ETV Bharat / state

ಇಂದು ಸಚಿವ ಸಂಪುಟ ಸಭೆ: ಲಾಕ್​ಡೌನ್ ಗೊಂದಲಕ್ಕೆ ತೆರೆ, ಉಚಿತ ಲಸಿಕೆ ಬಗ್ಗೆ ನಿರ್ಧಾರ

author img

By

Published : Apr 26, 2021, 9:19 AM IST

Updated : Apr 26, 2021, 10:03 AM IST

ಈಗಾಗಲೇ ಕೆಲ ರಾಜ್ಯಗಳು ಎಲ್ಲರಿಗೂ ಉಚಿತ ಲಸಿಕೆ ಹಾಕುವ ಘೋಷಣೆ ಮಾಡಿದ್ದು, ರಾಜ್ಯದಲ್ಲಿಯೂ ಉಚಿತ ಲಸಿಕೆ ಘೋಷಣೆ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆಯೂ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಘೋಷಣೆ ಮಾಡುವ ಸಾಧ್ಯತೆ ಇದೆ‌.

karnataka cabinet meeting
ಸಚಿವ ಸಂಪುಟ ಸಭೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಕರ್ಫ್ಯೂ ವಿಚಾರದಲ್ಲಿ, 18 ವರ್ಷ ತುಂಬಿದ ಎಲ್ಲರಿಗೂ ಲಸಿಕೆ ನೀಡಿಕೆ ಸಂಬಂಧ ಮಹತ್ವದ ನಿರ್ಧಾರ ಹೊರಬೀಳುವ ಸಂಭವವಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ನೂತನ ಮಾರ್ಗಸೂಚಿ ಜಾರಿ ನಂತರದ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅವರವರ ಜಿಲ್ಲೆಯಲ್ಲಿನ ಸ್ಥಿತಿಗತಿ, ಜಿಲ್ಲಾಡಳಿತದ ಅಭಿಪ್ರಾಯ ಕುರಿತು ಸಿಎಂಗೆ ಮಾಹಿತಿ ನೀಡಲಿದ್ದಾರೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂನಿಂದ ಆಗಿರುವ ಸಕಾರಾತ್ಮಕ ಅಂಶಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಲಾಕ್​ಡೌನ್ ಜಾರಿ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ಸಂಪುಟ ಸಭೆಯಲ್ಲಿ ಅಂತ್ಯ ಹಾಡಲಾಗುತ್ತದೆ ಎನ್ನಲಾಗಿದೆ. ಲಾಕ್​ಡೌನ್ ಬಗ್ಗೆ ಸರ್ಕಾರದ ನಿಲುವು ಮತ್ತು ಕರ್ಫ್ಯೂ ವಿಚಾರದಲ್ಲಿ ಸ್ಪಷ್ಟತೆ ಹೊರಬೀಳುವ ಸಾಧ್ಯತೆ ಇದೆ.

ಮೇ 1ರಿಂದ 18 ವರ್ಷ ತುಂಬಿದ ಎಲ್ಲರಿಗೂ ಕೊರೊನಾ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಯಾವೆಲ್ಲಾ ಸಿದ್ಧತೆ ಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ.

ಈಗಾಗಲೇ ಕೆಲ ರಾಜ್ಯಗಳು ಎಲ್ಲರಿಗೂ ಉಚಿತ ಲಸಿಕೆ ಹಾಕುವ ಘೋಷಣೆ ಮಾಡಿದ್ದು, ರಾಜ್ಯದಲ್ಲಿಯೂ ಉಚಿತ ಲಸಿಕೆ ಘೋಷಣೆ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆಯೂ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಘೋಷಣೆ ಮಾಡುವ ಸಾಧ್ಯತೆ ಇದೆ‌.

ಇನ್ನುಳಿದಂತೆ ಇತರೆ ಆಡಳಿತಾತ್ಮಕ ವಿಷಯಗಳ ಕುರಿತು ಕೆಲ ನಿರ್ಧಾರಗಳನ್ನು ಸಿಎಂ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸಭೆ ಕೈಗೊಳ್ಳಲಿದೆ.

ಕಳೆದ ವರ್ಷದ ಖರ್ಚು, ವೆಚ್ಚವನ್ನೇ ಸಂಪೂರ್ಣ ಪ್ರಮಾಣದಲ್ಲಿ ಸರಿದೂಗಿಸಲು ಸರಿದೂಗಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈಗ ಮತ್ತೊಂದು ಹೊರೆ ಮೈಮೇಲೆ ಎಳೆದುಕೊಳ್ಳುವ ಉಸಾಬರಿ ಬೇಡವೆಂಬ ಚಿಂತನೆ ಮುಖ್ಯಮಂತ್ರಿ ಹಾಗೂ ಸಂಪುಟದ ಕೆಲವು ಸದಸ್ಯರಲ್ಲಿದೆ. ಹೀಗಾಗಿ ಸಂಪುಟ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಲಿದ್ದು, ಎಲ್ಲರ ಅಭಿಪ್ರಾಯ ಪಡೆದೇ ಮುಂದಿನ ಹೆಜ್ಜೆ ಇಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ) : ಕರ್ನಾಟಕ ರಾಜ್ಯ ಸೇವೆಗಳು (ಶಿಕ್ಷಕರ | ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2021ಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಅರ್ಧಕ್ಕೆ ನಿಂತಿರುವ ಶಿಕ್ಷಕರ ವರ್ಗಾವಣೆಯನ್ನು ಪೂರ್ಣಗೊಳಿಸಲು ಸುಗ್ರೀವಾಜ್ಞೆ ತರಲು ಸರ್ಕಾರ ಬಯಸಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆ ಸಲ್ಲಿಸಿದೆ. ಸುಗ್ರೀವಾಜ್ಞೆ ತರಲು ಸಂಪುಟ ಒಪ್ಪಿಗೆ ನೀಡಿದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು ಅವರ ಕುಟುಂಬದವರು ನಿಟ್ಟುಸಿರು ಬಿಡುತ್ತಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯವ ನಿರೀಕ್ಷೆ ಇದೆ.

ಕೃಷಿ ಇಲಾಖೆ : 2020-21ನೇ ಸಾಲಿನಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PM-FME) ಯೋಜನೆಯ ರೂ. 493.65 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಬಗ್ಗೆ (ಕೇಂದ್ರ ಮತ್ತು ರಾಜ್ಯ ಶೇ. 60:40 ಅನುಪಾತದಲ್ಲಿ). ಚರ್ಚೆ ನಡೆಯಲಿದೆ.

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ವಿಸ್ತರಣೆಯ ಅವಶ್ಯಕ ಉಳಿಕೆ ಕಾಮಗಾರಿಯನ್ನು ರೂ. 22.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಮಂಜೂರಾತಿ ನೀಡುವ ಸಾಧ್ಯತೆ ಇದೆ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ : ಬಾಗಲಕೋಟೆ ಜಿಲ್ಲೆಯ ಮುದ್ದಾಪುರದಲ್ಲಿನ ಜೆ.ಕೆ. ಸಿಮೆಂಟ್ ವರ್ಕ್ಸ್ ಘಟಕಕ್ಕೆ ವ್ಯಾಟ್ ಸಾಲ ಉತ್ತೇಜನದ ಮಾನ್ಯತೆಯ ಅವಧಿಯನ್ನು 2019ರ ಅ.24ರಿಂದ ಎರಡು ವರ್ಷಗಳ ಅವಧಿಗೆ ವಿಸ್ತರಿಸುವ ಕುರಿತು ಚರ್ಚೆ ನಡೆಯಲಿದೆ.

ಒಳಾಡಳಿತ ಇಲಾಖೆ : ಪೊಲೀಸ್ ಐಟಿ, ತಂತ್ರಾಂಶವನ್ನು ರೂ. 28.48 ಕೋಟಿಗಳ ಅಂದಾಜು ವೆಚ್ಚದಲ್ಲಿ ಉನ್ನತೀಕರಿಸುವ ಕಾರ್ಯವನ್ನು M/s. Microsoft Corporation India Pvt. Ltd. ಅವರಿಗೆ ವಹಿಸುವ ಬಗ್ಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕೋವಿಡ್​ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ಸ್ಫೋಟ: ಸಾವಿನ ಸಂಖ್ಯೆ 82ಕ್ಕೆ ಏರಿಕೆ

ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 139 ಶಿಕ್ಷಾಬಂದಿಗಳನ್ನು ಸನ್ನಡತೆ ಆಧಾರದ ಬಿಡುಗಡೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಕಂದಾಯ ಇಲಾಖೆ : ಮಂಡ್ಯ ಜಿಲ್ಲೆಯ ಜವರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 2523 ಎಕರೆ ಗೋಮಾಳ ಜಮೀನನ್ನು ಅಧ್ಯಕ್ಷರು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಇವರಿಗೆ ಮಂಜೂರು ಮಾಡುವ ಬಗ್ಗೆ ಹಾಗೂ ಮೈಸೂರು ಜಿಲ್ಲೆಯ ಮೂಕನಹಳ್ಳಿ ಗ್ರಾಮದ ಸ.ನಂ. 90ರಲ್ಲಿ 2 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಹುಣಸೂರು ತಾಲ್ಲೂಕು ಒಕ್ಕಲಿಗರ ಸಂಘಕ್ಕೆ ಮಂಜೂರು ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ಮಂಗಳೂರು ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 55.00 ಕೋಟಿಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಇದನ್ನೂ ಓದಿ: ದೇಶಾದ್ಯಂತ ಕೊರೊನಾ ಅಬ್ಬರ... LIVE UPDATES

Last Updated : Apr 26, 2021, 10:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.