ETV Bharat / state

ಕೇವಲ ಸೂಚನೆ ಕೊಡುವುದಿಲ್ಲ, ಎಚ್ಚರಿಕೆ ಕೊಡ್ತಾ ಇದ್ದೇನೆ: ಡಿಸಿ, ಸಿಇಒಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್​ ವಾರ್ನಿಂಗ್​

author img

By

Published : May 23, 2023, 6:11 PM IST

Updated : May 23, 2023, 8:38 PM IST

ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣದಲ್ಲಿಂದು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು.

cm-siddaramaiah-held-meeting-with-dc-and-ceo
ನಾನು ಕೇವಲ ಸೂಚನೆ ಕೊಡುವುದಿಲ್ಲ, ಎಚ್ಚರಿಕೆ ಕೊಡ್ತಾ ಇದ್ದೇನೆ: ಡಿಸಿ, ಸಿಇಒಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್​ ವಾರ್ನಿಂಗ್​!

ಬೆಂಗಳೂರು: ನಾನು ಕೇವಲ ಸೂಚನೆ ಕೊಡೋದಿಲ್ಲ. ಎಚ್ಚರಿಕೆ ಕೊಡ್ತಾ ಇದ್ದೇನೆ. ಇಲ್ಲವಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಗೃಹ ಕಚೇರಿ ಕೃಷ್ಣದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿಗಳು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ರಾಜ್ಯದ ಕೆಲವು ಭಾಗದಲ್ಲಿ ಮಳೆ ಪ್ರಾರಂಭ, ಬಿತ್ತನೆ ಪ್ರಾರಂಭ. ಜೂನ್​ನಲ್ಲಿ ಮುಂಗಾರು ಪ್ರಾರಂಭವಾಗುತ್ತದೆ. ಏಪ್ರಿಲ್‌ ತಿಂಗಳಿನಲ್ಲಿಯೇ ಪ್ರಿ-ಮಾನ್ಸೂನ್‌ ಮಳೆ ಪ್ರಾರಂಭವಾಗಿದೆ. ಭಾರಿ ಮಳೆ, ಗಾಳಿಯಿಂದ ಮರಗಳು ಬಿದ್ದು ಹೋಗಿವೆ. ಸಿಡಿಲು, ಆಲಿಕಲ್ಲು ಮಳೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅನಾಹುತಗಳಾಗಿವೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನಿಮ್ಮ ಬಳಿ ಅನುದಾನ ಲಭ್ಯವಿದೆ. ಅಗತ್ಯವಿದ್ದರೆ, ಕೇಳಬೇಕು. ಪರಿಹಾರ ಕ್ರಮ ಕೈಗೊಳ್ಳಲು ತೊಂದರೆ ಇಲ್ಲ. ಕೃಷಿ ಅಧಿಕಾರಿಗಳು ಬಿತ್ತನೆ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರ, ಕೀಟನಾಶಕಗಳನ್ನು ಒದಗಿಸಬೇಕು. ಹಾವೇರಿ ಗೋಲಿಬಾರಿನಂತಹ ಘಟನೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.

ಮಳೆ ಬಂದು ಮರಗಳು ಬಿದ್ದುಹೋದರೆ, ಕೂಡಲೇ ತೆರವುಗೊಳಿಸಬೇಕು. ವಿದ್ಯುತ್​ ಕಂಬಗಳು ಬಿದ್ದು ಹೋದರೆ, ಟ್ರಾನ್‌ಫಾರ್ಮರ್‌ ಹಾಳಾಗಿದ್ದರೆ, ಸೇತುವೆಗಳು ಹಾಳಾಗಿದ್ದರೆ, ಶಾಲಾ ಕೊಠಡಿಗಳು ಶಿಥಿಲ ಆಗಿದ್ದರೆ ಈಗಲೇ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕೆ ತೆಗೆದುಕೊಂಡರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಆಗದು. ಫೀಲ್ಡ್‌ ಗೆ ಹೋಗಬೇಕು ಎಂದು ಸಿಎಂ ಹೇಳಿದ್ರು.

ಕುಳಿತಲ್ಲೇ ಕುಳಿತು ಪರಿಣಾಮಕಾರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದು. ಅದಕ್ಕೇ ಮುಂಚಿತವಾಗಿ ಸಭೆ ಕರೆಯಲಾಗಿದೆ. ಯಾವುದೇ ಕಾರಣಕ್ಕೆ ಕರ್ತವ್ಯ ಲೋಪ ಆಗಬಾರದು. ಬೇಜವಾಬ್ದಾರಿತನದಿಂದ ಅನಾಹುತಗಳಾದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ನೆಪ ಹೇಳಿಕೊಂಡು ಪರಿಹಾರ ಕ್ರಮ ವಿಳಂಬ ಮಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೆ ಲೋಪ ಆಗಬಾರದು ಎಂದು ಎಚ್ಚರಿಸಿದರು.

ಲೋಪ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನ ಸರ್ಕಾರದಿಂದ ಬದಲಾವಣೆ ಬಯಸಿದ್ದಾರೆ. ಸರ್ಕಾರಕ್ಕೆ ಹೊಸ ಇಮೇಜ್‌ ಕೊಡಲೇಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರ ಬಂದಿದೆ ಎಂಬ ಸಂದೇಶ ಹೋಗಬೇಕು. ಜಿಲ್ಲಾಧಿಕಾರಿಗಳು, ಸಿಇಒಗಳದ್ದು ಜವಾಬ್ದಾರಿಯುತ ಸ್ಥಾನ. ಜೊತೆಗೆ ಪೊಲೀಸ್‌ ವರಿಷ್ಠಾಧಿಕಾರಿಗಳ ಹೊಣೆಯೂ ಪ್ರಮುಖವಾದದ್ದು. ಕರ್ನಾಟಕದ ಜನತೆ ಬದಲಾವಣೆ ಬಯಸಿದ್ದಾರೆ. ಆಲಸ್ಯ ಬಿಟ್ಟು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಹಳ ಜನ ಜಿಲ್ಲಾಧಿಕಾರಿಗಳು ತಾಲೂಕುಗಳಿಗೆ ಭೇಟಿ ನೀಡಿರುವುದಿಲ್ಲ. ಇನ್ನು ಮುಂದೆ ಇಂತಹುದಕ್ಕೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಮಾಡಬೇಕು. ಕಳೆದ ಕೆಲವು ವರ್ಷಗಳಿಂದ ಪ್ರವಾಹ ನೋಡುತ್ತಾ ಇದ್ದೀರಿ. ಹವಾಮಾನ ಇಲಾಖೆ ಸಂಪರ್ಕ ಮುನ್ಸೂಚನೆ ಅರಿತು ಕೆಲಸ ಮಾಡಿ. ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಪ್ರವಾಹ ಬರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ಬೆಳೆಹಾನಿ ಮಾಹಿತಿ ಇರಬೇಕು. ಅನುದಾನ ಅಗತ್ಯವಿದ್ದಲ್ಲಿ ಮನವಿ ಸಲ್ಲಿಸಿ ಬಿಡುಗಡೆ ಮಾಡಿಸಿಕೊಳ್ಳಬೇಕು ಎಂದು ಸಿಎಂ ಸೂಚಿಸಿದರು.

ಡಿಸಿಎಂ ಡಿಕೆಶಿ ಖಡಕ್ ಸೂಚನೆ: ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ವಿಡಿಯೋ ಸಂವಾದದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಜಿಲ್ಲಾಧಿಕಾರಿಗಳಿಗೆ ವಾರ್ನಿಂಗ್ ನೀಡಿದರು‌. ಹಿಂದಿನ ಸರ್ಕಾರ ಅವಧಿಯಲ್ಲಿ ನಿಮ್ಮ ಕೆಲಸ ವೈಖರಿ ಸರಿ ಇರಲಿಲ್ಲ. ರಾಜ್ಯದ ಜನ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಮಳೆ, ಪ್ರವಾಹದಿಂದ ಸಾಕಷ್ಟು ಬೆಳೆ ನಷ್ಟವಾಗಿದೆ. ಹಲವಾರು ಮಂದಿ ಪ್ರಾಣ ಕಳೆದುಕೊಂಡರು. ಮನೆ ಮಠ ಇಲ್ಲದೇ ನಿರ್ಗತಿಕರಾದರು. ಆದರೆ ನಿಮ್ಮಲ್ಲಿ ಸಾಕಷ್ಟು ಮಂದಿ ಈ ಅನಾಹುತ ಸಂದರ್ಭದಲ್ಲಿ ಸರಿಯಾಗಿ ಸ್ಪಂದಿಸಲಿಲ್ಲ. ಸರ್ಕಾರಕ್ಕೆ ಉತ್ತಮ ಹೆಸರು ತರುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ ಎಂದರು.

ನೀವು ಸರಿಯಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಮ್ಮ ಸರ್ಕಾರ ನಿಮ್ಮಿಂದ ಉತ್ತಮ ಕೆಲಸ ಬಯಸುತ್ತದೆ. ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಸಹಿಸುವುದಿಲ್ಲ. ನಾವು ಕಠಿಣ ಕ್ರಮ ತೆಗೆದುಕೊಳ್ಳಲು ಅವಕಾಶ ಕೊಡಬೇಡಿ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ. ರೈತರಿಗೆ ಅಗತ್ಯ ವಸ್ತುಗಳು ಪೂರೈಕೆ ಆಗುವಂತೆ ನೋಡಿಕೊಳ್ಳಿ. ಸಂಬಂಧ ಪಟ್ಟ ಇಲಾಖೆಗಳಲ್ಲಿ ಶೋಷಣೆ ಆಗದಂತೆ ನೋಡಿಕೊಳ್ಳಿ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಮಾರೋಪಾದಿಯಲ್ಲಿ ಕೆಲಸ ಮಾಡಿ. ಸರಕಾರಕ್ಕೆ ಉತ್ತಮ ಹೆಸರು ಬರುವಂತೆ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.

ಇದನ್ನೂ ಓದಿ:ಶಾಂತಿ ಸುವ್ಯವಸ್ಥೆ ಹದಗೆಟ್ಟರೆ ಪೊಲೀಸ್ ಅಧಿಕಾರಿಗಳೇ ಹೊಣೆ: ಸಿಎಂ, ಡಿಸಿಎಂ ಎಚ್ಚರಿಕೆ

Last Updated : May 23, 2023, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.