ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ; ಡಿಕೆಶಿ ಸೇರಿ ರಾಜ್ಯ ನಾಯಕರಿಗೆ ಕೈ ಅಭ್ಯರ್ಥಿಗಳ ರಕ್ಷಣೆ ಹೊಣೆ

author img

By ETV Bharat Karnataka Desk

Published : Dec 2, 2023, 9:51 PM IST

Updated : Dec 3, 2023, 6:58 AM IST

congress-gave-responsibility-to-dk-shivakumar-to-protect-candidates

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ತೆಲಂಗಾಣದಲ್ಲಿ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿರುವ ಕಾಂಗ್ರೆಸ್​ ತಮ್ಮ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ತಂತ್ರ ರೂಪಿಸಿದೆ.

ಬೆಂಗಳೂರು: ಇಂದು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಎಕ್ಸಿಟ್ ಪೋಲ್‌ನಲ್ಲಿ ಛತ್ತೀಸ್​​ಗಢ, ರಾಜಸ್ತಾನ, ತೆಲಂಗಾಣ ಹಾಗೂ ಮಧ್ಯಪ್ರದೇಶದಲ್ಲಿ ಅತಂತ್ರ ಫಲಿತಾಂಶದ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಎಐಸಿಸಿ ಅಲರ್ಟ್ ಆಗಿದ್ದು, ತಮ್ಮ ಅಭ್ಯರ್ಥಿಗಳನ್ನು ಇತರ ಪಕ್ಷಗಳು ಸೆಳೆಯದಂತೆ ತಂತ್ರಗಾರಿಕೆ ಹೆಣೆದಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಹೆಗಲಿಗೆ ಕಾಂಗ್ರೆಸ್ ಅಭ್ಯರ್ಥಿಗಳ ರಕ್ಷಣೆಯ ಹೊಣೆಗಾರಿಕೆ ನೀಡಲಾಗಿದೆ.

ಮತಗಟ್ಟೆ ಸಮೀಕ್ಷೆ ಪ್ರಕಾರ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್​​ಗೆ ಮುನ್ನಡೆ ತೋರಿಸಿದ್ದು, ಇನ್ನು ಕೆಲವು ಸಮೀಕ್ಷೆಗಳು ಅತಂತ್ರ ಫಲಿತಾಂಶದ ಭವಿಷ್ಯ ನುಡಿದಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಆರ್​​ಎಸ್ ಪಕ್ಷಗಳು ಈಗಾಗಲೇ ರಾಜಕೀಯ ಲೆಕ್ಕಾಚಾರ ಆರಂಭಿಸಿದೆ. ಇತ್ತ ಒಂದು ಹೆಜ್ಜೆ ಮುಂದಡಿ ಇಟ್ಟಿರುವ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳಿಗೆ ಕಟ್ಟೆಚ್ಚರದಲ್ಲಿ ಇರುವಂತೆ ಹೇಳಿದೆ. ಜೊತೆಗೆ ಅಭ್ಯರ್ಥಿಗಳ ಮೇಲೆ ಹದ್ದಿನ‌ ಕಣ್ಣಿಟ್ಟಿದೆ.

ಅತಂತ್ರ ಫಲಿತಾಂಶದ ಬಗ್ಗೆ ಸಮೀಕ್ಷೆ ವರದಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಮ್ಮ ವಿಜೇತ ಶಾಸಕರ ರಕ್ಷಣೆಗೆ ಮುಂದಾಗಿದೆ. ಇತ್ತ ಮತಗಟ್ಟೆ ಸಮೀಕ್ಷೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್​​ಗೆ ಮುನ್ನಡೆ ತೋರಿಸಿದ್ದರೂ ಸಹ, ಕಾಂಗ್ರೆಸ್​​ ಎಚ್ಚರಿಕೆ ವಹಿಸಿದೆ. ಹೀಗಾಗಿ ಎಐಸಿಸಿ ತಮ್ಮ ವಿಜೇತ ಶಾಸಕರ ರಕ್ಷಣೆಗಾಗಿ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್​​ಗೆ ಶಾಸಕರ ರಕ್ಷಣೆಗೆ ಸಿದ್ದವಾಗಿರಲು ಸೂಚನೆ ನೀಡಿದೆ.

ಡಿಕೆಶಿ, ಜಮೀರ್, ನಾಗೇಂದ್ರಗೆ ಟಾಸ್ಕ್: ಎಐಸಿಸಿ ತೆಲಂಗಾಣದ ವಿಜೇತ ಕೈ ಶಾಸಕರನ್ನು ಸಂಭಾವ್ಯ ಆಪರೇಷನ್​ನಿಂದ ರಕ್ಷಿಸುವ ಟಾಸ್ಕ್​ನ್ನು ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಜಮೀರ್ ಅಹಮದ್ ಖಾನ್, ಬಿ. ನಾಗೇಂದ್ರಗೆ ನೀಡಲಾಗಿದೆ. ಈಗಾಗಲೇ ಜಮೀರ್ ಅಹಮದ್ ಹೈದರಾಬಾದ್​ಗೆ ತೆರಳಿದ್ದು, ಸಮುದಾಯದ ನಾಯಕರ ಜೊತೆ ಸಭೆ ನಡೆಸಿದ್ದಾರೆ.

ಇತ್ತ ಡಿಸಿಎಂ ಡಿ ಕೆ ಶಿವಕುಮಾರ್ ಕೂಡ ರಾತ್ರಿ 10 ಗಂಟೆ ಸುಮಾರಿಗೆ ಹೈದರಾಬಾದ್​ಗೆ ತೆರಳಿದ್ದಾರೆ. ''ಜನ ನಮಗೆ ಆಶೀರ್ವಾದ ಮಾಡುವ ನಂಬಿಕೆ ಇದೆ. ನಮಗೆ ಯಾವ ಆಪರೇಷನ್ ಭೀತಿಯೂ ಇಲ್ಲ ಯಾವುದೂ ಇಲ್ಲ. ನಾಳೆ 12 ಗಂಟೆ ವೇಳೆಗೆ ಏನಾಗಬಹುದು ಎಂದು ನೋಡೋಣ'' ಎಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಕೆಶಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಮಾತನಾಡಿದ್ದ ಅವರು, ''ನಮ್ಮ ಅಭ್ಯರ್ಥಿಗಳು ಮಾಹಿತಿ ನೀಡಿದ್ದು, ಯಾರ್ಯಾರು ಸಂಪರ್ಕ ಮಾಡ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿದ್ದಾರೆ. ನಾವು ಕೂಡ ಜಾಗೃತಿಯಿಂದ ಇದ್ದೇವೆ'' ಎಂದಿದ್ದರು.

ಇದನ್ನೂ ಓದಿ: ಹೈದರಾಬಾದ್​ಗೆ ಹೋಗುತ್ತೇನೆ, ಪಾರ್ಟಿ ಕೆಲಸ ಏನಿದೆಯೋ ಅದನ್ನು ಮಾಡುತ್ತೇನೆ: ಡಿಸಿಎಂ ಡಿ ಕೆ ಶಿವಕುಮಾರ್​

ರೆಸಾರ್ಟ್​ಗೆ ಕೈ ಅಭ್ಯರ್ಥಿಗಳು?: ಆಪರೇಷನ್​ಗೆ ಕೌಂಟರ್ ತಂತ್ರ ರೂಪಿಸುತ್ತಿದ್ದು, ಅಗತ್ಯಬಿದ್ದರೆ ಕೈ ಅಭ್ಯರ್ಥಿಗಳನ್ನು ಬೆಂಗಳೂರಿನ ರೆಸಾರ್ಟ್​ಗೆ ಕರೆತರಲು ಕಾಂಗ್ರೆಸ್ ಸಿದ್ಧವಾಗಿದೆ. ಈ ಸಂಬಂಧ ಡಿಕೆಶಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶದಲ್ಲಿ ಅತಂತ್ರ ಅಥವಾ ಕಾಂಗ್ರೆಸ್ ಅಲ್ಪ ಮುನ್ನಡೆ ಪಡೆದರೆ ವಿಜೇತ ಕೈ ಶಾಸಕರನ್ನು ಆಪರೇಷನ್​ನಿಂದ ಪಾರು ಮಾಡಲು ಬೆಂಗಳೂರಿನ ಹೊರವಲಯ ರೆಸಾರ್ಟ್​ ಗೆ ಶಿಫ್ಟ್ ಮಾಡಲು ಎಐಸಿಸಿ ಯೋಚಿಸಿದೆ.

ಇತ್ತ ಡಿ.ಕೆ. ಶಿವಕುಮಾರ್ ತಮ್ಮ ಶಾಸಕರನ್ನು ಆಪರೇಷನ್​ನಿಂದ ರಕ್ಷಿಸುವ ಅನುಭವ ಹೊಂದಿದ್ದು, ಟ್ರಬಲ್ ಶೂಟರ್ ಆಗಿ ಹೊರ ಹೊಮ್ಮುವಲ್ಲಿ ಸಫಲರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿಯೂ ಡಿಕೆಶಿಯವರನ್ನೇ ನೆಚ್ಚಿಕೊಂಡಿದೆ. ಈಗಾಗಲೇ ಡಿಕೆಶಿ ಬೆಂಗಳೂರು ಹೊರ ವಲಯದ ಕೆಲ ರೆಸಾರ್ಟ್​​ಗಳನ್ನು ಸಂಪರ್ಕಿಸಿದ್ದು, ಕೈ ಶಾಸಕರನ್ನು ಸೇಫ್ ಆಗಿ ಇರಿಸಲು ತಂತ್ರಗಾರಿಕೆ ನಡೆಸಿದ್ದಾರೆ. ನಾಳಿನ ಫಲಿತಾಂಶ ಆಧರಿಸಿ ಹೈಕಮಾಂಡ್ ತನ್ನ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ತರಲಿದೆ.

ಇದನ್ನೂ ಓದಿ: ತೆಲಂಗಾಣ ಚುನಾವಣೋತ್ತರ ಸಮೀಕ್ಷೆ: 'ಕೈ' ಗೆ ಸಿಹಿ​, ಬಿಆರ್​ಎಸ್​ ಹ್ಯಾಟ್ರಿಕ್​ ಕನಸಿಗೆ ಹಿನ್ನಡೆ, ಬಿಜೆಪಿಗೆ ಎಷ್ಟು ಸ್ಥಾನ?

Last Updated :Dec 3, 2023, 6:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.