ETV Bharat / state

ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಎರಡೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಂಕಿತ ಉಗ್ರ

author img

By

Published : Mar 6, 2023, 3:16 PM IST

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕಿತ ಉಗ್ರ ಶಾರೀಕ್ ಡಿಸ್ಚಾರ್ಜ್ - ಎನ್ಐಎ ಮತ್ತು ಸ್ಥಳೀಯ ಪೊಲೀಸರ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಗ್ರ - ವಿಚಾರಣೆ ನಡೆಸಲು ಅನುಮತಿ ಕೋರಿ ವಿಶೇಷ ನ್ಯಾಯಾಲಯಕ್ಕೆ ಹಾಜರು.

cooker-bomb-blast-case-suspected-militant-discharged-from-hospital
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಎರಡೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಂಕಿತ ಉಗ್ರ

ಬೆಂಗಳೂರು: ಮಂಗಳೂರಿನ ಕಂಕನಾಡಿನಲ್ಲಿ ಕಳೆದ ವರ್ಷ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಕಳೆದ ಎರಡೂವರೆ ತಿಂಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕಿತ ಉಗ್ರ ಶಾರೀಕ್ ಡಿಸ್ಚಾರ್ಜ್ ಆಗಿದ್ದಾನೆ.

ಕಳೆದ ಡಿಸೆಂಬರ್ 17ರಂದು ಕಂಕನಾಡಿನಲ್ಲಿ ಆಟೋದಲ್ಲಿ ತೆರಳುವಾಗಿ ಏಕಾಏಕಿ ಕುಕ್ಕರ್ ಬ್ಲಾಸ್ಟ್ ಆದ ರಭಸಕ್ಕೆ ಶಾರೀಕ್ ತೀವ್ರವಾಗಿ ಗಾಯಗೊಂಡಿದ್ದ. ‌ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು‌. ಎನ್ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಹಾಗೂ ಸ್ಥಳೀಯ ಪೊಲೀಸರ ಭದ್ರತೆ ನಡುವೆ ಶಾರೀಕ್ ಚಿಕಿತ್ಸೆ ಪಡೆಯುತ್ತಿದ್ದ.

ಸದ್ಯ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಶಾರೀಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ವಿಚಾರಣೆ ನಡೆಸಲು ಅನುಮತಿ ಕೋರಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸಂತ್ರಸ್ತ ಚಾಲಕನಿಗೆ ಆಟೋ ಮತ್ತು ಐದು ಲಕ್ಷ ಪರಿಹಾರ: ಮಂಗಳೂರು ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಗಾಯಾಳು ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ 5 ಲಕ್ಷ ರೂಪಾಯಿ ಚೆಕ್​ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭಾನುವಾರ ಹಸ್ತಾಂತರಿಸಿದರು. ನಗರದ ಉಜ್ಜೋಡಿಯಲ್ಲಿರುವ ಪುರುಷೋತ್ತಮ ಪೂಜಾರಿ ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ರಿಕ್ಷಾ ಮತ್ತು 5 ಲಕ್ಷ ರೂ. ಗಳ ಚೆಕ್ ಹಸ್ತಾಂತರಿಸಲಾಯಿತು.

ಎರಡು ತಿಂಗಳ ಹಿಂದೆ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಸಂದರ್ಭದಲ್ಲಿ ಅವರ ಮನೆಗೆ ಬಂದು ವೀಕ್ಷಿಸಿದ ಶಾಸಕ ವೇದವ್ಯಾಸ ಕಾಮತ್ ಅವರು ಪುರುಷೋತ್ತಮ ಪುರುಷೋತ್ತಮ ಪೂಜಾರಿ ಅವರಿಗೆ ತಮ್ಮ ವೈಯಕ್ತಿಕ ನಿಧಿಯಿಂದ ಹೊಸ ರಿಕ್ಷಾ ಮತ್ತು ಬಿಜೆಪಿ ಪಕ್ಷದಿಂದ 5 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.

ತಲೆಮರೆಸಿಕೊಂಡಿದ್ದ ಶಾರೀಕ್: 2022 ಸೆ. 19 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967 ರಲ್ಲಿ ಶಾರೀಕ್ 1ನೇ ಆರೋಪಿಯಾಗಿದ್ದ. ಪ್ರಕರಣ ದಾಖಲಾದ ನಂತರ ಶಾರೀಖ್ ಅಲ್ಲಿಂದ ತಲೆಮರೆಸಿಕೊಂಡು ಮೈಸೂರಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ. 2022 ನವೆಂಬರ್ 19 ರಂದು ಮೈಸೂರಿನಿಂದ ಹೊರಟು ಹುಣಸೂರು, ಮಡಿಕೇರಿ, ಬಿ.ಸಿ.ರೋಡ್ ಮೂಲಕ ಮಂಗಳೂರು ಹೊರ ವಲಯದಲ್ಲಿ ಬಸ್​​​ನಿಂದ ಇಳಿದು ನಂತರ ಆಟೋದಲ್ಲಿ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದ. ಈ ವೇಳೆ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು.

ಐಸಿಸ್ ಸಂಘಟನೆಯಿಂದ ಪ್ರೇರಣೆ: ಶಾರೀಕ್‌ಗೆ ಅಬ್ದುಲ್ ಮತೀನ್ ಎಂಬಾತನ ಜೊತೆಗೆ ಸಂಪರ್ಕವಿತ್ತು. ಅಬ್ದುಲ್ ಮತೀನ್ ಜಾಗತಿಕ ಉಗ್ರ ಸಂಘಟನೆ ಜೊತೆಗೆ ಲಿಂಕ್‌ ಇದೆ. ಆತನಿಂದಲೇ ಶಾರೀಕ್‌ ಉಗ್ರ ನಿಲುವಿನತ್ತ ಪ್ರೇರೇಪಣೆ ಪಡೆದಿದ್ದ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದರು.

ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.