರು. ಅನಗತ್ಯವಾಗಿ‌ ಬೀದರ್ ಜಿಲ್ಲೆ ಅವಹೇಳನ ಮಾಡಬೇಡಿ. ನಿಮ್ಮಿಂದಲೇ ಆ ಭಾಗದ ಹೆಸರು ಕೆಟ್ಟಿದೆ ಎಂದರು.

ಕೇಂದ್ರದಿಂದ ಬರುವ ಅನುದಾನ ತನ್ನಿ. ಸರ್ಕಾರ ಜನಪರ ಕೆಲಸ ಮಾಡಬೇಕು. ನೀರಾವರಿಗೆ ಈ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಅಭಿವೃದ್ಧಿ ಪಥದತ್ತ ರಾಜ್ಯವನ್ನು ಕೊಂಡೊಯ್ಯಬೇಕು? ಬಿಜೆಪಿ ಅಧಿಕಾರಕ್ಕೆ ಬರುವಾಗ ಎಲ್ಲಿದ್ದೆವು? ಈಗ ಎಲ್ಲಿದ್ದೇವೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಸಲಹೆ ಇತ್ತರು.

ಹರೀಶ್ ಕುಮಾರ್ ಮಾತನಾಡಿ, ವಿಕಲಚೇತನರಿಗೆ ಅನುದಾನ ಕಡಿತ ಮಾಡಬಾರದು. ಕೊಳವೇಬಾವಿ ಸಂಪರ್ಕ ಆಗುತ್ತಿಲ್ಲ. ದಾದಿಯರಿಗೆ ರಿಸ್ಕ್ ಭತ್ಯೆ ನೀಡಬೇಕು. ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ರಾಜ್ಯಪಾಲರ ಭಾಷಣದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಅಭಿವೃದ್ಧಿ ಕಾಮಗಾರಿ ನಿಂತಿದೆ. ಗುತ್ತಿಗೆ ಕೆಲಸಗಳು ನಿಂತಿವೆ. ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕು.

ಎಂಡೋಸಲ್ಫಾನ್​​ನಿಂದ 3600ಕ್ಕೂ ಹೆಚ್ಚು ಮಂದಿ ಕರಾವಳಿ ಭಾಗದ ಜನ ಬಳಲುತ್ತಿದ್ದಾರೆ. ಮೂರು ಆರೈಕೆ ಕೇಂದ್ರ ಇದ್ದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. 3 ಸಾವಿರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮಾಸಾಶನ ಸರಿಯಾಗಿ ಸಿಗುತ್ತಿಲ್ಲ. ಎಂಡೋಸಲ್ಫಾನ್ ಪೀಡಿತ ಕುಟುಂಬದ ಹೆಣ್ಣು ಮಗಳಿಗೆ ವಿವಾಹ ಆಗುತ್ತಿಲ್ಲ.

ಬೇರೆ ಕುಟುಂಬ ಹೆಣ್ಣು ಕೊಡುತ್ತಿಲ್ಲ. ಒಂದು ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಹೊಸ ಸಿಎಂ ಬಂದರೂ ಆಡಳಿತ ಯಂತ್ರ ಚುರುಕು ಪಡೆದಿಲ್ಲ. ಅಧಿಕಾರಿಗಳ ಧೋರಣೆ ಬದಲಾಗಿಲ್ಲ. ಜನ ಅಚ್ಛೇ ದಿನ್ ನಿರೀಕ್ಷೆಯಲ್ಲಿದ್ದಾರೆ ಎಂದರು.

ಕೇವಲ ಹಸಿರು ಮತ್ತು ಕೇಸರಿ ಮಾತ್ರ ಚರ್ಚೆಯಲ್ಲಿದೆ. ಬಿಳಿಯ ಬಣ್ಣ ವಿಚಾರ ಬರ್ತಿಲ್ಲ. ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಹಿಜಾಬ್ ವಿಚಾರ ಇಷ್ಟು ದೊಡ್ಡ ಚರ್ಚೆ ಆಗುತ್ತಿರುವುದು ವಿಪರ್ಯಾಸ. ಸಚಿವರೊಬ್ಬರು ಗರ್ಭ ಸಂಸ್ಕಾರ ವಿಚಾರ ಪ್ರಸ್ತಾಪವಾಗಿದೆ. ಇದು ಪ್ರಸ್ತುತವೇ ಎಂದು ಚರ್ಚಿಸಬೇಕು. ಧಾರ್ಮಿಕತೆ ಒಂದು ಪರಿದಿಯಲ್ಲಿರಲಿ.

ದೊಡ್ಡ ಕನಸು ಕಾಣಬೇಕು. ನೆಹರು ಇಂತವರಲ್ಲಿ ಒಬ್ಬರು. ಇವರ ಕನಸಿನ ದೇಶ ಇಂದು ಬೆಳೆದಿದೆ. ಭವ್ಯ ಭಾರತ ನಿರ್ಮಾಣದ ಯಶಸ್ಸು ಕಂಡ ಶ್ರೀಮಂತ ಕುಟುಂಬದ ಬಗ್ಗೆ ಅಗೌರವದ ಮಾತು ಕೇಳಿ ಬರುತ್ತಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ. ಇಂದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದು ಬದಲಾಗಬೇಕು, ಜನ ಕಂಗೆಟ್ಟಿದ್ದಾರೆ. ಜನರ ಭಾವನೆ ಕೆರಳಿಸಿ ಬೇರೆಡೆ ಸೆಳೆಯುವ ಯತ್ನ ನಡೆಯುತ್ತಿದೆ. ಅದು ಸರಿಯಲ್ಲ ಎಂದು ಹೇಳಿದರು.

ಎಂಡೋಸಲ್ಫಾನ್ ಅತ್ಯಂತ ಗಂಭೀರವಾಗಿದ್ದು, ಈ ಸಂಬಂಧ ಸರ್ಕಾರ ಒಂದು ನಿರ್ದಿಷ್ಟ ಕ್ರಮಕೈಗೊಳ್ಳುವಂತೆ ಸೂಚಿಸಬೇಕು ಎಂದು ಸಭಾಪತಿಗಳ ಪೀಠದ ಶ್ರೀಕಂಠೇಗೌಡರು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಒತ್ತಾಯ ಮಾಡಿದರು. ತಾವು ಸಹ ಅದೇ ಭಾಗದ ಸದಸ್ಯರಾಗಿದ್ದು, ಈ ಸಮಸ್ಯೆಯ ಅರಿವು ತಮಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.