ETV Bharat / state

ವಿಜಯೇಂದ್ರ ನೀಡಿದ್ದ ಗಡುವಿಗೆ ಕಾಂಗ್ರೆಸ್​ ಸರ್ಕಾರ ಹೆದರಿ ಹಿಂದು ಕಾರ್ಯಕರ್ತನ ಬಿಡುಗಡೆ: ಪಿ ರಾಜೀವ್

author img

By ETV Bharat Karnataka Team

Published : Jan 6, 2024, 6:29 PM IST

ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣದಲ್ಲಿ ಬಿ ವೈ ವಿಜಯೇಂದ್ರ ಕೊಟ್ಟಿದ್ದ ಗಡುವಿಗೆ ಕಾಂಗ್ರೆಸ್​ ಸರ್ಕಾರ ಹೆದರಿದೆ ಎಂದು ಬಿಜೆಪಿ ಮುಖಂಡ ಪಿ ರಾಜೀವ್ ತಿಳಿಸಿದ್ದಾರೆ.

P Rajeev spoke to the media.
ಬಿಜೆಪಿ ಮುಖಂಡ ಪಿ ರಾಜೀವ್ ಮಾಧ್ಯಮದವರ ಜೊತೆ ಮಾತನಾಡಿದರು.

ಬಿಜೆಪಿ ಮುಖಂಡ ಪಿ ರಾಜೀವ್ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನೀಡಿದ್ದ ಗಡುವಿಗೆ ರಾಜ್ಯ ಕಾಂಗ್ರೆಸ್​ ಸರ್ಕಾರ ನಡುಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿಯನ್ನು 48 ಗಂಟೆಗಳಲ್ಲಿ ಬಿಡುಗಡೆ ಮಾಡಬೇಕು. ಇಲ್ಲದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ, ಅಂತ ಗಡುವು ಕೊಟ್ಟಿದ್ದರು. ರಾಜ್ಯಾಧ್ಯಕ್ಷರು ಕೊಟ್ಟಿದ್ದ ಗಡುವಿಗೆ ಸರ್ಕಾರ ಹೆದರಿ, ಶ್ರೀಕಾಂತ್ ಪೂಜಾರಿ ಬಿಡುಗಡೆಗೆ ಏನೆಲ್ಲ ಮಾಡಬೇಕೋ ಅದನ್ನು ಮಾಡಿದೆ. ಪ್ರಾಸಿಕ್ಯೂಷನ್​​ಗೆ ಬಲವಾಗಿ ವಾದ ಮಂಡಿಸದಂತೆ, ಬಲವಾದ ಆಕ್ಷೇಪಣೆ ಸಲ್ಲಿಸದಂತೆ ಸರ್ಕಾರ ಸೂಚನೆ ಕೊಟ್ಟಿತು ಎಂದು ಆರೋಪಿಸಿದರು.

ಶ್ರೀಕಾಂತ್ ಬಿಡುಗಡೆ ಆಗದಿದ್ರೆ ಹೋರಾಟ ತೀವ್ರಗೊಳಿಸುವ ಬಗ್ಗೆ ಸರ್ಕಾರಕ್ಕೆ ಭಯ ಇತ್ತು. ಸರ್ಕಾರವನ್ನು ಎಚ್ಚರಿಸಿದ್ದು ವಿಜಯೇಂದ್ರ. ಇಂಥ ಹುಚ್ಚಾಟದ ನಿರ್ಧಾರವನ್ನು ಸರ್ಕಾರ ಇನ್ಮುಂದೆ‌ ಕೈಗೊಳ್ಳದಿರಲಿ.‌ ಯಾರನ್ನೋ ತುಷ್ಟೀಕರಿಸಲು ಇನ್ನೊಬ್ಬರಿಗೆ ಅನ್ಯಾಯ ಮಾಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶ್ರೀಕಾಂತ್ ಪೂಜಾರಿ ಮಟ್ಕಾ ಏಜೆಂಟ್ ಎಂಬ ಸಚಿವ ಎಂ ಬಿ ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಂ ಬಿ ಪಾಟೀಲ್ ಗೆ ಮಾನವ ಹಕ್ಕುಗಳೇನು ಅಂತ ಅರ್ಥ ಆಗಿಲ್ಲ. ನಾವು ಭಾರತದ ನಾಗರಿಕರು ಅಂತ.‌ ರಾಮಭಕ್ತನೊಬ್ಬನಿಗೆ ಈ ರೀತಿ ದ್ವೇಷ ತೋರಿಸೋದು ಸರಿಯಲ್ಲ. ಮೊದಲು ಎಂ ಬಿ ಪಾಟೀಲ್ ಮಾನವಹಕ್ಕುಗಳ ಬಗ್ಗೆ ತಿಳಿದುಕೊಳ್ಳಲಿ ಎಂದು ರಾಜೀವ್​ ತಿರುಗೇಟು ನೀಡಿದರು.

ಪಾಕ್ ಜಿಂದಾಬಾದ್ ಅನ್ನೋರನ್ನು ಸುಮ್ನೆ ಬಿಡ್ತಾರೆ: ಸಿ.ಟಿ.ರವಿ

ಪಾಕಿಸ್ತಾನ ಧ್ವಜ ಹಾರಿಸಿರೋರನ್ನು, ಪಾಕ್ ಜಿಂದಾಬಾದ್ ಅನ್ನೋರನ್ನು ಸುಮ್ನೆ ಬಿಡ್ತಾರೆ ಎಂದು ಮಾಜಿ ಶಾಸಕ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದತ್ತಪೀಠ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ಚಾರ್ಜ್‌ಶೀಟ್ ಹಾಕಲು ಎಷ್ಟು ದಿನ ಬೇಕು? ಆರು ತಿಂಗಳು. ದತ್ತಪೀಠದಲ್ಲಿ ಭಗವಾಧ್ವಜ ಹಾರಿಸಿದ್ರು ಅಷ್ಟೇ. ಗೋರಿ ಕಿತ್ತಿರ್ಲಿಲ್ಲ ಅಲ್ಲಿ. ಗೋರಿ ಕಿತ್ತಿದ್ರು ಅನ್ನೋದು ಸುಳ್ಳು ಆರೋಪ.

ನಾನೂ ಆವತ್ತು ಸ್ಥಳದಲ್ಲೇ ಇದ್ದೆ. ಧ್ವಜ ಹಾಕಿರೋದನ್ನು ತೆಗೆದಿದ್ರು. ಅದಕ್ಕೆ ಕೇಸ್ ಹಾಕಿದಾರೆ ಅನ್ನೋ ಮಾಹಿತಿ ಇರಲಿಲ್ಲ. ಕೇಸ್ ಹಾಕಿದ್ದು ಗೊತ್ತಾಗಿ ಎಸ್‌ಪಿ ಜತೆ ಮಾತಾಡಿದ್ದೆ. ಭಗವಾಧ್ವಜ ಹಾರಿಸಿದರು ಅಂತ ಕೇಸ್ ಹಾಕಿದ್ರು. ಧ್ವಜ ಹಾಕಿದ್ದು ಅಪರಾಧನಾ?. ಕಾಂಗ್ರೆಸ್ ಗೆದ್ದಾಗ ಬೆಳಗಾವಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದಿದ್ರು, ಎಷ್ಟು ಜನರನ್ನ ಬಂಧಿಸಿದ್ದಾರೆ? ಎಂದು ಪ್ರಶ್ನಿಸಿದರು.

ವಿಕ್ರಂ ಸಿಂಹನ ಜಮೀನಿನಲ್ಲಿ‌ ಕಡಿದ ಮರಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದೆಂಬ ಹೆಚ್ ಡಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಹೆಚ್​ಡಿಕೆ ಈ ಆರೋಪ ಮಾಡುವ ಮುನ್ನ ಅವರ ಬಳಿ ಬಲವಾದ ಆಧಾರ ಇದೆ ಅಂತ ಭಾವಿಸುತ್ತೇನೆ. ಭದ್ರಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿ ನೂರಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಕತ್ತರಿಸಿ ಕೆಲ ರಾಜಕೀಯ ನಾಯಕರ ಮನೆಗಳಿಗೆ, ಅಧಿಕಾರಿಗಳ ಮನೆಗಳಿಗೆ ಸಾಗಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಬೇಲಿಯೇ ಎದ್ದು ಹೊಲ ಮೇಯ್ದಿದೆ, ಅಧಿಕಾರಿಗಳೂ ಶಾಮೀಲು ಆಗಿದ್ದಾರೆ. ಸ್ಥಳೀಯರಿಂದ ಈ ಮಾಹಿತಿ ಬಂದಿದೆ. ಈ ಕೇಸ್ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಶ್ರೀಕಾಂತ್ ಪೂಜಾರಿಗೆ ಬೇಲ್ ಆಗಿರೋದಿಕ್ಕೆ ಅಭಿನಂದನೆ ಹೇಳ್ತೇನೆ. 31 ವರ್ಷಗಳ‌ ನಂತರ ಈ ಪ್ರಕರಣ ಕೆದಕಿದ್ದೇಕೆ. ಇವರೇನೇ ಮಾಡಿದರೂ ಇದು ರಾಮನ ಮೇಲಿನ, ರಾಮಭಕ್ತರ ಮೇಲಿನ ಇವರ ದ್ವೇಷ, ಹತಾಶೆ ತೋರಿಸುತ್ತೆ. ಇದರಲ್ಲಿ ಸರ್ಕಾರದ ದುರುದ್ದೇಶ ಇರೋದು ಸ್ಪಷ್ಟ ಎಂದರು.

ಯಾರೊಬ್ಬರನ್ನೂ ದೂರ ಇಡುವ ಪ್ರಶ್ನೆ ಇಲ್ಲ: ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ- ಮಾಜಿ ಸಚಿವ ವಿ ಸೋಮಣ್ಣ ಭೇಟಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸೋಮಣ್ಣ ಅವರನ್ನು ನಾನೂ ಭೇಟಿ ಮಾಡ್ತೇನೆ. ಸೋಮಣ್ಣ ನಮ್ಮ ಪಕ್ಷದ ಹಿರಿಯರು. ನಮ್ಮ ಪಕ್ಷದ ಎಲ್ಲ ಹಿರಿಯರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆಗೆ ಸಕ್ರಿಯವಾಗಿ ಜೋಡಿಸಿಕೊಳ್ಳುವ ಕೆಲಸ ಮಾಡ್ತೇವೆ. ಒಂದೊಂದು ವೋಟು ಮುಖ್ಯ, ಒಂದೊಂದು ಸೀಟು ಕೂಡ ಮುಖ್ಯ. ಯಾರೊಬ್ಬರನ್ನೂ ದೂರ ಇಡುವ ಪ್ರಶ್ನೆ ಇಲ್ಲ. ಸೋಮಣ್ಣ ಅವರಿಗೂ ರಾಜಕೀಯವಾಗಿ ಅವರದ್ದೇ ಆದ ಶಕ್ತಿ ಇದೆ.‌ ಯತ್ನಾಳ್, ಲಿಂಬಾವಳಿ ಎಲ್ಲರನ್ನೂ ಜೋಡಿಸಿಕೊಳ್ತೇವೆ. ಇದರ ಬಗ್ಗೆ ರಾಜ್ಯಾಧ್ಯಕ್ಷರ ಜತೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ಎಲ್ಲರನ್ನೂ ಗೌರವಯುತವಾಗಿ ಜೋಡಿಸಿಕೊಂಡು ಕೆಲಸ ಮಾಡ್ತೇವೆ ಎಂದು ಸಿ ಟಿ ರವಿ ಸ್ಪಷ್ಟನೆ ನೀಡಿದರು.

ಇದನ್ನೂಓದಿ:1992ರ ಪ್ರಕರಣ: ಶ್ರೀಕಾಂತ್ ಪೂಜಾರಿ ಜೈಲಿನಿಂದ ಬಿಡುಗಡೆ, ಬಿಜೆಪಿ ಮುಖಂಡರಿಂದ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.