ETV Bharat / state

ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಡಿಸಿಎಂ ಕಾರಜೋಳ ಸೂಚನೆ

author img

By

Published : Apr 24, 2021, 5:47 PM IST

ಬೆಂಗಳೂರಿನಿಂದ ವರ್ಚುವಲ್ ಮೀಟ್ ಮೂಲಕ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಡಿಸಿಎಂ ಕಾರಜೋಳ ಮಾತನಾಡಿದರು.

Dcm
Dcm

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳನ್ನು ಇನ್ನೂ ಹೆಚ್ಚು ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲಾಡಳಿತಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದರು.

ಬೆಂಗಳೂರಿನಿಂದ ವರ್ಚುವಲ್ ಮೀಟ್ ಮೂಲಕ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ ಪೂರಕವಾಗಿ ಆಕ್ಸಿಜನ್ ಸೇರಿದಂತೆ ಪೂರಕ ಪರಿಕರಗಳನ್ನು ಸಂಗ್ರಹಿಸಿಡಬೇಕು.

ಈ ಕುರಿತು ಸರ್ಕಾರದ ಮಟ್ಟದಲ್ಲಿ ಯಾವುದೇ ಪ್ರಸ್ತಾವನೆಗಳಿದ್ದರೂ ಕೂಡಲೇ ಇತ್ಯರ್ಥಪಡಿಸಲಾಗುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಗುತ್ತಿಗೆ ಆಧಾರದಡಿ ನೇಮಕ ಮಾಡಿಕೊಳ್ಳಬೇಕು.

ಕೊರೊನಾ ತಪಾಸಣಾ ಫಲಿತಾಂಶ ನೀಡಲು ತಡ ಮಾಡಬಾರದು. ಖಾಸಗಿ ಆಸ್ಪತ್ರೆಗಳ ಸಹಕಾರವನ್ನು ಪಡೆದು ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸಬೇಕು. ಸಹಾಯವಾಣಿ ಕೇಂದ್ರಗಳಲ್ಲಿ ಸಂಪೂರ್ಣ ಮಾಹಿತಿಯನ್ನು ಇಟ್ಟುಕೊಂಡು ಯಾರೇ ಕರೆ ಮಾಡಿದರೂ ಪೂರ್ಣ ಮಾಹಿತಿ ನೀಡಿ ಸಹಕರಿಸುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು.

ಜಿಲ್ಲಾ ಆಸ್ಪತ್ರೆಗಳಲ್ಲಿ ಶೇ. 60ರಿಂದ 70ರಷ್ಟು ಹಾಸಿಗೆಗಳನ್ನು ಕೊರೊನಾ ಸೊಂಕಿತರಿಗಾಗಿ ಮೀಸಲಿಡಬೇಕು. ಇಎನ್‍ಟಿ ವಾರ್ಡುಗಳಲ್ಲಿ ಕೊರೊನಾ ಸೋಂಕಿತರಿಗೆ ಹಾಸಿಗೆಗಳನ್ನು ಮೀಸಲಿಡಬೇಕು. ಸರ್ಕಾರಿ ಆಸ್ಪತ್ರೆಗಳಾದ ಜಯದೇವ, ಇಎಸ್‍ಐ, ಕಿದ್ವಾಯಿ ಆಸ್ಪತ್ರೆಗಳಲ್ಲಿ ಶೇ. 100ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು.

ಸಾರ್ವಜನಿಕರು ರೋಗಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ಆಸ್ಪತ್ರೆಗಳಲ್ಲಿ ತಪಾಸಣೆಗೊಳಪಡಿಸಬೇಕು. ತೀವ್ರವಾಗಿ ಬಳಲುತ್ತಿರುವವರು ಆಸ್ಪತ್ರೆಗೆ ದಾಖಲಾಗಲು ಹಿಂಜರಿಯುವವರಿಗೆ ಮನವರಿಕೆ ಮಾಡಬೇಕು. ಎಲ್‍ಪಿಜಿ ಸಿಲಿಂಡರ್ ಸಪ್ಲಯರ್ಸ್‍ಗಳು, ಕ್ಷೌರಿಕರು, ಮಡಿವಾಳರು ಸೇರಿದಂತೆ ಕುಲಕಸುಬು ನಿರ್ವಹಿಸುವವರಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕಬೇಕು.

ಲಸಿಕೆಯ ಬಗ್ಗೆ ಅಪಸ್ಪರ ಮೂಡಿಸಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವವರಿಗೂ ಕೊರೊನಾ ನಿಯಂತ್ರಣ ಮತ್ತು ನಿರ್ಮೂಲನೆಗೆ ಲಸಿಕೆಯೊಂದೇ ರಾಮಬಾಣವೆಂದು ಮನವರಿಕೆ ಮಾಡಬೇಕು. ನಿಯಂತ್ರಣ ಮಾರ್ಗಸೂಚಿಗಳ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ಕಸ ಸಂಗ್ರಹಣ ವಾಹನಗಳಲ್ಲಿ ಮೈಕ್ ಅಳವಡಿಸಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಮದುವೆ ಸಮಾರಂಭಗಳನ್ನು ಸರ್ಕಾರದ ಮಾರ್ಗಸೂಚಿಗಂತೆ ಕೈಗೊಳ್ಳಬೇಕು. ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ರಜೆ ನೀಡಬಾರದು. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಪ್ರಾಮಾಣಿಕವಾಗಿ ಸೇವೆ ಮಾಡಿ ಜನರ ಆರೋಗ್ಯ ಸುರಕ್ಷತೆಗಾಗಿ ಶ್ರಮಿಸಬೇಕು. ಎಲ್ಲರೂ ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದೀರಿ. ಜನರ ನಿರೀಕ್ಷೆ ಹೆಚ್ಚಾಗಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಉತ್ತಮ ಸೇವೆ ಮಾಡಬೇಕು ಎಂದು ಸೂಚಿಸಿದರು.

ಕೂಲಿಕಾರ್ಮಿಕರಿಗೆ ಉದ್ಯೋಗದ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು. ಪೊಲೀಸ್ ಅಧಿಕಾರಿಗಳು ತಪಾಸಣಾ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿ, ನಿಯಮಾವಳಿಗಳನ್ನು ಜಾರಿಗೊಳಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.

ಬಿಸಿಲಿನ ತಾಪ ಹೆಚ್ಚಾಗಿದ್ದು, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು ಎಂದು ಅವರು ಸೂಚಿಸಿದರು.

ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಭೂಪಾಲನ್, ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸರು ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.