ETV Bharat / state

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಬಿಜೆಪಿ ಅವಸಾನಕ್ಕೆ ಮುನ್ನುಡಿ: ಗಿಡುಗು ರುದ್ರರಾಜು

author img

By

Published : May 14, 2023, 5:12 PM IST

ನಾವು ಪ್ರಚಾರ ಕೈಗೊಂಡ ಸಾಕಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಆಂಧ್ರಪ್ರದೇಶದ ರಾಜ್ಯ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಗಿಡುಗು ರುದ್ರರಾಜು ತಿಳಿಸಿದ್ದಾರೆ.

ಆಂಧ್ರಪ್ರದೇಶದ ರಾಜ್ಯ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಗಿಡುಗು ರುದ್ರರಾಜು
ಆಂಧ್ರಪ್ರದೇಶದ ರಾಜ್ಯ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಗಿಡುಗು ರುದ್ರರಾಜು

ಆಂಧ್ರಪ್ರದೇಶದ ರಾಜ್ಯ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಗಿಡುಗು ರುದ್ರರಾಜು

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಪ್ರಜಾ ವಿಜಯವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಜನ ನೀಡಿದ ಬೆಂಬಲಕ್ಕೆ ಆಭಾರಿಯಾಗಿದ್ದೇನೆ ಎಂದು ಆಂಧ್ರಪ್ರದೇಶ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿಡುಗು ರುದ್ರರಾಜು ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ಬಳಿ ಈಟಿವಿ ಭಾರತ್ ದೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರ ಪ್ರದೇಶ ಗಡಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ನಾವು ಪ್ರಚಾರ ಮಾಡಿದ್ದೆವು. ಪಕ್ಷದ ಹಿರಿಯ ನಾಯಕರ ಜೊತೆ ನಾನು ಸಹ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರಚಾರ ಕಾರ್ಯ ನಡೆಸಿದ್ದೆ. ಫಲಿತಾಂಶ ಬಂದಿರುವ ಈ ಸಂದರ್ಭದಲ್ಲಿ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಲು ಆಗಮಿಸಿದ್ದೇನೆ ಎಂದರು.

ನಾವು ಪ್ರಚಾರ ಕೈಗೊಂಡ ಸಾಕಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಗೆದ್ದ ಎಲ್ಲಾ ಅಭ್ಯರ್ಥಿಗಳು ನನ್ನ ಸ್ನೇಹಿತರಾಗಿದ್ದು, ಅವರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಲು ಆಗಮಿಸಿದ್ದೇನೆ. ಎಂದು ಇಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿಗೆ ಆಗಮಿಸುವ ಶಾಸಕರನ್ನ ಅಭಿನಂದಿಸುವ ಜೊತೆಗೆ ಸಭೆಯಲ್ಲಿಯೂ ಪಾಲ್ಗೊಳ್ಳಲು ತೀರ್ಮಾನಿಸಿದ್ದೇನೆ. ಇಂದು ದಿಲ್ಲಿಯಿಂದ ವಿಶೇಷ ವೀಕ್ಷಕರು ಸಹ ಆಗಮಿಸುತ್ತಿದ್ದಾರೆ. ಅವರನ್ನು ಸಹ ಭೇಟಿ ಮಾಡುತ್ತೇನೆ ಎಂದರು.

ಎಲ್ಲಾ ಭರವಸೆಗಳನ್ನು ಸರ್ಕಾರ ಈಡೇರಿಸಲಿದೆ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಒಂದು ದೊಡ್ಡ ಮಟ್ಟದ ವಿಜಯ ಎಂದು ಭಾವಿಸುತ್ತೇನೆ. ರಾಜ್ಯದ ಈ ಗೆಲುವಿನ ಸಂತಸವನ್ನು ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷನಾಗಿ ಹಂಚಿಕೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದೇನೆ. ರಾಜ್ಯದಲ್ಲಿ ಒಂದು ಅತ್ಯುತ್ತಮ ಸರ್ಕಾರವನ್ನು ಕಾಂಗ್ರೆಸ್ ನೀಡುತ್ತದೆ ಎಂಬ ವಿಶ್ವಾಸ ನನಗೆ ಇದೆ. ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲಾ ಭರವಸೆಗಳನ್ನು ಸರ್ಕಾರ ಈಡೇರಿಸಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದು ಅವರು ಹೇಳಿದರು.

ಕರ್ನಾಟಕದ 12 ಜಿಲ್ಲೆಯ 63 ವಿಧಾನಸಭೆ ಕ್ಷೇತ್ರಗಳಲ್ಲಿ ತೆಲುಗು ಭಾಷಿಕರ ಪ್ರಾಬಲ್ಯ ಇದೆ. ಈ ಎಲ್ಲಾ ಭಾಗಗಳಲ್ಲಿಯೂ ನಾವು ಪ್ರಚಾರ ನಡೆಸಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಭಾರತೀಯ ಜನತಾ ಪಕ್ಷ ಆಂಧ್ರಪ್ರದೇಶದಲ್ಲಿ ನಡೆಸಿದ ಮಾದರಿಯ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶವಾಗಿತ್ತು. ಹೊಸದಾಗಿ ನಿರ್ಮಾಣವಾಗಿರುವ ರಾಜ್ಯಕ್ಕೆ ವಿಶೇಷ ಪ್ರಾತಿನಿಧ್ಯ ನೀಡುವ ಕಾರ್ಯವನ್ನು ಮಾಡಲಿಲ್ಲ. ಇದು ಸೇರಿದಂತೆ ಬಿಜೆಪಿಯಿಂದ ಆಂಧ್ರಕ್ಕೆ ಆಗಿರುವ ಅನ್ಯಾಯವನ್ನು ನಾವು ಮತದಾರರ ಮುಂದೆ ಕೊಂಡೊಯ್ಯುತ್ತಿದ್ದೇವೆ ಹಾಗೂ ಜನ ಅದನ್ನು ಒಪ್ಪಿದ್ದಾರೆ. ಇದಕ್ಕೆ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅತಿ ದೊಡ್ಡ ವಿಜಯವನ್ನ ಕಾಂಗ್ರೆಸ್ ಗೆ ದಯಪಾಲಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ: ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಪ್ರಯತ್ನಪಟ್ಟು ರೋಡ್ ಶೋ ಹಾಗೂ ಸಮಾವೇಶವನ್ನು ನಡೆಸಿದರು ಸಹ ಜನ ಅದನ್ನು ವಿಫಲಗೊಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಪ್ರಭುತ್ವದಿಂದ ಜನ ಬೇಸತ್ತು ಹೋಗಿದ್ದಾರೆ. ಡಬಲ್ ಇಂಜಿನ್ ಸರ್ಕಾರವನ್ನು ಜನ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದೇ ಭಾವಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಒಂದು ಉತ್ತಮ ಬಹುಮತದ ಸ್ಥಿರ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಹಿಂದೆ ನಮಗೆ ಉತ್ತಮ ಬಹುಮತ ಸಿಕ್ಕರೂ ಸಹ ನಮ್ಮ ಶಾಸಕರನ್ನ ಸೆಳೆದು ಬಹುಮತ ಕಳೆದುಕೊಳ್ಳುವಂತೆ ಮಾಡಿದ್ದರು. ಈ ಸಾರಿ ಜನ ಅದಕ್ಕಿಂತಲೂ ಹೆಚ್ಚಿನ ಮನ್ನಣೆ ನೀಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.

ಕರ್ನಾಟಕ ಈಗಲೂ ತೆಲಂಗಾಣ ಹಾಗೂ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ. ಇದಾದ ಬಳಿಕ ಚುನಾವಣೆ ನಡೆಯುವ ಮಧ್ಯಪ್ರದೇಶ ಛತ್ತೀಸ್​ಘಡ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಪರಿಣಾಮ ಬೀರಲಿದೆ. ಕರ್ನಾಟಕದಲ್ಲಿ ಜನ ನೀಡಿರುವ ತೀರ್ಪು ಬಿಜೆಪಿಯ ಅಧಃಪತನಕ್ಕೆ ನಾಂದಿ ಹಾಡಿದೆ. ಬಿಜೆಪಿಯ ಅವಸಾನ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವುಗಳನ್ನು ಸಾಧಿಸುತ್ತ ಸಾಗಲಿದೆ. ಮುಂಬರುವ ಎಲ್ಲಾ ಚುನಾವಣೆಗಳನ್ನ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

2024ರ ಲೋಕಸಭೆ ಚುನಾವಣೆಯನ್ನು ಸಹ ಕಾಂಗ್ರೆಸ್ ದೊಡ್ಡ ಬಹುಮತದೊಂದಿಗೆ ಗೆಲ್ಲಲಿ ಎಂದ ಅವರು, ರಾಹುಲ್ ಗಾಂಧಿ ರಾಷ್ಟ್ರದ ಪ್ರಧಾನಿ ಆಗಲಿದ್ದಾರೆ. ಈ ಸಾರಿ ಎಲ್ಲಾ ಸಮುದಾಯದವರು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸ ಇದೆ. ನಾವೆಲ್ಲರೂ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರದಲ್ಲಿಯೂ ಕಾಂಗ್ರೆಸ್ ಪ್ರಭುತ್ವ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕರ್ನಾಟಕ ನೂತನ ಸಿಎಂ ಆಯ್ಕೆ ವಿಚಾರ 'ಕೈ' ನಾಯಕಿ ಸೋನಿಯಾ ಗಾಂಧಿ ಅಂಗಳಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.