ETV Bharat / state

ಶಿಷ್ಟಾಚಾರ ಆಗ, ಈಗ ಯಾವಾಗಲೂ ಒಂದೇ.. ನಾವು ಅವರನ್ನು ಪುಡಿಪುಕ್ಕ ಅಂದಿದ್ದೆವಾ: ಡಿ ಕೆ ಶಿವಕುಮಾರ್ ಆಕ್ರೋಶ

author img

By

Published : Jul 19, 2023, 8:28 PM IST

ಪ್ರತಿನಿತ್ಯ ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಜನ ನಮಗೆ ಅಧಿಕಾರ ನೀಡಿರುವ ಕಾರಣ ನಾವು ಇಲ್ಲಿ ಕುಳಿತ್ತಿದ್ದೇವೆ. ಬಿಜೆಪಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ನಡೆ ಖಂಡಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಂದರ್ಭ, ಕಳೆದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಾವು ಹಾಗೂ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಆಗಲೂ ನಾವು ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೆವು. ಆಗಲೂ ಡ್ಯಾನಿಶ್ ಅಲಿ ಸಮೇತ ಬಹುತೇಕ ಇದೇ ನಾಯಕರು ರಾಜ್ಯಕ್ಕೆ ಭೇಟಿ ನೀಡಿದ್ದರು. ಆಗ ನಾವು ಡ್ಯಾನಿಶ್ ಅಲಿಯನ್ನು ಪುಡಿಪುಕ್ಕ ಎಂದು ಕರೆಯಲು ಸಾಧ್ಯವೇ? ಈ ಬಾರಿ ಇವರೆಲ್ಲ ನಾಯಕರು ದೇಶವನ್ನು ಉಳಿಸಲು, ಭಾರತದ ಭವಿಷ್ಯ ಉಳಿಸಲು ಅವರದೇ ಆದ ಸಿದ್ಧಾಂತ ಇಟ್ಟುಕೊಂಡು ಆಗಮಿಸಿದ್ದಾರೆ. ರಾಜಕಾರಣದಲ್ಲಿ ಅವರಿಗೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅನಂತಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಇತ್ತು. ಆಗಲೂ ಶಿಷ್ಟಾಚಾರ ಪಾಲನೆ ಮಾಡಲಾಗಿತ್ತು. ಕುಮಾರಸ್ವಾಮಿ ಅವರು ಕೇಳಿದಾಗಲೂ ಶಿಷ್ಟಾಚಾರ ಪಾಲನೆ ಮಾಡಿದ್ದೇವೆ. ಬಿಜೆಪಿಯವರು ಕೇಳಿದಾಗಲೂ ನಾವು ಶಿಷ್ಟಾಚಾರ ಪಾಲಿಸಿದ್ದೇವೆ. ಆಗ ಶಿಷ್ಟಾಚಾರ ಪಾಲಿಸಿದ್ದ ಅಧಿಕಾರಿಗಳೇ ಈಗಲೂ ಇದ್ದಾರೆ. ಬೇಕಿದ್ದರೆ ಆಗ ಯಾರಿಗೆಲ್ಲಾ ಶಿಷ್ಟಾಚಾರ ಪಾಲನೆ ಮಾಡಿದ್ದೆವು ಎಂದು ಪಟ್ಟಿ ನೀಡಬಲ್ಲೆ. ಇದರಲ್ಲಿ ವಿಶೇಷವಿಲ್ಲ ಎಂದಿದ್ದಾರೆ.

ಬಿಜೆಪಿಯಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಗೊಂದಲವಿದೆ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭೆ ಹಾಗೂ ಪರಿಷತ್​ನಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೇ ಸದನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದಕ್ಕಿಂತ ದೊಡ್ಡ ಅಪಮಾನವಿಲ್ಲ. ಈ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೆಳಗಿನಿಂದ ಸಂಜೆವರೆಗೂ ಇಲ್ಲಿ ಡ್ರಾಮಾ, ನೃತ್ಯ, ಮಾತುಗಳು ಎಲ್ಲವನ್ನು ಮಾಡುತ್ತಿದ್ದಾರೆ. ಬಿಜೆಪಿಯ ಈ ಪ್ರಯತ್ನಕ್ಕೆ ಇಲ್ಲಿ ಸೊಪ್ಪು ಹಾಕುವವರು ಯಾರೂ ಇಲ್ಲ. ನಾವು ಇದಕ್ಕೆ ಬಗ್ಗುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ನಾವು ಸಿದ್ಧವಿದ್ದೇವೆ.

ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕಾರ್ಯಕ್ರಮ: ಹೋರಾಟಕ್ಕೂ ರೆಡಿಯಾಗಿದ್ದೇವೆ. ಜನರ ಮುಂದೆ ಹೋಗಲು ಸಿದ್ಧ. ಜನ ನಿಮ್ಮನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ನಮ್ಮ ಆಡಳಿತವನ್ನು ಸ್ವಲ್ಪ ತಾಳ್ಮೆಯಿಂದ ನೋಡಿ. ಪ್ರತಿನಿತ್ಯ ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಇಂದೂ ಕೂಡ, ದೇಶದಲ್ಲಿ ಅತಿದೊಡ್ಡ ಆರ್ಥಿಕ ಭದ್ರತಾ ಯೋಜನೆ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಮಾಡುತ್ತಿದ್ದೇವೆ. ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.

ಯೋಜನೆಗಳಿಗೆ ಪ್ರಚಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ: ಈ ಕಾರ್ಯಕ್ರಮದ ಕುರಿತು ಮಾಧ್ಯಮಗಳಲ್ಲಿ ಜಾಹೀರಾತು ನೋಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಜಾತಿ, ಧರ್ಮ ಭೇದ ಎಲ್ಲವನ್ನು ಪಕ್ಕಕ್ಕಿಟ್ಟು ಅವರಿಗೆ ನೆರವು ನೀಡುತ್ತಿದ್ದೇವೆ. ಅವರ ಪಕ್ಷದವರಿಗೂ ನಾವು ಈ ಯೋಜನೆಯಲ್ಲಿ ಸಹಾಯ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಅವರು ಹತಾಶೆ, ಗಾಬರಿಯಾಗಿದ್ದಾರೆ. ಅವರು ನಮ್ಮ ಯೋಜನೆಗಳಿಗೆ ಪ್ರಚಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಇಂದು ಅವರು ಪ್ರತಿಭಟನೆ ಹೆಸರಲ್ಲಿ ತೋರಿದ ವರ್ತನೆ, ಸ್ಪೀಕರ್ ಸ್ಥಾನಕ್ಕೆ ನೀಡಿದ ಅಗೌರವವನ್ನು ನಾವು ಖಂಡಿಸುತ್ತೇವೆ. ಈ ಸಂದರ್ಭದಲ್ಲಿ ನಾವು ನಿಮಗೆ ಧೈರ್ಯ ತುಂಬಲು ಬದ್ಧರಾಗಿದ್ದೇವೆ ಎಂದರು.

ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಆರ್ಶೀವದಿಸಿದ ಶ್ರೀ ಬಸವ ಜಯಚಂದ್ರ ಸ್ವಾಮೀಜಿ
ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಆರ್ಶೀವದಿಸಿದ ಶ್ರೀ ಬಸವ ಜಯಚಂದ್ರ ಸ್ವಾಮೀಜಿ

ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಬುಧವಾರ ಭೇಟಿ ಮಾಡಿದ್ದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸನಗೌಡ ತುರುವಿಹಾಳ್, ಎಂಎಲ್​ಸಿ ಚನ್ನರಾಜ್ ಹಟ್ಟಿಹೊಳಿ ಮತ್ತಿತರರು ಉಪಸ್ಥಿತರಿದ್ದರು.

ಬಸವ ಜಯಚಂದ್ರ ಸ್ವಾಮೀಜಿಗೆ ಡಿಕೆಶಿಗೆ ಆರ್ಶೀವಾದ: ವಾರಾಣಸಿ ಕಾಶಿಪೀಠ, ಚನ್ನಗಿರಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಸ್ವಾಮೀಜಿ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿ, ಆಶೀರ್ವದಿಸಿದರು.

ಇದನ್ನೂ ಓದಿ: ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.