ETV Bharat / state

ಮತ್ತೆ ಕೋವಿಡ್ ಅಲರ್ಟ್; ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್, ಮಂಗಳವಾರ ಟಿಎಸಿ ಸಭೆ - ಸಚಿವ ಗುಂಡೂರಾವ್

author img

By ETV Bharat Karnataka Team

Published : Dec 17, 2023, 6:55 AM IST

COVID alert in Karnataka: ಪಕ್ಕದ ರಾಜ್ಯ ಕೇರಳದಲ್ಲಿ ಹೊಸ ತಳಿಯ ಕೋವಿಡ್​ ಪ್ರಕರಣ ದಾಖಲಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಕರ್ನಾಟಕದಲ್ಲಿ ಆರ್​ಟಿಪಿಸಿಆರ್​​ ಕಿಟ್​ಗಳಿಂದ ಹಿಡಿದು ಕೊರೊನಾ ಪರೀಕ್ಷೆ ತನಕ ಎಲ್ಲದರ ಸಿದ್ಧತೆಯನ್ನು ಈಗಲೇ ಆರೋಗ್ಯ ಇಲಾಖೆ ಮಾಡಿಕೊಳ್ಳಲು ಮುಂದಾಗಿದೆ.

Covid alert
ಕೋವಿಡ್ ಅಲರ್ಟ್

ಬೆಂಗಳೂರು: ಈ ಹಿಂದೆ ಭಾರತ ಸೇರಿದಂತೆ ವಿಶ್ವದಲ್ಲಿ ತಲ್ಲಣವನ್ನುಂಟು ಮಾಡಿದ್ದ ಕೋವಿಡ್​ ವೈರಸ್​ ಮತ್ತೆ ಸದ್ದು ಮಾಡುತ್ತಿದೆ. ಪಕ್ಕದ ರಾಜ್ಯ ಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆಯ ಮಾಕ್‌ ಡ್ರಿಲ್ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಕೋವಿಡ್ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಸಚಿವರು, ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳು, ಆಮ್ಲಜನಕದ ಲಭ್ಯತೆ ಮತ್ತು ಔಷಧಗಳು ಸೇರಿದಂತೆ ಹಾಸಿಗೆಗಳ ಸಾಮರ್ಥ್ಯ ಪರಿಶೀಲಿಸಲು ಎಲ್ಲಾ ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರಿಸ್ಥಿತಿ ಆತಂಕಕಾರಿ ಆಗಿಲ್ಲದಿದ್ದರೂ ಅಂತಹ ಪರಿಸ್ಥಿತಿ ಮರುಕಳಿಸಿದರೆ ಸನ್ನದ್ಧರಾಗಿರಲು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಕೊರತೆಯಿದ್ದಲ್ಲಿ ಅದನ್ನು ಈಗಲೇ ಸರಿಪಡಿಸಲು ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಕೆ. ರವಿ ನೇತೃತ್ವದಲ್ಲಿ ಮಂಗಳವಾರ(19/12/23) ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸಭೆಯನ್ನು ಕರೆಯಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ತಾಂತ್ರಿಕ ಸಲಹಾ ಸಮಿತಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು, ಸಿದ್ಧತೆ ಹೇಗಿರಬೇಕು, ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮಾರ್ಗದರ್ಶನ, ಸಲಹೆಗಳನ್ನು ನೀಡಲಿದೆ. ಅದಕ್ಕನುಗುಣವಾಗಿ ಕ್ರಮ ವಹಿಸುತ್ತೇವೆ.

ಎಲ್ಲರೂ ಎಚ್ಚರದಿಂದ ಇರಲು ಮನವಿ ಮಾಡಲಾಗಿದೆ. ಆದರೆ ಆತಂಕ ಪಡುವ ಅಗತ್ಯ ಇಲ್ಲ. ರೋಗಲಕ್ಷಣ ಇರುವವರಿಗೆ ಆಸ್ಪತ್ರೆಗಳಲ್ಲಿ ಟೆಸ್ಟ್​​ ಮಾಡಿಸಲಾಗುತ್ತದೆ. ಕೇರಳದಿಂದ ಬರುವವರನ್ನು, ವಿಮಾನದ ಮೂಲಕ ಬರುವವರನ್ನು ತಪಾಸಣೆ ಮಾಡುವ ಅವಶ್ಯಕತೆ ಈಗಿಲ್ಲ. ಆದರೆ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡುತ್ತೇವೆ. ಪ್ರಕರಣಗಳು ಹೆಚ್ಚಿಗೆ ಕಂಡುಬಂದಲ್ಲಿ ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗದುಕೊಳ್ಳುತ್ತೇವೆ. ಇಲಾಖೆ ಎಲ್ಲದಕ್ಕೂ ತಯಾರಾಗಿದೆ ಎಂದು ಸ್ಪಷ್ಟಪಡಿಸಿದರು.

ಸದ್ಯ ನಮ್ಮ ಬಳಿ 30,000 ಆರ್​ಟಿಪಿಸಿಆರ್​​ ಕಿಟ್​​ಗಳು ಇವೆ. ಅದು ಸಾಕಾಗುವುದಿಲ್ಲ. ಸುಮಾರು ಮೂರು ನಾಲ್ಕು ಲಕ್ಷ ಕಿಟ್​ಗಳು ಬೇಕು. ಅದಕ್ಕಾಗಿ ಟೆಂಡರ್ ಕರೆದಿದ್ದೇವೆ. ಅದನ್ನು ಒಂದು ವಾರದಲ್ಲಿ ಕಳುಹಿಸಲು ಸೂಚಿಸಲಾಗಿದೆ. ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಮೂಲಕ ಪರೀಕ್ಷಾ ಕಿಟ್‌ಗಳನ್ನು ಖರೀದಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಕೋವಿಡ್ ರೋಗಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ ಮಾಡಲಾಗುವುದು, ಎಲ್ಲರಿಗೂ ಅಲ್ಲ ಎಂದು ಸಚಿವರು ತಿಳಿಸಿದರು.

ಭ್ರೂಣ ಹತ್ಯೆ ಸಂಬಂಧ ಅಧಿಕಾರಿಗಳ ಜೊತೆ ಸಭೆ: ಭ್ರೂಣ ಹತ್ಯೆ ಪ್ರಕರಣಗಳ ಸಂಬಂಧ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಪೊಲೀಸ್ ಅಧಿಕಾರಿಗಳು ಕಾನೂನು ತೊಡಕಿನ ಬಗ್ಗೆ ತಿಳಿಸಿದ್ದು, ಕೆಲ ಸಲಹೆಗಳನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಎರಡು ಮೂರು ದಿನಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿ, ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆಯನ್ನು ತಡೆಗಟ್ಟಲು ಐಪಿಸಿ ಸೆಕ್ಷನ್​ಗೆ ತಿದ್ದುಪಡಿ ಅಥವಾ ಕಾನೂನು ತರುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಿಯಂತ್ರಣ ಕಾಯ್ದೆಯ ನೂನ್ಯತೆ, ತೊಡಕು ನಿವಾರಿಸಿ ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಕಾರ್ಯಪಡೆ ರಚನೆಗೆ ಚಿಂತನೆ: ಈ ಸಂಬಂಧ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಕಾರ್ಯಪಡೆ ರಚಿಸಲು ಚಿಂತಿಸಲಾಗಿದೆ. ಕಾರ್ಯಪಡೆಯಲ್ಲಿ ಆರೋಗ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇರಲಿದ್ದಾರೆ. ಇಂಥ ಪ್ರಕರಣಗಳ ಬಗ್ಗೆ ಮಾಹಿತಿ ಬಂದಾಗ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ ಎಂದರು.

ಟಾಸ್ಕ್ ಫೋರ್ಸ್​ನಲ್ಲಿ ಯಾರಿರಬೇಕು ಎಂಬ ಬಗ್ಗೆ ವಾರದಲ್ಲಿ ನಿರ್ಧಾರಕ್ಕೆ ಬರಲಿದ್ದೇವೆ. ಇನ್ನು ಬೈಯಪ್ಪನ ಹಳ್ಳಿ ಭ್ರೂಣ ಹತ್ಯೆ ಪ್ರಕರಣ ಸಂಬಂಧ ತಡೆಯಾಜ್ಞೆ ತೆರವಿಗೆ ಎಜಿ ಜೊತೆ ಮಾತನಾಡಲಾಗಿದೆ. ಬಳಿಕ ಪೊಲೀಸರು ಇಲಾಖೆಗೆ ತನಿಖಾ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಗುಂಡೂರಾವ್​ ಹೇಳಿದರು.

ಇದನ್ನೂ ಓದಿ: ಭ್ರೂಣ ಹತ್ಯೆ ಪ್ರಕರಣ: ಮಂಡ್ಯದ ಆಲೆಮನೆಗೆ ಮಾಜಿ ಸಚಿವ ಅಶೋಕ್ ಭೇಟಿ, ಅಧಿಕಾರಿಗಳಿಗೆ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.