ETV Bharat / state

ನಾಳೆಯಿಂದ ಬಜೆಟ್​ ಅಧಿವೇಶನ ಆರಂಭ: ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ

author img

By

Published : Feb 9, 2023, 12:25 PM IST

ಚುನಾವಣೆ ಹೊಸ್ತಿಲಲ್ಲಿ ಬಜೆಟ್​ ಅಧಿವೇಶನ - ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹೋರಾಟಕ್ಕೆ ಸಜ್ಜು - ಬಿಜೆಪಿ ಜನಪರ ಕೆಲಸ ಮಾಡಿಲ್ಲ ಎಂದು ಖಾದರ್ ಟೀಕೆ

congress
ನಾಳೆಯಿಂದ ಬಜೆಟ್​ ಅಧಿವೇಶನ

ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ವಿಧಾನ ಮಂಡಲ ಉಭಯ ಸದನಗಳ ಬಜೆಟ್ ಅಧಿವೇಶನ ನಾಳೆ ಆರಂಭವಾಗಲಿದ್ದು, ಆಡಳಿತ ಪಕ್ಷ ಬಿಜೆಪಿ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗುತ್ತಿದೆ. ನಾಳೆ ವಿಧಾನಸಭೆಯಲ್ಲಿ ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಈ ಭಾಷಣದ ಮೇಲೆ ಯಾವ ವಿಧದ ಟೀಕೆ ಮಾಡಬೇಕು ಎಂದು ಕಾಂಗ್ರೆಸ್ ಯೋಚಿಸುತ್ತಿದೆ.

ಶುಕ್ರವಾರ ರಾಜ್ಯಪಾಲರ ಭಾಷಣದ ಬಳಿಕ ಕಲಾಪ ಸೋಮವಾರಕ್ಕೆ ಮುಂದೂಡಿಕೆ ಆಗಲಿದೆ. ನಂತರ ಪ್ರತಿಪಕ್ಷದ ನಾಯಕರು ರಾಜ್ಯಪಾಲರ ಭಾಷಣದ ಮೇಲಿನ ವಿಚಾರಗಳ ಮೇಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿದ್ದಾರೆ. ಇದಾದ ಬಳಿಕ ಪಕ್ಷದ ಹಿರಿಯ ನಾಯಕರ ಸಭೆ ನಡೆಯಲಿದ್ದು, ಫೆ.13 ರಿಂದ 16 ರವರೆಗೆ ನಡೆಯುವ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿದ್ದಾರೆ.

ಯಾವ್ಯಾವ ವಿಚಾರದಲ್ಲಿ ಚರ್ಚೆ?: ಕಾಂಗ್ರೆಸ್ ನಾಯಕರು ಈ ಸಾರಿಯೂ ಅಧಿವೇಶನದಲ್ಲಿ ಪ್ರಮುಖವಾಗಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಯನ್ನೇ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ. ಗುತ್ತಿಗೆದಾರರ ಸಂಘ ಸರ್ಕಾರದ ಮೇಲೆ ಆರೋಪಿಸಿರುವ ಶೇ 40ರಷ್ಟು ಕಮಿಷನ್, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಅಮಾಯಕ ಯುವಕರ ಹತ್ಯೆ, ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ವಸೂಲಿ, ಸ್ಯಾಂಟ್ರೊ ರವಿ ಪ್ರಕರಣ, ಪಿಎಸ್ಐ ನೇಮಕ ಅಕ್ರಮ ಸೇರಿದಂತೆ ಹಲವು ಜ್ವಲಂತ ವಿಚಾರಗಳ ಮೇಲೆ ಚರ್ಚೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದರೆ ಜಮೀನು ಮಾರಿ ಚುನಾವಣೆಗೆ ಹಣ ನೀಡ್ತಾರಂತೆ ಈ ಅಭಿಮಾನಿ!

ಯಾರು ಯಾವ ವಿಚಾರದ ಮೇಲೆ ಮಾತನಾಡಬೇಕು? ಎಂಬ ಕುರಿತು ಹಿರಿಯ ಕಾಂಗ್ರೆಸ್ ನಾಯಕರು ಚರ್ಚಿಸಿ ತೀರ್ಮಾನಿಸಲಿದ್ದಾರೆ. ಅಲ್ಲದೇ ವಿಧಾನಸಭೆಯಲ್ಲಿ ಯಾವಾಗ ಯಾವ ವಿಚಾರವನ್ನು ಎತ್ತಿಕೊಳ್ಳಬೇಕು? ಸರ್ಕಾರ ಅದಕ್ಕೆ ಅವಕಾಶ ನೀಡದಿದ್ದ ಸಂದರ್ಭದಲ್ಲಿ ಹೇಗೆ ಹೋರಾಟ ಮಾಡಬೇಕು? ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ಜೊತೆಗೆ ಜನರಿಗೆ ಸಮ್ಮತಿಯಾಗುವಂತಹ ಜನಪರ ವಿಚಾರಗಳಲ್ಲಿ ಯಾವುದನ್ನು ಕೈಗೆತ್ತಿಕೊಳ್ಳಬೇಕು? ಎಂಬುದರ ಕುರಿತು ಕಾಂಗ್ರೆಸ್ ನಾಯಕರು ಕೂಲಂಕಷ ಚರ್ಚೆ ನಡೆಸಲಿದ್ದಾರೆ.

ಪ್ರಜಾಧ್ವನಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಭಾನುವಾರ ಸಂಜೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಸೋಮವಾರ ಅಧಿವೇಶನ ಆರಂಭಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಅಂತಿಮ ತೀರ್ಮಾನ ಆಗಲಿದೆ. ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ರಾಜ್ಯಕ್ಕೆ ಲಭಿಸಿದ ಕೊಡುಗೆ ಕಡಿಮೆ ಎಂಬ ವಿಚಾರವನ್ನು ಪ್ರಸ್ತಾಪಿಸಿ ಥರಾಟೆಗೆ ತೆಗೆದುಕೊಳ್ಳುವುದು ಕಾಂಗ್ರೆಸ್ ನಾಯಕರ ಪ್ರಮುಖ ನಿರ್ಧಾರದಲ್ಲಿ ಒಂದಾಗಿದೆ. ಇನ್ನು ರಾಜ್ಯ ಬಜೆಟ್ ಸಹ ಮಂಡನೆಯಾಗಲಿದ್ದು, ಫೆ.17ರ ಬಜೆಟ್ ಯಾವ ರೀತಿ ಇರಬೇಕೆಂಬ ಚರ್ಚೆಯನ್ನೂ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಹಾಗೂ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಮುಂದುವರೆಸಲು 8 ಸಾವಿರ ಕೋಟಿ ಅನುದಾನ ಹೊರತುಪಡಿಸಿದರೆ ಕೇಂದ್ರದ ಆಯವ್ಯಯದಲ್ಲಿ ಯಾವುದೇ ಹೇಳಿಕೊಳ್ಳುವಂತ ಕೊಡುಗೆ ಸಿಕ್ಕಿಲ್ಲ. ಜಿಎಸ್​ಟಿ ಪರಿಹಾರ ಬಂದಿಲ್ಲ. ಒಟ್ಟಾರೆ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ತಾರತಮ್ಯ ನೀತಿ ತೋರಿಸುತ್ತಿದೆ ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವುದು ಕಾಂಗ್ರೆಸ್ ಉದ್ದೇಶವಾಗಿದೆ.

'ಬಿಜೆಪಿ ಜನಪರ ಕೆಲಸ ಮಾಡಿಲ್ಲ' "ಅಧಿಕಾರಕ್ಕೆ ಬಂದ ದಿನದಿಂದಲೂ ಇಲ್ಲಿಯವರೆಗೆ ಬಿಜೆಪಿ ಸರ್ಕಾರ ಜನಪರವಾದ ಒಂದೇ ಒಂದು ಕೆಲಸವನ್ನು ಮಾಡಿಲ್ಲ. ಜನರ ಆಶೀರ್ವಾದ ಇಲ್ಲದೇ ಹಿಂಬಾಗಿಲಿನಿಂದ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಕೇವಲ ಭ್ರಷ್ಟಾಚಾರವನ್ನು ಮಾತ್ರ ಮಾಡಿದೆ. ರಾಜ್ಯವನ್ನು ಲೂಟಿ ಮಾಡಿದೆ. ಪ್ರತಿ ನೇಮಕದಲ್ಲಿಯೂ ಲಂಚದ ಹಾವಳಿ ಹೆಚ್ಚಾಗಿದೆ. ಇದಕ್ಕೆ ಜನ ಬೇಸತ್ತಿದ್ದಾರೆ. ಈ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ ತೊಟ್ಟಿದ್ದಾರೆ. ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಸಹ ಈ ಅಧಿವೇಶನದಲ್ಲಿ ಸರ್ಕಾರ ಜನರಿಗಾಗಿ ಏನನ್ನೂ ಮಾಡಿಲ್ಲ ಎನ್ನುವುದನ್ನು ದಾಖಲೆ ಸಮೇತ ಸಾಬೀತುಪಡಿಸಲು ಸಜ್ಜಾಗುತ್ತಿದ್ದೇವೆ" ಎಂದು ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ, ವರುಣಾದಲ್ಲಿ ನಾನೇ ಸ್ಪರ್ಧಿಸ್ತೀನಿ: ಶಾಸಕ ಯತೀಂದ್ರ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.