ETV Bharat / state

ಕೋವಿಡ್ ಲಸಿಕಾಭಿಯಾನ: ಬೆಂಗಳೂರಿನಲ್ಲಿ ಸಿಎಂ ಬಿ.ಎಸ್​​.ಯಡಿಯೂರಪ್ಪ ಚಾಲನೆ

author img

By

Published : Jun 21, 2021, 12:43 PM IST

ಶಿವಾಜಿ ನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಚಾಲನೆ ನೀಡಿದರು.

Covid-19 Vaccination
ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿಎಂ ಬಿಎಸ್​​ವೈ ಚಾಲನೆ

ಬೆಂಗಳೂರು‌: ದೇಶಾದ್ಯಂತ ಇಂದು ಕೊರೊನಾ ಲಸಿಕಾ ಅಭಿಯಾನ ಆಯೋಜಿಸಲಾಗಿದ್ದು, 18 ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಕೊಡಲಾಗುತ್ತದೆ. ಶಿವಾಜಿ ನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಚಾಲನೆ ನೀಡಿದರು.

ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿಎಂ ಬಿಎಸ್​​ವೈ ಚಾಲನೆ

ಈ ವೇಳೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕೂಡ ಉಪಸ್ಥಿತರಿದ್ದರು. ಈ ಲಸಿಕಾ ಅಭಿಯಾನದ ಅಡಿಯಲ್ಲಿ ರಾಜ್ಯದಲ್ಲಿ 7 ಲಕ್ಷ ಜನರಿಗೆ ಲಸಿಕೆ ನೀಡಬೇಕಾಗಿದ್ದು, ಕನಿಷ್ಠ 5 ಲಕ್ಷವಾದರೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜತೆಗೆ ಲಸಿಕೆ‌ ಹಾಕುವ ವೇಳೆ ಕೋವಿಡ್ ಎಲ್ಲಾ ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚಿಸಲಾಗಿದೆ.‌

ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಬಿಎಸ್​ವೈ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿರುವುದು ಸಂತೋಷದ ಸಂಗತಿ. ಈ ಅಭಿಯಾನದಲ್ಲಿ ಎರಡನೇ ಡೋಸ್​​ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ತದ ನಂತರ ಮೊದಲ ಡೋಸ್ ನೀಡಲಾಗುತ್ತೆ. ಈ ಅಭಿಯಾನದಲ್ಲಿ 5 ರಿಂದ 7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ ಎಂದರು.

ಎಲ್ಲರೂ ಲಸಿಕೆ ಪಡೆಯಬೇಕು:

ಈಗಾಗಲೇ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡಲಾಗಿದೆ. ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಆದಷ್ಟು ಬೇಗ ಕೊವೀಡ್ ಕೊನೆಯಾಗಿ ಜನರು ನೆಮ್ಮದಿಯಾಗಿ ಬದುಕಲಿ ಎಂದು ದೇವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.

ನಾವು ನಿರೀಕ್ಷೆಗೆ ತಕ್ಕಂತೆ ಲಾಕ್‌ಡೌನ್ ಸಡಿಲಿಕೆ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಆದರೂ ಜನರು ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜತೆಗೆ ಎಲ್ಲರೂ ಲಸಿಕೆಯನ್ನು ಪಡೆಯಬೇಕು ಎಂದು ಸಿಎಂ ಹೇಳಿದರು.

ನಿಯಮ ‌ಪಾಲಿಸಿ:

ಇಂದಿನಿಂದ ಬಿಎಂಟಿಸಿ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಬಸ್‌ಗಳಲ್ಲಿ ನೂಕು ನುಗ್ಗಲು ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ಬಸ್‌ಗಳಲ್ಲಿ ನೂಕು ನುಗ್ಗಲು ಆಗುತ್ತಿದೆ. ನಾನೇ ಇದನ್ನ ನೋಡಿದ್ದೇನೆ. ಒಂದು ಸೀಟ್​​ಗೆ ಒಬ್ಬರು ಮಾತ್ರ ಕುಳಿತುಕೊಳ್ಳಬೇಕೆಂದು ನಿಯಮ ಮಾಡಿದ್ದೇವೆ. ಜನರು ನಿಯಮ ‌ಪಾಲನೆ ಮಾಡಬೇಕು‌. ಜನರಿಗೆ ಅನುಕೂಲ ಆಗಲು ನಿಯಮ ಸಡಿಲಿಕೆ ಮಾಡಲಾಗಿದೆ. ಇದನ್ನ ಎಲ್ಲರೂ ಅರಿತು ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Covid-19 Vaccination: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ 'ಉಚಿತ' ಕೋವಿಡ್​ ಲಸಿಕೆ

ಲಸಿಕೆ ನೀಡಲಾಗುವ ಮುಂಚೂಣಿ ಕಾರ್ಯಕರ್ತರು:

  • ಅಂಗವೈಕಲ್ಯತೆ ಹೊಂದಿರುವವರು
  • ಕೈದಿಗಳು
  • ಚಿತಾಗಾರ / ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ
  • ಆರೋಗ್ಯ ಕಾರ್ಯಕರ್ತರು / ಕುಟುಂಬಸ್ಥರು
  • ಕೋವಿಡ್‌ಗೆ ನಿಯೋಜಿಸಿರುವ ಶಿಕ್ಷಕರು
  • ಸರ್ಕಾರಿ ಸಾರಿಗೆ ಸಿಬ್ಬಂದಿ
  • ಆಟೋ ಮತ್ತು ಕ್ಯಾಬ್ ಚಾಲಕರು
  • ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು
  • ಅಂಚೆ ಇಲಾಖೆ ಸಿಬ್ಬಂದಿ
  • ಬೀದಿ ಬದಿ ವ್ಯಾಪಾರಿಗಳು
  • ಭದ್ರತೆ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ
  • ನ್ಯಾಯಾಂಗ ಅಧಿಕಾರಿಗಳು
  • ವಯೋವೃದ್ಧರು / ತೀವ್ರ ಅನಾರೋಗ್ಯ ಇರುವವರು
  • ಮಕ್ಕಳ ಸಂರಕ್ಷಣಾಧಿಕಾರಿಗಳು/ ಮಹಿಳಾ ಮಕ್ಕಳ ಇಲಾಖೆ
  • ಮಾಧ್ಯಮ ಸಿಬ್ಬಂದಿ
  • ಆಸ್ಪತ್ರೆಗಳಲ್ಲಿ ಸರಕು ಸರಬರಾಜು ಮಾಡುವವರು
  • ಆಯಿಲ್‌ ಇಂಡಸ್ಟ್ರಿ& ಗ್ಯಾಸ್ ಸರಬರಾಜು ಮಾಡುವವರು
  • ಔಷಧಿ ತಯಾರಕರು
  • ವೃದ್ಧಾಶ್ರಮ ವಾಸಿಗಳು ಹಾಗೂ ನಿರ್ಗತಿಕರು
  • ಆಹಾರ ನಿಗಮ‌ ಸಿಬ್ಬಂದಿ
  • ಎಪಿಎಂಸಿ ಕೆಲಸಗಾರರು.

ಇದನ್ನೂ ಓದಿ: ಅನ್​​ಲಾಕ್ ದುರುಪಯೋಗ, ಕೊರೊನಾ ನಿರ್ಲಕ್ಷ್ಯ ಬೇಡ: ಸಿಎಂ‌ ಬಿಎಸ್​​ವೈ

ಒಂದೇ ದಿನ 7 ಲಕ್ಷ ಲಸಿಕೆ ನೀಡುವ ಗುರಿ:

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಮಾತನಾಡಿ, ಮುಖ್ಯಮಂತ್ರಿಗಳು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಕೊರೊನಾದಿಂದ ಮುಕ್ತರಾಗಬೇಕು. ಎಲ್ಲರೂ ಕಡ್ಡಾಯವಾಗಿ ಲಸಿಕೆ‌ ತೆಗೆದುಕೊಳ್ಳಬೇಕು. ಒಂದೇ ದಿನ 7 ಲಕ್ಷ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುತ್ತಿದ್ದೇವೆ. ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ಪೂರ್ಣ ಮಾಡಬೇಕು ಎಂಬ ಗುರಿ ಹೊಂದಿದ್ದೇವೆ ಎಂದರು.

ಬಳಿಕ ಯೋಗ ದಿನಾಚರಣೆ ಬಗ್ಗೆ ಮಾತನಾಡುತ್ತಾ, ಕೊರೊನಾ ಇರುವುದರಿಂದ ಸಾಂಕೇತಿಕವಾಗಿ ಯೋಗ ದಿನಾಚರಣೆಯನ್ನು ಮನೆಯಲ್ಲಿ ಆಚರಣೆ ಮಾಡಿದ್ದೇವೆ. ಯೋಗ ದೈಹಿಕ ಸಾಮರ್ಥ್ಯಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೆ ಕೂಡ ಉತ್ತಮವಾದ್ದದ್ದು. ಅಂತರಾಷ್ಟ್ರೀಯ ‌ಮಟ್ಟದಲ್ಲಿ ಇಂದು ಆಚರಣೆ ಮಾಡುತ್ತಿದ್ದಾರೆ. ಯೋಗ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಅನೇಕ ರೋಗಗಳು ಬರದಂತೆ ಯೋಗ ತಡೆಯುತ್ತೆ. ಎಲ್ಲರೂ ನಿರಂತರವಾಗಿ ಯೋಗಾಭ್ಯಾಸ ‌ಮಾಡೋಣ ಎಂದು ಹೇಳಿದರು.

ಬ್ಲಾಕ್ ಫಂಗಸ್‌ ಬಗ್ಗೆ ಪ್ರತಿಕ್ರಿಯಿಸಿ ಬ್ಲಾಕ್ ಫಂಗಸ್ ತಗುಲಿದ ನೂರು ಜನರಿಗೆ ಆಪರೇಷನ್ ಮಾಡಲಾಗಿದೆ. ಕೋವಿಡ್ ಪಾಸಿಟಿವ್ ಇರುವ 300ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ಹೆಗ್ಗಳಿಕೆ ಘೋಷಾ ಆಸ್ಪತ್ರೆಯದ್ದು. ಇಂತಹ ಕೆಲಸ ಮಾಡಿದ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ‌ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.