ETV Bharat / state

ನಾನು ಸ್ಟ್ರಾಂಗ್ ಆಗಿ ಆಡಳಿತ ನಡೆಸಿದ್ರೆ ಡಿಕೆಶಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ: ಸಿಎಂ ತಿರುಗೇಟು

author img

By

Published : Apr 30, 2022, 7:53 PM IST

ನೇಮಕಾತಿ ಹಗರಣದಲ್ಲಿ ಸಚಿವರು ಭಾಗಿಯಾಗಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪ ಪೂರ್ಣ ಆಧಾರ ರಹಿತವಾಗಿದೆ. ಇದು ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ ಎಂದು ಸಿಎಂ ಕಿಡಿಕಾರಿದರು.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಾನು ಸರಳವಾಗಿ ಆಡಳಿತ ಮಾಡುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರಿಗೆ ಬಹಳ ತೊಂದರೆಯಾಗಿದೆ. ಇನ್ನು ಸ್ಟ್ರಾಂಗ್ ಆಗಿ ಆಡಳಿತ ನಡೆಸಿದರೆ ಅವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನನ್ನು ವೀಕೆಸ್ಟ್ ಸಿಎಂ ಎಂದಿದ್ದಾರೆ. ಯಾಕೆಂದರೆ ನನ್ನ ಆಡಳಿತದಲ್ಲಿ ಅವರಿಗೆ ಬಹಳ ತೊಂದರೆಯಾಗಿದೆ. ಯಾವುದು ಯಾವುದೋ, ಏನೇನೋ ಪ್ರಯತ್ನ ಮಾಡಿದರು. ಆದರೆ ಅದು ಯಾವುದೂ ಯಶಸ್ವಿಯಾಗಿಲ್ಲ. ಆದ್ದರಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪಿಎಸ್ಐ ನೇಮಕಾತಿಗೆ ಮರು ಪರೀಕ್ಷೆ ಕಡ್ಡಾಯ: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ತನಿಖೆ ನಡೆಸಲು ಒಂದು ವ್ಯವಸ್ಥೆ ಇದೆ. ಕಾನೂನು ಪ್ರಕಾರ ಎಲ್ಲ ಆಗಬೇಕಿದೆ. ನಿಮಗೆ ಅದನ್ನು ಎದುರಿಸುವ ತಾಕತ್ತು ಇಲ್ಲ ಎಂದು ಹಗರಣ ಪ್ರಕರಣವನ್ನು ವಿಷಯಾಂತರ ಮಾಡಬಾರದು. ನಿಮಗೆ ಮಾಹಿತಿ ಇದ್ದರೆ ಅದನ್ನು ತನಿಖಾಧಿಕಾರಿಗೆ ಕೊಡಿ ಎಂದಷ್ಟೇ ಕೇಳಿದ್ದೇವೆ. ಅದಕ್ಕೆ ಇಷ್ಟೊಂದು ರಾದ್ಧಾಂತ ಮಾಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ತಿವಿದರು.

ಈಗಾಗಲೇ ತನಿಖೆ ಪ್ರಕ್ರಿಯೆ ನಡೆಯುತ್ತಿದೆ. ಕೆಲವರ ಬಂಧನವಾಗಿದೆ. ಯಾರ ವಿರುದ್ಧ ಆರೋಪ ಬಂದರೂ ಅದನ್ನೆಲ್ಲಾ ತನಿಖೆ ಮಾಡಬೇಕಿದೆ. ಕಾಂಗ್ರೆಸ್​ನವರು ಹಿಟ್​ ಆ್ಯಂಡ್ ರನ್ ಮಾಡಬಾರದು. ಇದು ಸರ್ಕಾರದ ವೈಫಲ್ಯ ಅಲ್ಲ. ಹಿಂದೆಯೂ ಕೂಡ ಯುಪಿಎಎಸ್​ ಮಾದರಿಯಲ್ಲಿಯೇ ನೇಮಕಾತಿ ನಡೆಯುತ್ತಾ ಬಂದಿದೆ. ಕೆಲವರು ಈ ಬಾರಿ ಟೆಕ್ನಾಲಜಿ ಬಳಸಿ ಚಾಪೆ, ರಂಗೋಲಿ ಕೆಳಗೆ ಹೋಗುವ ಪ್ರಯತ್ನ ಮಾಡಿದ್ದಾರೆ ಎಂದರು.

ಪ್ರಶ್ನೆಪತ್ರಿಕೆ ಲೀಕ್ ಮಾಡಿರುವ ಪ್ರಕರಣ ಕೂಡ ಆಗಿದೆ. ಹಿಂದೆ ಎರಡ್ಮೂರು ಬಾರಿ ಪರೀಕ್ಷೆಗಳು ಮುಂದೂಡಿಕೆ ಆಗಿರುವುದು ಇದೆ. ಹಾಗಾಗಿ ಪರೀಕ್ಷೆ ವ್ಯವಸ್ಥೆಯಲ್ಲಿ ಬದಲಾವಣೆ ಮತ್ತು ಸುಧಾರಣೆ ತರಬೇಕು. ಯಾವುದೇ ಲೋಪವಿಲ್ಲದೆ ಪರೀಕ್ಷೆ ಅತಿ ಶೀಘ್ರವಾಗಿ ನಡೆಸಬೇಕು ಎಂದು ಸೂಚಿಸಿದ್ದೇನೆ ಎಂದು ಹೇಳಿದರು.

ಸಚಿವರ ಭಾಗಿ ಬಗ್ಗೆ ಆಧಾರ ರಹಿತ ಆರೋಪ: ನೇಮಕಾತಿ ಹಗರಣದಲ್ಲಿ ಸಚಿವರು ಭಾಗಿಯಾಗಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪ ಪೂರ್ಣ ಆಧಾರ ರಹಿತವಾಗಿದೆ. ಇದು ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ. ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಅದರ ಆಧಾರದಲ್ಲಿ ದಾಳಿ ನಡೆದಿದೆ. ಯಾವುದೇ ಪಕ್ಷದ ಯಾರೇ ಇರಲಿ ನಿಷ್ಪಕ್ಷಪಾತವಾದ ತನಿಖೆ ಆಗುತ್ತದೆ ಎಂದರು.

ಕೆಲವರು ಅವರ ಬುಡಕ್ಕೆ ಬಂದಾಗ ಈ ರೀತಿ ಮಾತನಾಡುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಆದಾಗ ಯಾವುದೇ ಪರೀಕ್ಷೆ ಇದ್ದರೂ ಮರು ಪರೀಕ್ಷೆ ನಡೆಸಲಾಗುತ್ತದೆ. 30-40 ವರ್ಷದಿಂದ ಇದೇ ಮಾಡುತ್ತಿದ್ದೇವೆ. ಈಗ ನಾವು ಇಲ್ಲಿ ನೇಮಕಾತಿ ನೋಟಿಫಿಕೇಶನ್ ರದ್ದು ಮಾಡಿಲ್ಲ. ಮರು ಪರೀಕ್ಷೆ ಮಾಡುತ್ತಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರ ಸಮ್ಮತಿ: ಹೆಚ್ಚುವರಿಯಾಗಿ ಮೂರು ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ ಎಂದು ಸಿಎಂ ಇದೇ ವೇಳೆ ತಿಳಿಸಿದ್ದಾರೆ. ರಾಜ್ಯದಲ್ಲಿ ತುರ್ತಾಗಿ ಬೆಂಬಲ ಬೆಲೆಯಡಿ ರಾಗಿ ಖರೀದಿ ಆಗಬೇಕಿದೆ. ಐದಾರು ಜಿಲ್ಲೆಗಳಲ್ಲಿ ರಾಗಿ ಬೆಳೆದ ರೈತರಿಗೆ ಬೆಲೆ ಸಿಗಬೇಕಿದೆ. ಮೊದಲು ಎರಡು ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಗಿತ್ತು. ಮತ್ತೆ ಬೇಡಿಕೆ ಬಂದ ನಂತರ ಇನ್ನಷ್ಟು ಖರೀದಿ ಮಾಡಬೇಕು ಎಂದು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿ ಮನವಿ ಸಲ್ಲಿಸಿದ್ದೆ. ಈಗ ಅವರು ಖರೀದಿ ಆದೇಶ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ನ್ಯಾಯಾಂಗ ಮೂಲಸೌಕರ್ಯ ಕಲ್ಪಿಸಲು ಪ್ರಾಧಿಕಾರ ರಚನೆ: ನ್ಯಾಯಾಂಗದಲ್ಲಿ ಮೂಲಸೌಕರ್ಯ ಕಲ್ಪಿಸುವ ಕುರಿತು ಪ್ರಾಧಿಕಾರ ರಚನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಮಹತ್ವದ ನಿರ್ಧಾರವನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳ ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ಅವರು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದೆಹಲಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳೊಂದಿಗೆ ನಡೆದ ಸಭೆಯಲ್ಲಿ ಬಹಳಷ್ಟು ಚರ್ಚೆ ನಡೆಯಿತು. ಪ್ರಧಾನಿ ಮೋದಿ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು 2-3 ಪ್ರಮುಖವಾದ ವಿಚಾರದಲ್ಲಿ ಚರ್ಚೆ ನಡೆಸಿದರು. ಅತಿ ಶೀಘ್ರದಲ್ಲಿ ನ್ಯಾಯ ಸಿಗಬೇಕು, ಎಲ್ಲರಿಗೂ ನ್ಯಾಯ ಸಿಗಬೇಕು, ನ್ಯಾಯ ವ್ಯವಸ್ಥೆಯನ್ನು ಬಲಪಡಿಸಬೇಕು ಎನ್ನುವ ಕುರಿತು ಸಮಾಲೋಚನೆ ನಡೆಸಲಾಯಿತು ಎಂದು ಹೇಳಿದರು.

ಇದರ ಜೊತೆಗೆ ನ್ಯಾಯಾಂಗದ ಮೂಲಸೌಕರ್ಯ ಹೆಚ್ಚಿಸುವ ಬಗ್ಗೆ ಬಹಳ ಚರ್ಚೆ ಆಯಿತು. ಕೇಂದ್ರ ಮತ್ತು ರಾಜ್ಯ ಎರಡೂ ಸೇರಿ ಒಟ್ಟಾಗಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಬಹುದು ಎನ್ನುವ ಕುರಿತು ಚರ್ಚೆ ನಡೆಯಿತು. ರಾಜ್ಯದಲ್ಲಿ ಒಂದು ಪ್ರಾಧಿಕಾರ ರಚಿಸಬೇಕು. ಅದರಲ್ಲಿ ಮುಖ್ಯ ನ್ಯಾಯಮೂರ್ತಿಗಳು, ಮುಖ್ಯಮಂತ್ರಿಗಳು ಕಾನೂನು ಸಚಿವರು, ಅಧಿಕಾರಿಗಳು ಇರಬೇಕು. ಆ ಪ್ರಾಧಿಕಾರದ ಮೂಲಕ ಮೂಲಸೌಕರ್ಯ ಕಲ್ಪಿಸುವ ಕೆಲಸ ಆಗಬೇಕು ಎಂದು ನಿರ್ಧರಿಸಲಾಯಿತು ಎಂದರು.

ಹುದ್ದೆಗಳ ಭರ್ತಿ ಬಗ್ಗೆಯೂ ಚರ್ಚೆ: ನ್ಯಾಯಾಂಗದಲ್ಲಿ ಮಂಜೂರಾತಿ ಹುದ್ದೆಗಳ ಶೀಘ್ರ ಭರ್ತಿ ಮಾಡಲು ಚರ್ಚಿಸಲಾಯಿತು. ಜಿಲ್ಲಾಮಟ್ಟದಲ್ಲಿ ಇರುವ ಹುದ್ದೆಗಳನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ, ಹೈಕೋರ್ಟ್​ನ ಹುದ್ದೆಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿಗಳು ಆದಷ್ಟು ಬೇಗ ತುಂಬವ ಕೆಲಸ ಕಾರ್ಯಗಳು ಆಗಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಯಿತು ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ: ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.