ETV Bharat / state

ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ನಮ್ಮ ಆದರ್ಶ: ಸಿಎಂ ಬೊಮ್ಮಾಯಿ

author img

By

Published : Oct 15, 2022, 8:03 AM IST

ಬೆಂಗಳೂರಿನ ನಾಗಸೇನಾ ವಿದ್ಯಾಲಯದಲ್ಲಿ ಬುದ್ಧ, ಅಂಬೇಡ್ಕರ್ ಮಂಟಪ ಉದ್ಘಾಟನೆ. ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ನಮಗೆ ಆದರ್ಶ ಹಾಗೂ ಪ್ರೇರಣೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ನಮಗೆ ಆದರ್ಶ ಹಾಗೂ ಪ್ರೇರಣೆ. ನಮ್ಮ ತೀರ್ಮಾನಗಳಿಗೆ ಈ ಮಹನೀಯರ ಬದುಕು, ವಿಚಾರಧಾರೆಯನ್ನು ಕೇಳಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ನಾಗಸೇನಾ ವಿದ್ಯಾಲಯದಲ್ಲಿ ಬುದ್ಧ ಅಂಬೇಡ್ಕರ್ ಮಂಟಪ ಉದ್ಘಾಟಿಸಿ, ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಇವರೆಲ್ಲರೂ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದರಿಂದ ಶಾಶ್ವತವಾಗಿರುತ್ತಾರೆ. ಆದರ್ಶಗಳನ್ನು ಬಿಡದವರು ಶಾಶ್ವತವಾಗಿರುತ್ತಾರೆ. ಆದರ್ಶಗಳನ್ನು ಬಿಟ್ಟವರು ಕಾಲ ಸೀಮಿತವಾಗಿರುತ್ತಾರೆ ಎಂದರು.

ನಾಗಸೇನಾ ವಿದ್ಯಾಲಯಕ್ಕೆ ಅಗತ್ಯ ಅನುದಾನ: ನಾಗಸೇನಾ ವಿದ್ಯಾಲಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ನಾನು ಒಬ್ಬ ಅಂಬೇಡ್ಕರ್, ಬುದ್ಧ, ಬಸವ, ವಾಲ್ಮೀಕಿ ಅವರ ಭಕ್ತ. ಅಂಬೇಡ್ಕರ್ ಇಚ್ಛೆಯಂತೆ ಸಂಸ್ಥೆ ಬೆಳೆದಿದೆ. ಇದು ಇನ್ನಷ್ಟು ಬೆಳೆಯಬೇಕು. ಇಲ್ಲಿ ಪ್ರಸ್ತಾಪಿಸಿರುವ ಎರಡು ಮೂರು ವಿಚಾರಗಳಿಗೆ ಸಂಪೂರ್ಣ ಸಹಮತ ಮತ್ತು ಬೆಂಬಲ ನೀಡಲಾಗುವುದು. ಸಂಸ್ಥೆಗೆ ಅಗತ್ಯ ಇರುವ ಅನುದಾನವನ್ನು ಮುಂದಿನ ವರ್ಷ ಪಿಯುಸಿ, ಅದರ ಮುಂದಿನ ವರ್ಷ ಪದವಿ ಕೋರ್ಸುಗಳು ಪ್ರಾರಂಭ ಮಾಡಬೇಕೆಂಬ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

(ಓದಿ: ಹೊಸಪೇಟೆಯಲ್ಲಿ ಜನಸಂಕಲ್ಪ ಯಾತ್ರೆ.. ರಾಜಾಹುಲಿ ಬಿಎಸ್​ವೈ ಗರ್ಜನೆಗೆ ಕಾಂಗ್ರೆಸ್​​ ತತ್ತರ ಎಂದ ಸಿಎಂ)

ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿರುವ ಸಂಸ್ಥೆ ಇನ್ನೂ ಬೆಳೆಯಬೇಕು. ಕೇಂದ್ರ ಸಚಿವ ರಾಮದಾಸ್ ಅಟಾವಳೆ ಸಹ ಇದಕ್ಕೆ ಬೆಂಬಲ ನೀಡುವರು. ಸರ್ಕಾರ ಎಸ್.ಸಿ. ಎಸ್.ಟಿ ಯೋಜನೆಯಡಿ 100 ಅಂಬೇಡ್ಕರ್ ಹಾಸ್ಟೆಲ್​​ಗಳನ್ನು ನಿರ್ಮಿಸಲು ತೀರ್ಮಾನಿಸಿದೆ. ಈ ಪೈಕಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಮಾಡಿಕೊಡುವುದಾದರೆ ಒಂದು ಹಾಸ್ಟೆಲ್ ಈ ಆವರಣದಲ್ಲಿ ನಿರ್ಮಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಅಂಬೇಡ್ಕರ್ ಜೀವನಚರಿತ್ರೆ ಬಿಂಬಿಸುವ ವಸ್ತುಸಂಗ್ರಹಾಲಯ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರ ಬೆಂಬಲ ನೀಡಲಿದೆ. ಅಂಬೇಡ್ಕರ್ ಭೇಟಿ ನೀಡಿದ ಹತ್ತು ಸ್ಥಳಗಳ ಅಭಿವೃದ್ಧಿ ಪಡಿಸುತ್ತಿದ್ದು, ಅದರಲ್ಲಿ ನಾಗಸೇನಾ ವಿದ್ಯಾಲಯಕ್ಕೂ ಅನುದಾನ ಒದಗಿಸಲಾಗುವುದು. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಆದರ್ಶ ಜೀವನ ನಡೆಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.

ಬುದ್ಧ ಅಂತ:ಕರಣದ ಪ್ರತೀಕ: ಪೀಪಲ್ಸ್ ಎಜುಕೇಷನ್ ಸೊಸೈಟಿಯನ್ನು ಅಂಬೇಡ್ಕರ್ ಸ್ಥಾಪನೆ ಮಾಡಿದ್ದಾರೆ‌. ಅಂತಹ ಸಂಸ್ಥೆ ನಮ್ಮ ಬೆಂಗಳೂರಿನಲ್ಲಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಜಗತ್ತಲ್ಲಿ ಮಾನವ ಮನುಷ್ಯನಾಗಿ ಹುಟ್ಟುತ್ತಾನೆ. ಕೆಲವರು ಮಾತ್ರ ಮಾನವರಾಗುತ್ತಾರೆ. ಮನುಷ್ಯರಾಗಿ ಹುಟ್ಟಿ ಕೆಲವರು ದೇವರಾಗುತ್ತಾರೆ.

ನ್ಯಾಯ ನೀತಿ, ಧರ್ಮ, ಸತ್ಯ, ಅಹಿಂಸೆ, ಪ್ರೀತಿ, ವಿಶ್ವಾಸಗಳ ಸಂಕೋಲೆಯಲ್ಲಿ ಸಿಕ್ಕವನು ಮಾನವ. ಬುದ್ಧ ಜಾಗೃತಿಯ ಪ್ರತೀಕ. ಬುದ್ಧನಿಗೆ ಸಮಾಜದಲ್ಲಿರುವ ದು:ಖ, ದುಮ್ಮಾನಗಳನ್ನು ನೋಡಿ ಅಂತರಂಗದಲ್ಲಿ ಜಾಗೃತಿಯಾಯಿತು. ಮುಂದೆ ಆತ ತ್ಯಾಗದ ಪ್ರತೀಕ, ಜ್ಞಾನದ ಪ್ರತೀಕ, ಇಡಿ ವಿಶ್ವದಲ್ಲಿ ಅಂತ:ಕರಣದ ಪ್ರತೀಕವಾದರು. ಬುದ್ಧನನ್ನು ಜಗತ್ತಿನ ಎಲ್ಲಾ ದೇಶಗಳಲ್ಲಿ ಪ್ರೀತಿಸುತ್ತಾರೆ. ಅಮೆರಿಕದ ಅಧ್ಯಕ್ಷರ ಕಚೇರಿಯಲ್ಲಿ ಬುದ್ಧನ ಪ್ರತಿಮೆಯಿದೆ. ಬುದ್ಧ ಶ್ರೇಷ್ಠ ದೇವಮಾನವ ಎಂದು ಸಿಎಂ ಬೊಮ್ಮಾಯಿ ಗುಣಗಾನ ಮಾಡಿದರು.

ಬಸವಣ್ಣ ಜಾಗೃತಿಯ ಪ್ರತೀಕ: ಬಸವಣ್ಣ ಕೂಡ ಜಾಗೃತಿಯ ಪ್ರತೀಕ. ಜಾಗೃತಿಯ ಜೊತೆಗೆ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು, ಹೊಸ ಮನ್ವಂತರವನ್ನು ಹಾಡಿದವರು. ಸಮಾಜದಲ್ಲಿ ಸಮಾನತೆಯ ಪ್ರತೀಕ ಬಸವಣ್ಣ. ಧರ್ಮಕ್ಕೆ ಅತ್ಯಂತ ಸೂಕ್ತ ವ್ಯಾಖ್ಯಾನವಾದ ದಯವೇ ಧರ್ಮದ ಮೂಲ ಎಂದು ವಿಶ್ವ ಮಾನವರಾದವರು.

ಅಂಬೇಡ್ಕರ್ ಜ್ಞಾನ, ಜಾಗೃತಿ, ಸಮಾನತೆ, ತ್ಯಾಗ ಹಾಗೂ ದೇಶದ ಭವ್ಯ ಭವಿಷ್ಯವನ್ನು ಬರೆದ ಧೀಮಂತ. ಅಂಬೇಡ್ಕರ್ ಸಂವಿಧಾನ ಬರೆಯದಿದ್ದರೆ, ಈ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಇರುತ್ತಿರಲಿಲ್ಲ. ಶಾಂತಿ, ಸೌಹಾರ್ದತೆ ಇದ್ದರೆ ಮಾತ್ರ ಪ್ರಗತಿಯಾಗಲು ಸಾಧ್ಯ. ಅದಕ್ಕೆ ಸಂಪೂರ್ಣವಾದ, ಅದ್ಭುತವಾದ ಕಾನೂನಿನ ಸ್ವರೂಪದ ಸಂವಿಧಾನವನ್ನು ನಮಗೆ ಕೊಟ್ಟಿದ್ದು, ಇದನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ, ಸೂರ್ಯಚಂದ್ರ ಇರುವವರೆಗೂ ಅಂಬೇಡ್ಕರ್ ಹೆಸರು ಶಾಶ್ವತವಾಗಿರುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಪರಿವರ್ತನೆಯ ಪ್ರತೀಕ: ವಾಲ್ಮಿಕಿ ಪರಿವರ್ತನೆಯ ಪ್ರತೀಕ. ತನ್ನ ಹಿಂದಿನ ಜೀವನವನ್ನು ಬದಲಾಯಿಸಿಕೊಂಡು ಮರ್ಹರ್ಷಿಯಾದರು. ವಾಲ್ಮೀಕಿ ರಾಮಾಯಣದ ಮೂಲಕ ನ್ಯಾಯ, ನೀತಿ, ಧರ್ಮವನ್ನು ಸ್ವಷ್ಟವಾಗಿ ವ್ಯಾಖ್ಯಾನ ಮಾಡಿದ್ದಾರೆ. ವಾಲ್ಮೀಕಿ ಇರದಿದ್ದರೆ ರಾಮಾಯಣ ಇಷ್ಟು ಸುಂದರವಾದ, ಆದರ್ಶವಾಗಿ ಇರುತ್ತಿರಲಿಲ್ಲ. ಭೂಮಿಯ ಮೇಲೆ ಮಾನವನ ಜನ್ಮವಿರುವವರೆಗೂ ಶಾಶ್ವತವಾಗಿ ಎಲ್ಲರ ಮನದಾಳದಲ್ಲಿ ಈ ನಾಲ್ಕೂ ಜನ ಇರುತ್ತಾರೆ ಎಂದು ಸಿಎಂ ತಿಳಿಸಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಟಾವಲೆ, ನಾಗಸೇನಾ ವಿದ್ಯಾಲಯದ ಅಧ್ಯಕ್ಷ ಡಾ: ಎಂ.ವೆಂಕಟಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಹಿಳೆ ತಲೆ ಸವರಿ ಸಮಾಧಾನಿಸಿದ ಸಿಎಂ: ಕಾರ್ಯಕ್ರಮದಲ್ಲಿ ಸಿಎಂ ತವರು ಜಿಲ್ಲೆ ಹಾವೇರಿಯ ಮಹಿಳೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಸಿಎಂ ನೋಡಲು ಬಿಡುವುದಿಲ್ಲ, ಸಮಸ್ಯೆ ಹೇಳಿಕೊಳ್ಳಲು ಬಂದರೆ ಬಿಡುವುದಿಲ್ಲ ಎಂದು ಅಳಲು ತೋಡಿಕೊಂಡರು. ಈ ವೇಳೆ ಮಹಿಳೆ ತಲೆ ಸವರಿ ಸಮಾಧಾನಿಸಿ, ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಿಎಂ ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.