ETV Bharat / state

ಕೊರೊನಾ ಹೆಚ್ಚಳ: 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್, ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ

author img

By ETV Bharat Karnataka Team

Published : Dec 19, 2023, 3:00 PM IST

Updated : Dec 19, 2023, 5:54 PM IST

Health Department guidelines: ಹೊಸ ವರ್ಷಾಚರಣೆ ಹಾಗೂ ಕ್ರಿಸ್​ಮಸ್​ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಕೋವಿಡ್​ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿ ಹೊರಡಿಸಿದೆ.

Mask mandatory for above 60s
60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲೂ ಕೋವಿಡ್- 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ಹಾಗೂ 60 ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸ್ಕ್ ಧರಿಸುವುದು ಸೇರಿದಂತೆ ಹಲವರು ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕ್ರಿಸ್​ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನದಟ್ಟಣೆಯಿಂದಾಗಿ ಮತ್ತಷ್ಟು ಹೆಚ್ಚಳವಾಗುವ ಸಂಭವವಿದೆ. ಹಾಗಾಗಿ, ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕೋವಿಡ್ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿರುವ ಈ ಕೆಳಗಿನ ಅಂಶಗಳನ್ನು ಸಾರ್ವಜನಿಕರು ಪಾಲಿಸುವಂತೆ ಸಲಹೆ ನೀಡಲಾಗಿದೆ.

  1. ಎಲ್ಲ ಹಿರಿಯ ನಾಗರೀಕರು (60 ವರ್ಷ ಹಾಗೂ ಮೇಲ್ಪಟ್ಟವರು), ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು (ವಿಶೇಷವಾಗಿ ಕಿಡ್ನಿ, ಹೃದಯ, ಲಿವರ್ ಸಮಸ್ಯೆಗಳು), ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರು, ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು. ಅಗತ್ಯ ಗಾಳಿ - ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ತೆರಳದಿರುವುದು ಸೂಕ್ತವಾಗಿದೆ.
  2. ಜ್ವರ, ಕೆಮ್ಮು, ನೆಗಡಿ, ಇತ್ಯಾದಿ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸುವುದು, ಅಗತ್ಯ ಗಾಳಿ - ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಭೇಟಿ ನೀಡದಿರುವುದು ಸೂಕ್ತವಾಗಿದೆ.
  3. ಉತ್ತಮ ವೈಯಕ್ತಿಕ ಸ್ವಚ್ಛತೆ, ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು, ಇತ್ಯಾದಿಗಳ ಪಾಲನೆಯು ಅಗತ್ಯವಾಗಿದೆ.
  4. ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಮನೆಯಲ್ಲಿರುವುದು ಸೂಕ್ತ. ಇತರ ವ್ಯಕ್ತಿಗಳೊಂದಿಗೆ, ವಿಶೇಷವಾಗಿ ಹಿರಿಯ ನಾಗರೀಕರು / ದುರ್ಬಲರನ್ನು (vulnerable) ಅವಶ್ಯವಿದ್ದಲ್ಲಿ ಮಾತ್ರವೇ ಭೇಟಿ ಮಾಡುವುದು. ಆರೋಗ್ಯ ಸಮಸ್ಯೆಗಳನ್ನು ಹೊಂದಿದವರು ಜನಸಂದಣಿಯ ಪ್ರದೇಶಗಳಿಗೆ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ.
  5. ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆಯಿಂದಿದ್ದು, ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನದ ಒಳಗೆ ಮಾಸ್ಕ್ ಧರಿಸುವುದು, ಹೆಚ್ಚಿನ ಗಾಳಿ-ಬೆಳಕು ಇಲ್ಲದ ಮತ್ತು ಜನದಟ್ಟಣೆ ಇರುವ ಸ್ಥಳಗಳಿಗೆ ತೆರಳದಿರುವುದೂ ಸೇರಿದಂತೆ, ಇತರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಸೂಕ್ತ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ -19ನ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಈ ಎಲ್ಲ ಅಂಶಗಳನ್ನು ಪಾಲಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಕೈಗೊಳ್ಳಬೇಕಾದ ಪೂರ್ವಭಾವಿ ಕ್ರಮಗಳ ಕುರಿತು ಉಲ್ಲೇಖ: ಪ್ರಸ್ತುತ, ಕೇರಳ ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದಲ್ಲಿ ಅಗತ್ಯ ಮುಂಜಾಗ್ರತಾ ಹಾಗೂ ಪೂರ್ವಭಾವಿ ಕ್ರಮಗಳ ಪಾಲನೆ ಅವಶ್ಯಕವಾಗಿದೆ. ಈ ಕೆಳಗಿನ ಶಿಫಾರಸುಗಳನ್ನು ಸೂಕ್ತ ಹಂತಗಳಲ್ಲಿ ಅನುಸರಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಭಾರತ ಸರ್ಕಾರದ ಮಾರ್ಗಸೂಚಿಗಳ ಅನ್ವಯ, ಅನಗತ್ಯ ಗಾಬರಿಯಿಂದ ಈಗಲೇ ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಸರ್ವೇಕ್ಷಣೆ ಹೆಚ್ಚಿಸುವುದು ಅಥವಾ ನಿರ್ಬಂಧಗಳನ್ನು ಹೇರುವ ಅವಶ್ಯಕತೆಯಿರುವುದಿಲ್ಲ. ಆದಾಗ್ಯೂ, ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದ ಅಗತ್ಯ ಸಂಖ್ಯೆಯ ಪರೀಕ್ಷೆಗಳನ್ನು ನಡೆಸುವುದು ಹಾಗೂ ವರದಿ ಸಲ್ಲಿಸುವುದು ಅಗತ್ಯವಾಗಿದೆ.

ಸರ್ಕಾರಿ, ಖಾಸಗಿ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ, ಎಲ್ಲಾ SARI ಪ್ರಕರಣಗಳು ಹಾಗೂ 20 ILI ಪ್ರಕರಣಗಳ ಪೈಕಿ 1 ILI ಪ್ರಕರಣವನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಬೇಕು. ಈ ಕೆಳಕಂಡ ಪ್ರಕರಣಗಳ ಮಾದರಿಗಳನ್ನು Whole genome sequencing (WGS) ಪರೀಕ್ಷೆಗೆ ರವಾನಿಸಬೇಕು.

ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯಿದ್ದು, ಕೋವಿಡ್ -19 ಸೋಂಕಿನ ಲಕ್ಷಣಗಳನ್ನು ಹೊಂದಿರುವವರು (irrespective of Ct value are to be sent for WGS). ಗುಂಪಾಗಿ ವರದಿಯಾಗುವ ಪ್ರಕರಣಗಳು/ ಹೆಚ್ಚು ಪಕರಣಗಳು ಹಾಗೂ ಮರಣಗಳು ವರದಿಯಾಗುವ ಫೋಕಲ್ ಔಟ್ ಬ್ರೇಕ್​ಗಳ ಸಂದರ್ಭದಲ್ಲಿ ಅಗತ್ಯ ಸಂಖ್ಯೆಯ ಮಾದರಿಗಳನ್ನು WGS ಪರೀಕ್ಷೆಗೆ ಕಳುಹಿಸಬೇಕು.

ತೀವ್ರ ಸ್ವರೂಪದ ರೋಗಲಕ್ಷಣಗಳನ್ನು ಹೊಂದಿದವರು, ಆಸ್ಪತ್ರೆಗೆ ದಾಖಲಾದ ಪ್ರಕರಣಗಳು, SARI ಪ್ರಕರಣಗಳು ಹಾಗೂ ಸುದೀರ್ಘ ಅವಧಿಯವರೆಗೆ ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣಗಳು. ಕೋವಿಡ್ - 19ರ ಮರು ಸೋಂಕಿಗೆ ಒಳಗಾದವರು. ಕೋವಿಡ್ 19 ಲಸಿಕೆಯ ಎರಡು ಡೋಸ್ ವ್ಯಾಕ್ಸಿನ್ ಪಡೆದ ನಂತರವೂ ಕೋವಿಡ್ 19ನ ಸೋಂಕು ದೃಢಪಟ್ಟವರು. ಕೋವಿಡ್ 19 ಮರಣ ಪ್ರಕರಣಗಳ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗುವ 25 ಕ್ಕಿಂತ ಕಡಿಮೆ Ct value ಇರುವ ಮಾದರಿಗಳನ್ನು (ಅಂತಾರಾಷ್ಟ್ರೀಯ ಪ್ರಯಾಣ ಹಿನ್ನೆಲೆಯುಳ್ಳವರನ್ನು ಹೊರತು ಪಡಿಸಿ) BMC&RJ ಬೆಂಗಳೂರು, ಇಲ್ಲಿಗೆ WGS ಪರೀಕ್ಷೆಗೆ ಕಳುಹಿಸುವ ನಿಟ್ಟಿನಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಅಗತ್ಯ ಸಮನ್ವಯವನ್ನು ವಹಿಸಬೇಕು.

ಒಟ್ಟಾರೆ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಮೇಲಿನ ಅಂಶಗಳ ಪಾಲನೆ ಖಚಿತಪಡಿಸಿಕೊಳ್ಳುವಂತೆ ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆ ಸಭೆ ಬಳಿಕ ಹೊಷ ವರ್ಷಾಚರಣೆ ರೂಪುರೇಷೆ ಸಿದ್ಧ: ಬಿ ದಯಾನಂದ್​

Last Updated : Dec 19, 2023, 5:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.