ETV Bharat / state

ರಸ್ತೆಗುಂಡಿ ಮುಚ್ಚಲು ನವೆಂಬರ್ 19 ರವರೆಗೆ ಗಡುವು: ತುಷಾರ್ ಗಿರಿನಾಥ್

author img

By

Published : Nov 15, 2022, 7:59 PM IST

ರಸ್ತೆಗುಂಡಿ ಸಂಪೂರ್ಣವಾಗಿ ಮುಚ್ಚಲು ನವೆಂಬರ್ 14ರವರೆಗೆ ಗಡುವು ನೀಡಲಾಗಿತ್ತು. ಆದರೆ, ಮತ್ತೆ ಮಳೆ ಬಂದಿದ್ದರಿಂದ ಗಡುವು ಅವಧಿ ವಿಸ್ತರಿಸಲಾಗಿದ್ದು, ನವೆಂಬರ್ 19 ರ ವರೆಗೆ ಅಧಿಕಾರಿಗಳಿಗೆ ಕಾಲಾವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

BBMP Chief Commissioner Tushar Giri Nath
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ರಸ್ತೆಗುಂಡಿ ಮುಚ್ಚಲು ಇಂದಿನವರೆಗೆ ಇದ್ದ ಕಾಲಾವಕಾಶವನ್ನು ಮಳೆಯ ಕಾರಣದಿಂದಾಗಿ ನವೆಂಬರ್ 19 ರವರೆಗೆ ಮುಂದೂಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಮೇ ತಿಂಗಳಿಂದ ಇಲ್ಲಿಯವರೆಗೂ 33 ಸಾವಿರ ರಸ್ತೆಗುಂಡಿ ಗುರುತಿಸಲಾಗಿದೆ.

ಈ ಪೈಕಿ 32 ಸಾವಿರ ಗುಂಡಿಗಳನ್ನು ಮುಚ್ಚಲಾಗಿದ್ದು, 1 ಸಾವಿರ ಗುಂಡಿಗಳು ಮಾತ್ರ ಬಾಕಿ ಉಳಿದಿವೆ. ರಸ್ತೆಗುಂಡಿ ಸಂಪೂರ್ಣವಾಗಿ ಮುಚ್ಚಲು ನವೆಂಬರ್ 14ರವರೆಗೆ ಗಡುವು ನೀಡಲಾಗಿತ್ತು. ಆದರೆ, ಮತ್ತೆ ಮಳೆ ಬಂದಿದ್ದರಿಂದ ಗಡುವು ಅವಧಿ ವಿಸ್ತರಿಸಲಾಗಿದ್ದು, ನವೆಂಬರ್ 19 ರ ವರೆಗೆ ಅಧಿಕಾರಿಗಳಿಗೆ ಕಾಲಾವಕಾಶ ನೀಡಲಾಗಿದೆ. ನವೆಂಬರ್ 17 ರವರೆಗೂ ಮಳೆ ಮುನ್ಸೂಚನೆ ಇದೆ. ಆದರೂ ನವೆಂಬರ್ 19 ಶನಿವಾರದೊಳಗೆ ಎಲ್ಲ ರಸ್ತೆಗುಂಡಿ ರಿಪೇರಿ ಮಾಡುತ್ತೇವೆ ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಅಂತೆಯೇ ವಾಟ್ಸ್​ಆ್ಯಪ್​​ನಲ್ಲಿ ಬಂದ ದೂರುಗಳಿಗೂ ಸ್ಪಂದಿಸಲಾಗುತ್ತಿದೆ. ಪಾತ್ ಹೋಲ್ ಫ್ರೀ ಝೋನ್ ಎಂದು ಬಿಬಿಎಂಪಿ ಘೋಷಣೆ ಮಾಡಲಿದೆ. ಬುಧವಾರ ಸಂಜೆಯಿಂದ ಈ ಘೋಷಣೆ ಆಗಲಿದೆ. ಹೊಸ ನಿಯಮದ ಪ್ರಕಾರ ಯಾವ ಏಜೆನ್ಸಿಯವರು ರಸ್ತೆ ಅಗೆಯುತ್ತಾರೋ ಅವರೇ ರಿಪೇರಿ ಮಾಡಬೇಕಿತ್ತು.

ಆದರೆ, ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಿನ್ನೆ ರಾಜಾಜಿನಗರದಲ್ಲಿ ನಡೆದ ಅಪಘಾತದಲ್ಲಿ ಯಾವ ರೀತಿ ಸಾವಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದು, ನಂತರ ತೀರ್ಮಾನಕ್ಕೆ ಬರಲಾಗುವುದು. ಈ ಹಿಂದಿನ ರಸ್ತೆಗುಂಡಿ ಅಪಘಾತ ಪ್ರಕರಣಗಳ ತನಿಖೆಯನ್ನು ಪೊಲೀಸ್ ಇಲಾಖೆ ಮಾಡುತ್ತಾರೆ. ಆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ನಗರದ ಎಲ್ಲ ಅನಧಿಕೃತ ಫ್ಲೆಕ್ಸ್ ಬ್ಯಾನರ್ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಅನಧಿಕೃತ ಫ್ಲೆಕ್ಸ್​ಗಳ ಬಗ್ಗೆ ಕಂದಾಯ, ಉಪ ಕಂದಾಯ ಅಧಿಕಾರಿಗಳು ಸುಮಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಜನರ ಸಹಕಾರದೊಂದಿಗೆ ಈ ಕೆಲಸ ನಡೆಯಬೇಕಿದೆ ಎಂದರು.

ಅಭಿವೃದ್ಧಿಪಡಿಸಿದ ಜಂಕ್ಷನ್ ಗಳಲ್ಲಿ ಪುತ್ಥಳಿ? : ಪುತ್ಥಳಿ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮತಿ ಬೇಕಾಗುತ್ತದೆ. ಹೀಗಾಗಿ ಜಂಕ್ಷನ್ ಗಳ ಸೌಂದರ್ಯೀಕರಣದಲ್ಲಿ ಪುತ್ಥಳಿ ನಿರ್ಮಾಣ ಮಾಡುವುದಿಲ್ಲ. ಆದರೆ, ನಿಯಮದಲ್ಲಿ ಅವಕಾಶವೂ ಇದೆ. ಕಲೆ, ಸಂಸ್ಕೃತಿ ಹಿನ್ನೆಲೆಯಲ್ಲಿ ಪುತ್ಥಳಿ ನಿರ್ಮಾಣ ಮಾಡಬಹುದಾಗಿದೆ ಎಂದರು.

ಇದನ್ನೂ ಓದಿ:ದುರಸ್ತಿ ಕಾಮಗಾರಿಗಳಿಗೆ ₹3 ಸಾವಿರ ಕೋಟಿ ವಿನಿಯೋಗ: ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.