ETV Bharat / state

ಪಿಎಫ್ಐ ಮಾದರಿಯಲ್ಲೇ ಆರ್​ಎಸ್​ಎಸ್​ ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಸಿದ್ಧತೆ

author img

By

Published : Oct 8, 2022, 10:48 PM IST

ದೇಶದಾದ್ಯಂತ ಪಿಎಫ್​ಐ ನಿಷೇಧ ಮಾಡಿರುವಂತೆ ಆರ್​ಎಸ್​ಎಸ್​ ನ್ನು ನಿಷೇಧ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್​ ನಿರ್ಧರಿಸಿದೆ. ಈ ಬಗ್ಗೆ ಆರ್​ಎಸ್​ಎಸ್​ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್​​ ಮುಂದಾಗಿದೆ.

congress-is-ready-to-put-pressure-on-the-government-to-ban-rss
ಪಿಎಫ್ಐ ಮಾದರಿಯಲ್ಲೇ ಆರ್​ಎಸ್​ಎಸ್​ ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಸಿದ್ಧತೆ

ಬೆಂಗಳೂರು : ದೇಶದಲ್ಲಿ ಪಿಎಫ್ ಐ ಸಂಘಟನೆ ನಿಷೇಧ ಮಾಡಿರುವ ಮಾದರಿಯಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವನ್ನು ನಿಷೇಧ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ತೀರ್ಮಾನಿಸಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷದ ರಾಜ್ಯನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪಿಎಫ್ ಐ ನಿಷೇಧದ ಬೆನ್ನಲ್ಲೇ ಆರ್​ಎಸ್​ಎಸ್​ ನ್ನು ನಿಷೇಧ ಮಾಡಬೇಕು ಎಂಬ ಒತ್ತಡ ಹೇರುತ್ತಿದ್ದಾರೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿರುವ ಕಾರಣಕ್ಕೆ ಪಿಎಫ್ ಐ ನಿಷೇಧ ಮಾಡಲಾಗಿದೆ.

ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆ ಕೇಂದ್ರ ಸರ್ಕಾರ ಪಿಎಫ್ ಐ ಸಂಘಟನೆ ನಿಷೇಧಿಸಿದ್ದು, ಈ ಸಂಬಂಧ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರ ನೀಡಿದೆ. ಪಿಎಫ್ ಐ ಯಾವ ರೀತಿ ಚಟುವಟಿಕೆಯಲ್ಲಿ ನಿರತವಾಗಿದೆಯೋ ಅದೇ ಮಾದರಿಯ ಚಟುವಟಿಕೆಯಲ್ಲಿ ಆರ್​ಎಸ್​ಎಸ್ ಸಹ ಭಾಗಿಯಾಗಿದೆ. ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಕಾರ್ಯವನ್ನು ಮಾಡಲಾಗುತ್ತಿದೆ.

ಇದೇ ವಿಚಾರ ಮುಂದಿಟ್ಟು ಅಮಾಯಕರನ್ನು ಸಾಯಿಸಲಾಗುತ್ತಿದೆ. ಹಿಂದೂ ಉಗ್ರವಾದಿಗಳ ರೀತಿ ಆರ್​ಎಸ್​ಎಸ್ ನಡೆದುಕೊಳ್ಳುತ್ತಿದ್ದು, ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕೆಡಲು ಈ ಸಂಘಟನೆಯೂ ಪಿಎಫ್ ಐ ನಷ್ಟೇ ಕಾರಣವಾಗಿದೆ. ಈ ಕಾರಣದಿಂದ ಆರ್​ಎಸ್​ಎಸ್ ಕೂಡ ನಿಷೇಧ ಆಗಬೇಕು ಎಂದು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ.

ಆರ್​ಎಸ್​ಎಸ್ ವಿರುದ್ಧ ಹೋರಾಟ : ದೇಶದಲ್ಲಿ ಪಿಎಫ್​​​​​ಐ ಸಂಘಟನೆ ನಿಷೇಧಿಸಬೇಕು ಎಂಬ ಮಾತುಗಳು ಕೇಳಿ ಬಂದಾಗ ಹಾಗೂ ಹೋರಾಟಗಳು ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಆರ್​ಎಸ್​ಎಸ್ ಸಂಘಟನೆ ಸಹ ನಿಷೇಧಕ್ಕೆ ಒಳಗಾಗಬೇಕು ಎಂದು ಒತ್ತಡ ಹೇರುತ್ತಾ ಬಂದಿದೆ. ಇದೀಗ ಸದನದ ಒಳಗೆ ಹಾಗೂ ಹೊರಗೆ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ಹೋರಾಟ ನಡೆಸಲು ತೀರ್ಮಾನಿಸಿದೆ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿರುವ ಉತ್ತಮ ಅವಕಾಶ ಬೆಳಗಾವಿ ಅಧಿವೇಶನ. ಈ ಸಂದರ್ಭ ಪಿಎಫ್​​​ಐ ನಿಷೇಧವನ್ನು ಪ್ರಸ್ತಾಪಿಸಿ ಆರ್​ಎಸ್​ಎಸ್ ಅನ್ನು ಸಹ ಅದೇ ಮಾದರಿಯಲ್ಲಿ ನಿಷೇಧ ಮಾಡಬೇಕು ಎಂದು ಒತ್ತಾಯಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಆರ್​ಎಸ್​ಎಸ್ ಕೂಡ ಬ್ಯಾನ್​ ಮಾಡಲು ಯೋಜನೆ : ಸದ್ಯ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರೆಲ್ಲಾ ಭಾಗಿಯಾಗಿದ್ದು, ಈ ವಿಚಾರವಾಗಿ ಒಮ್ಮತದ ತೀರ್ಮಾನ ಕೈಗೊಳ್ಳಲು ಪಾದಯಾತ್ರೆ ಬಳಿಕ ಒಂದು ಸಭೆ ಸೇರಲು ತೀರ್ಮಾನಿಸಿದ್ದಾರೆ. ಪಾದಯಾತ್ರೆ ಮಧ್ಯೆ ರಾಹುಲ್ ಗಾಂಧಿ ರಾಜ್ಯದಲ್ಲಿ ಎರಡು ದಿನ ವಿಶ್ರಾಂತಿ ಪಡೆಯಲಿದ್ದು, ಈ ಎರಡು ದಿನದಲ್ಲಿ ಯಾವುದಾದರೂ ಒಂದು ದಿನ ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿ ಈ ವಿಚಾರಕ್ಕೆ ಬೆಂಬಲ ಪಡೆಯಲಿದ್ದಾರೆ. ಆರ್​ಎಸ್​ಎಸ್ ವಿರುದ್ಧದ ಹೋರಾಟಕ್ಕೆ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿದರೆ ಮುಂದಿನ ಕ್ಷಣದಿಂದಲೇ ಹೋರಾಟದ ಅಸ್ತ್ರವನ್ನು ಉಪಯೋಗಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಬಿಜೆಪಿಗೆ ಬೆನ್ನುಲುಬಾಗಿರುವ ಆರ್​ಎಸ್​ಎಸ್ : ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿ ಸರ್ಕಾರದ ದೊಡ್ಡ ಬಲವಾಗಿ ನಿಂತಿರುವ ಆರ್​ಎಸ್​ಎಸ್ ಸಂಘಟನೆಯನ್ನು ಹಾಗೂ ಅದರ ಕಾರ್ಯ ಚಟುವಟಿಕೆಯನ್ನು ಒಂದಿಷ್ಟು ಕುಗ್ಗಿಸುವ ಹಾಗೂ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಅವರ ಉಪಸ್ಥಿತಿಯನ್ನು ತಡೆಯುವ ಪ್ರಯತ್ನದ ಭಾಗವಾಗಿ ಈ ಹೋರಾಟಕ್ಕೆ ಮುಂದಾಗಿದೆ. ಪಿಎಫ್​​​ಐ ನಿಷೇಧದ ಮಾತು ಬಂದಾಗೆಲ್ಲ ಆರ್​ಎಸ್​ಎಸ್ ನಿಷೇಧವನ್ನು ಪ್ರಸ್ತಾಪಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ನಡೆಸುವ ಹೋರಾಟ ಎಷ್ಟರಮಟ್ಟಿಗೆ ಫಲ ಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಎಸ್ ಡಿಪಿಐ‌, ಆರ್​ಎಸ್​ಎಸ್ ಬ್ಯಾನ್ ಮಾಡಲಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಈ ವಿಚಾರವಾಗಿ ಮಾತನಾಡಿದ್ದು, ಕಳೆದ ಹಲವಾರು ವರ್ಷಗಳಿಂದ ನಾವು ಒತ್ತಾಯ ಮಾಡುತ್ತಾ ಬಂದಿದ್ದೇವೆ. ಯಾರು ಸಮಾಜ ಒಡೆಯುತ್ತಾರೆ ಅಂತಹವರ ವಿರುದ್ಧ ‌ನಿರ್ದಾಕ್ಷಿಣ್ಯ‌ ಕ್ರಮ ಕೈಗೊಳ್ಳಬೇಕು. ಇವತ್ತು ಸರ್ಕಾರಕ್ಕೆ‌ ಬದ್ಧತೆ ಇದ್ದರೆ ಪಿಎಫ್ ಐ ಮಾದರಿಯಲ್ಲೇ ಎಸ್ ಡಿಪಿಐ‌, ಆರ್​ಎಸ್​ಎಸ್ ಬ್ಯಾನ್ ಮಾಡಲಿ. ಸಮಾಜದಲ್ಲಿ‌ ಹುಳಿ‌ ಹಿಂಡುವ ಕೆಲಸ ಯಾರು ಮಾಡುತ್ತಾರೋ ಅವರ‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಾನು ಕೂಡ ಇಂತಹ ಸಂಘಟನೆಗಳನ್ನು ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದಿದ್ದಾರೆ.

ತಾಕತ್ತಿದ್ದರೆ ಆರ್​ಎಸ್​ಎಸ್ ನ್ನು ನಿಷೇಧಿಸಲಿ : ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಈ ವಿಚಾರವಾಗಿ ಮಾತನಾಡಿದ್ದು, ದೇಶದಲ್ಲಿ ಪಿಎಫ್ ಐ ಬ್ಯಾನ್ ಚರ್ಚೆ ಹೊಸದಲ್ಲ. ಗುಜರಾತ್ ನಲ್ಲಿ ಚುನಾವಣೆ ಸಂದರ್ಭದಲ್ಲಿ ಮೆಸೇಜ್ ಬರುತ್ತದೆ. ಮೋದಿ ಹತ್ಯೆ ಬಗ್ಗೆ ಸುದ್ದಿಯಾಗುತ್ತದೆ. ಈ ಸಂದರ್ಭದಲ್ಲಿ ಸಂಘಟನೆ ಬ್ಯಾನ್ ಆಗುತ್ತದೆ. ಇಲ್ಲ ಫೇಕ್ ಎನ್ ಕೌಂಟರ್ ಆಗುತ್ತದೆ.

ಎಂಟು ವರ್ಷ ಬಿಜೆಪಿ ಸರ್ಕಾರ ಏನ್ ಮಾಡ್ತಾ ಇದೆ. ಆವಾಗಲೇ ಬ್ಯಾನ್ ಮಾಡಬೇಕಿತ್ತು. ಎಲ್ಲ ತರಹದ ಭಯೋತ್ಪಾದಕ ಸಂಘಟನೆ ಬ್ಯಾನ್ ಮಾಡಬೇಕು. ಆದರೆ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಈ ನಾಟಕ ಕಂಪನಿ ಕೆಲಸ ಮಾಡುತ್ತದೆ. ಇದು ಹೊಸದಲ್ಲ, ನಾನು ಹಿಂದೆ ಕೂಡ ಹೇಳಿದ್ದೆ. ಚುನಾವಣೆ ಮುಗಿದ ಮೇಲೆ ಏನಾಗುತ್ತದೆ ಎನ್ನುವುದು ಗೊತ್ತು. ಇದೊಂದು ಚುನಾವಣೆ ಗಿಮಿಕ್​. ಇವರು ತಾಕತ್ತಿದ್ದರೆ ಆರ್​ಎಸ್​ಎಸ್ ನ್ನು ನಿಷೇಧಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಅಧಿಕಾರಿಗೆ ರಸ್ತೆ ಮಧ್ಯೆ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.