ಚುನಾವಣಾ ಅಫಿಡವಿಟ್​​ನಲ್ಲಿ ಅಪೂರ್ಣ ಮಾಹಿತಿ ನೀಡಿದ ಆರೋಪ: ಹೆಚ್​ಡಿಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು

author img

By ETV Bharat Karnataka Desk

Published : Dec 4, 2023, 2:29 PM IST

Updated : Dec 4, 2023, 2:57 PM IST

ಮಾಜಿ ಸಿಎಂ ಹೆಚ್​ಡಿಕೆ

ಚುನಾವಣಾ ಅಫಿಡವಿಟ್​​ನಲ್ಲಿ ಅಪೂರ್ಣ ಮಾಹಿತಿ ನೀಡಿರುವ ಆರೋಪದಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಬೆಂಗಳೂರು: ಚುನಾವಣಾ ಸಂದರ್ಭಗಳಲ್ಲಿ ಸಲ್ಲಿಸಿರುವ ಅಫಿಡವಿಟ್​​ನಲ್ಲಿ ಪೂರ್ಣ ಪ್ರಮಾಣದ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಸಿ.ಎಸ್.ಸಿದ್ಧರಾಜು ಎಂಬವರು ದೂರು ನೀಡಿದ್ದಾರೆ.

ದೂರಿನ ವಿವರ: 2004ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೇತನಗಾನಹಳ್ಳಿಯಲ್ಲಿ 24 ಎಕರೆ ಜಮೀನಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಇತ್ತೀಚಿಗೆ ಮಾಧ್ಯಮಗಳಲ್ಲಿ ಮಾತನಾಡುವಾಗ ವಿವಿಧ ಸರ್ವೇ ನಂಬರ್​​ಗಳಲ್ಲಿ 1,2,3,4 ಎಕರೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ತಮ್ಮ ತಾಯಿಯ ಸಹೋದರಿ ಸಾವಿತ್ರಮ್ಮ ಅವರಿಂದ ದಾನ ಪಡೆದಿರುವುದಾಗಿಯೂ ತಿಳಿಸಿದ್ದಾರೆ. ಹಾಗಾದರೆ ಸಾವಿತ್ರಮ್ಮನವರಿಗೆ ಕುಮಾರಸ್ವಾಮಿ ಬೇನಾಮಿಯಾಗಿದ್ದಾರಾ? ಅಥವಾ ತಾಯಿಯ ಸಹೋದರಿಯ ಆದಾಯದ ಮೂಲ ಯಾವುದು ಎಂದು ಪ್ರಶ್ನಿಸಲಾಗಿದೆ.

2018ರ ಚುನಾವಣೆಯ ಅಫಿಡವಿಟ್​ನಲ್ಲಿ 2008ರಲ್ಲಿ ಜೆ.ಪಿ ನಗರದ ಮನೆಯನ್ನು ಖರೀದಿ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ. ಆದರೆ, 2023ರ ಚುನಾವಣೆಯಲ್ಲಿ ಅದೇ ಮನೆಯನ್ನು 1995ರಲ್ಲಿ ಖರೀದಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅನಿತಾ ಕುಮಾರಸ್ವಾಮಿಯವರು ಕುಪೇಂದ್ರ ರೆಡ್ಡಿಯವರಿಂದ 9 ಕೋಟಿ 50 ಲಕ್ಷ ಸಾಲ ಪಡೆರುವುದಾಗಿ ಹೇಳಿದ್ದಾರೆ. 2018ರ ರಾಮನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ 50 ಲಕ್ಷ ಹಾಗೂ 4 ಕೋಟಿ ರೂ. ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ. 2022ರಲ್ಲಿ ಕುಪೇಂದ್ರ ರೆಡ್ಡಿಯವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಚೆನ್ನಾಂಬಿಕ ಫಿಲ್ಮ್ಸ್ ಸಂಸ್ಥೆಗೆ 4 ಕೋಟಿ ರೂ. ಸಾಲ ಕೊಟ್ಟಿರುವುದಾಗಿ ಘೋಷಿಸಿಕೊಂಡಿರುತ್ತಾರೆ‌ ಎಂದು ದೂರಲಾಗಿದೆ.

ಪೂರ್ಣ ಪ್ರಮಾಣದ ಮಾಹಿತಿ ನೀಡದೇ ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಸಿ.ಎಸ್.ಸಿದ್ಧರಾಜು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳು: ಪತ್ರಿಕಾ ಪ್ರಕಟಣೆ ಹೊರಡಿಸಿದ ಲೋಕಾಯುಕ್ತ

Last Updated :Dec 4, 2023, 2:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.