ETV Bharat / state

ಬೆಂಗಳೂರು ಟೆಕ್ ಸಮ್ಮಿಟ್‍: ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಸಮಾವೇಶವಲ್ಲ: ಡಿಸಿಎಂ

author img

By

Published : Dec 10, 2020, 5:25 PM IST

ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತಾಂತ್ರಿಕತೆಯಲ್ಲಿ ಆವಿಷ್ಕಾರ, ನಾವಿನ್ಯತೆಯನ್ನು ರಚಿಸಲು ಆಧುನಿಕ ತಂತ್ರಜ್ಞಾನ ಹಾಗೂ ಪೂರಕವಾದ ವಾತಾವರಣ ನಿರ್ಮಿಸಲು ಬೆಂಗಳೂರು ಟೆಕ್ ಸಮ್ಮಿಟ್‍ ನಡೆಸಲಾಗಿದೆ. ಇದು ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಸಮಾವೇಶವಲ್ಲವೆಂದು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ ನಾರಾಯಣ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ
ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ

ಬೆಂಗಳೂರು: ಇತ್ತೀಚೆಗೆ ವರ್ಚ್ಯುವಲ್ ರೂಪದಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಸುಮಾರು 3099 ಸಂಸ್ಥೆಗಳು, ಕಂಪೆನಿಗಳು ಭಾಗವಹಿಸಿದ್ದು, ಹೂಡಿಕೆ ಸಂಬಂಧ ಯಾವುದೇ ಒಡಂಬಡಿಕೆಗಳು ಆಗಿಲ್ಲ ಎಂದು ಐಟಿಬಿಟಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಶರತ್‍ ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತಾಂತ್ರಿಕತೆಯಲ್ಲಿ ಆವಿಷ್ಕಾರ, ನಾವಿನ್ಯತೆಯನ್ನು ರಚಿಸಲು ಆಧುನಿಕ ತಂತ್ರಜ್ಞಾನ ಹಾಗೂ ಪೂರಕವಾದ ವಾತಾವರಣ ನಿರ್ಮಿಸಲು ಸಮಾವೇಶ ನಡೆಸಲಾಗಿತ್ತು. ಸಮಾವೇಶದಲ್ಲಿ ಹಲವಾರು ಶೈಕ್ಷಣಿಕ ಸಂಸ್ಥೆಗಳು ಪಾಲ್ಗೊಂಡಿದ್ದು, ಮುಂದಿನ ನಾಲ್ಕೈದು ವರ್ಷಗಳಲ್ಲಿ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದು ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಸಮಾವೇಶವಲ್ಲ. ಹಾಗಾಗಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಯಾವ ಒಪ್ಪಂದವೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ನವೋದ್ಯಮಗಳ ಸ್ಥಾಪನೆ, ಕೌಶಲ್ಯಾಭಿವೃದ್ಧಿ, ಸಂಶೋಧನೆ, ಜೈವಿಕ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಬಾಹ್ಯಾಕಾಶ, ಕ್ರೀಡೆ, ಶಿಕ್ಷಣ, ಪರಸ್ಪರ ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ, ಅಭಿವೃದ್ಧಿ, ವಿಚಾರ ವಿನಿಮಯ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಜಾಗತಿಕ ಆವಿಷ್ಕಾರ ಮೈತ್ರಿಕೂಟ ದೇಶಗಳ ಜತೆ ಮಹತ್ವದ 8 ಒಪ್ಪಂದಗಳಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇವುಗಳ ಪೈಕಿ ಫಿನ್‍ಲ್ಯಾಂಡ್ ಮತ್ತು ಸ್ವೀಡನ್ ದೇಶಗಳು ಒಪ್ಪಂದಕ್ಕೆ ಸಹಿ ಮಾಡಿವೆ. ಇನ್ನುಳಿದ ಆರು ದೇಶಗಳೊಂದಿಗೆ ಒಪ್ಪಂದಕ್ಕೆ ಸಹಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಕೋವಿಡ್-19ರ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಂ ಪರಿಕಲ್ಪನೆ ಬಂದಿದೆ. ತಾತ್ಕಾಲಿಕವಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಡಚಣೆ ಇಲ್ಲದೆ ಕೆಲಸಗಳು ನಡೆಯುತ್ತಿವೆ. ಖಾಸಗಿ ಕಂಪನಿಗಳ ಮೇಲೆ ಕಚೇರಿಯಲ್ಲಿ ಕೆಲಸ ಮಾಡುವಂತೆ ಸರ್ಕಾರ ಒತ್ತಾಯ ಅಥವಾ ನಿರ್ಬಂಧ ತರುವುದಿಲ್ಲ. ಮುಂದಿನ ದಿನಗಳಲ್ಲಿ ತಾನಾಗಿಯೇ ಕಚೇರಿಗಳಲ್ಲಿ ಕೆಲಸ ಮಾಡುವ ಪ್ರಕ್ರಿಯೆ ಜಾರಿಯಾಗಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಶರತ್ ಬಚ್ಚೇಗೌಡ ಮಾತನಾಡಿ, ಬೆಂಗಳೂರು ಟೆಕ್ ಸಮಿಟ್ ಒಳ್ಳೆಯ ಬೆಳವಣಿಗೆ. ಶೇ.12-15 ರಷ್ಟು ಐಟಿಯಿಂದ ಜಿಡಿಪಿ ಬರುತ್ತಿದೆ. ಐಟಿ ಪುನರುಜ್ಜೀವನಕ್ಕೆ ಏನೇನು ಕಾರ್ಯಕ್ರಮ ಮಾಡಿದ್ದೀರಿ. ವರ್ಕ್ ಫ್ರಮ್ ಹೋಂನಿಂದ ಕೆಲಸ ಕಡಿಮೆಯಾಗಿದೆ. ಜನ ಕಚೇರಿಗೆ ಬಂದು ಕೆಲಸ ಮಾಡುವಂತಾಗಬೇಕು ಎಂದರು.

ಇದಕ್ಕೆ ಧ್ಬನಿಗೂಡಿಸಿದ ಶಾಸಕ ರಘುಪತಿ ಭಟ್, ಐಟಿ ಕಂಪನಿ ಮುಚ್ಚಿರುವುದರಿಂದ ಮ್ಯಾಕ್ಸಿ ಕ್ಯಾಬ್ ಸೇರಿದಂತೆ ಹಲವರಿಗೆ ತೊಂದರೆಯಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.