ETV Bharat / state

Siddaramaiah: 'ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ ಬ್ರಿಟಿಷ್ ಏಜೆಂಟರ ಬಗ್ಗೆ ಎಚ್ಚರವಿರಲಿ': ಸಿದ್ದರಾಮಯ್ಯ

author img

By

Published : Aug 15, 2023, 4:09 PM IST

Sangolli Rayanna Birth Anniversary: ಪ್ರಜಾಪ್ರಭುತ್ವ ದೇಶ ನಿರ್ಮಿಸಬೇಕು ಎನ್ನುವುದು ಸಂಗೊಳ್ಳಿ ರಾಯಣ್ಣರ ಆಶಯವಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Etv Bharat
Etv Bharat

ಬೆಂಗಳೂರು: "ಸ್ವಾತಂತ್ರ್ಯವೀರ ಸಂಗೊಳ್ಳಿರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟವರು ನಮ್ಮವರೇ. ಈಗಲೂ ಬ್ರಿಟಿಷರ ಏಜೆಂಟರುಗಳು ಇದ್ದಾರೆ. ಅವರು ನಮ್ಮ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಾರೆ. ಇಂಥವರ ಬಗ್ಗೆ ಎಚ್ಚರದಿಂದಿರಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಷ್ಠಾನ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಇಂದು ನಡೆದ ಸಂಗೊಳ್ಳಿ ರಾಯಣ್ಣನ 226ನೇ ಜಯಂತೋತ್ಸವದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

"ಆಗಸ್ಟ್ 15 ದೇಶ ಸ್ವಾತಂತ್ರ್ಯಗೊಂಡ ದಿನ. ಇದೇ ದಿನ ಸಂಗೊಳ್ಳಿರಾಯಣ್ಣನವರ ಜನ್ಮದಿನವೂ ಹೌದು. ಆಗಸ್ಟ್ 15ಕ್ಕೆ ರಾಯಣ್ಣರ ಹುಟ್ಟಿದ ದಿನವಾದರೆ, ಜನವರಿ 26 ಬ್ರಿಟಿಷರು ರಾಯಣ್ಣರನ್ನು ಗಲ್ಲಿಗೇರಿಸಿದ ದಿನ. ಈ ಎರಡೂ ದಿನಗಳೂ ದೇಶದ ಚರಿತ್ರೆಯಲ್ಲಿ ಪ್ರಮುಖವಾಗಿವೆ. ಸರ್ವರಿಗೂ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ, ಧಾರ್ಮಿಕ ಸ್ವಾತಂತ್ರ್ಯ ಸಿಕ್ಕರೆ ಮಾತ್ರ ಸ್ವಾತಂತ್ರ್ಯ ಹೋರಾಟಗಾರರ, ಹುತಾತ್ಮರ ತ್ಯಾಗಕ್ಕೆ ಬೆಲೆ ಸಿಗುತ್ತಿದೆ" ಎಂದರು.

cm-siddaramaiah-speech-in-226th-birth-anniversary-of-sangolli-rayanna-in-bengaluru
ಸಂಗೊಳ್ಳಿ ರಾಯಣ್ಣನವರ 226ನೇ ಜಯಂತ್ಯೋತ್ಸವ ಕಾರ್ಯಕ್ರಮ

"ರಾಯಣ್ಣರ ಹೆಸರಿನಲ್ಲಿ ಸೈನಿಕ ಶಾಲೆ, ಗಲ್ಲಿಗೇರಿಸಿದ ಸ್ಥಳಗಳ ಅಭಿವೃದ್ಧಿಗಾಗಿ 280 ಕೋಟಿ ರೂ ಅನುದಾನವನ್ನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ನೀಡಿ ಚಾಲನೆ ನೀಡಿದ್ದೆ. ಸದ್ಯದಲ್ಲೇ ನಾನೇ ಸೈನಿಕ ಶಾಲೆಯನ್ನು ಉದ್ಘಾಟಿಸುತ್ತೇನೆ" ಎಂದು ತಿಳಿಸಿದರು.

"ಪ್ರಜಾಪ್ರಭುತ್ವ ದೇಶ ನಿರ್ಮಿಸಬೇಕು ಎನ್ನುವುದು ಗೆರಿಲ್ಲಾ ಹೋರಾಟಗಾರ ರಾಯಣ್ಣರ ಆಶಯವಾಗಿತ್ತು. ಪ್ರಜಾಪ್ರಭುತ್ವ ಗಟ್ಟಿಗೊಳಿಸಿಕೊಳ್ಳುವುದು ಎಂದರೆ ನಮ್ಮ ಸಂವಿಧಾನವನ್ನು ಕಾಪಾಡಿಕೊಳ್ಳುವುದೇ ಆಗಿದೆ. ಈಗ ನಮ್ಮ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ದುಷ್ಟ ಶಕ್ತಿಗಳನ್ನು ಬೆಳೆಯಲು ಬಿಡಬಾರದು" ಎಂದು ಕರೆ ಕೊಟ್ಟರು.

ನಂತರ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, "ಈ ದೇಶದಿಂದ ಕೋಮುವಾದಿಗಳನ್ನು ಹೊಡೆದೊಡಿಸುವ ಕಾಲ ಹತ್ತಿರ ಬಂದಿದೆ. ಈ ಬದಲಾವಣೆ ಕರ್ನಾಟಕದಿಂದಲೇ ಆರಂಭಗೊಂಡಿದೆ. ಮತ್ತೊಮ್ಮೆ ಗಾಂಧೀಜಿ ಆಶಯಗಳನ್ನು ಬಿತ್ತೋಣ, ಯುವಕರು ರಾಯಣ್ಣನಂತೆ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.

cm-siddaramaiah-speech-in-226th-birth-anniversary-of-sangolli-rayanna-in-bengaluru
ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

ನಿಡುಮಾಮಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಗೋವಿಂದರಾಜ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಮಹಾಪೌರ ರಾಮಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಇದ್ದರು.

ಇದನ್ನೂ ಓದಿ: ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಡಿಕೆಶಿ ದೇಶದ ಶ್ರೀಮಂತ ಶಾಸಕ.. ರಕ್ಷಣೆ ಕೋರಿ ಸಿಎಂಗೆ ಮನವಿ ಮಾಡ್ತೇನೆ: ಸಿ ಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.