ETV Bharat / state

ಮುಂದಿನ 5 ವರ್ಷದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ: ಸಚಿವ ಅಶ್ವತ್ಥ ನಾರಾಯಣ

author img

By

Published : Dec 2, 2021, 7:16 AM IST

ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಸಂಬಂಧ ರಚಿಸಲಾಗಿರುವ ‘ಯುವ ಸಮೃದ್ಧಿ’ ಕಾರ್ಯಪಡೆಯ ಜೊತೆಗೆ ಸಚಿವ ಅಶ್ವತ್ಥ ನಾರಾಯಣ ಸಭೆ ಕೈಗೊಂಡರು.

one Crore job creation in five years, Minister Aswathanarayana held meeting, Minister Aswathanarayana news,Karnataka Digital Economy Mission, Mission Yuva Samruddhi, Karnataka Career Guidance Center of Excellence, ಐದು ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ, ಸಭೆ ಕೈಗೊಂಡ ಸಚಿವ ಅಶ್ವತ್ಥನಾರಾಯಣ, ಸಚಿವ ಅಶ್ವತ್ಥನಾರಾಯಣ ಸುದ್ದಿ, ಯುವ ಸಮೃದ್ಧಿ ಮಿಷನ್​,  ಕರ್ನಾಟಕ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ,
ಸಭೆ ಕೈಗೊಂಡ ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸಂಬಂಧ ರಚಿಸಲಾಗಿರುವ ‘ಯುವ ಸಮೃದ್ಧಿ ಮಿಷನ್​’ ಕಾರ್ಯಪಡೆಯು ನಿನ್ನೆ ಸರ್ಕಾರಕ್ಕೆ ಮಧ್ಯಾಂತರ ವರದಿ ಸಲ್ಲಿಸಿದ್ದು, ‘ಕರ್ನಾಟಕ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ’ವನ್ನು ಸ್ಥಾಪಿಸಲು ಶಿಫಾರಸು ಮಾಡಿದೆ.

ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುವ ಸಮೃದ್ಧಿ ಮಿಷನ್ ತಂಡದ ಅಧಿಕಾರಿಗಳು ಮಧ್ಯಂತರ ವರದಿ ಸಲ್ಲಿಸಿ, ಇನ್ನು 10 ದಿನಗಳಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ ಎಂದು ತಿಳಿಸಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮಾದರಿಯಲ್ಲೇ ಈ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ ಕೂಡ ಸರ್ಕಾರಿ-ಖಾಸಗಿ ಪಾಲುದಾರಿಕೆಯಲ್ಲಿ ಅಸ್ತಿತ್ವಕ್ಕೆ ಬಂದು ಸೆಕ್ಷನ್ 8 ಕಂಪನಿಯಾಗಿರಬೇಕು ಎಂದು ಕಾರ್ಯಪಡೆ ಅಭಿಪ್ರಾಯಪಟ್ಟಿದೆ. “ಪ್ರಸ್ತುತ ರಾಜ್ಯದಲ್ಲಿ ಯಾವುದೇ ಏಕೀಕೃತ ವೃತ್ತಿ ಮಾರ್ಗದರ್ಶನ ಕೇಂದ್ರ ಇಲ್ಲವಾಗಿದೆ. ಇರುವ ಕೇಂದ್ರಗಳು ಪ್ರತ್ಯೇಕ ಘಟಕಗಳಂತೆ ಬಿಡಿಬಿಡಿಯಾಗಿ ಕೆಲಸ ಮಾಡುತ್ತಿವೆ. ಆದರೆ ಶಾಲಾ ಹಂತದಿಂದ ಶುರುವಾಗಿ ಕಾಲೇಜು ಹಂತ, ಮುಂದುವರೆದು ಉದ್ಯೋಗ ಗಳಿಸುವ ಹಂತದವರೆಗೆ ಮಾರ್ಗದರ್ಶನ ನೀಡುವುದಕ್ಕಾಗಿ ಸಾಮಾನ್ಯ ರೂಪುರೇಷೆ ಸಿದ್ಧಪಡಿಸುವ ಅಗತ್ಯವಿದೆ ಎಂದು ಕಾರ್ಯಪಡೆ ಪ್ರತಿಪಾದಿಸಿದೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಮೊದಲ 'ಒಮಿಕ್ರೋನ್' ಪ್ರಕರಣ ಪತ್ತೆ

ಡಿಜಿಟಲ್ ಕೌಶಲಗಳನ್ನು ಮೈಗೂಡಿಸಿ ಉದ್ಯಮಶೀಲತಾ ಧೋರಣೆ ಬೆಳೆಸುವುದು, ವೃತ್ತಿ ಮಾಹಿತಿ ನೀಡುವುದು ಹಾಗೂ ಮಾರ್ಗದರ್ಶನ, ಜಿಲ್ಲೆಗಳಲ್ಲಿ ಉದ್ಯಮಶೀಲ ಪರಿಸರ ನಿರ್ಮಾಣ, ಕೃಷಿ ಹಾಗೂ ಕೃಷಿ ತಾಂತ್ರಿಕತೆಗೆ ಉತ್ತೇಜನ, ಈ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲು ಕಾರ್ಯಪಡೆಯು ಸಲಹೆ ನೀಡಿದೆ.

6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲಗಳನ್ನು ಹಾಗೂ 21ನೇ ಶತಮಾನದ ಕೌಶಲಗಳನ್ನು ಕಲಿಸುವುದಕ್ಕಾಗಿ ರಾಜ್ಯದಾದ್ಯಂತ ‘ವೈಡಬ್ಲು ಎನ್ ಎಕ್ಸ್ ಟಿ ಹಾಗೂ ಯುವ್ಹಾ’ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕೆಂದು ಸಲಹೆ ಕೊಡಲಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ/ ಪಿಯು ಮಂಡಳಿ/ ಐಟಿಐಗಳು ಯುನಿಸೆಫ್ ಜೊತೆ ಒಡಂಬಡಿಕೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಅಶ್ವತ್ಥ ನಾರಾಯಣ ವಿವರಿಸಿದರು.

ಎನ್ಇಪಿ ಅಡಿ ಪದವಿ ಮಟ್ಟದಲ್ಲಿ 8 ಕ್ರೆಡಿಟ್ ಕೋರ್ಸುಗಳನ್ನು ಪ್ರಾರಂಭಿಸಬೇಕು. ಇದಕ್ಕಾಗಿ ಪಠ್ಯಕ್ರಮ ಸಿದ್ಧಪಡಿಸಲು ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಇದನ್ನು ಅಳವಡಿಸುವುದಕ್ಕಾಗಿ ವಿಟಿಯು/ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನೇತೃತ್ವದಲ್ಲಿ ಕಾರ್ಯತಂಡ ರಚಿಸಬೇಕೆಂಬ ಸಲಹೆ ಈ ವರದಿಯಲ್ಲಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ವಿಧಾನ ಪರಿಷತ್‌ ಫೈಟ್: ಇಂದಿನಿಂದ ದೇವೇಗೌಡರ ಮತಬೇಟೆ

ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೈಗಾರಿಕೋದ್ಯಮ ಸೌಲಭ್ಯ ಪೂರೈಕೆ ಕೇಂದ್ರ’ಗಳನ್ನು ಶೀಘ್ರವೇ ಅಸ್ತಿತ್ವಕ್ಕೆ ತರಬೇಕೆಂದು ವರದಿ ಅಭಿಪ್ರಾಯಪಟ್ಟಿದೆ ಎಂದು ಅವರು ಹೇಳಿದರು.

ಕೃಷಿ ಮತ್ತು ಕೃಷಿ ತಂತ್ರಜ್ಞಾನಕ್ಕೆ ಒತ್ತು:

ಕೃಷಿ ಮತ್ತು ಕೃಷಿ ತಂತ್ರಜ್ಞಾನದತ್ತ ಯುವಜನರನ್ನು ಸೆಳೆಯಲು ಒತ್ತು ಕೊಡಲಾಗಿದ್ದು, ಈ ನಿಟ್ಟಿನಲ್ಲಿ ರೈತ ಉತ್ಪಾದಕ ಕೇಂದ್ರಗಳನ್ನು ಕೃಷಿ ತಂತ್ರಜ್ಞಾನ ಕಂಪನಿಗಳೊಂದಿಗೆ ಬೆಸೆಯುವ ಮೂಲಕ ಈ ವಲಯದಲ್ಲಿ ಬೇಡಿಕೆಯನ್ನು ಹೆಚ್ಚಿಸಬೇಕೆಂದು ಮತ್ತು `ಕೃಷಿಕಲ್ಪ’ ಉಪಕ್ರಮದಡಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ಹಾಗೂ ಎಸ್ಆರ್​ಎಲ್ಎಂ (State Rural Livelihood Mission) ಜತೆಗೂಡಿ ಯುವಜನರಿಗೆ ರಾಜ್ಯ ಮಟ್ಟದ ಕೃಷಿ ತರಬೇತಿ ಯೋಜನೆಗೆ ಚಾಲನೆ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಸ್ವಸಹಾಯ ಗುಂಪುಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಒದಗಿಸಬೇಕೆಂದು ಸಲಹೆ ಕೊಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಪಡೆಯ ಸಹ ಸಂಚಾಲಕ ಉದ್ಯಮಿ ಮದನ್ ಪದಕಿ, ಕೌಶಲಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆದ ಕಾರ್ಯಕಾರ್ಯಪಡೆ ಮುಖ್ಯಸ್ಥ ಎಸ್. ಸೆಲ್ವಕುಮಾರ್, ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಕಾರ್ಯಪಡೆಯ ಮತ್ತೊಬ್ಬ ಸಹ ಸಂಚಾಲಕ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ನವೋದ್ಯಮ ದೂರದರ್ಶಿತ್ವ ಮಂಡಳಿಯ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.