ETV Bharat / state

ಸಚಿವ ಸಂಪುಟ ರಚನೆ ಕಸರತ್ತು: ಲಿಂಗಾಯತ - ದಲಿತರಿಗೆ ಸಿಂಹಪಾಲು, ಒಕ್ಕಲಿಗರಿಗೆ ಕೇವಲ ನಾಲ್ಕು ಸ್ಥಾನ!

author img

By

Published : May 26, 2023, 11:11 PM IST

Updated : May 27, 2023, 9:18 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ದಲಿತರಿಗೆ ಸಿಂಹಪಾಲು ದೊರೆತಿದೆ.

ಸಚಿವ ಸಂಪುಟ ರಚನೆ ಕಸರತ್ತು: ಲಿಂಗಾಯತ - ದಲಿತರಿಗೆ ಸಿಂಹಪಾಲು, ಒಕ್ಕಲಿಗರಿಗೆ 4 ಮಂತ್ರಿ ಸ್ಥಾನ
ಸಚಿವ ಸಂಪುಟ ರಚನೆ ಕಸರತ್ತು: ಲಿಂಗಾಯತ - ದಲಿತರಿಗೆ ಸಿಂಹಪಾಲು, ಒಕ್ಕಲಿಗರಿಗೆ 4 ಮಂತ್ರಿ ಸ್ಥಾನ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಪೂರ್ಣಗೊಂಡಿದ್ದು ಶನಿವಾರ ಬೆಳಗ್ಗೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿರುವ 24 ಶಾಸಕರುಗಳ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಂತ್ರಿಮಂಡಲದಲ್ಲಿ ದಲಿತರಿಗೆ ಸಿಂಹಪಾಲು ದೊರೆತಿದೆ. ''ಅಹಿಂದ'' ವನ್ನು ಪ್ರತಿಪಾದಿಸುತ್ತ ಬಂದಿರುವ ರಾಜಕೀಯದಲ್ಲಿ ಅಹಿಂದ ಹೋರಾಟಗಾರನೆಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಪ್ರತಿಪಾದಿಸಲು ಅಹಿಂದ ವರ್ಗಕ್ಕೆ ತಮ್ಮ ಮಂತ್ರಿ ಮಂಡಲದಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದಾರೆ. ದಲಿತ ಸಮುದಾಯದಿಂದ 9 ಜನ, ಅಲ್ಪಸಂಖ್ಯಾತ ಸಮುದಾಯದಿಂದ 4 (ಮುಸ್ಲಿಂ 2, ಕ್ರೈಸ್ತ್ 1, ಜೈನ್ 1) ಹಾಗೂ ಹಿಂದುಳಿದ ಜನಾಂಗದ 6 ಜನರಿಗೆ ಪ್ರಾತಿನಿಧ್ಯ ದೊರೆತಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಿದ ವೀರಶೈವ ಲಿಂಗಾಯತ ಸಮುದಾಯಕ್ಕೆ ಬರೋಬ್ಬರಿ 8 ಜನ ಸಚಿವರನ್ನು (ರೆಡ್ಡಿ ಜನಾಂಗ ಸೇರಿದಂತೆ ಒಳ ಪಂಗಡಗಳು ಒಳಗೊಂಡಂತೆ) ಸಿದ್ದರಾಮಯ್ಯನವರು ತಮ್ಮ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ ಚುನಾವಣೆಯಲ್ಲಿ ಜೆಡಿಎಸ್ ಬದಲಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದ ಒಕ್ಕಲಿಗ ಸಮುದಾಯಕ್ಕೆ ಕೇವಲ 4 ಸಚಿವ ಸ್ಥಾನಗಳನ್ನು ನೀಡಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ನಾಯಕರಲ್ಲಿ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ವೀರಶೈವ ಲಿಂಗಾಯತ ಸಮುದಾಯಕ್ಕೆ ಒಟ್ಟು 8 ಸಚಿವ ಸ್ಥಾನ ನೀಡಲಾಗಿದ್ದು ಈ ಸಮುದಾಯದ ಬಹುತೇಕ ಎಲ್ಲ ಪ್ರಮುಖ ಒಳಪಂಗಡಗಳಿಗೆ ಅವಕಾಶ ನೀಡಲಾಗಿದೆ. ಬಣಜಿಗರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪಂಚಮಸಾಲಿಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಶಿವಾನಂದ ಪಾಟೀಲ್, ಕೂಡು ಒಕ್ಕಲಿಗರಲ್ಲಿ ಕೆಪಿಸಿಸಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂ.ಬಿ.ಪಾಟೀಲ್, ಸಾದರ ಲಿಂಗಾಯತರಲ್ಲಿ ಶಾಮನೂರು ಕುಟುಂಬದ ಎಸ್.ಎಸ್.ಮಲ್ಲಿಕಾರ್ಜುನ್, ಆದಿ ಬಣಜಿಗರಲ್ಲಿ ಡಾ. ಶರಣ ಪ್ರಕಾಶ ಪಾಟೀಲ್, ರೆಡ್ಡಿ ಲಿಂಗಾಯತರಲ್ಲಿ ಶರಣ ಬಸಪ್ಪ ದರ್ಶನಾಪುರ ಮತ್ತು ವೈಷ್ಣವ ರೆಡ್ಡಿಯ ಪ್ರತಿನಿಧಿಯಾಗಿ ಹಿರಿಯ ಕಾಂಗ್ರೆಸ್ಸಿಗ ಹೆಚ್.ಕೆ.ಪಾಟೀಲ್ ಅವರಿಗೆ ಪ್ರಾತಿನಿಧ್ಯ ದೊರೆತಿದೆ.

ಸಚಿವರ ಪಟ್ಟಿ
ಸಚಿವರ ಪಟ್ಟಿ

ದಲಿತ ಸಮುದಾಯಕ್ಕೆ ಸಂಪುಟದಲ್ಲಿಯೇ ಅತಿ ಹೆಚ್ಚಿನ ಅಂದರೆ 9 ಸಚಿವ ಸ್ಥಾನಗಳು ಲಭಿಸಿವೆ. ಅಹಿಂದ ವರ್ಗಕ್ಕೆ ಒಟ್ಟು 13 ಸಚಿವ ಸ್ಥಾನಗಳು ಸಿಕ್ಕಿವೆ. ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಡಾ. ಹೆಸ್.ಸಿ.ಮಹದೇವಪ್ಪ, ಆರ್ ಬಿ ತಿಮ್ಮಾಪುರ ಮತ್ತು ಪ್ರಿಯಾಂಕ್ ಖರ್ಗೆ ಅವರು ಪರಿಶಿಷ್ಟ ಜಾತಿ ಖೋಟಾದಲ್ಲಿ ಸಚಿವರಾಗಿದ್ದಾರೆ.

ಸಚಿವ ಸಂಪುಟ ರಚನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಸರಿದೂಗಿಸುವ ಪ್ರಯತ್ನ ಮಾಡಿದ್ದಾರೆ. ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ಬಿಜೆಪಿ ಹಿರಿಯ ಮುಖಂಡರಾದ ಶ್ರೀರಾಮುಲು ಅವರನ್ನು ಸೋಲಿಸಿದ್ದ ನಾಗೇಂದ್ರ, ಮಧುಗಿರಿ ಶಾಸಕ ಕೆ ಎನ್ ರಾಜಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ದೊರೆತಿದೆ.

ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಅತ್ಯಂತ ಸಣ್ಣ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬೆಸ್ತ ಸಮುದಾಯದ ಮಾಂಕಾಳ ವೈದ್ಯ, ಮರಾಠ ಸಮಾಜದಿಂದ ಸಂತೋಷ್ ಲಾಡ್ ಇದ್ದಾರೆ. ಕುರುಬ ಸಮುದಾಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೈರತಿ ಸುರೇಶ್ ಅವರಿಗೆ ಮಾತ್ರ ಸಂಪುಟದೊಳಗೆ ಪ್ರವೇಶ ದೊರೆತಿದೆ. ಬಿಲ್ಲವ ಅಥವಾ ಈಡಿಗ ಸಮುದಾಯದಿಂದ ಮಧು ಬಂಗಾರಪ್ಪ aವರಿಗೆ ಸಚಿವ ಸಂಪುಟದಲ್ಲಿ ಅವಕಾಶ ದೊರೆತಿದೆ.

ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್, ರಹೀಂ ಖಾನ್ ಇಬ್ಬರು ಸಚಿವರಾಗಿದ್ದರೆ, ಕ್ರೈಸ್ತ ಸಮುದಾಯದಿಂದ ಹಿರಿಯ ಮುಖಂಡ ಕೆ.ಜೆ.ಜಾರ್ಜ್ ಅವರಿಗೆ ಸಚಿವ ಸ್ಥಾನ ಒಲಿದಿದೆ. ಜೈನ ಸಮುದಾಯದಿಂದ ಡಿ.ಸುಧಾಕರ್ ಹಾಗೂ ಬ್ರಾಹ್ಮಣ ಸಮುದಾಯದ ಪ್ರತಿನಿಧಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ದೊರಕಿದೆ.

ಒಕ್ಕಲಿಗರಲ್ಲಿ ಗಂಗಟಕಾರ್ ಒಕ್ಕಲಿಗರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಚೆಲುವರಾಯಸ್ವಾಮಿ ಅವರು ಇದ್ದಾರೆ. ಪಿರಿಯಾಪಟ್ಟಣ ವೆಂಕಟೇಶ್ ಕುಂಚಟಿಗರು, ದಾಸ ಒಕ್ಕಲಿಗರಲ್ಲಿ ಕೃಷ್ಣ ಬೈರೇಗೌಡ ಸೇರಿ ನಾಲ್ಕು ಮಂದಿಗೆ ಪ್ರಾತಿನಿಧ್ಯ ದೊರೆತಿದೆ.

ಇದನ್ನೂ ಓದಿ: 24 ಶಾಸಕರಿಗೆ ಮಂತ್ರಿ ಭಾಗ್ಯ... ದೇಶಪಾಂಡೆ, ಹರಿಪ್ರಸಾದ್, ಕುಲಕರ್ಣಿಗೆ ನಿರಾಶೆ... ಹೀಗಿದೆ ಅವಕಾಶ ಪಡೆದವರ ಪಟ್ಟಿ

Last Updated : May 27, 2023, 9:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.