ETV Bharat / state

ಕೃಷ್ಣನಂತೆ ಬಿಎಸ್​​​​ವೈ, ಅರ್ಜುನನಂತೆ ಬೊಮ್ಮಾಯಿ‌, ಕೇಸರಿ ಪಾಂಚಜನ್ಯ ಯಾತ್ರೆಗೆ ಕಾಂಗ್ರೆಸ್ ಕೊಚ್ಚಿಹೋಗಲಿದೆ: ಕಟೀಲ್..!

author img

By

Published : Sep 10, 2022, 7:24 PM IST

ರಾಜ್ಯ ಬಿಜೆಪಿ ಸರ್ಕಾರದ 3 ವರ್ಷಗಳ ಸಾಧನೆಯ ಸಂಬಂಧ ಇಂದು ದೊಡ್ಡಬಳ್ಳಾಪುರದಲ್ಲಿ ನಡೆದ “ಜನಸ್ಪಂದನ” ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾತನಾಡಿದ್ದಾರೆ.

BJP State President Nalin Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಕೇಸರಿಯ ಸುನಾಮಿ ಬಂದಿದೆ. ಇವತ್ತು ಪಾಂಚಜನ್ಯ ಹೊರಟಿದೆ. ಯಡಿಯೂರಪ್ಪ ಕೃಷ್ಣನಂತೆ, ಬೊಮ್ಮಾಯಿ ಅರ್ಜುನನಂತೆ ಇರುವ ಯಾತ್ರೆ ಶುರುವಾಗಿದೆ. ಇದರಿಂದ ಕಾಂಗ್ರೆಸ್ ಕೊಚ್ಚಿ ಹೋಗಲಿದ್ದು, ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ಖಚಿತ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಗಳು ಇದಕ್ಕೆ ಪೂರಕ ಎನಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮಾತನಾಡಿದರು

ರಾಜ್ಯ ಬಿಜೆಪಿ ಸರ್ಕಾರದ 3 ವರ್ಷಗಳ ಸಾಧನೆಯ ಸಂಬಂಧ ಇಂದು ದೊಡ್ಡಬಳ್ಳಾಪುರದ ಬಳಿ “ಜನಸ್ಪಂದನ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಪರಿವರ್ತನೆಯ ಯುಗ ಆರಂಭವಾಗಿದೆ. ವಿದ್ಯಾನಿಧಿಯನ್ನು ಬೊಮ್ಮಾಯಿ ಆರಂಭಿಸಿದ್ದಾರೆ. ಕಿಸಾನ್ ಸಮ್ಮಾನ್‍ಗೆ ಹೆಚ್ಚುವರಿ ಮೊತ್ತ ಸೇರಿಸಿ ಕೊಡಲಾಗುತ್ತಿದೆ. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂದು ಟೀಕಿಸಿದರು.

ಸೋನಿಯಾ ಗಾಂಧಿ, ರಾಹುಲ್, ಡಿ. ಕೆ. ಶಿವಕುಮಾರ್ ಸೇರಿ ಎಲ್ಲರೂ ಜಾಮೀನಿನಡಿ ಇದ್ದಾರೆ. ಭ್ರಷ್ಟಾಚಾರಿಗಳ ಪಕ್ಷ ಕಾಂಗ್ರೆಸ್ ಎಂದು ಆರೋಪಿಸಿದರು. ಸಿದ್ದರಾಮಯ್ಯ ಕಾಲದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಆಗಿದೆ. 24 ಹಿಂದೂ ಕಾರ್ಯಕರ್ತರ ಹತ್ಯೆ ಆಗಿದ್ದು, ಗೋಹತ್ಯೆ ನಿರಂತರವಾಗಿತ್ತು. ಆದರೆ, ಗೋಹತ್ಯಾ ನಿಷೇಧ, ಮತಾಂತರ ನಿಷೇಧವನ್ನು ಬಿಜೆಪಿ ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದರು.

ಸಿದ್ದರಾಮಣ್ಣನದು ಹಿಂದೂ ವಿರೋಧಿ ನಿಲುವು. ಬಿಜೆಪಿ ರೈತರ ಪರ ಇರುವ ಪಕ್ಷ. ಅಭಿವೃದ್ಧಿಗೆ ಹೆಸರಾಗಿ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಇದ್ದಾರೆ. ಬಿಜೆಪಿ ಸಶಕ್ತವಾಗುತ್ತಿದೆ. ಮುಂದಿನ ಬಾರಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೋವಿಡ್ ನಿರ್ವಹಣೆಯನ್ನು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಮರ್ಥವಾಗಿ ಮಾಡಿದೆ. 60 ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿತ್ತು. ಮೋದಿ ಸರ್ಕಾರ ದೇಶದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

ಬಾಲ ಬಿಚ್ಚುವವರಿಗೆ ಬುಲ್‍ಡೋಜರ್ ಟ್ರೀಟ್‍ಮೆಂಟ್: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗ ಕೆರೆ ತುಂಬುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಹಾಗೂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕೆರೆ ಖಾಲಿ ಬೀಳುತ್ತದೆ. ಬಿಜೆಪಿ ಕಾಲ್ಗುಣ ಒಳ್ಳೆಯದಿದೆ. ಈ ಬಾರಿ ಇಲ್ಲಿನ 18 ಶಾಸಕರ ಸ್ಥಾನದಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತ ಸಿದ್ಧ . ಇದನ್ನು ಯಾರೂ ತಪ್ಪಿಸಲು ಅಸಾಧ್ಯ. ಭಾರತೀಯರನ್ನು ಜೋಡಿಸುವ ಕಾರ್ಯವನ್ನು ಮೋದಿ ಮಾಡಿದರು. ತುಕಡೇ ಗ್ಯಾಂಗಿನ ಮುಖಂಡರು ಮತ್ತು ಅವರಿಗೆ ಆಶ್ರಯ ಕೊಡುವ ಕಾಂಗ್ರೆಸ್ ಪಕ್ಷದವರು ಭಾರತ್ ಜೋಡೋ ನಾಟಕ ಮಾಡುತ್ತಿದ್ದಾರೆ ಎಂದ ಅವರು ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಬಾಲ ಬಿಚ್ಚುವವರಿಗೆ ನಾವೂ ಬುಲ್‍ಡೋಜರ್ ಟ್ರೀಟ್‍ಮೆಂಟ್ ಕೊಡಬೇಕಾಗುತ್ತದೆ ಎಂದರಲ್ಲದೇ, ಅರ್ಕಾವತಿ ರೀಡೂ ಪಿತಾಮಹ ಯಾರೆಂದು ಸಿದ್ದರಾಮಯ್ಯ ಉತ್ತರ ಕೊಡುವರೇ? ಸೋಲಾರ್ ಅಲಾಟ್‍ಮೆಂಟ್ ಖದೀಮ ಯಾರೆಂದು ಉತ್ತರಿಸಿ ಎಂದು ಆಗ್ರಹಿಸಿದರು. ಕಲ್ಲಿದ್ದಲು ಹಗರಣ ಮಾಡಿದವರು ಯಾರು, ರೀಡೂ ಹಗರಣ ಮಾಡಿದವರು ಯಾರೆಂದು ಶೀಘ್ರವೇ ಬಯಲಿಗೆ ಬರಲಿದೆ. ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆಯೊಂದಿಗೆ ಬಿಜೆಪಿ ಸರ್ಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಇದು ವೈಭವೀಕರಣ ಕಾರ್ಯಕ್ರಮವಲ್ಲ - ಸುಧಾಕರ್​: ಸಚಿವ ಡಾ. ಸುಧಾಕರ್ ಪ್ರಾಸ್ತಾವಿಕ ಮಾತನಾಡಿ, ಇದು ವ್ಯಕ್ತಿಯ ವೈಭವೀಕರಣ ಕಾರ್ಯಕ್ರಮ ಅಲ್ಲ. ನಮ್ಮ ಸರ್ಕಾರದ ಮೂರು ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲೀಕರಣದ ಅನಾವರಣ ಇಲ್ಲಿ ನಡೆದಿದೆ. ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆಯನ್ನು ಬೊಮ್ಮಾಯಿ ಸರ್ಕಾರ ಜಾರಿಗೊಳಿಸಿದೆ.

ರಾಜ್ಯದಲ್ಲಿ 12 ಕೋಟಿ ಕೋವಿಡ್ ಲಸಿಕೆ ಕೊಡಲಾಗಿದೆ. ವಿವಿಧ ಯೋಜನೆಗಳ ಮೂಲಕ ಮಾಡಿದ ಸಾಧನೆಯನ್ನು ಇಲ್ಲಿ ತಿಳಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಅಮೃತ ಮಹೋತ್ಸವದಡಿ ಮಾಡಿದ ಸಾಧನೆಯನ್ನೂ ಅವರು ತಿಳಿಸಿದರು. 75 ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ. 3 ಕೋಟಿ ಮನೆಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಇದು ಜನರ ಉತ್ಸವ ಎಂದು ವಿಶ್ಲೇಷಿಸಿದರು.

ಕುರ್ಚಿಗಾಗಿ ಕಚ್ಚಾಟ: ಕಾಂಗ್ರೆಸ್ ಪಕ್ಷದಲ್ಲಿ ಖಾಲಿ ಇಲ್ಲದ ಸಿಎಂ ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಡಬಲ್ ಡೋರ್ ಉಳ್ಳ ಬಸ್ ವ್ಯವಸ್ಥೆ. ಯಾರು ಹತ್ತುತ್ತಾರೋ ಯಾರು ಇಳಿಯುತ್ತಾರೋ ಗೊತ್ತಾಗದು ಎಂದು ಟೀಕಿಸಿದರು. ಎತ್ತಿನಹೊಳೆ ಪ್ರಮುಖ ಯೋಜನೆ ರೂಪಿಸಿದ ಕೀರ್ತಿ ನಮ್ಮ ನಾಯಕರಿಗೆ ಸಲ್ಲುತ್ತದೆ. ಬೆಂಗಳೂರಿಗೆ ಪರ್ಯಾಯವಾಗಿ ಸ್ಯಾಟಲೈಟ್ ಟೌನ್‍ಗಳನ್ನು ರೂಪಿಸಲು ಮನವಿ ಮಾಡಿದರು. ‘ಬಾನಿಗೊಂದು ಎಲ್ಲೆ ಎಲ್ಲಿದೆ, ಏಕೇ ಕನಸು ಕಾಣುವೆ’ ಎಂಬ ಹಾಡನ್ನು ನೆನಪಿಸಿ “ಕಾಂಗ್ರೆಸ್ಸಿಗರು ನೆನೆಸಿದಂತೆ ರಾಜ್ಯದಲ್ಲಿ ಏನೂ ಆಗದು” ಎಂದು ತಿಳಿಸಿದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ದೇಶವನ್ನು ಇಬ್ಭಾಗ ಮಾಡಿದ ಕಾಂಗ್ರೆಸ್ ಪಕ್ಷದವರು ಮತ್ತು ರಾಹುಲ್ ಗಾಂಧಿ ಅವರ ಮನೆತನದವರು ತಮ್ಮ ಕೃತ್ಯಕ್ಕೆ ಉತ್ತರ ಹೇಳಬೇಕು ಎಂದು ಆಗ್ರಹಿಸಿದರು. ಮತಬ್ಯಾಂಕ್ ರಾಜಕಾರಣಕ್ಕಾಗಿ ಜನರಿಗೆ ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್‍ನವರು ಬಡವರು, ದೀನದಲಿತರ ಬಗ್ಗೆ ಕಳಕಳಿ ಹೊಂದಿಲ್ಲ. ಬಡವರ ಬಗ್ಗೆ ಅವರದು ಮೊಸಳೆ ಕಣ್ಣೀರು ಅಷ್ಟೇ. ಸಿದ್ದರಾಮಯ್ಯನವರೂ ಸಿಎಂ ಆಗಿದ್ದರೂ ಜನರಿಗೆ ಉತ್ತಮ ಕೆಲಸಗಳನ್ನು ಮಾಡಿಲ್ಲ ಎಂದು ಆಕ್ಷೇಪಿಸಿದರು. ಆದರೆ, ಬಡವರ ಪರವಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು. ನಮ್ಮ ಪಕ್ಷ ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ ಹೊಂದಿದೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಡಿಲಕ್ಷ್ಮೀನಾರಾಯಣ, ಮುಖಂಡ ಅನಿಲ್‍ಕುಮಾರ್ ಅವರು ಬಿಜೆಪಿ ಸೇರಿದರು.

ಇದನ್ನೂ ಓದಿ: ರಾಹುಲ್ ದೇಶ ವಿಭಜನೆಯಂತಹ ಚಟುವಟಿಕೆಗೆ ಮುಂದಾಗಿದ್ದಾರೆ, ನಮಗೆ ಅಧಿಕಾರಕ್ಕಿಂತ ದೇಶವೇ ಮುಖ್ಯ: ಸ್ಮೃತಿ ಇರಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.