ETV Bharat / state

ಬಾಕಿ ಬಿಲ್​​ಗೆ ಕಮಿಷನ್ ಆರೋಪ: ಕಾಂಗ್ರೆಸ್ ಹೈ ಕಮಾಂಡ್​ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ ಪಾಲಿಕೆ ಗುತ್ತಿಗೆದಾರರು

author img

By

Published : Aug 9, 2023, 8:48 AM IST

Updated : Aug 9, 2023, 4:51 PM IST

ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘ ಇದೀಗ ಆರೋಪವನ್ನು ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಕೊಂಡೊಯ್ದಿದೆ.

BBMP contractor
ಪಾಲಿಕೆ ಗುತ್ತಿಗೆದಾರರು

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಮಾಡಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘ, ಇದೀಗ ಕಾಂಗ್ರೆಸ್ ವರಿಷ್ಠರಿಗೆ ಆರೋಪದ ಬಗ್ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದೆ. ಕಾಮಗಾರಿ ಬಿಲ್ ವಿಳಂಬದ ಬಗ್ಗೆ ಸರ್ಕಾರದ ವಿರುದ್ಧ ಸಮರ ಸಾರಿದೆ.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಡಿಸಿಎಂ ಡಿಕೆಶಿ ಸೇರಿದಂತೆ ಕೆಲ ಸಚಿವರ ವಿರುದ್ಧ ಕಮಿಷನ್ ಆರೋಪದ ವಿವರಣೆಯೊಂದಿಗೆ ರಾಹುಲ್ ಗಾಂಧಿ, ಪ್ರಿಯಾಂಕ್​ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ಯಾಗ್​ ಮಾಡಿ ಟ್ವೀಟ್ ಮಾಡಿದೆ. ಆ ಮೂಲಕ ಕಾಂಗ್ರೆಸ್ ಹೈ ಕಮಾಂಡ್​ಗೆ ಸರ್ಕಾರದ ವಿರುದ್ಧ ಗಮನ ಸೆಳೆಯಲು ಯತ್ನಿಸಿದೆ.

BBMP contractor tweet
ಕಾಂಗ್ರೆಸ್ ಹೈ ಕಮಾಂಡ್​ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ ಪಾಲಿಕೆ ಗುತ್ತಿಗೆದಾರರು

'Savebbmpcontractors' ಹ್ಯಾಷ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿರುವ ಬಿಬಿಎಂಪಿ ಗುತ್ತಿಗೆದಾರರು, ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರು ಮಾಡಿದ್ದ 40ರಷ್ಟು ಭ್ರಷ್ಟಾಚಾರ ಆರೋಪವನ್ನು ಬಳಸಿ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರವೂ ಅದೇ ಭ್ರಷ್ಟಾಚಾರದ ಹಾದಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಕಾಮಗಾರಿಯ ಬಾಕಿ ಬಿಲ್ ಹಣ ಬಿಡುಗಡೆಗೆ 10-15% ಕಮಿಷನ್​ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಕಾಂಗ್ರೆಸ್ ‌ಪಕ್ಷ ಭ್ರಷ್ಟಾಚಾರ ವಿರುದ್ಧದ ಸಾರ್ವಜನಿಕ ಆಕ್ರೋಶದ ಅಲೆಯ ಮೇಲೆ ಅಧಿಕಾರಕ್ಕೆ ಬಂದಿದೆ. ಆದರೆ, ಪಕ್ಷದ ಕೆಲ ಸದಸ್ಯರು ಬಾಕಿ ಬಿಲ್ ಹಣ ಬಿಡುಗಡೆಗೆ ಕಮಿಷನ್ ಕೇಳುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ಸಂಬಂಧ ತಾವುಗಳು ಆದಷ್ಟು ಬೇಗ ಮಧ್ಯಪ್ರವೇಶಿಸಿ ಸಂಕಷ್ಟದಲ್ಲಿರುವ ಗುತ್ತಿಗೆದಾರರ ನೆರವಿಗೆ ಬರಬೇಕು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರರಿಗೆ ನಿಯಮ ಪ್ರಕಾರ ಬಿಲ್ ಪಾವತಿ ಆಗುತ್ತೆ, ಬ್ಲ್ಯಾಕ್ ಮೇಲ್​ಗೆ ಹೆದರಲ್ಲ: ಡಿಸಿಎಂ ಡಿ ಕೆ ಶಿವಕುಮಾರ್​

ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 28 ತಿಂಗಳ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಇರುತ್ತದೆ. ಚುನಾವಣೆ, ಹೊಸ ಸರ್ಕಾರ ರಚನೆ ಹೀಗೆ 8 ತಿಂಗಳಿನಿಂದ ಬಾಕಿ ಮೊತ್ತ ಬಿಡುಗಡೆ ಆಗಿರುವುದಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು.

ಪರಿಸ್ಥಿತಿ ಹೀಗೆ ಮುಂದುವರೆದರೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂಬ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಸಕಾಲದಲ್ಲಿ ಬಿಲ್‌ ಪಾವತಿಯಾಗದೇ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೆಲವರು ದಯಾಮರಣ ಕೋರಿ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಬಿಲ್‌ ಪಾವತಿಸಲು ಒತ್ತಾಯಿಸಿದರೆ ತನಿಖೆ ಕೈಗೊಳ್ಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ರಾಜ್ಯ ಗುತ್ತಿಗೆದಾರರ ಸಂಘ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಅದು ರಾಜಕೀಯವಾಗಿ ದೊಡ್ಡ ಸದ್ದು ಮಾಡಿತ್ತು. ಅದರಿಂದ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿತ್ತು.

ಇದನ್ನೂ ಓದಿ: ಸಿಎಂ ಭೇಟಿ ಮಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘ: ಬಾಕಿ ಬಿಲ್ ಬಿಡುಗಡೆಗೆ ಮನವಿ

Last Updated :Aug 9, 2023, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.