ETV Bharat / state

ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ- ಅಮಿತ್‌ ಶಾ ಭೇಟಿ: ಅಕ್ಕಿ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಚರ್ಚೆ

author img

By

Published : Jun 21, 2023, 10:57 PM IST

ದೆಹಲಿ ಭೇಟಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ.

cm-siddaramaiah-talks-with-union-home-minister-amit-shah-about-rice-problem
ಅಮಿತ್‌ ಶಾ - ಸಿದ್ದರಾಮಯ್ಯ ಭೇಟಿ: ಅಕ್ಕಿ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಚರ್ಚೆ

ನವದೆಹಲಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಇಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಅನ್ನಭಾಗ್ಯ ಯೋಜನೆ ಹಾಗೂ ಅದರ ಜಾರಿಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಅಕ್ಕಿ ನೀಡುವ ಕುರಿತಾದ ಭರವಸೆ ಈಡೇರಿಸುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಕೋರಿ ಎಫ್​ಸಿಐಗೆ ಜೂನ್ 9ರಂದು ಪತ್ರ ಬರೆಯಲಾಗಿತ್ತು. ಎಫ್​ಸಿಐ ಅವರು ತಮ್ಮಲ್ಲಿ 7 ಲಕ್ಷ ಮೆಟ್ರಿಕ್​ ಟನ್ ಅಕ್ಕಿ ದಾಸ್ತಾನು ಇದ್ದು, ರಾಜ್ಯ ಕೋರಿರುವ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಯಾವುದೇ ತೊಂದರೆಯಿಲ್ಲ ಎಂದು ಜೂನ್ 12ರಂದು ಪತ್ರಮುಖೇನ ತಿಳಿಸಿದ್ದರು. ಎಫ್​ಸಿಐನ ಡೆಪ್ಯೂಟಿ ಮ್ಯಾನೇಜರ್ ಭೇಟಿಯಾಗಿ ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗಿತ್ತು ಎಂದು ಸಿಎಂ ಗೃಹಸಚಿವರಿಗೆ ತಿಳಿಸಿದ್ದಾರೆ.

cm-siddaramaiah-talks-with-union-home-minister-amit-shah
ಸಿದ್ದರಾಮಯ್ಯ- ಅಮಿತ್‌ ಶಾ ಭೇಟಿ

ಆದರೆ ಜೂನ್ 13ರಂದು ಕೇಂದ್ರ ಆಹಾರ ಇಲಾಖೆಯವರು ಎಫ್​ಸಿಐಗೆ ಪತ್ರ ಬರೆದು ರಾಜ್ಯಗಳಿಗೆ ಕೇಂದ್ರದಿಂದ ಅಕ್ಕಿ ಸರಬರಾಜನ್ನು ನಿಲ್ಲಿಸಲಾಗಿದೆ. ಜೂನ್ 14ರಂದು ಎಫ್​ಸಿಐ ಅಧ್ಯಕ್ಷರು ಪತ್ರ ಬರೆದು, ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಮೊದಲು ಅಕ್ಕಿ ನೀಡುವುದಾಗಿ ಒಪ್ಪಿಕೊಂಡು ನಂತರ ನಿರಾಕರಿಸಿರುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅಮಿತ್‌ ಶಾಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಯೋಜನೆ ಜಾರಿಗೆ ನಾವು ಶ್ರಮಿಸುತ್ತಿದ್ದೇವೆ. ಅನ್ನ ಭಾಗ್ಯ ಯೋಜನೆಗೆ ಅಕ್ಕಿಯನ್ನು ಪಡೆಯಲು ಬಗ್ಗೆ ಅನೇಕ ರಾಜ್ಯಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಅವರು ಸಂಪೂರ್ಣ 2.28 ಲಕ್ಷ ಮೆಟ್ರಿಕ್​ ಟನ್ ನೀಡಲು ಸಾಧ್ಯವಿಲ್ಲ. ಆಂಧ್ರಪ್ರದೇಶದವರು 42 ರೂ.ಗಳಿಗೆ ಅಕ್ಕಿ ನೀಡುವುದಾಗಿ ತಿಳಿಸಿದ್ದು, ಸಾರಿಗೆ ವೆಚ್ಚ ಅಧಿಕವಾಗಲಿದೆ. ತೆಲಂಗಾಣದವರು ಭತ್ತ ಮಾತ್ರ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಛತ್ತೀಸ್​​ಘಡದ ಮುಖ್ಯಮಂತ್ರಿಗಳು ಒಂದು ತಿಂಗಳಿಗೆ ಮಾತ್ರ 1 ಲಕ್ಷ ಮೆಟ್ರಿಕ್ ಟನ್ ನೀಡುವುದಾಗಿ ತಿಳಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಅಗತ್ಯ ಪ್ರಮಾಣದ ಅಕ್ಕಿ ನೀಡಲು ಒಪ್ಪಿಕೊಂಡರೆ, ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಅಮಿತ್‌ ಶಾಗೆ ಸಿಎಂ ಸಿದ್ದರಾಮಯ್ಯ ವಿವರಿಸಿದ್ದಾರೆ.

ರಾಷ್ಟ್ರಪತಿ - ಸಿಎಂ ಭೇಟಿ: ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತಲುಪಿರುವ ಸಿದ್ದರಾಮಯ್ಯ, ಗೃಹ ಸಚಿವರ ಭೇಟಿಗೂ ಮುನ್ನ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸೌಹಾರ್ದಯುತ ಭೇಟಿ ಇದಾಗಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳನ್ನು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.

ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ರಾಷ್ಟ್ರಪತಿಯವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲಾಗಿದೆ. ಸಂಜೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲಿದ್ದು, ಪ್ರಾಸಂಗಿಕವಾಗಿ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡುವ ಉದ್ದೇಶವಿದೆ. ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆಯೂ ಪ್ರಸ್ತಾಪ ಮಾಡಲಾಗುವುದು ಎಂದಿದ್ದರು.

ಇದನ್ನೂ ಓದಿ: ಸೌಹಾರ್ದಯುತವಾಗಿ ರಾಷ್ಟ್ರಪತಿ ಭೇಟಿಯಾದ ಸಿದ್ದರಾಮಯ್ಯ.. ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆ ಕೇಂದ್ರಕ್ಕೆ ಸಿಎಂ ಪ್ರಸ್ತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.