ETV Bharat / state

ನಾಳೆ ಬೊಮ್ಮಾಯಿ ಬಜೆಟ್.. ಜನಪ್ರಿಯ ಘೋಷಣೆಗಳೊಂದಿಗೆ ಹೊರೆ ಇಲ್ಲದ ಆಯವ್ಯಯ ಮಂಡನೆಗೆ ಸಿಎಂ ಸಜ್ಜು

author img

By

Published : Feb 16, 2023, 7:21 AM IST

ನಾಳೆ ಸಿಎಂ ಬಸವರಾಜ ಬೊಮ್ಮಾಯಿ‌ ಆಡಳಿತಾವಧಿಯ ಕೊನೆಯ ಬಜೆಟ್ ಮಂಡನೆ - ಜನಪ್ರಿಯ ಘೋಷಣೆಗಳೊಂದಿಗೆ ಹೊರೆ ಇಲ್ಲದ ಆಯವ್ಯಯ ಮಂಡನೆಗೆ ಸಜ್ಜು - ಶುಕ್ರವಾರ ಬೆಳಗ್ಗೆ 10.15ಕ್ಕೆ 2023-24ನೇ ಸಾಲಿನ ಬಜೆಟ್ ಮಂಡನೆ - ಜನಪ್ರಿಯ ಬಜೆಟ್ ಘೋಷಣೆ ಸಾಧ್ಯತೆ.

cm basavaraj bommai
ಬಸವರಾಜ ಬೊಮ್ಮಾಯಿ‌

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ‌ ಫೆ.17ಕ್ಕೆ ತಮ್ಮ ಆಡಳಿತಾವಧಿಯ ಕೊನೆಯ ಬಜೆಟ್ ಮಂಡಿಸಲಿದ್ದಾರೆ. ಪೂರ್ಣ ಪ್ರಮಾಣದ ಹಾಗೂ ಹೆಚ್ಚುವರಿ ಆದಾಯದ ಬಜೆಟ್ ಮಂಡಿಸಲಿರುವ ಸಿಎಂ, ಚುನಾವಣೆ ಲೆಕ್ಕಾಚಾರದೊಂದಿಗೆ ಜನಪ್ರಿಯ, ಯಾವುದೇ ತೆರಿಗೆ ಹೇರದೆ ಹೊರೆ ಇಲ್ಲದ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ.

ಸಿಎಂ ಬೊಮ್ಮಾಯಿ ತಮ್ಮ ಅಧಿಕಾರವಧಿಯ ಎರಡನೇ ಬಜೆಟ್ ಮಂಡನೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಇದೇ ಶುಕ್ರವಾರ ಬೆಳಗ್ಗೆ 10.15ಕ್ಕೆ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಬಜೆಟ್ ಪೂರ್ವತಯಾರಿ ಸಭೆಗಳನ್ನು ನಡೆಸಿರುವ ಸಿಎಂ, ಇದೀಗ ಅಂತಿಮ ಟಚ್ ನೀಡುತ್ತಿದ್ದಾರೆ. 2022-23 ರ ಸಾಲಿನಲ್ಲಿ 2.7 ಲಕ್ಷ ಕೋಟಿ ಆಯವ್ಯಯ ಮಂಡಿಸಿದ್ದ ಬೊಮ್ಮಾಯಿ ಈ ಬಾರಿ 3 ಲಕ್ಷ ಕೋಟಿಗೂ ಅಧಿಕ ಗಾತ್ರದ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರಕ್ಕೆ ಇದು ನಿರ್ಣಾಯಕ ಆಯವ್ಯಯ ಆಗಿದೆ. ಜನಪ್ರಿಯ ಘೋಷಣೆ, ಚುನಾವಣಾ ಲಾಭ ತರುವ ಆಯವ್ಯಯ ಮಂಡಿಸಲು ಸಿಎಂ ಬೊಮ್ಮಾಯಿ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಗುರಿ ಮೀರಿ ಆದಾಯ ಸಂಗ್ರಹವಾಗುತ್ತಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಪ್ರಮುಖ ಆದಾಯ ಮೂಲಗಳು ಬಜೆಟ್ ಗುರಿಗಿಂತ 10% ಹೆಚ್ಚುವರಿ ಆದಾಯ ಸಂಗ್ರಹ ಮಾಡಲಿದ್ದು, ಸಿಎಂ ಹೊರೆ ಇಲ್ಲದ ಚುನಾವಣಾ ಬಜೆಟ್ ಮಂಡನೆ ಮಾಡುವುದು ಬಹುತೇಕ ಖಚಿತವಾಗಿದೆ.

ಕಳೆದ ವರ್ಷ 5 ಸಾವಿರ ಕೋಟಿ ರೂ. ರಾಜ್ಯದ ಬೊಕ್ಕಸಕ್ಕೆ ಆದಾಯ ಕೊರತೆಯಿತ್ತು. ಈ ಬಾರಿ ಈವರೆಗೆ ಬಜೆಟ್ ಗುರಿಗಿಂತ 13 ಸಾವಿರ ಕೋಟಿ ಅಧಿಕವಾಗಿ ಆದಾಯ ಸಂಗ್ರಹ ಮಾಡಲಾಗಿದೆ.‌ ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದ್ದು, ಈ ವರ್ಷ 61 ಸಾವಿರಕ್ಕೆ ಮಿತಿಗೊಳಿಸಿ ಸಾಲ ಪಡೆಯಲು ಯೋಜಿಲಾಗಿದೆ. ಹಾಗಾಗಿ, ಈ ಸಲ ಸಿಎಂ ಬೊಮ್ಮಾಯಿ ಹೆಚ್ಚುವರಿ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಲಾ್​ಡೌನ್ ಹಿನ್ನೆಲೆ ಆದಾಯ ಕೊರತೆಯ ಬಜೆಟ್ ಮಂಡನೆಯಾಗಿತ್ತು. ಈ ಬಾರಿ ಹೆಚ್ಚುವರಿ ಆಯವ್ಯಯ ಮಂಡನೆ ಮಾಡಲು ಸಿಎಂ ಸಿದ್ಧತೆ ನಡೆಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಜನಪ್ರಿಯ ಬಜೆಟ್ ಘೋಷಣೆ ಸಾಧ್ಯತೆ?: ಚುನಾವಣಾ ವರ್ಷವಾಗಿರುವುದರಿಂದ ಸಿಎಂ ಬೊಮ್ಮಾಯಿ ಈ ಬಾರಿ ಜನಪ್ರಿಯ ಆಯವ್ಯಯ ಮಂಡಿಸಲು ಮುಂದಾಗಿದ್ದಾರೆ. ಏಪ್ರಿಲ್​ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವ ನಿಟ್ಟಿನಲ್ಲಿ ಬೊಮ್ಮಾಯಿ ಜನಪ್ರಿಯ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಬಡವರಿಗೆ, ಮಹಿಳೆಯರಿಗೆ ಹಾಗೂ ರೈತರನ್ನು ಕೇಂದ್ರೀಕರಿಸಿ ಹೊಸ ಯೋಜನೆಗಳನ್ನು ಘೋಷಿಸಲು ಸಿಎಂ ಬೊಮ್ಮಾಯಿ‌ ತಯಾರಿ ನಡೆಸುತ್ತಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ರೈತರಿಗೆ ಡೀಸೆಲ್ ಸಹಾಯಧನ ವಿಸ್ತರಿಸುವ ಘೋಷಣೆಯನ್ನು ಈ ಬಾರಿಯ ಬಜೆಟ್​ನಲ್ಲಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಸಾಂಪ್ರದಾಯಿಕ ವೃತ್ತಿ ಮಾಡಲು ಇಚ್ಚಿಸುವವರಿಗೆ 50,000 ರೂ. ಧನಸಹಾಯ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ. ಆ ಮೂಲಕ ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯೋಜನೆ ರೂಪಿಸಲಿದ್ದಾರೆ ಎನ್ನಲಾಗಿದೆ.

ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಯೋಜನೆಗಳನ್ನು ರೂಪಿಸುತ್ತಿದ್ದು, ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮನೆ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡಲಾಗುವ ಯೋಜನೆಯನ್ನು ಆಯವ್ಯಯದಲ್ಲಿ ಘೋಷಿಸಲಾಗುವುದು.

ಸ್ತ್ರೀ ಸಾಮರ್ಥ್ಯದ ಜೊತೆಗೆ ಸ್ತ್ರೀ ಶಕ್ತಿ ಯೋಜನೆಯಡಿ ಮನೆ ನಡೆಸಲು, ಕೋವಿಡ್ ಉಪಚಾರ, ಆರೋಗ್ಯ, ಮುಂತಾದವುಕ್ಕೆ ಸಹಾಯವಾಗುವ ವಿಶೇಷ ಯೋಜನೆ ಘೋಷಿಸಲಿದ್ದಾರೆ. ಪ್ರತಿ ಕುಟುಂಬದ ಅಗತ್ಯವನ್ನು ನೋಡಿಕೊಂಡು 1,000, 1,500, 2,000 ಎಷ್ಟು ವೆಚ್ಚವಾಗುತ್ತದೆ ಎನ್ನುವುದನ್ನು ಪರಿಗಣಿಸಿ ಮನೆಯ ಜವಾಬ್ದಾರಿ ನೋಡಿಕೊಳ್ಳುವ ಮಹಿಳೆಗೆ ಯೋಜನೆ ಘೋಷಣೆ ಮಾಡಲಿದ್ದಾರೆ.

ಇದನ್ನೂ ಓದಿ: ಜನಪ್ರಿಯ ಘೋಷಣೆಗಳ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ‌ ತಯಾರಿ: ಪೂರ್ಣ ಪ್ರಮಾಣದ ಹೆಚ್ಚುವರಿ ಬಜೆಟ್ ಮಂಡನೆಗೆ ಸಜ್ಜು!

ದುಡಿಯುವ ವರ್ಗಕ್ಕೆ ಹೆಚ್ಚಿನ ಅನುಕೂಲ ಮಾಡುವ ಚಿಂತನೆ ನಡೆಸಲಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ‌.

ಬೊಮ್ಮಾಯಿ ಬಜೆಟ್ ಕೊಡುಗೆ ಏನಿರಲಿದೆ?: 25 ತಾಲೂಕುಗಳಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಸಾಧ್ಯತೆ ಇದೆ. ರೈತರ ಅನಿಶ್ಚಿತತೆಯ ಬದುಕಿಗೆ ನಿಶ್ಚಿತತೆಯನ್ನು ತಂದುಕೊಡುವ ಕಾರ್ಯಕ್ರಮಗಳ ಘೋಷಣೆ ಆಗಲಿದೆ ಎನ್ನಲಾಗ್ತಿದೆ. ಸಮಗ್ರ ಗ್ರಾಮೀಣ ಕೃಷಿ ಆಧಾರಿತ ವ್ಯವಸಾಯಕ್ಕೆ ಗ್ರಾಮೀಣ ಸಾಲ ವ್ಯವಸ್ಥೆ ಬಸಲಾಯಿಸುವ ಹೊಸ ಯೋಜನೆ ನೀಡಬಹುದು. ರೈತರ ಸಾಲದ ಮಿತಿಯನ್ನು ಹೆಚ್ಚಿಸುವ ಯೋಜನೆ ಘೋಷಣೆ ಹಾಗು ಅಡಿಕೆ ರೋಗ ತಡೆಯುವಿಕೆಗೆ ಬಜೆಟ್​ನಲ್ಲಿ ವಿಶೇಷ ಅನುದಾನ ನೀಡುವ ನಿರೀಕ್ಷೆಯಿದೆ.

ಪುನೀತ್​ ಸ್ಮಾರಕ.. ಇನ್ನು, ದಿವಂಗತ ಪುನೀತ್ ರಾಜಕುಮಾರ್ ಅವರ ಸಮಾಧಿ ಸ್ಥಳದಲ್ಲಿ ಅದ್ಭುತ ಸ್ಮಾರಕ ಸ್ಥಾಪನೆ, ಬೆಂಗಳೂರು ನಗರದಲ್ಲಿ ಸಮಗ್ರವಾಗಿ ರಾಜಕಾಲುವೆ ಪುನರ್​ ನಿರ್ಮಾಣ ಮಾಡಲು ಐಐಎಸ್​ಸಿ ಸೇರಿದಂತೆ ಇತರೆ ವರದಿಗಳನ್ನು ಆಧರಿಸಿ ಬೆಂಗಳೂರಿನ ಒಳಚರಂಡಿ ವ್ಯವಸ್ಥೆ ಸುಧಾರಣೆಗಾಗಿ ವಿಶೇಷ ಮಾಸ್ಟರ್ ಪ್ಲಾನ್ ಮಾಡುವ ನಿರೀಕ್ಷೆ ಇದೆ.

ಪತ್ರಕರ್ತರಿಗೆ ಬಸ್​ ಪಾಸ್​.. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಬಜೆಟ್​ನಲ್ಲಿ ಅನುದಾನ ಮತ್ತು ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಳ ಸಾಧ್ಯತೆಯಿದೆ. ವೃತ್ತಿ ಆಧಾರಿತವಾದ ಕುಲ ಕಸುಬುಗಳ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ, ರೈತರ ಪರವಾಗಿ ವಿಶೇಷ ಬಜೆಟ್ ಮಂಡನೆ ಜೊತೆಗೆ ಈ ಬಾರಿ ರೈತರ ಪರವಾಗಿ ವಿಶೇಷವಾದ ಬಜೆಟ್ ಇರಲಿದೆ ಎಂದು ಹೇಳಲಾಗ್ತಿದೆ.

ಕಾಯಕ ಯೋಜನೆ ಘೋಷಣೆ ಸಾಧ್ಯತೆ.. ಕೃಷಿಗೆ ಪೂರಕವಾಗಿರುವ ಇತರೆ ಕಸುಬುದಾರರಿಗೆ ಕಾಯಕ ಯೋಜನೆ ಘೋಷಣೆ ಸಾಧ್ಯತೆ, ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ಧತಿಯ ಗೋದಾಮುಗಳ ನಿರ್ಮಾಣ, ಆಯವ್ಯಯದಲ್ಲಿ ವಿಕಲಚೇತನರಿಗೆ ವಿವಿಧ ಕಾರ್ಯಕ್ರಮಗಳ ಘೋಷಣೆ ಆಗುವ ಸಾಧ್ಯತೆಯಿದೆ. ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನ, ಕರಾವಳಿ ಭಾಗದ ಚಟುವಟಿಕೆ, ಬಂದರುಗಳ ಅಭಿವೃದ್ಧಿ, ಮೂಲ ಉದ್ಯೋಗಕ್ಕೆ ಇಂಬು ಕೊಡುವ, ಪ್ರವಾಸೋದ್ಯಮವನ್ನು ವಿಸ್ತರಿಸುವ ದೊಡ್ಡ ಕಾರ್ಯಕ್ರಮ ಘೋಷಣೆ ಮತ್ತು ಬೆಂಗಳೂರು ಮೂಲಭೂತಸೌಕರ್ಯ ಅಭಿವೃದ್ಧಿಗಾಗಿ ಬಂಪರ್ ಕೊಡುಗೆ ನೀಡುವ ಸಾಧ್ಯತೆ ಇದೆ.

ಇನ್ನು, ಬಜೆಟ್​ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷವಾದ ಒತ್ತು, ಹಣಕಾಸಿನ ನೆರವು, ನೇಕಾರರಿಗೆ ಬೆಂಬಲ ನೀಡಲು ಕಚ್ಚಾ ವಸ್ತು ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಸಹಾಯ ಸಿಗುವ ನಿರೀಕ್ಷೆ ಇದೆ. ಎಲ್ಲಾ ಸಮಾಜದ ಮಠಗಳಿಗೆ ಹೆಚ್ಚಿನ ಅನುದಾನ ಮತ್ತು ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡುವ ಜೊತೆಗೆ ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆ, ಏತ ನೀರಾವರಿಗಳಿಗೆ ಹೆಚ್ಚಿನ ಅನುದಾನ ಘೋಷಣೆ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಬೊಮ್ಮಾಯಿ‌ ಬಜೆಟ್​​​​ಗೆ ಕ್ಷಣಗಣನೆ: ಬಿಜೆಪಿ ನಿರೀಕ್ಷೆ ಏನು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.