ETV Bharat / state

ಬೆಳಗಾವಿ ಅಧಿವೇಶನ.. ಜಿದ್ದಾಜಿದ್ದಿನ‌ ಕಲಾಪಕ್ಕೆ ವೇದಿಕೆ ಸಜ್ಜು, ಪ್ರಮುಖ ವಿಧೇಯಕಗಳ ಮಂಡನೆ

author img

By

Published : Dec 18, 2022, 10:24 PM IST

ನಾಳೆಯಿಂದ ರಾಜ್ಯದ ರಾಜಕೀಯ ಚಟುವಟಿಕೆ ಕುಂದಾನಗರಿಗೆ ಶಿಫ್ಟ್ ಆಗಲಿದೆ. ಚುನಾವಣಾ ವರ್ಷವಾಗಿರುವ ಕಾರಣ ಉಭಯ ಸದನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ.

ಬೆಳಗಾವಿ ಅಧಿವೇಶನ
ಬೆಳಗಾವಿ ಅಧಿವೇಶನ

ಬೆಂಗಳೂರು/ಬೆಳಗಾವಿ: ಸೋಮವಾರದಿಂದ ಮುಂದಿನ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಚುನಾವಣೆ ಅಂಚಿನಲ್ಲಿ ಬಂದಿರುವ ಬೆಳಗಾವಿ ಅಧಿವೇಶನ ಸಾಕಷ್ಟು ಕುತೂಹಲ ಮೂಡಿಸಿದೆ.

ರಾಜ್ಯದ ರಾಜಕೀಯ ಚಟುವಟಿಕೆ ಕುಂದಾನಗರಿಗೆ ಶಿಫ್ಟ್ ಆಗಲಿದೆ. ಚುನಾವಣಾ ವರ್ಷವಾಗಿರುವ ಕಾರಣ ಉಭಯ ಸದನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ಮಾತಿನ ಕದನ ನಡೆಯಲಿದೆ. ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಭರ್ಜರಿ ತಯಾರಿ ನಡೆಸಿದ್ದರೆ, ಇತ್ತ ಆಡಳಿತ ಪಕ್ಷವೂ ಪ್ರತಿಪಕ್ಷಗಳಿಗೆ ತಿರುಗುಬಾಣ ಹೂಡಲು ಸಿದ್ಧವಾಗಿದೆ.

ಇತ್ತ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಹತ್ತು ಹಲವು ಅಸ್ತ್ರಗಳೊಂದಿಗೆ ಬೊಮ್ಮಾಯಿ‌ ಸರ್ಕಾರದ ವಿರುದ್ಧ ಹೋರಾಡಲಿರುವ ಕಾಂಗ್ರೆಸ್, 40% ಕಮಿಷನ್, ಭ್ರಷ್ಟಾಚಾರ, ಎಸ್‌ಸಿ, ಎಸ್‌ಟಿ ಮೀಸಲಾತಿ ಸಂಬಂಧ ಶೆಡ್ಯೂಲ್ 9 ತಿದ್ದುಪಡಿ, ಕಾನೂನು ಸುವ್ಯವಸ್ಥೆ, ಬಿಜೆಪಿಯ ರೌಡಿಗಳ ಸೇರ್ಪಡೆ, ನೀರಾವರಿ ಯೋಜನೆಗಳ ಜಾರಿ ವಿಳಂಬ ಸೇರಿದಂತೆ ಹಲವು ವಿಚಾರಗಳೊಂದಿಗೆ ಸರ್ಕಾರವನ್ನು ಕಟ್ಟಿ ಹಾಕಲು ತಂತ್ರ ರೂಪಿಸಿದೆ.

ಇತ್ತ ಕಬ್ಬು ಬೆಳೆಗಾರರ ಸಮಸ್ಯೆ, ತೊಗರಿ ಬೆಳೆ ನಾಶ ಜೊತೆಗೆ ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯದ ಬಗ್ಗೆಯೂ ಚರ್ಚೆಯಾಗಲಿದೆ. ಈ ಮಧ್ಯೆ, ವಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡಲು ಆಡಳಿತಾರೂಢ ಬಿಜೆಪಿ ಸಿದ್ಧತೆ ನಡೆಸಿದೆ ಮತ್ತು ವಿಪಕ್ಷಗಳ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಲು ಸರ್ಕಾರ ಸಜ್ಜಾಗಿದೆ.

ಎಸ್​ಸಿ ಎಸ್ಟಿ ಮೀಸಲಾತಿ ಹೆಚ್ಚಳ ವಿಧೇಯಕ ಮಂಡನೆ: ಬೆಳಗಾವಿ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ವಿಧೇಯಕ ಮಂಡನೆಯಾಗಲಿದೆ. ಈಗಾಗಲೇ ಸುಗ್ರೀವಾಜ್ಞೆ ‌ಮೂಲಕ ಮೀಸಲಾತಿ ಹೆಚ್ಚಳ ಜಾರಿಗೆ ತಂದಿರುವ ಬೊಮ್ಮಾಯಿ‌ ಸರ್ಕಾರ ವಿಧಾನಮಂಡಲದಲ್ಲಿ ಈ ಸಂಬಂಧ ವಿಧೇಯಕ ಮಂಡಿಸಿ ಕಾಯ್ದೆ ರೂಪದಲ್ಲಿ ಜಾರಿಗೆ ತರಲಿದೆ.

ಈ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಮೀಸಲಾತಿ ಹೆಚ್ಚಳದ ಸಿಂಧುತ್ವದ ಬಗ್ಗೆ ವ್ಯಾಪಕ‌ ಚರ್ಚೆ ನಡೆಸಲಿದೆ. ಜೊತೆಗೆ ಶೆಡ್ಯೂಲ್ 9 ತಿದ್ದುಪಡಿ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಲಿದೆ.

ಹಲಾಲ್ ನಿಷೇಧಿಸಲು ಖಾಸಗಿ ವಿಧೇಯಕ: ಹಲಾಲ್‌ ಲೇಬಲ್‌ ಹಾಕಿದ ದಿನಸಿ ಆಹಾರ ಪದಾರ್ಥಗಳ ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸಲು ವಿಧಾನಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸಲು‌ ಮುಂದಾಗಿದ್ದಾರೆ.

ಆಹಾರ ಪದಾರ್ಥಕ್ಕೆ ಹಲಾಲ್‌ ಪ್ರಮಾಣ ಪತ್ರಗಳನ್ನು ನೀಡುವ ಸಂಸ್ಥೆಗಳು ‘ಧಾರ್ಮಿಕ ಸಂಸ್ಥೆಗಳು’ ಎಂದು ನೋಂದಣಿಯಾಗಿದ್ದು, ಧಾರ್ಮಿಕ ಸಂಸ್ಥೆಗಳಿಗೆ ಯಾವುದೇ ರೀತಿಯ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರ ಇರುವುದಿಲ್ಲ. ಈ ವಿಚಾರವಾಗಿ ಖಾಸಗಿ ವಿಧೇಯಕ ಮಂಡಿಸಲು ಸಭಾಪತಿಗಳಿಗೆ ಪತ್ರ ಬರೆದಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ನಿಟ್ಟಿನಲ್ಲಿ ಖಾಸಗಿ ವಿಧೇಯಕ ಮಂಡಿಸಲು ಮುಂದಾಗಿದ್ದಾರೆ.

ಮಂಡಿಸಲಿರುವ ಪ್ರಮುಖ ವಿಧೇಯಕಗಳು ಏನು?: ಬೆಳಗಾವಿ ಅಧಿವೇಶನದಲ್ಲಿ 7 ಹೊಸ ವಿಧೇಯಕಗಳು ಮಂಡನೆಯಾಗುವ ಸಾಧ್ಯತೆ ಇದೆ. ಅನುಸೂಚಿತ ಜಾತಿ ಮತ್ತು ಪಂಗಡಗಳ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ರಾಜ್ಯಾಧೀನ ಸಂಸ್ಥೆಗಳಲ್ಲಿ ನೇಮಕಾತಿ ಹಾಗೂ ಹುದ್ದೆಗಳಿಗೆ ಮೀಸಲಾತಿ ವಿಧೇಯಕ ಮಂಡನೆಯಾಗಲಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ, ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರದೇಶ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.

ಓದಿ: ಸರ್ಕಾರ, ಪ್ರತಿಪಕ್ಷಗಳ ಸಂಘರ್ಷಕ್ಕೆ ವೇದಿಕೆಯಾಗಲಿದೆಯಾ ಬೆಳಗಾವಿ ಅಧಿವೇಶನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.