ETV Bharat / state

ಮಕ್ಕಳೇ ಮೂರನೇ ಅಲೆಯ ಟಾರ್ಗೆಟ್.. ಪ್ರತ್ಯೇಕ ಟಾಸ್ಕ್ ಫೋರ್ಸ್, ತಜ್ಞರ ಸಮಿತಿ ರಚನೆಗೆ ಮುಂದಾದ ಸರ್ಕಾರ

author img

By

Published : May 11, 2021, 4:12 PM IST

Updated : May 11, 2021, 4:36 PM IST

ಕೊರೊನಾ ಎರಡನೇ ಅಲೆಯು ರಾಜ್ಯವನ್ನು ಹಿಂಡಿ ಹಿಪ್ಪೆ ಮಾಡಿದೆ. ಈ ನಡುವೆ ಮತ್ತೊಂದು ಆತಂಕಕಾರಿ ಮಾಹಿತಿ ಬಂದಿದೆ. ಮಕ್ಕಳೇ ಮೂರನೇ ಅಲೆಯ ಟಾರ್ಗೆಟ್​ ಎಂಬುದನ್ನು ಅರಿತಿರುವ ಸರ್ಕಾರ ಇದಕ್ಕಾಗಿ ಪ್ರತ್ಯೇಕ ಟಾಸ್ಕ್​ ಫೋರ್ಸ್​ ಮತ್ತು ತಜ್ಞರ ಸಮಿತಿ ರಚಿಸಲು ಮುಂದಾಗಿದೆ.

covid targets children
ಮಕ್ಕಳ ಮೇಲೆ ಕೊರೊನಾ ಕೆಂಗಣ್ಣು

ಬೆಂಗಳೂರು: ಕೋವಿಡ್ ಎರಡನೇ ಅಲೆಗೆ ಸಿಲುಕಿ ನಲುಗುತ್ತಿರುವ ರಾಜ್ಯಕ್ಕೆ ಮೂರನೇ ಅಲೆಯ ಭೀತಿ ಎದುರಾಗಿದೆ. ಮಕ್ಕಳೇ ಮೂರನೇ ಅಲೆಯ ಟಾರ್ಗೆಟ್ ಎನ್ನುವ ತಜ್ಞರ ವರದಿ ಹಿನ್ನೆಲೆಯಲ್ಲಿ ಮೂರನೇ ಅಲೆ ಎದುರಿಸಲು ಸರ್ಕಾರ ಈಗಿನಿಂದಲೇ ಸನ್ನದ್ಧವಾಗುತ್ತಿದೆ. ಎರಡನೇ ಅಲೆಯ ನಿಯಂತ್ರಣದ ಜೊತೆ ಜೊತೆಗೆ ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಎರಡನೇ ಅಲೆಯ ನಿಯಂತ್ರಣಕ್ಕೆ ಲಾಕ್ ಡೌನ್ ಮೊರೆ ಹೋಗಿರುವ ರಾಜ್ಯ ಸರ್ಕಾರ, ಸದ್ಯದಲ್ಲೇ ಎದುರಾಗಲಿರುವ ಮೂರನೇ ಅಲೆಗೂ ಸಿದ್ಧವಾಗಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಎರಡನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆಯನ್ನು ಕಡೆಗಣಿಸಿದ್ದರ ಪರಿಣಾಮ ಕಣ್ಮುಂದೆಯೇ ಇರುವ ಹಿನ್ನೆಲೆಯಲ್ಲಿ ಮೂರನೇ ಅಲೆ ಕುರಿತು ತಜ್ಞರು ನೀಡಿರುವ ವರದಿಯನ್ನು ಸರ್ಕಾರ ಎಚ್ಚರಿಕೆಯಿಂದ ಪರಿಗಣಿಸುತ್ತಿದೆ.

covid third wave targets children
ಪ್ರತ್ಯೇಕ ಟಾಸ್ಕ್ ಫೋರ್ಸ್, ತಜ್ಞರ ಸಮಿತಿ ರಚನೆಗೆ ಮುಂದಾದ ಸರ್ಕಾರ

ತಜ್ಞರಿಂದ‌ ಮೂರನೇ ಅಲೆಯ ಎಚ್ಚರಿಕೆ ಸಂದೇಶ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡುಯೂರಪ್ಪ, ಮೂರನೇ ಅಲೆಗೆ ಈಗಿನಿಂದಲೇ ಸಿದ್ಧರಾಗಬೇಕಿದ್ದು, ಅದಕ್ಕೊಂದು ಟಾಸ್ಕ್ ಫೋರ್ಸ್ ಕಮಿಟಿ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಮೂರನೇ ಅಲೆ ಪ್ರಭಾವ ಮಕ್ಕಳ ಮೇಲಾಗಲಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಯಾವ ರೀತಿ ನಿಯಂತ್ರಣ ಮಾಡಬೇಕು ಎಂದು ವರದಿ ನೀಡಲು ತಜ್ಞರ ಸಮಿತಿ ರಚಿಸಲು ನಿರ್ಧರಿಸಿದೆ. ಈ ಸಮಿತಿಯಲ್ಲಿ ಮಕ್ಕಳ ತಜ್ಞರೂ ಇರಲಿದ್ದಾರೆ. ಚಿಣ್ಣರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಅಧ್ಯಯನವೂ ನಡೆಯಲಿದೆ.

ಆಗಸ್ಟ್, ಸೆಪ್ಟೆಂಬರ್ ವೇಳೆಗೆ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಅಷ್ಟರಲ್ಲಿ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಕೊಡುವ ಕಾರ್ಯ ನಡೆಯಲಿದೆ, ಕನಿಷ್ಠ ಮೊದಲ ಡೊಸೇಜ್ ಆದರೂ ಆಗಿರುತ್ತದೆ. ಹಾಗಾಗಿ ಮೂರನೇ ಅಲೆಯ ಪರಿಣಾಮ 18 ವರ್ಷದ ಮೇಲ್ಪಟ್ಟವರಿಗೆ ಆಗುವ ಪ್ರಮಾಣಕ್ಕಿಂತ ಲಸಿಕೆ ಪಡೆಯದ 18 ವರ್ಷದ ಒಳಗಿನವರಿಗೆ ಆಗಲಿದೆ ಎನ್ನಲಾಗ್ತಿದೆ. ಈ ನಿಟ್ಟಿನಲ್ಲಿಯೇ ಮೂರನೇ ಅಲೆ ಎದುರಿಸಲು ಸರ್ಕಾರ ಮುಂದಾಗಿದೆ.

ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತದೆ, ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆ ಮಕ್ಕಳನ್ನು ಆರೈಕೆ ಕೇಂದ್ರಕ್ಕೆ ದಾಖಲಿಸಿಕೊಂಡು‌ ಚಿಕಿತ್ಸೆ ನೀಡಲಾಗುತ್ತದೆ. ಆ ಮೂಲಕ ಮಕ್ಕಳಲ್ಲಿ ಕೋವಿಡ್ ಸೋಂಕಿನ ತೀವ್ರತೆಗೆ ಬ್ರೇಕ್ ಹಾಕುವ ಯೋಜನೆ ರೂಪಿಸಿದೆ. ಆದರೆ ಇದು ಬಹು ದೊಡ್ಡ ಸವಾಲಾಗಿದೆ. ದೊಡ್ಡವರನ್ನು ಆರೈಕೆ ಕೇಂದ್ರದಲ್ಲಿ ಇರಿಸಿದಷ್ಟು ಸುಲಭದಲ್ಲಿ ಮಕ್ಕಳನ್ನು ಇರಿಸಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಯಾವ ರೀತಿ ಜಾರಿಗೆ ತರಲಿದೆ ಎನ್ನುವುದರ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಆರೈಕೆ ಕೇಂದ್ರದಲ್ಲೇ ಆಮ್ಲಜನಕ:
ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಅಳವಡಿಸಲಾಗುತ್ತಿದೆ, ಈಗಾಗಲೇ ಬೆಂಗಳೂರು ಸುತ್ತಮುತ್ತಲಿನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ 2 ಸಾವಿರ ಆಕ್ಸಜನ್ ಕಾನ್ಸನ್ಟ್ರೇಟರ್ ಅಳವಡಿಸಲಾಗುತ್ತಿದೆ, ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತದೆ, ಪ್ರತಿ ಕೇಂದ್ರದಲ್ಲಿ 25-30 ಆಕ್ಸಿಜನ್ ಕಾನ್ಸನ್ಟ್ರೇಟರ್ ಅಳವಡಿಸಲಾಗುತ್ತದೆ. ಇದರಿಂದಾಗಿ ಆಕ್ಸಿಜನ್ ಲೆವೆಲ್ ಕಡಿಮೆಯಾಗುವ ಸೋಂಕಿತರಿಗೆ ಆರಂಭಿಕ ಹಂತವಾಗಿ ಆರೈಕೆ ಕೇಂದ್ರದಲ್ಲೇ ಆಕ್ಸಿಜನ್ ನೀಡಬಹುದು, ಅನಗತ್ಯವಾಗಿ ಐಸಿಯು ಬೆಡ್ ಗೆ ಅಲೆದಾಡುವುದನ್ನು ತಪ್ಪಿಸಬಹುದಾಗಿದೆ. ಅಗತ್ಯ ಇದ್ದವರಿಗಷ್ಟೇ ಐಸಿಯು, ವೆಂಟಿಲೇಟರ್ ನೀಡಬಹುದಾಗಿದೆ. ಆರಂಭಿಕ ಹಂತದಲ್ಲಿಯೇ ಆಕ್ಸಿಜನ್ ಕೊಡುವುದರಿಂದ ಸೋಂಕಿತರು ಗಂಭೀರ ಸ್ಥಿತಿ ತಲುಪುವುದು ತಪ್ಪಲಿದೆ. ಇದರಿಂದ ಡೆತ್ ರೇಟ್ ಕಡಿಮೆ ಮಾಡಬಹುದಾಗಿದೆ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.

ಆಮ್ಲಜನಕ ಉತ್ಪಾದನಾ ಘಟಕಕ್ಕೆ ಶೆ. 75 ಸಬ್ಸಿಡಿ:

ರಾಜ್ಯದ ಜಿಲ್ಲಾ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಶೇ.75 ರ ಸಬ್ಸಿಡಿ ಸೌಲಭ್ಯದೊಂದಿಗೆ ಆಮ್ಲಜನಕ ಉತ್ಪಾದನಾ ಘಟಕ‌ ಸ್ಥಾಪನೆಗೆ ಅವಕಾಶ ನೀಡಿದೆ. ಒಟ್ಟು ವೆಚ್ಚದ ಶೇ.25 ರಷ್ಟು ಹಣವನ್ನು ಆಡಳಿತ ಮಂಡಳಿಗಳು ಭರಿಸಿದರೆ ಸಾಕು ಎಂದು ತಿಳಿಸಿದೆ. ಆ ಮೂಲಕ ರಾಜ್ಯದಲ್ಲಿ ಆಮ್ಲಜನಕ ಕೊರತೆ ನೀಗಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಹಳ್ಳಿಯಿಂದಲೇ ಆಪರೇಷನ್ ಕೋವಿಡ್:

ಮೂರನೇ ಅಲೆಯ ಬಗ್ಗೆ ಅಲಕ್ಷ್ಯ ಮಾಡುವುದು ಬೇಡ, ಹಿಂದೆ ಮಾಡಿದ ತಪ್ಪುಗ್ನುಳು ಮರುಕಳಿಸುವುದು ಬೇಡ. ಹಾಗಾಗಿ ಹಳ್ಳಿಗಳ ಮಟ್ಟದಿಂದಲೇ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುತ್ತಾ ಬರಬೇಕು ಎನ್ನುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ರಾಜ್ಯದ 146 ತಾಲ್ಲೂಕು ಆಸ್ಪತ್ರೆಗಳಲ್ಲಿ 3-6 ಐಸಿಯು ಬೆಡ್​ಗಳಿದ್ದು, ಅವನ್ನು 20 ಕ್ಕೆ ಹೆಚ್ಚಿಸಲಾಗುತ್ತದೆ. ಇದರಿಂದಾಗಿ 1,925 ಐಸಿಯು ಬೆಡ್​ಗಳು ಲಭ್ಯವಾಗಲಿವೆ. 206 ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಅವು 30 ಸಾಮಾನ್ಯ ಬೆಡ್​ಗಳನ್ನು ಹೊಂದಿವೆ. ಇವನ್ನು ಆಕ್ಸಿಜನ್ ಬೆಡ್ ಗಳನ್ನಾಗಿ ಪರಿವರ್ತನೆ ಮಾಡಲು ನಿರ್ಧರಿಸಿದ್ದು ಇದರಿಂದ 6,180 ಆಕ್ಸಿಜನ್ ಬೆಡ್ ಲಭ್ಯವಾದಂತಾಗಲಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ 50 ಐಸಿಯು ಬೆಡ್​ಗಳನ್ನು ಮಾಡಲಾಗುತ್ತದೆ. ಆ ಮೂಲಕ ಐಸಿಯು ಬೆಡ್ ಗಳ ಕೊರತೆ ನೀಗುವ ಜೊತೆಗೆ ಬೆಡ್ ಗಳು ಪ್ರಾದೇಶಿಕಾವಾರು ಹಂಚಿಕೆಯೂ ಆಗಲಿದೆ. ಎಲ್ಲರೂ ಜಿಲ್ಲಾಸ್ಪತ್ರೆಗೆ ಬರುವುದು ತಪ್ಪಲಿದೆ, ಹಳ್ಳಿಗಳ ಮಟ್ಟದಲ್ಲೇ ಚಿಕಿತ್ಸೆ ನೀಡಿದಲ್ಲಿ ಸೋಂಕಿನ ಹರಡುವಿಕೆಗೆ ನಿಯಂತ್ರಣ ಸಿಗಲಿದೆ, ಮರಣದ ಪ್ರಮಾಣವನ್ನೂ ತಗ್ಗಿಸಬಹುದು ಎನ್ನುವ ಚಿಂತನೆ ಸರ್ಕಾರದ್ದಾಗಿದೆ.

ಒಟ್ಟಿನಲ್ಲಿ ಮಕ್ಕಳನ್ನೇ ಕೇಂದ್ರೀಕರಿಸಿಕೊಂಡು ಮೂರನೇ ಅಲೆ ಎದುರಿಸಲು ಸರ್ಕಾರ ಸಜ್ಜಾಗುತ್ತಿದೆ. ಹಳ್ಳಿಯಿಂದ ಮಹಾನಗರದವರೆಗೂ ಐಸಿಯು ಬೆಡ್, ಆಕ್ಸಿಜನ್ ಉತ್ಪಾದನೆ, ಆರೈಕೆ ಕೇಂದ್ರದಲ್ಲೂ ಚಿಕಿತ್ಸಾ ವ್ಯವಸ್ಥೆ ಕಲ್ಪಿಸುತ್ತಿದ್ದು, ಮೂರನೇ ಅಲೆಯನ್ನು ಎದುರಿಸುವಲ್ಲಿ ಸರ್ಕಾರ ಎಷ್ಟರಮಟ್ಟಿಗೆ ಸಫಲವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Last Updated : May 11, 2021, 4:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.