ETV Bharat / state

ಸಿದ್ದರಾಮಯ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ.. ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತದಲ್ಲಿ ಕರ್ನಾಟಕ ಮಾದರಿ ಮಂತ್ರ

author img

By ETV Bharat Karnataka Team

Published : Aug 26, 2023, 4:42 PM IST

ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದು ಇಂದಿಗೆ ನೂರು ದಿನಗಳು ಪೂರೈಸಿದೆ.

ಸಿದ್ದರಾಮಯ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ
ಸಿದ್ದರಾಮಯ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ

ಬೆಂಗಳೂರು: ಪ್ರಚಂಡ ಬಹುಮತದೊಂದಿಗೆ ಅಧಿಕಾರ ಹಿಡಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಶತ ದಿನಗಳ ಸಂಭ್ರಮ. ನೂರು ದಿನಗಳಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ ಕೇಂದ್ರೀಕರಿಸಿ ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಾದರಿ ಅಭಿವೃದ್ಧಿ ಆಡಳಿತ ನೀಡಲು ಕಸರತ್ತು ನಡೆಸುತ್ತಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದು ನೂರು ದಿನಗಳನ್ನು ಪೂರೈಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಬಹುಮತ ಗಳಿಸಿ ಕರುನಾಡ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಶತದಿನ ಪೂರೈಸುವ ಸಂಭ್ರಮದಲ್ಲಿದೆ. ನೂರು ದಿನಗಳ ತನ್ನ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಹಲವು ವಿವಾದ, ಆರೋಪ, ಸವಾಲುಗಳನ್ನು ಎದುರಿಸಬೇಕಾಯಿತು. ಈ ಮಧ್ಯೆ ಶತದಿನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ತಮ್ಮ ಚುನವಾಣಾ ಭರವಸೆಯ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ನೂರು ದಿನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಟೇಕಾಫ್ ಪ್ರಕ್ರಿಯೆಯಲ್ಲಿದ್ದು, ತಮ್ಮ ಆಡಳಿತ ವೈಖರಿ ಹೇಗಿರಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ. ಆಡಳಿತಕ್ಕೆ ಹೊಸ ರೂಪ ನೀಡಿ, ಸಾಮಾಜಿಕ ನ್ಯಾಯ, ಕೋಮು ಸೌಹಾರ್ದತೆಗೆ ಪೂರಕ ವಾತಾವರಣ ಸೃಷ್ಟಿಸಿ ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ನಿಲುವು ತಳೆಯುವ ಮೂಲಕ ನಮ್ಮ ಸರ್ಕಾರ ಯಾವುದೇ ಕೋಮು ದ್ವೇಷಗಳಿಗೆ ಆಸ್ಪದ ನೀಡಲ್ಲ ಎಂಬ ಸಂದೇಶ ನೀಡಿದೆ. ನೂರು ದಿನಗಳಲ್ಲಿ ಆಡಳಿತದ ಮೇಲೆ ಹಿಡಿತ ಸಾಧಿಸುವ ಪ್ರಕ್ರಿಯೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರ ಕರ್ನಾಟಕ ಮಾದರಿ ಅಭಿವೃದ್ಧಿಯ ಆಡಳಿತವೆಂಬ ಪರಿಕಲ್ಪನೆಯೊಂದಿಗೆ ಹೆಜ್ಜೆ ಇಡುತ್ತಿದೆ. ನೂರು ದಿನಗಳ ಕಾಂಗ್ರೆಸ್ ಸರ್ಕಾರ ಬಹುತೇಕ ಆಡಳಿತ ಪರಿವರ್ತನೆಯ ಹಂತದಲ್ಲಿದೆ.

ಎಐಸಿಸಿ ಅಧ್ಯಕ್ಷರ ಜೊತೆ ಸಿಎಂ, ಡಿಸಿಎಂ
ಎಐಸಿಸಿ ಅಧ್ಯಕ್ಷರ ಜೊತೆ ಸಿಎಂ, ಡಿಸಿಎಂ

ಪಂಚ ಗ್ಯಾರಂಟಿಗಳಿಗೆ ಕೇಂದ್ರೀಕೃತ ಆಡಳಿತ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಬಹುತೇಕ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದೆ. ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮಿ ಹಾಗೂ ಯುವನಿಧಿ ಯೋಜನೆ ಜಾರಿಗೆ ಸರ್ಕಾರ ಹೆಚ್ಚು ಕಸರತ್ತು ನಡೆಸಿದೆ.‌

ನೂರು ದಿನಗಳಲ್ಲಿ ತಮ್ಮ ಪ್ರಮುಖ ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕಸರತ್ತು ನಡೆಸಿದೆ. ವಾರ್ಷಿಕ 50 ಸಾವಿರ ಕೋಟಿ ರೂ. ತಗಲುವ ಈ ಪಂಚ ಗ್ಯಾರಂಟಿಗಳಿಗೆ ಆದಾಯ ಸಂಗ್ರಹದ ಗುರಿ, ಪರ್ಯಾಯ ಆದಾಯ ಸಂಗ್ರಹದ ಮಾರ್ಗೋಪಾಯಗಳತ್ತ ಹೆಚ್ಚಿನ ಒತ್ತು ನೀಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಇಲಾಖೆಗಳಿಗೆ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡಿದೆ. ಶಕ್ತಿ ಯೋಜನೆ, ಅನ್ನ ಭಾಗ್ಯದಡಿ ನಗದು ವರ್ಗಾವಣೆ, ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿದ್ದರೆ, ಇತ್ತ ಗೃಹ ಲಕ್ಷ್ಮಿ ಯೋಜನೆ ಜಾರಿಯ ಹಂತದಲ್ಲಿದೆ. ಈ ಗ್ಯಾರಂಟಿಗಳು ಯಾವುದೇ ಗೊಂದಲ ಇಲ್ಲದೇ ಅನುಷ್ಠಾ‌ನಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒತ್ತು ಕೊಟ್ಟಿದೆ.

ಸಾರ್ವತ್ರಿಕ ವರ್ಗಾವಣೆ ಮೂಲಕ ಸರ್ಜರಿ: ಇನ್ನು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ತಕ್ಷಣ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡುವ ಮೂಲಕ ಆಡಳಿತಕ್ಕೆ ಸರ್ಜರಿ ನೀಡುವ ಕೆಲಸ ಮಾಡಿದೆ. ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ಮಾಡಿ ಆಡಳಿತಕ್ಕೆ ಹೆಚ್ಚಿನ ವೇಗ ನೀಡುವ ಕಸರತ್ತು ನಡೆಸಿದೆ. ಆದರೆ ವರ್ಗಾವಣೆಯಲ್ಲೂ ಲಂಚದ ಆರೋಪ ಕೇಳಿ ಬಂದಿರುವುದು ಕಾಂಗ್ರೆಸ್​ಗೆ ಇರುಸು ಮುರುಸು ಮಾಡಿದೆ. ಮತ್ತೊಂದೆಡೆ ಕಡತ ವಿಲೇವಾರಿ ನಿರೀಕ್ಷಿತ ವೇಗ ಕಳೆದುಕೊಂಡಿದ್ದು, ಆಡಳಿತಕ್ಕೆ ಚುರುಕು ಮೂಡಿಸುವ ಕೆಲಸ ಪ್ರಗತಿಯಲ್ಲಿದೆ.

ಅನುದಾನ ಹೊಂದಾಣಿಕೆಗೆ ಕಸರತ್ತು: ಕಾಂಗ್ರೆಸ್ ಸರ್ಕಾರ ತನ್ನ ಶತ ದಿನಗಳ ಆಡಳಿತದಲ್ಲಿ ಅನುದಾನ ಹೊಂದಣಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಪಂಚ ಗ್ಯಾರಂಟಿಗಳಿಗೆ ಹೆಚ್ಚಿನ ಹಣದ ಅಗತ್ಯತೆ ಇದ್ದು, ಅದಕ್ಕಾಗಿ ಆದಾಯ ಸಂಗ್ರಹದ ವಿವಿಧ ಮಾರ್ಗೋಪಾಯಗಳಿಗೆ ಹೆಚ್ಚಿನ ಒತ್ತು ನೀಡಿದೆ. ಗ್ಯಾರಂಟಿ ಯೋಜನೆಗಳ ಮಧ್ಯೆ ಅಭಿವೃದ್ಧಿ ಕುಂಠಿತವಾಗದಂತೆ ಸಮತೋಲನ ಕಾಪಾಡಲು ಯತ್ನಿಸುತ್ತಿದೆ. ಇತರ ಇಲಾಖೆಗಳಿಗೆ ಬಜೆಟ್​ನಲ್ಲಿ ನೀಡಿದ ಅನುದಾನವನ್ನು ಪೂರೈಸುವ ನಿಟ್ಟಿನಲ್ಲಿ ಹಣಕಾಸು ನಿರ್ವಹಣೆಯಲ್ಲಿ ಸಿಎಂ ಸಿದ್ದರಾಮಯ್ಯ ಕಸರತ್ತು ನಡೆಸುತ್ತಿದ್ದಾರೆ. ಇತರೆ ಇಲಾಖೆಗಳ ಯೋಜನೆಗಳಿಗೂ ಯಾವುದೇ ಅನುದಾನ ಕೊರತೆ ಆಗದಂತೆ ಜಾಗ್ರತೆ ವಹಿಸುತ್ತಿದ್ದು, ಹಣಕಾಸು ಹೊಂದಾಣಿಕೆಗೆ ಹೆಚ್ಚಿನ ಆದ್ಯತೆ ನೀಡಿದೆ.

ಈ ನಿಟ್ಟಿನಲ್ಲಿ ಕೆಲ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಿದೆ. ಜೊತೆಗೆ ಕರ್ನಾಟಕ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದು, ರಾಜ್ಯಕ್ಕೆ ಹೆಚ್ಚಿನ ಪಾಲು ನೀಡುವಂತೆ ಕೋರಿ ಕೇಂದ್ರ ಹಣಕಾಸು ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ರಾಜ್ಯಕ್ಕೆ ಕೇಂದ್ರದಿಂದ ನ್ಯಾಯಯುತ ತೆರಿಗೆ ಪಾಲು ಬರುವ ನಿಟ್ಟಿನಲ್ಲಿ ಒತ್ತಡ ಹೇರಿದೆ.

ಭ್ರಷ್ಟಾಚಾರ ರಹಿತ ಆಡಳಿತದ ಮಂತ್ರ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೂರು ದಿನಗಳ ತನ್ನ ಆಡಳಿತದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಕಸರತ್ತು ನಡೆಸುತ್ತಿದೆ. ಪಾರದರ್ಶಕ ಮುಕ್ತ ಆಡಳಿತ ನೀಡುತ್ತೇವೆ ಎಂದಿರುವ ಕಾಂಗ್ರೆಸ್ ಸರ್ಕಾರ ಈ ಹಿಂದೆ ನಡೆದಿರುವ ವಿವಿಧ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಆದೇಶಗಳನ್ನು ಹೊರಡಿಸಿದೆ. ತಪ್ಪಿತಸ್ಥರ ವಿರುದ್ಧ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ದೃಢ ನಿಲುವು ತಾಳಿದೆ ಎಂದು ಸ್ಪಷ್ಟ ಸಂದೇಶ ರವಾನಿಸಲು ಯತ್ನಿಸಿದೆ.

ಬ್ರಾಂಡ್ ಬೆಂಗಳೂರಿನತ್ತ ಹೆಜ್ಜೆ: 'ಬ್ರ್ಯಾಂಡ್ ಬೆಂಗಳೂರು' ಪರಿಕಲ್ಪನೆಯಡಿ ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಕಾಂಗ್ರೆಸ್ ಸರ್ಕಾರ ಆರಂಭಿಕ ಹೆಜ್ಜೆ ಇಟ್ಟಿದೆ.‌ ಈಗಾಗಲೇ ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕಾಗಿ ಪರಿಣಿತರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ತಜ್ಞರ ಜೊತೆ ಸಭೆ ನಡೆಸಿ ಸಲಹೆ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ ವ್ಯವಸ್ಥೆ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯಾರಂಭಿಸಿದೆ.

ಬಡವರ ಪರ ಯೋಜನೆ ಮರುಜಾರಿ: ಸಿದ್ದರಾಮಯ್ಯ ಸರ್ಕಾರ ಬಡವರ ಪರ ತಮ್ಮ ಹಿಂದಿನ ಅವಧಿಯಲ್ಲಿನ ಯೋಜನೆಗಳನ್ನು ಮರು ಜಾರಿಗೆ ನಿರ್ಧರಿಸಿದೆ. ಆ ಮೂಲಕ ನಮ್ಮ ಸರ್ಕಾರ ಬಡವರ ಪರ ಎಂಬ ಸಂದೇಶ ರವಾನಿಸಿದೆ. ಇದರ ಮೊದಲ ಹಂತವಾಗಿ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್‍ಗಳನ್ನು ಮರು ಪ್ರಾರಂಭ ಮಾಡಿದೆ. ಜೊತೆಗೆ ಹೆಚ್ಚುವರಿ ಕ್ಯಾಂಟೀನ್ ಸ್ಥಾಪನೆಗೆ ತೀರ್ಮಾನಿಸಿದೆ. ಇದಕ್ಕಾಗಿ 100 ಕೋಟಿ ರೂ. ಮೀಸಲಿಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮನಗಂಡು ಸರ್ಕಾರ ಪ್ರತಿ ಪ್ಲೇಟ್‍ಗೆ 5 ರಿಂದ 10 ರೂ. ಗಳಷ್ಟು ಹೆಚ್ಚುವರಿ ಮೊತ್ತ ನೀಡಿ, ಜನರಿಗೆ ಹಿಂದಿನ ದರದಲ್ಲಿಯೇ ಉತ್ತಮ ಆಹಾರವನ್ನು ಒದಗಿಸಲು ತೀರ್ಮಾನಿಸಿದೆ.

ಫೇಕ್ ನ್ಯೂಸ್, ನೈತಿಕ ಪೊಲೀಸ್ ಗಿರಿಗೆ ಅಂಕುಶ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲೇ ಸಿದ್ದರಾಮಯ್ಯ ಸರ್ಕಾರ ಕೆಲ ಉಪಕ್ರಮಗಳನ್ನು ಕೈಗೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡುವ, ಸಾಮರಸ್ಯ ಕದಡುವ ಯತ್ನ ಮತ್ತು ‘ಮತೀಯ ಗೂಂಡಾಗಿರಿ ಅಥವಾ ನೈತಿಕ ಪೊಲೀಸ್ ಗಿರಿ ನಿಯಂತ್ರಿಸಲು ಪ್ರತ್ಯೇಕ ವಿಂಗ್​ನ್ನು ಆರಂಭಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್​ಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಕಾನೂನು ತರಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ನಿಯಮ ರೂಪಿಸಲು ಮುಂದಾಗಿದೆ‌. ಅದಕ್ಕಾಗಿ ಈಗಾಗಲೇ ಸಿದ್ಧತೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.