ETV Bharat / state

ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಬಂಧನ

author img

By

Published : Aug 12, 2023, 9:51 AM IST

Updated : Aug 12, 2023, 1:30 PM IST

Puneeth Kerehalli arrest: ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್‌ ಕೆರೆಹಳ್ಳಿಯನ್ನು ಗೂಂಡಾ ಕಾಯ್ದೆಯಡಿ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

crime-puneeth-kerehalli-arrested-by-bengaluru-ccb-police
ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಬಂಧನ

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ ಶರಣಪ್ಪ

ಬೆಂಗಳೂರು : ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್‌ ಕೆರೆಹಳ್ಳಿ (32)ಯನ್ನು ಗೂಂಡಾ ಕಾಯ್ದೆಯಡಿ ನಗರದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ಪುನೀತ್ ಕೆರೆಹಳ್ಳಿಗೆ ತಿಳಿವಳಿಕೆ ನೋಟಿಸ್ ಜಾರಿ ಮಾಡಿದ್ದ ಚಾಮರಾಜಪೇಟೆ ಉಪ ವಿಭಾಗದ ಪೊಲೀಸರು ರೌಡಿಶೀಟರ್​​ ತೆರೆಯುವ ಬಗ್ಗೆ ಸೂಚನೆ ನೀಡಿದ್ದರು. ಸದ್ಯ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯದ ಜಾಮೀನಿನ ಮೇಲೆ ಹೊರಗಿದ್ದ ಪುನೀತ್ ಕೆರೆಹಳ್ಳಿ‌ ವಿರುದ್ಧ ಕರ್ನಾಟಕ ರಾಜ್ಯ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿತನನ್ನು ಬಂಧಿಸಿದ್ದಾರೆ. ಪುನೀತ್ ಕೆರೆಹಳ್ಳಿ ವಿರುದ್ಧ ಡಿ.ಜೆ ಹಳ್ಳಿ, ಬೇಗೂರು, ಕಗ್ಗಲಿಪುರ, ಹಂಪಿ‌ ಟೂರಿಸಂ ಠಾಣೆ, ಮಳವಳ್ಳಿ, ಚಾಮರಾಜಪೇಟೆ ಸೇರಿದಂತೆ 11 ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ. ಸಂಘಟನೆ ಹೆಸರಿನಲ್ಲಿ ಗೋವು ವ್ಯಾಪಾರಿಗಳಿಗೆ ಬೆದರಿಕೆ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಕೆಲಸ ಸೇರಿದಂತೆ ಕಳೆದ 10 ವರ್ಷಗಳಿಂದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದನ್ನು ಆಧರಿಸಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಸಿಬಿ ಜಂಟಿ ಆಯುಕ್ತರ ಪ್ರತಿಕ್ರಿಯೆ: ಈ ಕುರಿತು ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ ಶರಣಪ್ಪ, "ಬೆಂಗಳೂರು ನಗರದಲ್ಲಿ ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಆರೋಪಿಗಳ ಮೇಲೆ ಪೊಲೀಸರ ನಿಗಾ ಇದೆ. ಅಂಥವರ ವಿರುದ್ಧ ಅವರ ಅಪರಾಧ ಚಟುವಟಿಕೆಗಳಿಗೆ ಅನುಗುಣವಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರೂಢಿಗತ ಅಪರಾಧಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗುತ್ತಿದೆ. ಈ ವರ್ಷ 7 ಜನರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ'' ಎಂದಿದ್ದಾರೆ.

''ನಿನ್ನೆ ಮತ್ತೋರ್ವ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಈತನ ಮೇಲೆ ಬೆಂಗಳೂರು, ರಾಮನಗರ, ವಿಜಯನಗರ ಜಿಲ್ಲೆಗಳಲ್ಲಿ ಕೊಲೆ‌, ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವಿಕೆ, ಅನೈತಿಕ ಕಳ್ಳ ಸಾಗಾಣಿಕೆ, ರಾಷ್ಟ್ರೀಯ ಗೌರವಕ್ಕೆ ಧಕ್ಕೆ ಸೇರಿದಂತೆ ಸುಮಾರು 10 ಪ್ರಕರಣಗಳು ದಾಖಲಾಗಿದ್ದವು. ಆ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಇನ್ನೊಂದರಲ್ಲಿ ಖುಲಾಸೆಯಾಗಿತ್ತು. ಐದು ಪ್ರಕರಣ ಇನ್ನೂ ತನಿಖಾ ಹಂತದಲ್ಲಿವೆ. ಕಾನೂನು ಕಾಪಾಡುವ ದೃಷ್ಟಿಯಿಂದ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಇತ್ತೀಚೆಗೆ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ರೌಡಿಪಟ್ಟಿ ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ" ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಹೀಗಿದೆ ಗೂಂಡಾ ಕಾಯ್ದೆ: ಗೂಂಡಾ ಕಾಯ್ದೆಯಡಿ ಬಂಧಿಸಲಾದ ವ್ಯಕ್ತಿಯನ್ನು ಇತರ ಪ್ರಕರಣಗಳಂತೆ 24 ಗಂಟೆಗಳೊಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇಲ್ಲ. ಪೊಲೀಸ್‌ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೆ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದು. ಗೂಂಡಾ ಕಾಯ್ದೆ ಅಡಿ ಬಂಧಿತನಾದಲ್ಲಿ ಅಪರಾಧಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ.

ಇದನ್ನೂ ಓದಿ: ಬೆಂಗಳೂರಲ್ಲಿ ಯುವತಿ ಹತ್ಯೆ ಮಾಡಿ ಮನೆ ಎದುರು ಎಸೆದ ಪ್ರಕರಣ: ಪಕ್ಕದ ಮನೆಯಲ್ಲೇ ಇದ್ದ ಆರೋಪಿ ಬಂಧನ

Last Updated : Aug 12, 2023, 1:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.