ETV Bharat / state

ಕಾಂಗ್ರೆಸ್ ಅಧಿಕಾರ ಹಿಡಿದು 2 ತಿಂಗಳಾಗಿಲ್ಲ, ಆಗಲೇ ಸ್ವಪಕ್ಷೀಯರಿಂದ ಅಪಸ್ವರ: ಜಿ.ಟಿ ದೇವೇಗೌಡ ಟೀಕೆ

author img

By

Published : Jul 25, 2023, 6:01 PM IST

Updated : Jul 25, 2023, 11:02 PM IST

ಕೇವಲ 19 ಶಾಸಕರು ಇರುವ ನಾವು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಯಾವುದೇ ಉದ್ದೇಶ ನಮಗಿಲ್ಲ. ಜೆಡಿಎಸ್ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬರುತ್ತೇವೆ ಎಂದು ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

MLA GT Deve Gowda spoke at the press conference.
ಶಾಸಕ ಜಿ ಟಿ ದೇವೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳು ಮುಗಿದಿಲ್ಲ. ಅಷ್ಟರಲ್ಲಿ ಸ್ವಪಕ್ಷದವರು ಒಳಗೊಳಗೆ ಅಪಸ್ವರ ಎತ್ತಿದ್ದಾರೆ. ಸರ್ಕಾರಕ್ಕೆ ಸ್ವಪಕ್ಷದವರೇ ಸಂಚು ಹೂಡಿ ಒಂದಾಗಿ ಪತನಗೊಂಡರೆ ನಾವೇನು ಮಾಡಲು ಸಾಧ್ಯ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಪ್ರಶ್ನಿಸಿದ್ದಾರೆ.

ಇಲ್ಲಿನ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಮುಖ್ಯಮಂತ್ರಿ ಮಾಡುವುದು ಗೊತ್ತು, ಉರುಳಿಸುವುದು ಗೊತ್ತು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸದೇ ಅವರು ಈ ಮಾತು ಹೇಳಿದರು.

ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ನಮಗಿಲ್ಲ: ಕೇವಲ 19 ಶಾಸಕರನ್ನು ಹೊಂದಿರುವ ನಾವು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಯಾವುದೇ ಉದ್ದೇಶ ನಮಗಿಲ್ಲ. ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಉದ್ದೇಶ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ 4 ರಷ್ಟು ಮೀಸಲಾತಿಯನ್ನು ಹಿಂದಿನ ಸರ್ಕಾರ ರದ್ದುಪಡಿಸಿತ್ತು. ಈ ಮೀಸಲಾತಿಯನ್ನು ಮೊದಲು ಜಾರಿ ಮಾಡುವುದಾಗಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮರುಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಹುತ್ತವನ್ನು ಗೆದ್ದಲು ಹುಳು ಕಟ್ಟುತ್ತದೆ. ಅದರಲ್ಲಿ ಹಾವು ಬಂದು ಸೇರಿಕೊಳ್ಳುತ್ತದೆ ಎಂದು ಆಡಳಿತ ಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಸುಮ್ಮನೆ ಕೂರುವುದಿಲ್ಲ ಎಂದ ಅವರು, ಕಾಂಗ್ರೆಸ್ ಸರ್ಕಾರ ರೈತರಿಗೆ ಯಾವ ಗ್ಯಾರಂಟಿಯನ್ನು ಕೊಟ್ಟಿಲ್ಲ. ಕೃಷಿ, ನೀರಾವರಿ, ಸಹಕಾರ ಇಲಾಖೆಗಳ ಅನುದಾನ ಕಡಿಮೆ ಮಾಡಿದ್ದಾರೆ. ಆದರೆ ಬಜೆಟ್​​ ಗಾತ್ರದ ಸಾಲದ ಪ್ರಮಾಣ ಮಾತ್ರ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ದೇವೇಗೌಡರು ನೀಡಿರುವ ಕೊಡುಗೆಯನ್ನು ಅಲ್ಲಿನ ಜನರು ಮರೆತಿಲ್ಲ. ಶ್ಲಾಘಿಸುತ್ತಿದ್ದಾರೆ. ಜನತಾ ಪಕ್ಷದಿಂದ ಜೆಡಿಎಸ್​ನವರೆಗೂ ಹಂತ ಹಂತವಾಗಿ ನಡೆದ ಏಳು ಬೀಳು, ಪಕ್ಷ ವಿಭಜನೆ, ಅಧಿಕಾರಕ್ಕೆ ಬಂದದ್ದು ಎಲ್ಲವನ್ನೂ ಸೇರಿದಂತೆ ಪಕ್ಷ ನಡೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ಜಿಟಿಡಿ ವಿವರಿಸಿದರು.

ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾವು ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಬಿಚ್ಚು ಮನಸ್ಸಿನಿಂದ ಚರ್ಚಿಸಿದ್ದೇವೆ. ಸ್ವತಂತ್ರವಾಗಿ ಪಕ್ಷ ಕಟ್ಟಬೇಕು ಅಷ್ಟೇ ಎಂದು ದೇವೇಗೌಡರು ಹೇಳಿದ್ದಾರೆ. ಅವರು ಯಾವ ತೀರ್ಮಾನ ತೆಗೆದುಕೊಂಡರೂ ನಾವು ಬದ್ಧ ಎಂದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಜಿಟಿಡಿ ಅಸಮಾಧಾನ: ಎಲ್ಲಾ ರೀತಿಯ ಭಾಗ್ಯ ಕೊಟ್ಟಿದ್ದೀನಿ ಅಂತ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ‌ ಆಗಲ್ಲ ಅಂತ ಹೇಳಿದ್ರು. 2018ರಲ್ಲಿ ಇಷ್ಟೆಲ್ಲಾ ಭಾಗ್ಯ ಕೊಟ್ರು ಅವರು ಸೋಲ್ತಾರೆ. ಕರ್ನಾಟಕವೇ ಭಾರತ ದೇಶ ಅಲ್ಲ. 1975ರ ಬಳಿಕ ಯಾರೂ ರಿಪೀಟ್ ಆಗಿಲ್ಲ. 300 ಲೋಕಸಭಾ ಕ್ಷೇತ್ರದಲ್ಲಿ ತಳವೇ ಸಿಕ್ಕಿಲ್ಲ. ಕರ್ನಾಟಕದಲ್ಲಿ ಬರೀ ಒಂದು ಲೋಕಸಭಾ ಸೀಟು ಗೆದ್ರಿ. ಕಾಂಗ್ರೆಸ್ ನಾಲ್ಕು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಲೋಕಸಭೆಯಲ್ಲಿ ಕಾಂಗ್ರೆಸ್​ ಇರೋದು ಕೇವಲ‌ 50 ಸೀಟು. ಜನತಾದಳ ಎರಡು ಸೀಟು ಪಡೆದ ಬಳಿಕ ಹೋರಾಡಿ ಅಧಿಕಾರಕ್ಕೆ ಬಂತು ಎಂದು ಜಿಟಿಡಿ ಹೇಳಿದರು.

ಇದನ್ನೂಓದಿ : ಸಿಂಗಾಪುರ ಆಪರೇಷನ್ ವಿಚಾರ: ಏಕಾಏಕಿ ಮೌನಕ್ಕೆ ಜಾರಿದ ಡಿಕೆಶಿ, ಸಚಿವರ ವಿರುದ್ಧ ಯಾರೂ ಪತ್ರ ಬರೆದಿಲ್ಲ ಎಂದು ಸ್ಪಷ್ಟನೆ!

Last Updated :Jul 25, 2023, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.