ETV Bharat / state

ಸಿಎಂಗೆ ಖುಷಿ ನೀಡಿದ ಹೈಕಮಾಂಡ್... ಮಾತು ಉಳಿಸಿಕೊಂಡ‌ ಯಡಿಯೂರಪ್ಪ ಸದ್ಯ ನಿರಾಳ...!

author img

By

Published : Jun 18, 2020, 5:04 AM IST

ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಈ ವಿಷಯ ತಿಳಿದ ಸಿಎಂ ಯಡಿಯೂಪ್ಪಗೆ ಸಂತಸ ತಂದಿದೆ.

CM BSY happy, CM BSY happy to announce, CM BSY happy to announce of candidates list, mlc election news, ಸಿಎಂ ಯಡಿಯೂರಪ್ಪಗೆ ಸಂತೋಷ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಅಭ್ಯರ್ಥಿಗಳ ಘೋಷಣೆ ಹಿನ್ನೆಲೆ ಬಿಎಸ್​ವೈಗೆ ಸಂತೋಷ, ವಿಧಾನ ಪರಿಷತ್​ ಚುನಾವಣೆ ಸುದ್ದಿ,
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯಸಭಾ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್​ನ ಅಚ್ಚರಿ ಆಯ್ಕೆಯ ಆಘಾತಕ್ಕೆ ಸಿಲುಕಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪರಿಷತ್ ಚುನಾವಣೆಯಲ್ಲಿ ಆಘಾತ ಮರುಕಳಿಸದಂತೆ ನೋಡಿಕೊಂಡಿದ್ದಾರೆ. ನಂಬಿದವರಿಗೆ ಟಿಕೆಟ್ ಕೊಡಿಸಿ ಮಾತು ಉಳಿಸಿಕೊಂಡಿದ್ದಾರೆ ಸಿಎಂ ಯಡಿಯೂರಪ್ಪ.

ಹೌದು, ವಿಧಾನಸಭೆಯಿಂದ ವಿಧಾನ ಪರಿಷತ್​ನ ಏಳು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ನಾಲ್ಕು ಸ್ಥಾನ ಲಭಿಸುತ್ತಿದೆ. ಈ ನಾಲ್ಕು ಸ್ಥಾನಕ್ಕೆ ಹತ್ತಾರು ಆಕಾಂಕ್ಷಿಗಳ ನಡುವೆ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡರ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ಪರಾಜಿತಗೊಂಡು ಸಂಪುಟ ಸ್ಥಾನದಿಂದ ವಂಚಿತರಾಗಿದ್ದರು. ಸಚಿವ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದು ಶಾಸಕ‌ ಸ್ಥಾನವೂ ಇಲ್ಲದಂತೆ ಮಾಡಿಕೊಂಡಿದ್ದರು.

ಸರ್ಕಾರ ರಚನೆಗೆ ಸಾಥ್​ ನೀಡಿದ್ದ ಎಂಟಿಬಿಯ ಈ ಸೋಲು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೇ ಆಘಾತ ತಂದಿತ್ತು. ಅಂದೇ ಪರಿಷತ್ ಸ್ಥಾನ ನೀಡಿ ಸಚಿವ ಸ್ಥಾನ ಕೊಡುವ ಅಭಯವನ್ನು ಎಂಟಿಬಿ ನೀಡಲಾಗಿತ್ತು. ಅದರಂತೆ ಈಗ ಹೈಕಮಾಂಡ್ ಒಪ್ಪಿಸಿ ಎಂಟಿಬಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ಸಫಲರಾಗಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸಿಎಂ ಕಚೇರಿ, ನಿವಾಸಕ್ಕೆ ಅಲೆದಾಡಿದ್ದ ಎಂಟಿಬಿಗೆ ಕಡೆಗೂ ಹೈಕಮಾಂಡ್ ಗುಡ್ ನ್ಯೂಸ್ ನೀಡಿದೆ.

ಇನ್ನು ರಾಜೀನಾಮೆ ಕೊಟ್ಟು ಅನರ್ಹ ಶಾಸಕರ ಪಟ್ಟ ಹೊತ್ತವರಲ್ಲಿ ಆತ್.ಶಂಕರ್ ಕೂಡ ಒಬ್ಬರು, ಸಚಿವ ಸ್ಥಾನ ತ್ಯಜಿಸಿ ಬಂದಿದ್ದರು ಆದರೆ ರಾಣೆಬೆನ್ನೂರು ಕ್ಷೇತ್ರದ ಮತದಾರ ಉಪಚುನಾವಣೆಯಲ್ಲಿ ಶಂಕರ್ ಕೈ ಹಿಡಿಯಲ್ಲ ಎನ್ನುವ ಕಾರಣಕ್ಕೆ ವಿಧಾನ ಪರಿಷತ್ ಟಿಕೆಟ್ ಭರವಸೆ ನೀಡಿ
ಅರುಣ್ ಕುಮಾರ್​ಗೆ ಸಿಎಂ ಟಿಕೆಟ್ ಕೊಡಿಸಿದ್ದರು. ಅಂದು ಕಣ್ಣೀರು ಹಾಕುತ್ತಾ ಸಿಎಂ ನಿವಾಸದಿಂದ ಹೊರಬಂದಿದ್ದ ಶಂಕರ್​ಗೆ ಪರಿಷತ್ ಟಿಕೆಟ್ ಕೊಡಿಸುವ ಮೂಲಕ ಸಿಎಂ ಬಿಎಸ್​ವೈ ಮಾತು ಉಳಿಸಿಕೊಂಡಿದ್ದಾರೆ.

ಚಿಂಚೋಳಿ ಕ್ಷೇತ್ರದ ಉಪ ಚುನಾವಣಾ ಆಕಾಂಕ್ಷಿಯಾಗಿದ್ದ ಸುನೀಲ್ ವಲ್ಯಾಪುರೆ ಮನವೊಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ಕಷ್ಟಪಟ್ಟಿದ್ದರು. ಜಾಧವ್ ಪುತ್ರನಿಗೆ ಅವಕಾಶ ಕೊಡಿಸುವ ಸಲುವಾಗಿ ಪರಿಷತ್ ಸ್ಥಾನದ ಭರವಸೆ ನೀಡಿ ಬಂಡಾಯವನ್ನು ಶಮನಮಾಡಿದ್ದರು. ಅಂದು ಕೊಟ್ಟ ಮಾತಿನಂತೆ ಇದೀಗ ವಲ್ಯಾಪುರೆಗೂ ಟಿಕೆಟ್ ಕೊಡಿಸುವಲ್ಲಿ ಸಿಎಂ ಸಫಲರಾಗಿದ್ದಾರೆ.

ಈ ಮೂವರ ಹೆಸರುಗಳೂ ಬಿಜೆಪಿ ಕೋರ್ ಕಮಿಟಿ ಸಭೆಯ ಒಮ್ಮತದ ಆಯ್ಕೆಯಾಗಿತ್ತು ಎನ್ನುವುದು ವಿಶೇಷ. ಆದರೆ ಇದೇ ಪಟ್ಟಿಯ ಜೊತೆಯಲ್ಲಿದ್ದ ಹೆಚ್.ವಿಶ್ವನಾಥ್​ಗೆ ಟಿಕೆಟ್ ಲಭ್ಯವಾಗಿಲ್ಲ. ಉಪ ಚುನಾವಣೆ ವೇಳೆಯಲ್ಲೇ ಸ್ಪರ್ಧೆ ಬೇಡ ಪರಿಷತ್ ಸ್ಥಾನ ನೀಡಿ ಮಂತ್ರಿ ಮಾಡುತ್ತೇವೆ ಎನ್ನುವ ಸಿಎಂ ಯಡಿಯೂರಪ್ಪ ಆಫರ್ ಇಲ್ಲದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಈ ಸೋಲಿಗೆ ಬಹುಪಾಲು ಸ್ವಯಂ ವಿಶ್ವನಾಥ್ ಅವರೇ ಕಾರಣರಾಗಿದ್ದರು. ಹಾಗಾಗಿ ವಿಶ್ವನಾಥ್ ವಿಚಾರ, ಎಂಟಿಬಿ ಹಾಗು ಶಂಕರ್ ರೀತಿಯಲ್ಲಿ ಪಕ್ಷ ಪರಿಗಣಿಸಿಲ್ಲ. ಭವಿಷ್ಯದಲ್ಲಿ ನೋಡೋಣ ಎನ್ನುವ ಕಾರಣವನ್ನು ಕೊಟ್ಟು ಟಿಕೆಟ್ ಅನ್ನು ಪ್ರತಾಪ್ ಸಿಂಹ್ ನಾಯಕ್​ಗೆ ಕೊಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಪ್ರತಾಪ್ ಸಿಂಹ ನಾಯಕ್ ಬಿಜೆಪಿ ಹೈಕಮಾಂಡ್ ಆಯ್ಕೆಯಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,‌ ಸಂಘ ಪರಿವಾರದ ನಂಟು, ಪಕ್ಷ ನಿಷ್ಟೆ ಪರಿಗಣಿಸಿ ಟಿಕೆಟ್ ಕೊಡಲಾಗಿದೆ.

ಒಟ್ಟಿನಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಆದಂತೆ ಆದರೆ ಏನುಗತಿ ಎನ್ನುವ ಆತಂಕದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಹೈಕಮಾಂಡ್ ಖುಷಿಯಾಗುವ ರೀತಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ವಿಶ್ವನಾಥ್ ವಿಷಯ ಹೊರತುಪಡಿಸಿದರೆ ಸದ್ಯಕ್ಕೆ ಸಿಎಂ ನಿರಾಳ ಎನ್ನಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.