ETV Bharat / state

ಸದನದಲ್ಲಿ ಗದ್ದಲ ಪ್ರಕರಣ: ಮಧ್ಯಂತರ ವರದಿಯಲ್ಲೇನಿದೆ ಗೊತ್ತಾ?

author img

By

Published : Jan 29, 2021, 1:56 PM IST

ವಿಧಾನಪರಿಷತ್​ನ ವಿಶೇಷ ಅಧಿವೇಶನದ ವೇಳೆ ನಡೆದ ಅಹಿತಕರ ಘಟನೆ ಬಗ್ಗೆ ಸದನ ಸಮಿತಿ ಮಧ್ಯಂತರ ವರದಿ ಮಂಡಿಸಿದೆ. ಮರಿತಿಬ್ಬೇಗೌಡ ಅಧ್ಯಕ್ಷತೆಯ ಸದನ ಸಮಿತಿ ಒಟ್ಟು 12 ಅಂಶಗಳ ಶಿಫಾರಸಿನ ಮಧ್ಯಂತರ ವರದಿ ನೀಡಿದೆ.

ವಿಧಾನಪರಿಷತ್
ವಿಧಾನಪರಿಷತ್

ಬೆಂಗಳೂರು: 2020 ರ ಡಿ.15 ರಂದು ವಿಧಾನಪರಿಷತ್​ನ ವಿಶೇಷ ಅಧಿವೇಶನದ ವೇಳೆ ನಡೆದ ಅಹಿತಕರ ಘಟನೆ ಬಗ್ಗೆ ಸದನ ಸಮಿತಿ ಮಧ್ಯಂತರ ವರದಿ ಮಂಡಿಸಿದ್ದು, ಸಚಿವರು, ಸದಸ್ಯರು, ಕಾರ್ಯದರ್ಶಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ. ಮರಿತಿಬ್ಬೇಗೌಡ ಅಧ್ಯಕ್ಷತೆಯ ಸದನ ಸಮಿತಿ ಒಟ್ಟು 12 ಅಂಶಗಳ ಶಿಫಾರಸಿನ ಮಧ್ಯಂತರ ವರದಿಯನ್ನು ನೀಡಿದೆ.

ಓದಿ:ಕಲಾಪ ಸಲಹಾ ಸಮಿತಿ‌ ಸಭೆ‌ ಬಹಿಷ್ಕರಿಸಿದ ಕಾಂಗ್ರೆಸ್​

ಸದನ ಸಮಿತಿ ವರದಿ ಶಿಫಾರಸುಗಳು:

  • ಅಂತಿಮ ವರದಿ ಬರುವವರೆಗೂ ವಿಧಾನಪರಿಷತ್ ಕಾರ್ಯದರ್ಶಿ ಸ್ಥಾನದಲ್ಲಿ ಹಾಲಿ ಕಾರ್ಯದರ್ಶಿ ಕರ್ತವ್ಯ ನಿರ್ವಹಿಸದಂತೆ ನಿರ್ಬಂಧ.
  • ರಾಜ್ಯಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇಲಾಖಾ ವಿಚಾರಣೆಗೆ ಒಳಪಡಿಸಲು ವಿಶೇಷ ಮಂಡಳಿಗೆ ಶಿಫಾರಸು ಮಾಡಬೇಕು.
  • ನಿಯಮ ‌ಬಾಹಿರವಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡ ಆಸೀನರಾಗಿದ್ದರು. ಆದರೆ, ಅವರು ಮೃತರಾಗಿರುವ ಕಾರಣ ಅವರ ಮೇಲಿನ ವಿಚಾರಣೆ ಕೈಬಿಡಬೇಕು.
  • ಉಪಸಭಾಪತಿಯವರಿಗೆ ನಿಯಮ ಬಾಹಿರವಾಗಿ ಸಭಾಪತಿ ಪೀಠ ಅಲಂಕಾರಕ್ಕೆ ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಡಿಸಿಎಂ ಅಶ್ವತ್ಥನಾರಾಯಣ್ ಪ್ರಚೋದನೆ ನೀಡಿರುವುದನ್ನು ಸಮಿತಿ ಖಂಡಿಸುತ್ತದೆ. ಇದು ದೃಶ್ಯ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಹಾಗಾಗಿ ಈ ಇಬ್ಬರು ಸರ್ಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುದು ಸೂಕ್ತವಲ್ಲ ಎಂದು ಶಿಫಾರಸು ಮಾಡಲಾಗಿದೆ.
  • ಸಭಾಪತಿಗಳು ಪ್ರವೇಶಿಸುವ ದ್ವಾರ ಮುಚ್ಚಿ ಅವರ ಪ್ರವೇಶಕ್ಕೆ ಅಡ್ಡಿಪಡಿಸಿದ್ದ ಎಂ.ಕೆ. ಪ್ರಾಣೇಶ್, ವೈ.ಎ. ನಾರಾಯಣಸ್ವಾಮಿ, ಅರುಣ್ ಶಹಾಪುರ್ ಅವರನ್ನು ಮುಂದಿನ ಎರಡು ಅಧಿವೇಶದ ಅವಧಿಗೆ ಕಾರ್ಯಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧಿಸಲು ಶಿಫಾರಸು.
  • ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗುವ ಮೊದಲು ಸಭಾಪತಿ ಪೀಠದಲ್ಲಿ ಆಸೀನರಾಗಿದ್ದ ಚಂದ್ರಶೇಖರ್ ಪಾಟೀಲ್​ರನ್ನು ಮುಂದಿನ ಒಂದು ಅಧಿವೇಶನದ ಕಾರ್ಯಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲು ಶಿಫಾರಸು.
  • ಸಭಾಪತಿ ಪ್ರವೇಶ ಮಾಡುವ ದ್ವಾರದ ಚಿಲಕ ಕಾಲಿನಿಂದ ಮುಚ್ಚಿ ಉಪಸಭಾಪತಿ ಎಳೆದಾಡಿದ ನಜೀರ್ ಅಹಮದ್, ಎಂ. ನಾರಾಯಣಸ್ವಾಮಿ, ಶ್ರೀನಿವಾಸ ಮಾನೆ, ಪ್ರಕಾಶ್ ರಾಥೋಡ್ ಅವರನ್ನು ಒಂದು ಅಧಿವೇಶನದ ಅವಧಿಯ ಕಾರ್ಯಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲು ಶಿಫಾರಸು.
  • ಸಭಾಪತಿಯವರನ್ನು ಹೊರಗಿಟ್ಟು ನಿಯಮ‌ ಬಾಹಿರವಾಗಿ ಸಭೆ ನಡೆಸಲು ಮುಂದಾಗಿ, ನಂತರ ಉಪಸಭಾಪತಿಯನ್ನು ಎಳೆದಾಡಿದ ಡಿಸಿಎಂ ಅಶ್ವತ್ಥನಾರಾಯಣ್, ಗೋವಿಂದರಾಜ್, ಕೆ.ಟಿ. ಶ್ರೀಕಂಠೇಗೌಡರನ್ನು ಎರಡು ಅಧಿವೇಶನದ ಕಾರ್ಯಕಲಾಪದಿಂದ‌ ನಿರ್ಬಂಧ ವಿಧಿಸಲು ಶಿಫಾರಸು.
  • ಉಪಸಭಾಪತಿಗಳು ಆಸೀನರಾಗಿದ್ದ ವೇಳೆ ಅರುಣ್ ಶಹಾಪುರ್​ಗೆ ಕೈಸನ್ನೆ ಮಾಡಿ ಪ್ರಚೋದಿಸಿದ್ದಾರೆ. ಕೆಲವೊಂದು ಕಾಗದ ಪತ್ರ ಹಿಡಿದು ಸದನದಲ್ಲಿ ಮಂಡಿಸುತ್ತಿರುವುದು ಕಂಡು ಬಂದಿದೆ. ಹಾಗಾಗಿ ಅವರು ಸರ್ಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯವಹಿಸುವುದು ಸೂಕ್ತವಲ್ಲ ಹಾಗೂ ಮುಂದಿನ ಎರಡು ಅಧಿವೇಶನದ ಕಾರ್ಯಕಲಾಪಗಳಿಗೆ ನಿರ್ಬಂಧ ಮಾಡಲು ಶಿಫಾರಸು.
  • ಆಯನೂರು ಮಂಜುನಾಥ್, ಡಾ. ವೈ. ಎ ನಾರಾಯಣಸ್ವಾಮಿ, ಮಾಧುಸ್ವಾಮಿ ಬರೆದಿರುವ ಪತ್ರವನ್ನು ಸದನ ಸಮಿತಿ ಪರಿಗಣಿಸುವುದಿಲ್ಲ. ಈ ಮೂವರನ್ನೂ ಮುಂದಿನ ಎರಡು ಅಧಿವೇಶನದ ಕಾರ್ಯಕಲಾಪಗಳಿಗೆ ನಿರ್ಬಂಧಿಸಲು ಶಿಫಾರಸು
  • ನಿಯಮ ಬಾಹಿರ ವರ್ತನೆ ತೋರಿದ ಇತರ ಸದಸ್ಯರ ಬಗ್ಗೆ ಪೂರ್ಣ ವಿವರವನ್ನು ಅಂತಿಮ ವರದಿಯಲ್ಲಿ ಸಲ್ಲಿಸಲಿದೆ.
  • ಸದನ ಸಮಿತಿ ರಚನೆ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ, ಪತ್ರ ವ್ಯವಹಾರ ಮಾಡುವ ಸದನ ಮತ್ತು ಪೀಠದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ನಡವಳಿಕೆಯನ್ನು ಸಮಿತಿ ಅಂತಿಮ ವರದಿ ಸಲ್ಲಿಸುವವರೆಗೂ ನಿರ್ಬಂಧಿಸಲು ಸಮಿತಿ ಶಿಫಾರಸು ಮಾಡಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.