ETV Bharat / state

ಶಿಲಾನ್ಯಾಸ ಮಾಡಿದ ಯೋಜನೆಗಳು ಪೂರ್ಣಗೊಂಡಾಗ ಕರ್ನಾಟಕದ ಜಿಡಿಪಿ ಶೇ. 2 ರಷ್ಟು ಹೆಚ್ಚಳ: ಸಿಎಂ

author img

By

Published : Jun 20, 2022, 6:43 PM IST

ಕರ್ನಾಟಕದ ಪ್ರಗತಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಷ್ಟು ಮಹತ್ವದ ಯೋಜನೆ ಇದಾಗಿದೆ. ನಮ್ಮೆಲ್ಲರ ಬಹಳ ದಿನಗಳ ಕನಸು ಸಬ್ ಅರ್ಬನ್ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಪ್ರಧಾನಮಂತ್ರಿಗಳು ಕೇಂದ್ರದ ಸಹಾಯವನ್ನು ನೀಡಿದ್ದಕ್ಕೆ ಯೋಜನೆ ಇಂದು ನೆರವೇರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿರುವ 33 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳು ಪೂರ್ಣಗೊಂಡಾಗ ಕರ್ನಾಟಕದ ಜಿಡಿಪಿ ಶೇ 2 ರಷ್ಟು ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್. ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ- ಪೆನುಕೊಂಡ ಜೋಡಿ ರೈಲು ಮಾರ್ಗ ಉದ್ಘಾಟನೆ ಹಾಗೂ ರೈಲು ಸೇವೆಗಳಿಗೆ ಚಾಲನೆ, ಬೆಂಗಳೂರು ಉಪ ನಗರ ಯೋಜನೆ ಹಾಗೂ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕರ್ನಾಟಕದ ಪ್ರಗತಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಷ್ಟು ಮಹತ್ವದ ಯೋಜನೆ ಇದಾಗಿದೆ. ನಮ್ಮೆಲ್ಲರ ಬಹಳ ದಿನಗಳ ಕನಸು ಸಬ್ ಅರ್ಬನ್ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಪ್ರಧಾನಮಂತ್ರಿಗಳು ಕೇಂದ್ರದ ಸಹಾಯವನ್ನು ನೀಡಿ ಯೋಜನೆ ಇಂದು ನೆರವೇರಿದೆ. ನಾಲ್ಕು ದಿಕ್ಕಿನಲ್ಲಿ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕ ಮಾಡುವ ಅದ್ಭುತವಾದ ಯೋಜನೆ ಪ್ರಾರಂಭವಾಗಿದೆ. ಯಲಹಂಕದಿಂದ-ಹೈದರಾಬಾದ್ ವರೆಗೆ ಡಬ್ಲಿಂಗ್ ಲೈನ್, ಅರಸೀಕೆರೆಯಿಂದ ತುಮಕೂರು ನಡುವೆ ವಿದ್ಯುದೀಕರಣ, ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ತುಮಕೂರಿನ ಬಳಿ ಬರಲಿದೆ.

ಐದು ರಾಜ್ಯಗಳನ್ನು ಇದು ಸಂಪರ್ಕಿಸುತ್ತದೆ. ಅತ್ಯಂತ ಮಹತ್ವದ ಯೋಜನೆಗಳಿಗೆ ಇಂದು ಚಾಲನೆ ದೊರೆತಿದೆ. ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ, ದೂರದೃಷ್ಟಿಯ ಫಲವಾಗಿ ಈ ಯೋಜನೆಗಳಾಗಿವೆ. ಹಲವಾರು ರಸ್ತೆಗಳು, ವಿಶೇಷವಾಗಿ ಬೆಂಗಳೂರಿಗೆ ಸಂಬಂಧಿಸಿದ ಎಸ್‍ಟಿಆರ್​ಆರ್​ ಇಡೀ ಬೆಂಗಳೂರನ್ನು ದಾಬಸ್‍ಪೇಟೆಯಿಂದ ಹಳೆ ಮದ್ರಾಸು ರಸ್ತೆಯವರೆಗೆ ಸಂಪರ್ಕಿಸುವ ಯೋಜನೆಯಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವಲ್ಲಿ ಈ ಯೋಜನೆ ನೆರವಾಗಲಿದೆ. ನಾಲ್ಕು ಸ್ಯಾಟಲೈಟ್ ಟೌನ್‍ಗಳಿಗೆ ಸಂಪರ್ಕ ಸಿಗಲಿದೆ ಎಂದರು.

ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ: ಇವೆಲ್ಲ ಯೋಜನೆಗಳಿಗೆ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಕಾರಣ. ಈ ದೇಶವನ್ನು ಮೋದಿಯವರು ಆಳುತ್ತಿರುವ ಸಂದರ್ಭದಲ್ಲಿ ಅವರ ದೂರದೃಷ್ಟಿಯಿಂದ ಈ ಯೋಜನೆಗಳೂ ಕೇಂದ್ರ ಸರ್ಕಾರದ ನೆರವಿನ ಸಹಾಯಹಸ್ತದಿಂದ ಜಾರಿಯಾಗಿವೆ. ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಒಬ್ಬ ಮುತ್ಸದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ದೇಶಕ್ಕೆ 75 ವರ್ಷ ಬಂದಾಗ ಅಮೃತಮಹೋತ್ಸವಕ್ಕೆ ಒಂದು ಹೊಸ ಶಕ್ತಿ ತುಂಬಿದ್ದಾರೆ.

2047 ರ ಸಂದರ್ಭದಲ್ಲಿ ಅವರು ಅಮೃತ ಕಾಲವನ್ನು ಘೋಷಿಸಿ, ವಿವಿಧ ಯೋಜನೆಗಳನ್ನು ರೂಪಸಿದ್ದಾರೆ. 2047 ರ ವೇಳೆಗೆ ಭಾರತ ಇಡೀ ವಿಶ್ವದಲ್ಲಿ ಅತ್ಯಂತ ಶ್ರೇಷ್ಠವಾದ, ನಂಬರ್ ಒನ್ ರಾಷ್ಟ್ರವಾಗುವ ನಿಟ್ಟಿನಲ್ಲಿ ಚಿಂತನೆಯಲ್ಲ. ಕಾರ್ಯಸೂಚಿ, ದಿಕ್ಸೂಚಿ ಹಾಗೂ ಗತಿಶಕ್ತಿಯನ್ನು ನೀಡಿದ್ದಾರೆ. ದೇಶವನ್ನು ಮುನ್ನಡೆಸುವ ಮೋದಿಯವರ ಮಾರ್ಗಸೂಚಿಯ ಪ್ರಕಾರ ಕರ್ನಾಟಕ ಇಂದು ಮುಂದುವರೆದಿದೆ ಎಂದರು.

ಮೋದಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ಮುನ್ನಡೆಯುತ್ತಿದೆ: ಪಿಎಂ ಸ್ವನಿಧಿ ಯೋಜನೆ 1.45 ಲಕ್ಷ ಬೀದಿ ವ್ಯಾಪಾರಿಗಳು ಇದರಿಂದ ಪ್ರಯೋಜನ ಪಡೆದಿದ್ದಾರೆ. ಇಡೀ ದೇಶದಲ್ಲಿ ಮೊದಲು 1 ಕಿ.ಮೀ ಆಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಈಗ ಪ್ರತಿದಿನ 16-17 ಕಿಮಿ ರಸ್ತೆಯಾಗುತ್ತಿವೆ. 415 ಹೊಸ ಮಾರ್ಗಗಳ 67 ವಿಮಾನ ನಿಲ್ದಾಣಗಳನ್ನು 8 ವರ್ಷದಲ್ಲಿ ನಿರ್ಮಾಣ, 5 ನಗರಗಳಿಗೆ ಮೆಟ್ರೋ ವಿಸ್ತರಣೆ, ಸಾಗರ್ ಮಾಲಾ ಯೋಜನೆಯಡಿ 194 ಯೋಜನೆಗಳಿಗೆ ಅನುಮೋದನೆ 596 ಹೊಸ ವೈದ್ಯಕೀಯ ಕಾಲೇಜುಗಳನ್ನು ನರೇಂದ್ರ ಮೋದಿಯವರು ನೀಡಿ ರಾಜ್ಯಕ್ಕೆ 4 ವೈದ್ಯಕೀಯ ಕಾಲೇಜುಗಳು ಬಂದಿವೆ. ಅವರ ಮಾರ್ಗದರ್ಶನದಲ್ಲಿ ಅವರ ಯೋಜನೆಗಳಿಗೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಕರ್ನಾಟಕ ಮುನ್ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಓದಿ: ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧ: ಮೋದಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.