ETV Bharat / state

‘ಯಡಿಯೂರಪ್ಪರದ್ದು ಭ್ರಷ್ಟ ಆಡಳಿತ’: ‘ಜನಪೀಡಕ ಸರ್ಕಾರ’ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಸಿದ್ದು ವಾಗ್ದಾಳಿ

author img

By

Published : Jul 29, 2021, 1:42 PM IST

ಬಿಜೆಪಿ ಸರ್ಕಾರ 2 ವರ್ಷ ಪೂರೈಸಿ ನೂತನ ಸಿಎಂ ಅಧಿಕಾರಕ್ಕೇರಿರುವ ಬೆನ್ನಲ್ಲೇ, ಬಿಜೆಪಿಯ ಪೈಫಲ್ಯಗಳನ್ನು ಜನರ ಮುಂದಿಡಲು ಕಾಂಗ್ರೆಸ್ ಮುಂದಾಗಿದೆ. ಈ ಹಿನ್ನೆಲೆ ‘ಜನಪೀಡಕ ಸರ್ಕಾರ’ ಎಂಬ ಕಿರು ಹೊತ್ತಿಗೆ ಹೊರತಂದಿದೆ.

Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಸರ್ಕಾರ ದುರಾಡಳಿತ ಮತ್ತು ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಆಡಳಿತ ಕೊಟ್ಟಿದ್ದು, ಬಿಟ್ಟರೆ ಶೂನ್ಯ ಸಾಧನೆ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸದಲ್ಲಿ ‘ಜನಪೀಡಕ ಸರ್ಕಾರ’ ಎಂಬ ಸರ್ಕಾರದ ವೈಫಲ್ಯದ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ, ಮೊನ್ನೆ ಬಿ.ಎಸ್. ಯಡಿಯೂರಪ್ಪ 2 ವರ್ಷ ಸರ್ಕಾರ ನಡೆಸಿದೆ ಎಂದು ಸಂಭ್ರಮದ ದಿನ ಆಚರಿಸಿ ರಾಜೀನಾಮೆ ನೀಡಿದರು. ರಾಜ್ಯವನ್ನು ಸಂಕಷ್ಟದ ದಿನದಲ್ಲೂ ಅಭಿವೃದ್ಧಿಗೆ ಕೊಂಡೊಯ್ದಿದ್ದೇವೆ ಅಂತೆಲ್ಲಾ ಹೇಳಿದರು. ಇದೀಗ ನಿರ್ಗಮಿಸಿದ್ದಾರೆ. ಹೊಸದಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದರು.

ಮೊಟ್ಟೆಯಲ್ಲೂ ಹಣ ಹೊಡೆದ ಸರ್ಕಾರವಿದು..

2019 ಜುಲೈನಲ್ಲಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡು 2 ವರ್ಷದ ನಂತರ ಅದೇ ತಿಂಗಳು ಸಿಎಂ ರಾಜೀನಾಮೆ ನೀಡಿದ್ದಾರೆ. ಆಪರೇಷನ್‌ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದರು. 2018ರಲ್ಲಿ ಯಾರಿಗೂ ಬಹುಮತ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ದೊಡ್ಡ ಪಕ್ಷ ಆಗಿದ್ದಕ್ಕೆ ಬಿ.ಎಸ್ ಯಡಿಯೂರಪ್ಪಗೆ ಸರ್ಕಾರ ರಚಿಸುವ ಅವಕಾಶ ಬಂತು. ಅವರು ವಿಫಲವಾದಾಗ ಮೈತ್ರಿ ಸರ್ಕಾರ ಬಂತು. ಅದನ್ನು ಬೀಳಿಸಿ ಮತ್ತೆ ಯಡಿಯೂರಪ್ಪ ವಾಮ ಮಾರ್ಗದಲ್ಲಿ ಅನೈತಿಕ ಸರ್ಕಾರ ರಚಿಸಿದರು ಎಂದು ವಾಗ್ದಾಳಿ ನಡೆಸಿದರು.

ಮಕ್ಕಳಿಗೆ, ಗರ್ಭಿಣಿಯರಿಗೆ ನೀಡುವ ಮೊಟ್ಟೆಯಲ್ಲೂ ಹಣ ಹೊಡೆದ ಸರ್ಕಾರ‌ವಿದು. ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಕೊರೊನಾ ಸಲಕರಣೆ ಖರೀದಿಯಲ್ಲೂ ಅಕ್ರಮ ಎಸಗಿದ್ದಾರೆ. ಎಷ್ಟೋ ಸಲಕರಣೆ ಬಳಸಲಿಕ್ಕಾಗಲಿಲ್ಲ. 909 ವೆಂಟಿಲೇಟರ್ ಬಳಸಲೇ ಇಲ್ಲ. ನೂರಾರು ಕೋಟಿ ರೂ. ಬಿಲ್ ಮಾಡಿದರು. ದಾಖಲೆ ಸಮೇತ ನಾವು ಸರ್ಕಾರದ ಭ್ರಷ್ಟಾಚಾರವನ್ನು ಗಮನಕ್ಕೆ ತಂದೆವು. ಯಡಿಯೂರಪ್ಪ ಉತ್ತರಿಸಲೇ ಇಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

2ನೇ ಅಲೆ ಮುನ್ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡಲಾಯಿತು. ಸಿದ್ಧತೆ ಮಾಡಿಕೊಳ್ಳದೇ ಸರ್ಕಾರ ವಿಫಲವಾಯಿತು. ಕೊರತೆಗಳೇ ಹೆಚ್ಚಾದವು. ಬೆಡ್ ಸಿಗದೇ ಸಾವಿರಾರು ಜನ ಮೃತಪಟ್ಟರು. ಸಿದ್ಧತೆ ಮಾಡಿಕೊಂಡಿದ್ದರೆ ಇಷ್ಟೊಂದು ಜನ ಸಾಯುತ್ತಿರಲಿಲ್ಲ. ಇಲ್ಲಿ ಸುಧಾಕರ್ ಹೇಳಿದಂತೆ ಕೇಂದ್ರ ಆರೋಗ್ಯ ಸಚಿವರೂ ಸುಳ್ಳು ಹೇಳಿದ್ದಾರೆ. ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡರು. ಕಾರ್ಮಿಕರು ಬೀದಿಗೆ ಬಂದರು ಎಂದಿದ್ದಾರೆ.

ಸಾಲಗಾರ ಕೇಂದ್ರ ಸರ್ಕಾರ..

ಸಿಎಂ ಬೊಮ್ಮಾಯಿ ಕುರಿತು ಮಾತನಾಡಿ, ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಒಂದಿಷ್ಟು ಘೋಷಣೆ ಮಾಡಿದ್ದು, ಅದನ್ನು ಸ್ವಾಗತಿಸುತ್ತೇನೆ. ಆದರೆ ಆದಾಯ ಮೂಲ ಎಲ್ಲಿದೆ. ಎಲ್ಲಿಂದ ಹಣ ತರುತ್ತೀರಿ. ಸಾಲ ಮಾಡಿ ಹೋಳಿಗೆ ತಿನ್ನು ಅನ್ನುವಂತಾಗಿದೆ. ಆರ್ಥಿಕ ದುಸ್ಥಿತಿಗೆ ಯಡಿಯೂರಪ್ಪ ತಳ್ಳಿದ್ದಾರೆ. 135 ಲಕ್ಷ ಕೋಟಿ ಸಾಲ ಮಾಡಿದ್ದಾರೆ. 82 ಲಕ್ಷ ಕೋಟಿ ನರೇಂದ್ರ ಮೋದಿ ಒಬ್ಬರೇ 6 ವರ್ಷದಲ್ಲಿ ಮಾಡಿದ್ದಾರೆ.

70 ವರ್ಷದಲ್ಲಿ 53 ಲಕ್ಷ ಕೋಟಿ ಮೊತ್ತದ ಸಾಲ ಇತ್ತು. ಜಿಡಿಪಿ ಸಹ ಕುಸಿದಿದೆ. ಇಂಧನ ಬೆಲೆ ಏರಿದೆ. ಅಡುಗೆ ಎಣ್ಣೆ ಬೆಲೆ ಏರಿಕೆ ಎಷ್ಟಾಗಿದೆ ಎಂದರೆ ಈಗ ಪಕೋಡಾ ಸಹ ಮಾಡಲು ಸಾಧ್ಯವಿಲ್ಲ. 12 ಕೋಟಿ ಉದ್ಯೋಗ ನಷ್ಟವಾಗಿದೆ. ಮೋದಿ ಅಮಾನುಷ ವ್ಯಕ್ತಿ. ಕೊರೊನಾ ಔಷಧಿಯ ಮೇಲಿನ ಸಿಎಸ್​ಟಿ ಕೂಡ ತೆಗೆಯಲಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಹೊಸ ಸಿಎಂ ಬಗ್ಗೆ ಈಗೇನೂ ಹೇಳಲ್ಲ..

ಬಸವರಾಜ ಬೊಮ್ಮಾಯಿ ಜನಪರ ಆಡಳಿತ ನೀಡುವುದಾಗಿ ಹೇಳಿದ್ದಾರೆ. ನೋಡೋಣ ಈಗ ಏನೂ ಹೇಳಲ್ಲ. ಇವರ ತಂದೆ ನಮ್ಮ ಆತ್ಮೀಯರಾಗಿದ್ದರು, ಇವರಲ್ಲ. ರಾಷ್ಟ್ರೀಯ ವಾದಿಯಾಗಿದ್ದಾಗ ಬಾಂಧವ್ಯ ಇತ್ತು. ಕೋಮುವಾದಿ ಪಕ್ಷ ಸೇರಿದ ಮೇಲೆ ನಮ್ಮ ರಾಜಕೀಯ ಬಾಂಧವ್ಯ ಕಡಿದುಹೋಗಿದೆ. ಹಿಂದಿನ ವರ್ಷ ಸೂಕ್ತ ನೆರೆ ಪರಿಹಾರ ಸಿಕ್ಕಿಲ್ಲ. ಮೊನ್ನೆ ಬೆಳಗಾವಿಗೆ ತೆರಳಿದ್ದಾಗ ಜನರೇ ನೋವು ತೋಡಿಕೊಂಡಿದ್ದಾರೆ ಎಂದರು.

ಭ್ರಷ್ಟಾಚಾರ ವಿಚಾರವಾಗಿ ಯತ್ನಾಳ್, ವಿಶ್ವನಾಥ್ ಇನ್ನೂ ಚೆನ್ನಾಗಿ ಮಾಹಿತಿ ಕೊಡ್ತಾರೆ. ಎಷ್ಟು ಪರ್ಸೆಂಟ್​​ ಅಂತ ಅವರೇ ಸರಿಯಾಗಿ ಹೇಳ್ತಾರೆ. ಪಕ್ಷದವರೇ ಆರೋಪ ಮಾಡಿದಾಗ ಯಡಿಯೂರಪ್ಪಗೆ ನೋವಾಗಲಿಲ್ಲ. ನಾನು ಹೇಳಿದಾಗ ನೋವಾಗಿದೆ. ಯಡಿಯೂರಪ್ಪ ಸರ್ಕಾರವೇ ಇದ್ದರೆ ಹೀನಾಯವಾಗಿ ಸೋಲುತ್ತೇವೆ. ಸಿಎಂ ಬದಲಿಸಿದರೆ ಇಮೇಜ್ ಬದಲಾಗಲ್ಲ. ಬಸವರಾಜ್ ಬೊಮ್ಮಾಯಿ ನೇಮಿಸಿದ್ದೇ ಯಡಿಯೂರಪ್ಪ. ಹೀಗಾಗಿ ಇಲ್ಲಿ ಬದಲಾವಣೆ ಆಗಲ್ಲ. ಶರಣಾಗತಿ ಬಸವರಾಜ ಬೊಮ್ಮಾಯಿಗೆ ಅನಿವಾರ್ಯ. ಕೆಲಸ ಕೊಟ್ಟಿದ್ದೇ ಯಡಿಯೂರಪ್ಪ. ಹೀಗಾಗಿ ಅವರ ಮರ್ಜಿಯಲ್ಲೇ ಇರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.