ETV Bharat / state

ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಕಾರ್ಯಪಡೆ ರಚಿಸಿ: ಕೋರ್ಟ್ ಆದೇಶ

author img

By

Published : Nov 8, 2022, 6:38 AM IST

ನ್ಯಾಯಾಂಗ ಪ್ರಕ್ರಿಯೆಯ ಡಿಜಿಟಲೀಕರಣದ ಹಾದಿಯಲ್ಲಿ ಬರುವ ಯಾವುದೇ ಕೈಬರಹದ ದಾಖಲೆಯನ್ನು ನ್ಯಾಯಾಲಯ ಸ್ವೀಕರಿಸಬಾರದು- ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಆದೇಶ.

Dharwad High Court
ಧಾರವಾಡ ಹೈಕೋರ್ಟ್

ಬೆಂಗಳೂರು: ಡಿಜಿಟಲ್ ತಂತ್ರಜ್ಞಾನ ಸಾಕಷ್ಟು ಬೆಳೆದಿರುವ ಸಂದರ್ಭದಲ್ಲಿಯೂ ಪೊಲೀಸರು ಕೈಬರಹದಲ್ಲಿಯೇ ತನಿಖಾ ದಾಖಲೆಗಳನ್ನು ಸಲ್ಲಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ, ತನಿಖಾ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಕಾರ್ಯ ಪಡೆಯನ್ನು ಸ್ಥಾಪಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ.

2016ರ ಪ್ರಕರಣದಲ್ಲಿ ಬಾಗಲಕೋಟೆ ಪೊಲೀಸರು ವಿದ್ಯುನ್ಮಾನ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಪೊಲೀಸ್ ಸಿಬ್ಬಂದಿ ಅಸ್ಪಷ್ಟ ಕೈಬರಹದಲ್ಲಿ ತನಿಖಾ ವರದಿ/ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಜಿ.ಬಸವರಾಜ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿತು.

ಅಲ್ಲದೇ, ಪೊಲೀಸ್ ಇಲಾಖೆಯ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಮುಖ್ಯಸ್ಥರು, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ನಿರ್ದೇಶಕರ ನಾಮನಿರ್ದೇಶಿತರನ್ನು ಒಳಗೊಂಡ ಕಾರ್ಯಪಡೆ ರಚಿಸಬೇಕು ಎಂದು ಸೂಚಿಸಿದೆ.

ಪೊಲೀಸ್ ಇಲಾಖೆ 2008ರಿಂದಲೇ ಮಾಹಿತಿ ತಂತ್ರಜ್ಞಾನ ಬಳಕೆ ಆರಂಭಿಸಿದ್ದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಹೀಗಾಗಿ ಅಪರಾಧ ದಾಖಲೆಗಳ ಬ್ಯೂರೋ, ಅಪರಾಧ ಮತ್ತು ಅಪರಾಧಿಗಳ ನಿಗಾ ವ್ಯವಸ್ಥೆ (ಸಿಸಿಟಿಎನ್​​ಎಸ್)ನ ನಿರ್ದೇಶಕರು ತನಿಖಾ ಸಾಮಗ್ರಿಗಳ ಡಿಜಿಟಲೀಕರಣದ ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಪೀಠ ಹೇಳಿದೆ.

ಇದೇ ವೇಳೆ ನ್ಯಾಯಾಂಗ ಪ್ರಕ್ರಿಯೆಯ ಡಿಜಿಟಲೀಕರಣದ ಹಾದಿಯಲ್ಲಿ ಬರುವ ಯಾವುದೇ ಕೈಬರಹದ ದಾಖಲೆಯನ್ನು ನ್ಯಾಯಾಲಯವು ಸ್ವೀಕರಿಸಬಾರದು. ಎಲೆಕ್ಟ್ರಾನಿಕ್ ಟೈಪ್ ಮಾಡಿದ ಮಾದರಿಯಲ್ಲಿ ವರದಿಗಳನ್ನು ಸಲ್ಲಿಸಲು ಮತ್ತು ಅವರಿಗೆ ತರಬೇತಿ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಡಿಜಿ ಮತ್ತು ಐಜಿಪಿಗೆ ತಿಳಿಸಿದೆ.

ನ್ಯಾಯಾಲಯದ ಸೂಚನೆಗಳಿವು..:

  • ತನಿಖೆಗಳಲ್ಲಿ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆ ಮಾಡಿಕೊಳ್ಳಬೇಕು.
  • ಎಲ್ಲಾ ನಮೂದುಗಳನ್ನು ಡಿಜಿಟಲ್ ರೂಪದಲ್ಲಿ ಮಾಡಬೇಕಾಗಿದೆ. ತನಿಖಾಧಿಕಾರಿಗಳು ಮತ್ತು ಇತರ ವ್ಯಕ್ತಿಗಳಿಗೆ ಡಿಜಿಟಲ್ ಸಹಿಗಳನ್ನು ನೀಡುವ ಮೂಲಕ ದಾಖಲೆಗಳನ್ನು ಡಿಜಿಟಲ್ ಸಹಿ ಮಾಡಬೇಕು.
  • ಡಿಜಿಟಲ್ ಸಹಿ ಲಭ್ಯವಿಲ್ಲದಿದ್ದಾಗ, ಭೌತಿಕ ಸಹಿಗಳನ್ನು ಸ್ಕ್ಯಾನ್ ಮಾಡಿ ಅದನ್ನು ಅಪ್‌ಲೋಡ್ ಮಾಡುವ ವ್ಯಕ್ತಿಯ ಡಿಜಿಟಲ್ ಸಹಿಯೊಂದಿಗೆ ಪೊಲೀಸ್ ಐಟಿ ವ್ಯವಸ್ಥೆಗೆ ಅಪ್‌ಲೋಡ್ ಮಾಡಬೇಕು.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಧಾರವಾಡ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.