ETV Bharat / state

ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬುಧವಾರ ರಾಜ್ಯಾದ್ಯಂತ ಸೈಕಲ್ ಜಾಥಾ : ರಾಮಲಿಂಗ ರೆಡ್ಡಿ

author img

By

Published : Jul 6, 2021, 5:23 PM IST

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ 100 ನಾಟೌಟ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಈಗ ಬುಧವಾರ ಸೈಕಲ್ ಜಾಥ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲ ಭಾಗಗಳಲ್ಲೂ 5 ಕಿ.ಮೀ ನಷ್ಟು ದೂರು ಸೈಕಲ್ ತುಳಿಯುವ ಮೂಲಕ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ..

Cycle Jatha Protest from Congress
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ

ಬೆಂಗಳೂರು : ಬೆಲೆ ಏರಿಕೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಬುಧವಾರ ರಾಜ್ಯದ 224 ಕ್ಷೇತ್ರಗಳಲ್ಲಿ ಸೈಕಲ್ ಜಾಥಾ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

ನಗರದ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ 100 ನಾಟೌಟ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಈಗ ಬುಧವಾರ ಸೈಕಲ್ ಜಾಥಾ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲ ಭಾಗಗಳಲ್ಲೂ 5 ಕಿ.ಮೀ ನಷ್ಟು ದೂರು ಸೈಕಲ್ ತುಳಿಯುವ ಮೂಲಕ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ತೈಲ ಬೆಲೆ ಇಳಿಸಿ ಜನಸಾಮಾನ್ಯರ ಮೇಲಿನ ಹೊರೆಯನ್ನ ತಪ್ಪಿಸಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿಕೆ

ಈ ಹಿಂದೆ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ನಾಯಕರು ಬೀದಿಯಲ್ಲಿ ಸಿಲಿಂಡರ್ ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡಿದ್ದರು. ಆದರೆ, ಇಂದು ಅದೇ ನಾಯಕರು ಬಾಯಿ ಬಿಡುತ್ತಿಲ್ಲ. ವಾಜಪೇಯಿ ಅವರು ಒಮ್ಮೆ ಎತ್ತಿನಗಾಡಿಯಲ್ಲಿ ಸಂಸತ್‌ಗೆ ತೆರಳಿದ್ದರು. ಅವರು ಈ ಹಿಂದೆ ಏನು ಮಾಡಿದ್ದರು, ಈಗ ಅಧಿಕಾರಕ್ಕೆ ಬಂದ ಮೇಲೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನ ತೈಲ ಮೇಲೆ ಹಾಕಿರುವ ತೆರಿಗೆ ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕೋವಿಡ್ ಮೃತರಿಗೆ 5 ಲಕ್ಷ ಪರಿಹಾರ ನೀಡಬೇಕು. ಇನ್ನು, ಕೋವಿಡ್ 2ನೇ ಅಲೆಯಲ್ಲಿ ಸರ್ಕಾರ 30 ಸಾವಿರ ಜನ ಮೃತಪಟ್ಟಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಆದರೆ, ವಾಸ್ತವದಲ್ಲಿ ಅದರ ಹತ್ತು ಪಟ್ಟು ಅಂದರೆ, 3 ಲಕ್ಷಕ್ಕೂ ಹೆಚ್ಚು ಜನ ಕೋವಿಡ್‌ಗೆ ಬಲಿಯಾಗಿದ್ದಾರೆ. ರಾಜ್ಯ ಸರ್ಕಾರ ಮೃತಪಟ್ಟವರಿಗೆ 1 ಲಕ್ಷ ಪರಿಹಾರ ಘೋಷಿಸಿದ್ದು, ಕೇವಲ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಎಂದು ಹೇಳಿದೆ. ಸುಪ್ರೀಂಕೋರ್ಟ್ ಪರಿಹಾರ ನೀಡುವ ವಿಚಾರವಾಗಿ ಎಲ್ಲ ರಾಜ್ಯಗಳಿಗೂ ಮಾರ್ಗಸೂಚಿ ನಿರ್ಮಿಸುವಂತೆ ಸೂಚನೆ ನೀಡಿದೆ. ಕೋವಿಡ್ ಸಂತ್ರಸ್ತರಿಗೆ ₹1 ಲಕ್ಷ ಪರಿಹಾರ ನೀಡಿದರೆ ಪ್ರಯೋಜನವಿಲ್ಲ. ಹೀಗಾಗಿ, ಬಿಪಿಎಲ್ ಕಾರ್ಡು ಇಲ್ಲದವರು ಸೇರಿದಂತೆ ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ₹5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಬಂದು ನಂತರ ನೆಗೆಟಿವ್ ಆಗಿ ಮೃತಪಟ್ಟಿರುವವರು ಇದ್ದಾರೆ, ಇವರಿಗೆ ಪರಿಹಾರ ನೀಡದೆ ಕೇವಲ ಕಾಟಾಚಾರಕ್ಕೆ ಸರ್ಕಾರ ಪರಿಹಾರ ಘೋಷಿಸಿದೆ. ಕೋವಿಡ್‌ನಿಂದ ಆಗಿರುವ ಸಾವು- ನೋವುಗಳನ್ನು ಕಾಂಗ್ರೆಸ್ ಪಕ್ಷದಿಂದ ಡೆತ್ ಆಡಿಟ್ ಮಾಡಲು ಮುಂದಾಗಿದ್ದೇವೆ. ಜಿಲ್ಲಾ, ತಾಲೂಕು ಕೇಂದ್ರಗಳು ಹಾಗೂ ಗ್ರಾಮಗಳಿಗೆ ಕಾರ್ಯಕರ್ತರು ಹೋಗಿ ಕೋವಿಡ್‌ನಿಂದ ಸತ್ತವರ ಮಾಹಿತಿ ಕಲೆ ಹಾಕುತ್ತಾರೆ. ರಾಜ್ಯ ಸರ್ಕಾರ ಘೋಷಿಸಿರುವ ಕೋವಿಡ್ ಪರಿಹಾರ ಪ್ಯಾಕೇಜ್ ಯಾರಿಗೂ ಸರಿಯಾಗಿ ತಲುಪಿಲ್ಲ. ಬೀದಿ ಬದಿ ವ್ಯಾಪಾರಿ, ಅಸಂಘಟಿತ ಕಾರ್ಮಿಕರಿಗೆ 2 ಸಾವಿರ, ಕಟ್ಟಡ ಕಾರ್ಮಿಕರಿಗೆ 3 ಸಾವಿರ, ಚಾಲಕರಿಗೆ 3 ಸಾವಿರ ಘೋಷಿಸಿದ್ದಾರೆ.

ಕಳೆದ ವರ್ಷವೂ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ, 10 ಲಕ್ಷ ಚಾಲಕರಲ್ಲಿ ಪರಿಹಾರ ಸಿಕ್ಕಿದ್ದು ಕೇವಲ 2.5 ಲಕ್ಷ ಚಾಲಕರಿಗೆ ಮಾತ್ರ. ಬೀದಿ ಬದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರ ಬಗ್ಗೆ ಸರ್ಕಾರದ ಬಳಿ ಸ್ಪಷ್ಟ ಮಾಹಿತಿ ಇಲ್ಲ. ಇನ್ನು, ಕಟ್ಟಡ ಕಾರ್ಮಿಕರಿಗೆ ಯಾರ ಬಳಿ ಕಾರ್ಡ್ ಇದೆಯೋ ಅವರಿಗೆ ಮಾತ್ರ ಪರಿಹಾರ ಸಿಗುತ್ತದೆ. ಹೀಗೆ ಶೇ.10ರಷ್ಟು ಜನರಿಗೆ ಮಾತ್ರ ಪರಿಹಾರ ಸಿಗುತ್ತದೆ. ಕೇವಲ ಕಣ್ಣೊರೆಸುವ ತಂತ್ರವಾಗಿ ಸರ್ಕಾರ ಪ್ಯಾಕೇಜ್ ಘೋಷಿಸಿದೆ’ ಎಂದು ಟೀಕಿಸಿದರು.

ಮನೆಮನೆಗೆ ತೆರಳಿ ಅರ್ಜಿ : ಈ ಕಾರ್ಮಿಕರಿಗೆ ಪರಿಹಾರ ಸಿಗುವಂತೆ ಮಾಡಲು ನಮ್ಮ ಕಾರ್ಯಕರ್ತರು ರಾಜ್ಯಾದ್ಯಂತ ಮನೆ ಮನೆಗೆ ಹೋಗಿ ಅವರ ಪರವಾಗಿ ಅರ್ಜಿ ಹಾಕುತ್ತಾರೆ. ರಾಜ್ಯ ಸರ್ಕಾರ ನೆರೆ ರಾಜ್ಯಗಳಲ್ಲಿ ಪರಿಹಾರ ಕೊಟ್ಟಿದ್ದನ್ನು ನೋಡಿಯಾದರೂ ನಮ್ಮ ರಾಜ್ಯದ ಜನರಿಗೆ ನೆರವಾಗಬೇಕಿತ್ತು. ನೆರೆ ರಾಜ್ಯಗಳಲ್ಲಿ ಸರ್ಕಾರದ ಘೋಷಣೆಗಳು ಕಾರ್ಯರೂಪಕ್ಕೆ ಬಂದರೆ, ನಮ್ಮ ರಾಜ್ಯದಲ್ಲಿ ಘೋಷಣೆಗಳು ಘೋಷಣೆಯಾಗಿಯೇ ಉಳಿದಿವೆ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡು ದಾರರಿಗೆ 75 ಕೆ.ಜಿಯಷ್ಟು ದಿನಸಿ ಕೊಡಬಹುದಿತ್ತು. ಇದಕ್ಕೆಕುಟುಂಬಕ್ಕೆ 4 ಸಾವಿರದಂತೆ ಖರ್ಚು ಮಾಡಿದ್ದರೂ ಹೆಚ್ಚೆಂದರೆ 440 ಕೋಟಿಯಷ್ಟು ಮಾತ್ರ ಖರ್ಚಾಗುತ್ತಿತ್ತು. ಇದರಿಂದ ರಾಜ್ಯದಲ್ಲಿ ಸುಮಾರು ಐದೂವರೆ ಕೋಟಿ ಜನರಿಗೆ ಅನುಕೂಲವಾಗುತ್ತಿತ್ತು ಎಂದರು.

ಇನ್ನು ಬಿಡಿಎ ಮೂಲಕ ನಿರ್ಮಾಣವಾಗುತ್ತಿರುವ ಕಾರಂತ, ಕೆಂಪೇಗೌಡ, ಅಂಜನಾಪುರ, ಅರ್ಕಾವತಿ ಸೇರಿದಂತೆ ನೂತನ ಬಡಾವಣೆಗಳಲ್ಲಿ ಸರಿಯಾಗಿ ಮೂಲಸೌಕರ್ಯ ಕಲ್ಪಿಸಲಾಗಿಲ್ಲ. ಆದರೂ 3 ವರ್ಷದ ಒಳಗಾಗಿ ನಿವೇಶನದಲ್ಲಿ ಮನೆ ಕಟ್ಟದಿದ್ದರೆ ಶೇ.150ರಷ್ಟು ತೆರಿಗೆ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ. ಇದು ಅನ್ಯಾಯ. ಮೂಲಸೌಕರ್ಯ ಇಲ್ಲದೇ ಇದ್ದರೂ ಮನೆ ಹೇಗೆ ಕಟ್ಟು ಸಾಧ್ಯ. ಇದರ ಬದಲಾಗಿ ಜಯನಗರ ಸೇರಿದಂತೆ ನಲವತ್ತು ಐವತ್ತು ವರ್ಷಗಳ ಹಳೆಯ ಬಡಾವಣೆಗಳಲ್ಲಿ ಮನೆ ಕಟ್ಟದಿದ್ದರೆ ತೆರಿಗೆ ಹೆಚ್ಚಳ ಮಾಡಬಹುದಿತ್ತು. ಆದರೆ ನೂತನ ಬಡಾವಣೆಯಲ್ಲಿ ಈ ನಿರ್ಧಾರ ಸರಿಯಲ್ಲ. ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ರಾಜ್ಯಪಾಲರ ಕಚೇರಿ ಮಾಹಿತಿ ಹಕ್ಕು ವ್ಯಾಪ್ತಿಗೆ ಬರುವುದಿಲ್ಲವೇ?ವಿಧಾನ ಪರಿಷತ್ ಮಾಜಿ ಸದಸ್ಯರಾದ ರಮೇಶ್ ಬಾಬು ಅವರು, ‘ಮಧ್ಯಪ್ರದೇಶದ ಬಿಜೆಪಿ ಮುಖಂಡರಾದ ತಾವರಚಂದ್ ಗೆಹ್ಲೋಟ್ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. 15 ದಿನಗಳ ಹಿಂದೆ ನಮ್ಮ ರಾಜ್ಯಪಾಲರಾದ ವಜುಭಾಯ್ ವಾಲಾ ಅವರ ಕುರಿತು ವಾಲಾರವರ ದರ್ಬಾರು ಎಂದು ವರದಿ ಮಾಡಿತ್ತು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜಭವನ ಬಿಜೆಪಿ ಕಾರ್ಯಾಲಯವಾಗಿದೆ.

ವಾಲ ಅವರ ಅಧಿಕಾರ ಅವಧಿ 5 ವರ್ಷಕ್ಕೆ ಮುಕ್ತಾಯವಾದರೂ ಎರಡು ವರ್ಷಗಳ ಕಾಲ ಹೆಚ್ಚುವರಿಯಾಗಿ ಅಧಿಕಾರದಲ್ಲಿ ಮುಂದುವರಿದರು. ಇದಕ್ಕೆ ನಮ್ಮ ತಕರಾರಿಲ್ಲ. ಆದರೆ, ಇಂದು ದೇಶದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳ, ಸುಪ್ರೀಂ ಕೋರ್ಟ್ ಕಚೇರಿಗಳು ಮಾಹಿತಿ ಹಕ್ಕು ವ್ಯಾಪ್ತಿಗೆ ಬರುತ್ತದೆ. ಆದರೆ ವಾಜುಭಾಯ್ ಅವರು ರಾಜ್ಯಪಾಲರಾದ ಬಳಿಕ ಆದ ಖರ್ಚು ವೆಚ್ಚದ ಬಗ್ಗೆ ಉದ್ಭವಿಸಿದ ಅನುಮಾನಗಳ ಬಗ್ಗೆ ಪಕ್ಷದ ಪರವಾಗಿ ನಾವು ಜೂನ್ 26ರಂದು ನಾವು ಮಾಹಿತಿ ಹಕ್ಕು ಅರ್ಜಿ ಹಾಕಿ, ಅವರು ಹೇಗೆ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಮಾಹಿತಿ ಕೇಳಲಾಯಿತು. ಈ ಬಗ್ಗೆ ನಾವು ರಾಷ್ಟ್ರಪತಿಗಳಿಗೆ ಆನ್ಲೈನ್ ನಲ್ಲಿ ಅರ್ಜಿಹಾಕಿದಾಗ ಅಲ್ಲಿಂದ ನಮಗೆ ಮಾಹಿತಿ ಲಭಿಸುತ್ತದೆ.

ಇದನ್ನೂ ಓದಿ : ಪೌಷ್ಟಿಕಾಂಶ ಕೊರತೆ ನೀಗಿಸಿ 3ನೇ ಅಲೆ ಎದುರಿಸಲು ಸಜ್ಜಾಗಿ: ಸರ್ಕಾರಕ್ಕೆ ಸಿದ್ದರಾಮಯ್ಯ ಕರೆ

ದುರಾದೃಷ್ಟಕರ ಸಂಗತಿ ಎಂದರೆ ನಮ್ಮ ಅರ್ಜಿಗೆ ರಾಜ್ಯಪಾಲರ ಕಚೇರಿಯು, ‘ರಾಜ್ಯಪಾಲರ ಪದ ಬಳಕೆ ಸಾರ್ವಜನಿಕ ಪರಿಭಾಷೆ ವ್ಯಾಪ್ತಿಯಲ್ಲಿ ಬರುತ್ತದೆಯೋ ಇಲ್ಲವೋ ಎಂಬ ವಿಚಾರವಾಗಿ ಕರ್ನಾಟಕ ಮಾಹಿತಿ ಹಕ್ಕಿನ ಆಯೋಗದಲ್ಲಿ ವಿಚಾರಣೆ ಬಾಕಿ ಇರುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ. ದುರಂತ ಎಂದರೆ, ಕಳೆದ ಎರಡು ಮೂರು ವರ್ಷಗಳಲ್ಲಿ ಅವರ ಮಾಹಿತಿ ಕೇಳಿ ಅನೇಕರು ಅರ್ಜಿ ಹಾಕಿದ್ದು, ಮಾಹಿತಿ ಆಯೋಗದ ನೆಪವೊಡ್ಡಿ ಮಾಹಿತಿ ನೀಡುವುದನ್ನು ನಿರಾಕರಿಸುತ್ತಾ ಬಂದಿದೆ.

ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಯಾವುದೇ ಒಂದು ಪ್ರಕರಣ ವಿಲೇವಾರಿ ಮಾಡದೇ ಅದನ್ನು ಮುಂದಿಟ್ಟುಕೊಂಡು ರಾಜ್ಯಪಾಲರ ಕಚೇರಿಯನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡುವ ಪ್ರಯತ್ನ ಮಾಡಬೇರದು ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ಮನವಿ ಮಾಡುತ್ತೇನೆ. ಇದಕ್ಕೆ ಅವಕಾಶ ಮಾಡಿಕೊಡದಿದ್ದರೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲಾಗುವುದು. ಈ ಬಗ್ಗೆ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುವುದು’ ಎಂದರು.

ಯತ್ನಾಳ್ ಅವರ ರಾಜಕೀಯ ನಿಲುವು ಏನು?ಬಿಜೆಪಿ ಶಾಸಕರಾದ ಯತ್ನಾಳ್ ಅವರು ಯಾವಾಗ ಯಾರ ವಿರುದ್ಧ ಟೀಕೆ ಮಾಡುತ್ತಾರೋ ಗೊತ್ತಿಲ್ಲ. ಅವರ ರಾಜಕೀಯ ನಿಲುವು ಏನು ಎಂಬುದು ಗೊತ್ತಿಲ್ಲ. ವಿರೋಧ ಪಕ್ಷ ಮೌನವಾಗಿದ್ದರೆ 100 ನಾಟೌಟ್, ಸೈಕಲ್ ಜಾಥ ಪ್ರತಿಭಟನೆ ನಡೆಯುತ್ತಿರಲಿಲ್ಲ. ಕೋವಿಡ್ ಸಮಯದಲ್ಲಿ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ್ದೇವೆ.

ಸರ್ಕಾರ ಹೇರಲಾಗಿದ್ದ ಕಾನೂನು ವ್ಯಾಪ್ತಿಯ ನಿರ್ಬಂಧದ ವ್ಯಾಪ್ತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಾವು ರಾಜ್ಯದ ಮನೆ ಮನೆಗಳಿಗೆ ಹೋಗಿ, ಡೆತ್ ಆಡಿಟ್, ಉದ್ಯೋಗ ಕಳೆದುಕೊಂಡವರ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ವಿರೋಧ್ಯ ಪಕ್ಷ ಟೀಕಿಸಿದರೆ ಮಾತ್ರ ಸಕ್ರಿಯವಾಗಿದೆ ಎಂದು ಅಲ್ಲ. ಕಾಂಗ್ರೆಸ್ ಪಕ್ಷ ತನ್ನ ಜವಾಬ್ದಾರಿಯುತವಾಗಿ ಸಕಾರಾತ್ಮಕ ರಾಜ್ಕೀಯ ಮಾಡುತ್ತಿದೆ. ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಿ ಆ ವಿಚಾರವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ’ ಎಂದು ಬಿ.ಎಲ್ ಶಂಕರ್ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.