ETV Bharat / state

ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

author img

By ETV Bharat Karnataka Team

Published : Nov 25, 2023, 7:44 AM IST

Updated : Nov 25, 2023, 10:55 AM IST

Martyr Captain Pranjal: ಹುತಾತ್ಮ ಕ್ಯಾಪ್ಟನ್​ ಪ್ರಾಂಜಲ್​ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಧನ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

CM Siddaramaiah paid last respects to Captain Pranjal
ಕ್ಯಾಪ್ಟನ್​ ಪ್ರಾಂಜಲ್​ಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಹಾಗೂ ಭಾರತೀಯ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧ ಕ್ಯಾಪ್ಟನ್​ ಪ್ರಾಂಜಲ್​ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಶುಕ್ರವಾರ ರಾತ್ರಿ 9.30ರ ಹೊತ್ತಿಗೆ ಹೆಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಪ್ರಾಂಜಲ್​ ಅವರ ಪಾರ್ಥೀವ ಶರೀರ ಆಗಮಿಸಿದ್ದು, ಈ ವೇಳೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ಹುತಾತ್ಮ ಪ್ರಾಂಜಲ್​ ಅವರಿಗೆ ಅಂತಿಮ ಗೌರವ ನಮನ ಸಲ್ಲಿಸಿದರು.

ನ. 22ರಂದು ರಜೌರಿ ಸೆಕ್ಟರ್‌ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 63ನೇ ರಾಷ್ಟ್ರೀಯ ರೈಫಲ್ಸ್‌ನ 29 ವರ್ಷದ ಕರುನಾಡ ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಹುತಾತ್ಮ ಪ್ರಾಂಜಲ್​ ಅವರಿಗೆ ಅಂತಿಮ ಗೌರವ ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕ್ಯಾಪ್ಟನ್ ಪ್ರಾಂಜಲ್ ಅವರು ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ನಾಗರಿಕರ ಜೊತೆ ಸಮಾಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ಉಗ್ರರಿಂದ ತೀವ್ರವಾದ ದಾಳಿ ನಡೆದಿದೆ. ಈ ವೇಳೆ ಪ್ರಾಂಜಲ್ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಾಗರಿಕರ ರಕ್ಷಣೆ ನಿಂತಿದ್ದು, ಈ ದಾಳಿಯಲ್ಲಿ ಪ್ರಾಂಜಲ್ ಅವರು ತೀವ್ರವಾಗಿ ಗಾಯಗೊಂಡು ಹುತಾತ್ಮರಾದರು ಎಂದು ಸ್ಮರಿಸಿದರು.

  • ಕಾಶ್ಮೀರದಲ್ಲಿ ಹುತಾತ್ಮರಾದ ರಾಜ್ಯದ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ.

    ಪ್ರಾಂಜಲ್ ಅವರ ದೇಶಸೇವೆ, ಸಮರ್ಪಣೆ ಚಿರಸ್ಮರಣೀಯ. ಮನೆಗೆ ಆಧಾರವಾಗಿದ್ದ ಪ್ರಾಂಜಲ್‌ರನ್ನು ಕಳೆದುಕೊಂಡು ಕುಟುಂಬಸ್ಥರು ಸಂಕಷ್ಟದಲ್ಲಿದ್ದಾರೆ, ಅವರ ಕಷ್ಟಕ್ಕೆ ಹೆಗಲಾಗುವ… pic.twitter.com/MlNWvLgBba

    — CM of Karnataka (@CMofKarnataka) November 24, 2023 " class="align-text-top noRightClick twitterSection" data=" ">

ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಹುತಾತ್ಮ ಯೋಧನ ಕುಟುಂಬಕ್ಕೆ ನಮ್ಮ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ರೀತಿಯ ನೆರವೂ ಸಿಗಲಿದೆ. ಇದೀಗ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಗಣ್ಯರಿಂದ ಗೌರವ ನಮನ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಮ್ಮ ದೇಶಕ್ಕೆ ಶೌರ್ಯದಿಂದ ಸೇವೆ ಸಲ್ಲಿಸಿ, ಸಮರ್ಪಣೆ ಮಾಡಿಕೊಂಡ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ನಮನ ಸಲ್ಲಿಸಿದ ನಂತರ ದುಃಖತಪ್ತ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಸಚಿವ ಕೆ.ಜೆ.ಜಾರ್ಜ್ ಅವರು ಕೂಡ ಹುತಾತ್ಮನಿಗೆ ತಮ್ಮ ಅಂತಿಮ ಗೌರವ ಸಲ್ಲಿಸಿ, ಕುಟುಂಬದ ದುಃಖದಲ್ಲಿ ಭಾಗಿಯಾದರು. ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವೀರ ಯೋಧನಿಗೆ ಗೌರವ ನಮನ ಸಲ್ಲಿಸಿದರು. ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ಬನ್ನೇರುಘಟ್ಟದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಉಗ್ರರ ವಿರುದ್ಧದ ಹೋರಾಟದಲ್ಲಿ ಮಂಗಳೂರಿನ ಯೋಧ ಕ್ಯಾ.ಎಂ.ವಿ.ಪ್ರಾಂಜಲ್ ಹುತಾತ್ಮ

ಅಂತಿಮ ದರ್ಶನಕ್ಕೆ ಸಮಯ ನಿಗದಿ: ಕ್ಯಾಪ್ಟನ್ ಎಂವಿ ಪ್ರಾಂಜಲ್ (29) ಅವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನ ಬೆಳಗ್ಗೆ 7ರಿಂದ 10ಗಂಟೆವರೆಗೆ ನಿಗದಿ ಮಾಡಲಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ರಾತ್ರಿಯಿಡೀ ಅವರ ಮನೆಯ ಸಂಪ್ರದಾಯದಂತೆ ವಿಧಿವಿಧಾನಗಳನ್ನು ಆಚರಿಸಿದ್ದು, ಇಂದು ಬೆಳಗ್ಗೆ 7 ರಿಂದ 9.45ವರೆಗೆ ಸಾರ್ವಜನಿಕ ದರ್ಶನಕ್ಕೆ ಯೋಧರ ಕುಟುಂಬ ಅವಕಾಶ ಮಾಡಿಕೊಟ್ಟಿದೆ. 9.45 ರಿಂದ 10.15 ರವರೆಗೆ ಸೈನಿಕ‌ ಕುಟುಂಬಗಳಿಗೆ ಮಾತ್ರ ಅಂತಿಮ‌ ದರ್ಶನಕ್ಕೆ ಸೀಮಿತಗೊಳಿಸಿದೆ. ಅಲ್ಲಿಂದ ರಾಜ್ಯ ಗೃಹ ಸಚಿವರು ಯೋಧರ ಮನೆಗೆ ಆಗಮಿಸಿ ಗೌರವ ಸಲ್ಲಿಸಲಿದ್ದಾರೆ. 10.15ರಿಂದ ರಾಜ್ಯ ಸರ್ಕಾರದಿಂದ ಗೌರವ ರಕ್ಷಣೆ ಸಮರ್ಪಣೆ ಸಲ್ಲಿಸಲಾಗುತ್ತದೆ ಅನಂತರ ಸೈನಿಕ ಗೌರವ ರಕ್ಷಣೆ ಸಮರ್ಪಿಸಲಾಗುತ್ತದೆ. 10.30ರಿಂದ 11.30ರವರೆಗೆ ಕುಟುಂಬ ವಿಧಿವಿಧಾನಗಳಿಗಾಗಿ ಸಮಯ ಮೀಸಲಿಟ್ಟು ಅಲ್ಲಿಯವರೆಗೆ ಬೇರೆ ಯಾರನ್ನೂ ಬಿಡದೆ, ಯೋಧರ ಕುಟುಂಬಕ್ಕೆ ಅವಕಾಶ ಕಲ್ಪಿಸಬೇಕೆಂದು ಸೈನಿಕ‌ ಕುಟುಂಬ ಕೋರಿದೆ.

ಅಂತಿಮ‌ ದರ್ಶನಕ್ಕಾಗಿ ತಾಲೂಕು ಆಡಳಿತ ವಿಶಾಲ ಪೆಂಡಾಲ್, ರಸ್ತೆಗಳ ಬ್ಯಾರಿಕೇಡ್ ಹಾಕಿದ್ದು, ಸಾರ್ವಜನಿಕರ ದರ್ಶನ ನಿಮಿತ್ತ ಜಿಗಣಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಮನೆಯ ಮುಂಭಾಗದ ವಿಶಾಲ ಜಾಗದಲ್ಲಿ ಪೆಂಡಾಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಸೈನಿಕರ ಕಡೆಯಿಂದ ಕಮಾಂಡೋ ಹೆಚ್ ಪ್ರೀತಮ್ ಸಿಂಗ್ ಇಲ್ಲಿನ ಪೂರ್ವಭಾವಿ ಸೈನಿಕ ಶಿಷ್ಟಾಚಾರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.

ತೆರೆದ ವಾಹನದಲ್ಲಿ ಮೆರವಣಿಗೆ: ಮನೆ ಬಳಿಯ ಎಲ್ಲಾ ವಿಧಿವಿಧಾನಗಳ ನಂತರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಮನೆ ಬಳಿಯಿಂದ ಬಡಾವಣೆ ಮೂಲಕ ಕೊಂಡೊಯ್ಯಲಾಗುವುದು. ಕಲ್ಲುಬಾಳು ಕ್ರಾಸ್-ಜಿಗಣಿ ಒಟಿಐಎಸ್ ವೃತ್ತದಲ್ಲಿ ಶಾಲಾ ಮಕ್ಕಳು, ಕಾರ್ಮಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಡುಪಿ ಗಾರ್ಡನ್ ರಿಂಗ್ ರೋಡ್ ಮೂಲಕ ಕೊಪ್ಪ ಗೇಟ್ - ಬನ್ನೇರುಘಟ್ಟ ವೃತ್ತಗಳಲ್ಲಿ ಸಾರ್ವಜನಿಕರಿಂದ ದರ್ಶನ ಪಡೆದು ಅನಂತರ ವೀವರ್ಸ್ ಕಾಲನಿ ಮೂಲಕ ನೈಸ್ ರಸ್ತೆಗೆ ಮೆರವಣಿಗೆ ತಲುಪಲಿದೆ. ಅಲ್ಲಿಂದ ಸಿಂಗಸಂದ್ರ ಹೆದ್ದಾರಿ ನೈಸ್ ರಸ್ತೆಯ ಜಂಕ್ಷನ್ ಮೂಲಕ ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕೂಡ್ಲು ಗೇಟ್ ಮೂಲಕ ಕೂಡ್ಲು ವಿದ್ಯುತ್ ಚಿತಾಗಾರ ತಲುಪಲಿದೆ.

ಇದನ್ನೂ ಓದಿ: ಬೆಂಗಳೂರು ತಲುಪಿದ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ: ಗಣ್ಯರಿಂದ ಗೌರವ ನಮನ

Last Updated : Nov 25, 2023, 10:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.