ETV Bharat / state

ಮುಂದಿನ ನಮ್ಮ ಗುರಿ ರಾಜ್ಯವನ್ನು ಸೋನಿಯಾ - ರಾಹುಲ್ ಗಾಂಧಿಗೆ ಅರ್ಪಿಸುವುದೇ ಆಗಿದೆ: ಡಿಕೆಶಿ

author img

By

Published : Apr 1, 2022, 3:39 PM IST

ಮುಸಲ್ಮಾನರು ತಮ್ಮ ಸಹಾಯಕ್ಕೆ ಕಾಂಗ್ರೆಸ್ ಪಕ್ಷ ಬರಲಿ ಎಂಬ ಆಸೆ ಇದೆ. ನಾವು ಜಾತ್ಯತೀತತೆಯ ಸಂರಕ್ಷಣೆ ಮಾಡಬೇಕಿದೆ. ಎಲ್ಲ ವರ್ಗದ ನಾಯಕರಿಗೆ ನ್ಯಾಯ ಒದಗಿಸಿದರೆ, ಸಂವಿದಾನದ ಆಶಯ ಉಳಿಯುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

Siddaramaiah, Rahul Gandhi, Dkshi
ಸಿದ್ದರಾಮಯ್ಯ, ರಾಹುಲ್ ಗಾಂಧಿ, ಡಿಕೆಶಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಿಯೋಜಿತನಾದ ಸಂದರ್ಭದಿಂದಲೂ ತಮ್ಮನ್ನು ತಡೆಯುವ ಹಾಗೂ ಹತ್ತಿಕ್ಕುವ ಯತ್ನ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದ ರಾಜೀವ್ ಗಾಂಧಿ ಭವನದಲ್ಲಿ ಅವರು ಮಾತನಾಡಿ, ಇಂದು ನನ್ನ ಬಲ ತುಂಬಿದ್ದು, ಪಕ್ಷದ ಕಾರ್ಯಕರ್ತರು. ನಾನು ವ್ಯಕ್ತಿ ಪೂಜಕನಲ್ಲ. ಪಕ್ಷ ಪೂಜಕನಲ್ಲ. ನಾವು ಸಾಕಷ್ಟು ಸಂಕಷ್ಟದ ಸ್ಥಿತಿಯಲ್ಲಿ ಹೋರಾಡಿದ್ದೇವೆ ಎಂದರು.

ನನಗೆ ಪಕ್ಷದ ಕಾರ್ಯಕರ್ತರು ಬಲವಾಗಿ ನಿಂತರು. ಪಾದಯಾತ್ರೆ ಸಂದರ್ಭ, ಕೋವಿಡ್ ಸಂದರ್ಭ ನಿಮ್ಮ ಸಹಕಾರ ಅವಿಸ್ಮರಣೀಯ. ಜನರಿಗೆ ಪಕ್ಷದ ಕಾರ್ಯಕರ್ತರು ಸಹಕಾರ, ಕೈಲಾದ ಸೇವೆ ಸಲ್ಲಿಸಿದ್ದೀರಿ ಎಂದು ಕೊಂಡಾಡಿದರು. ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಗರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು 70 ಸಾವಿರ ಮಂದಿ ಝೂಮ್ ಮೂಲಕ ವೀಕ್ಷಿಸುತ್ತಿದ್ದಾರೆ.

ಪಕ್ಷದ ಬಲ ವೃದ್ಧಿಸುತ್ತೇನೆ: ಇದರ ಹೊರತಾಗಿ ಆನ್​ಲೈನ್​ ಮೂಲಕ ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ. ನಾವು ಉಪಚುನಾವಣೆ, ಪರಿಷತ್ ಚುನಾವಣೆ‌ ಗೆದ್ದಿದ್ದೇವೆ. ಅವರಿಗೆ ಭರವಸೆ ನೀಡುತ್ತಿದ್ದೇನೆ, ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರನ್ನು ಜತೆಯಲ್ಲಿ ಕೊಂಡೊಯ್ದು ರಾಜ್ಯದಲ್ಲಿ ಪಕ್ಷದ ಬಲ ವೃದ್ಧಿಸುತ್ತೇನೆ. ಪಕ್ಷದ ರಾಷ್ಟ್ರೀಯ ನಾಯಕರು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಕೈಕಟ್ಟಿ ಪಾಲಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ವಾಗ್ದಾನ ಮಾಡಿದರು.

ಪಕ್ಷ ಅಧಿಕಾರಕ್ಕೆ ಬರಲಿ. ಅದಾದ ಬಳಿಕ ಸಾಕಷ್ಟು ಕ್ರಮ, ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ನಾವೆಲ್ಲಾ ಒಟ್ಟಾಗಿ ಹೋದರೆ ಗೆಲುವು ಕಷ್ಟವಲ್ಲ. ಪ್ರತಿಭೂತ್​ನಲ್ಲಿಯೂ ಡಿಜಿಟಲ್ ವ್ಯವಸ್ಥೆ ಅಳವಡಿಸಿದ್ದೇವೆ. ಇಂದಿನ ಸಮಾರಂಭ ಸಹ ಡಿಜಿಟಲ್ ಸಾಧನೆಯ ಯಾವ ಸೌಕರ್ಯ ಬಳಸಿಕೊಂಡಿದೆ ಎಂಬುದಕ್ಕೆ ಸಾಕ್ಷಿ. ಕಳೆದ 70 ವರ್ಷ ನಾವು ಮಾಡಿದ ಸಾಧನೆ ನಮ್ಮ ಕಣ್ಣ ಮುಂದಿದೆ. ಮುಂದಿನ ನಮ್ಮ ಬದ್ಧತೆ ಹಾಗೂ ಗುರಿ ರಾಜ್ಯವನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಅರ್ಪಿಸುವುದಾಗಿದೆ ಎಂದರು.

ಕೇಂದ್ರದ ಬಿಜೆಪಿ ಸರ್ಕಾರ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ನಾವು ಉದ್ಯೋಗ ನೀಡಿಕೆ, ಮಹಿಳಾ ಸಬಲೀಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಜ್ಯ ಕಾಂಗ್ರೆಸ್ ರಾಜ್ಯ ಉಸ್ತುವಾರಿ ತಿಂಗಳಲ್ಲಿ 15 ದಿನ ಇಲ್ಲಿರುವುದಾಗಿ ಭರವಸೆ ನೀಡಿದ್ದಾರೆ. ನಾವು ಇದೇ ತಿಂಗಳು ಚಿಂತನ- ಮಂಥನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಿಎಲ್ಪಿ ನಾಯಕರ ಜತೆ ಮಾತುಕತೆ ನಡೆಸಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆಯನ್ನು ನಾನು ಮಾಡಲ್ಲ. ಪಕ್ಷದ ತಳ ಮಟ್ಟದ ನಾಯಕರು ಹಾಗೂ ರಾಷ್ಟ್ರೀಯ ನಾಯಕರು ಮಾಡಲಿದ್ದಾರೆ ಎಂದರು.

ಪೂರ್ಣ ಜನಾಶೀರ್ವಾದ ಲಭಿಸಿಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ನಾವು ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ. ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಬಿಜೆಪಿ ಅನೈತಿಕ ಸರ್ಕಾರ ಇದೆ. ಬಿಜೆಪಿ ಯಾವಾಗಲೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಪೂರ್ಣ ಜನಾಶೀರ್ವಾದ ಲಭಿಸಿಲ್ಲ. ಆಪರೇಷನ್ ಕಮಲ ಮೂಲಕ ಯಡಿಯೂರಪ್ಪ ಎರಡೂ ಬಾರಿ ಅಧಿಕಾರ ಹಿಡಿದರು.

ಕೇಂದ್ರ ಇರಲಿ ರಾಜ್ಯವಿರಲಿ, ಯಾವತ್ತೂ ಜನರ ಸಮಸ್ಯೆಯನ್ನು ಅರಿತಿಲ್ಲ. ಜನ ಸಮಸ್ಯೆ ಎದುರಿಸುವ ಸ್ಥಿತಿ ಇದೆ. ಮೋದಿ ಆಗಲಿ, ಸಿಎಂ ಗಳಾಗಲಿ ಜನರ ಸಮಸ್ಯೆ ಬಗ್ಗೆ ಚರ್ಚಿಸಲ್ಲ. ಬೆಲೆ ಏರಿಕೆ, ರೈತರು, ವಿದ್ಯಾರ್ಥಿಗಳು, ಮಹಿಳೆಯರ ಸಮಸ್ಯೆಗಳಿವೆ. ಈ ಬಗ್ಗೆ ಚರ್ಚಿಸದೇ ಜನರನ್ನು ಭಾವನಾತ್ಮಕ ವಿಚಾರದ ಮೇಲೆ ಒಡೆಯುತ್ತಿದ್ದಾರೆ. ಕೋಮುವಾದದ ವಿಚಾರದ ಮೇಲೆ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಾರಣ ಇಲ್ಲಿ ಚುನಾವಣೆ ಬರುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬದ್ಧತೆ ಉಳ್ಳ ಪಕ್ಷವಾಗಿದೆ: ಸಂವಿಧಾನ ವಿರುದ್ಧದ ವಿಚಾರ ಪ್ರಸ್ತಾಪಿಸುತ್ತಾರೆ. ಇವರಿಗೆ ಸಂವಿಧಾನದ ಮೇಲೆ ಗೌರವವಿಲ್ಲ. ವಿಶೇಷವಾಗಿ ಯುವಕರಲ್ಲಿ ಕೋಮುವಾದ, ದ್ವೇಷದ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ನಾವು ಜಾತ್ಯತೀತ ತತ್ತ್ವ ಗಳ ಮೇಲೆ ಬದ್ಧತೆ ಉಳ್ಳ ಪಕ್ಷವಾಗಿದೆ. ಹಿಜಾಬ್, ಹಲಾಲ್ ಇತ್ಯಾದಿ ವಿಚಾರವನ್ನು ಬೇಕಂತಲೇ ಪ್ರಸ್ತಾಪಿಸಿದ್ದಾರೆ. ವಿದ್ಯಾರ್ಥಿಗಳ ಮುಂದೆ ಹಿಜಾಬ್ ತಂದು ಮುಸಲ್ಮಾನರನ್ನು ಖಳನಾಯಕರನ್ನಾಗಿಸುವ ಕಾರ್ಯ ಮಾಡಿದರು.

ಸರ್ಕಾರದ ಸಹಕಾರ ಸಹ ಇತ್ತು. ಸರ್ಕಾರಕ್ಕೆ ಸಂಘಟನೆಗಳು ಬೇಕು. ಬ್ಯಾನ್ ಮಾಡುವ ಧೈರ್ಯ ಇಲ್ಲ. ಸಂಘಟನೆ ಒಡೆಯಲು ಅವರಿಗೆ ಇದು ಬೇಕು. ಮುಂದಿನ ಒಂದು ವರ್ಷ ಇಂತಹದ್ದೇ ಕಾರ್ಯ ಮಾಡುತ್ತಾರೆ. ಈ ಮೂಲಕ ಹಿಂದೂ ಮತಗಳ ಕ್ರೋಢೀಕರಣ ಮಾಡುತ್ತಿದ್ದಾರೆ. ನಮಗೆ ಈ ಸಂದರ್ಭ ಒಂದು ದೃಢತೆ ಇರಬೇಕು. ಇಲ್ಲವಾದರೆ ನಮ್ಮ ಕಾರ್ಯಕರ್ತರಿಗೆ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮುಸಲ್ಮಾನರು ತಮ್ಮ ಸಹಾಯಕ್ಕೆ ಕಾಂಗ್ರೆಸ್ ಪಕ್ಷ ಬರಲಿ ಎಂಬ ಆಸೆ ಇದೆ. ನಾವು ಜಾತ್ಯತೀತತೆಯ ಸಂರಕ್ಷಣೆ ಮಾಡಬೇಕಿದೆ. ಎಲ್ಲ ವರ್ಗದ ನಾಯಕರಿಗೆ ನ್ಯಾಯ ಒದಗಿಸಿದರೆ, ಸಂವಿದಾನದ ಆಶಯ ಉಳಿಯುತ್ತದೆ ಎಂದರು. ನಾವು 135 ರಿಂದ 140 ಸ್ಥಾನ ಗೆಲ್ಲಲೇಬೇಕು. ಮುಂದೆ ನಾವೇ ಅಧಿಕಾರಕ್ಕೆ ಬರಬೇಕು. ವ್ಯಕ್ತಿಯಲ್ಲ, ಗೆಲ್ಲುವವರು ಮಾನದಂಡ ಆಗಬೇಕು.

ತಾಲೂಕು, ಜಿಲ್ಲಾ ನಾಯಕರಿಗೆ ಸೂಚನೆ ನೀಡುತ್ತಿದ್ದೇವೆ. ಸಮರ್ಥರನ್ನು ಆಯ್ಕೆ ಮಾಡಿ ಅಂತ. ಆರು ತಿಂಗಳು ಮುನ್ನವೇ ಅಭ್ಯರ್ಥಿಗಳ ಹೆಸರು ಅಂತಿಮ ಮಾಡಬೇಕು. ರಾಜ್ಯದ ಜನ ಪ್ರಬುದ್ಧರಿದ್ದಾರೆ. ಬಿಜೆಪಿ ಕೋಮುವಾದದ ಮಾತಿಗೆ, ಕಾರ್ಯಕ್ಕೆ ಬೆಲೆ ಕೊಡಲ್ಲ ಅನ್ನುವ ವಿಶ್ವಾಸವಿದೆ. ಮನೆ ಮನೆಗೆ ಹೋಗಿ ಬಿಜೆಪಿ ನಾಟಕ, ಕೋಮುವಾದದ ರಾಜಕಾರಣವನ್ನು ತಿಳಿಸುವ ಕಾರ್ಯ ಮಾಡಬೇಕು ಎಂದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ ಪಾಟೀಲ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಮಾತನಾಡಿದರು.

ಓದಿ: ರಾಜ್ಯ ಸರ್ಕಾರದ ಬಿಸಿಯೂಟ ಯೋಜನೆಗೆ ಡಾ. ಶಿವಕುಮಾರ ಸ್ವಾಮೀಜಿ ಹೆಸರು ಘೋಷಣೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.