ರಾಜ್ಯದಲ್ಲಿ ಮಳೆ ಹಾನಿ, ಎರಡು ತಿಂಗಳಲ್ಲಿ 70 ಜನ ಸಾವು: 2 ಹೆಚ್ಚುವರಿ ಎಸ್​​ಡಿಆರ್​ಎಫ್ ತಂಡ ರಚನೆಗೆ ಸಿಎಂ ಸೂಚನೆ

author img

By

Published : Aug 6, 2022, 7:39 PM IST

cm-basavaraj-bommai-meeting-about-rain-situation

ಮಳೆಯಿಂದಾಗಿ ಆದ ಬೆಳೆಹಾನಿ ಜಂಟಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ, ಬೆಳೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಹಾನಿ ಸಮೀಕ್ಷೆ ವಾಸ್ತವಿಕವಾಗಿರಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಎರಡು ಎಸ್​ಡಿಆರ್​ಎಫ್ ತಂಡಗಳನ್ನು ರಚಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ಭೂಕುಸಿತ, ಬೆಳೆಹಾನಿ ಮೊದಲಾದ ವಿಷಯಗಳ ಕುರಿತು ಮಾಹಿತಿ ಪಡೆದರು.

ರಾಜ್ಯದಲ್ಲಿ ಈಗಾಗಲೇ ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್ ತಂಡಗಳನ್ನು ನಿಯೋಜಿಸಿದ್ದು, ಜಿಲ್ಲಾಧಿಕಾರಿಗಳು ಈ ತಂಡದೊಂದಿಗೆ ನಿಕಟ ಸಂಪರ್ಕ ಹೊಂದಿ, ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರಬೇಕು ಎಂದು ಸಿಎಂ ಹೇಳಿದರು.

200 ಕೋಟಿ ರೂ. ಬಿಡುಗಡೆ: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಇಂದು 21 ಜಿಲ್ಲೆಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಜೀವಹಾನಿ, ಮನೆ ಹಾನಿ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಗೊಳಗಾಗಿ ಸಂಪರ್ಕ ಕಡಿತವಾಗುವ ರಸ್ತೆ, ಸೇತುವೆಗಳ ದುರಸ್ತಿಯನ್ನು ಕೂಡಲೇ ಕೈಗೊಂಡು, ಸಂಪರ್ಕ ಮರುಸ್ಥಾಪಿಸಬೇಕು. ವಿದ್ಯುತ್ ಕಂಬ, ಟ್ರಾನ್ಸ್​ಫಾರ್ಮರ್​ಗಳ ಹಾನಿ ಕುರಿತೂ ಸಹ ಜಾಗೃತರಾಗಿ, ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ತ್ವರಿತವಾಗಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಎಸ್ಕಾಂಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚುವರಿ ವಿದ್ಯುತ್ ಕಂಬಗಳು, ಟ್ರಾನ್ಸ್​ಫಾರ್ಮರ್​ಗಳ​ ದಾಸ್ತಾನು ಖಾತರಿಪಡಿಸಲು ನಿರ್ದೇಶನ ನೀಡಿದರು.

ಹಾನಿ ಸಮೀಕ್ಷೆಗೂ ಕ್ರಮ ವಹಿಸಿ: ಬೆಳೆಹಾನಿ ಜಂಟಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ, ಬೆಳೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಹಾನಿ ಸಮೀಕ್ಷೆ ವಾಸ್ತವಿಕವಾಗಿರಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೇ, ಗದಗ ಜಿಲ್ಲೆಯ ಬೆಣ್ಣಿಹಳ್ಳ, ಹಾವೇರಿ ಜಿಲ್ಲೆಯ ವರದಾ ನದಿ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.

ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡುವಾಗ ಅಣೆಕಟ್ಟುಗಳ ಕೆಳ ಭಾಗದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಬೇಕು. ರಾಜ್ಯದ ಹಲವಾರು ಕೆರೆಗಳು ತುಂಬಿದ್ದು, ಅಪಾಯದ ಅಂಚಿನ ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಣ್ಣಿನ ಕುಸಿತ, ಭೂಕುಸಿತದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಬೇಕೆಂದು ಹೇಳಿದರು.

ಅಪಾಯ ಸ್ಥಳಗಳಿಂದ ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕು. ರಸ್ತೆಗಳ ಮೇಲೆ ಭೂಕುಸಿತ ಉಂಟಾದಲ್ಲಿ ತೆರವುಗೊಳಿಸಲು ತಂಡಗಳನ್ನು ದಿನದ 24 ಗಂಟೆಯೂ ಸನ್ನದ್ಧವಾಗಿರಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಆಹಾರ ಒದಗಿಸಬೇಕು. ಕಾಳಜಿ ಕೇಂದ್ರಕ್ಕೆ ಬರದ ನಿರಾಶ್ರಿತರಿಗೆ ಡ್ರೈ ರೇಷನ್ ಕಿಟ್ ಒದಗಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥನಾರಾಯಣ, ನಾರಾಯಣಗೌಡ, ಗೋಪಾಲಯ್ಯ, ಬಿ.ಎ.ಬಸವರಾಜ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಹಾನಿಯ ಪ್ರಮಾಣ (ಜೂ.1ರಿಂದ ಆ.6ರ ವರೆಗೆ):

  • ಮಾನವ ಜೀವ ಹಾನಿ 70
  • ಜಾನುವಾರು ಜೀವಹಾನಿ 507
  • ಸಂಪೂರ್ಣ ಹಾನಿಯಾಗಿರುವ ಮನೆಗಳು 3,559
  • ಭಾಗಶ: ಹಾನಿಯಾಗಿರುವ ಮನೆಗಳು 17,212
  • ಕೃಷಿ ಬೆಳೆ ಹಾನಿ 1,29,087 ಹೆಕ್ಟೇರ್
  • ತೋಟಗಾರಿಕಾ ಬೆಳೆ ಹಾನಿ 794,2 ಹೆಕ್ಟೇರ್
  • ರಸ್ತೆ ಹಾನಿ 3,162 ಕಿ.ಮೀ
  • ಗ್ರಾಮೀಣ ರಸ್ತೆ ಹಾನಿ 8,445 ಕಿ.ಮೀ
  • ಸೇತುವೆ ಮತ್ತು ಕಲ್ವರ್ಟ್ ಹಾನಿ 1,068
  • ಶಾಲೆಗಳ ಹಾನಿ 4,531
  • ಅಂಗನವಾಡಿಗಳ ಹಾನಿ 222
  • ಹಾಳಾಗಿರುವ ವಿದ್ಯುತ್ ಕಂಬಗಳು 16,760
  • ಟ್ರಾನ್ಸ್​ಫಾರ್ಮರ್​ಗಳ​ ಹಾನಿ 1,469
  • ಸಣ್ಣ ನೀರಾವರಿ ಕೆರೆಗಳ ಹಾನಿ 93
ETV Bharat Logo

Copyright © 2024 Ushodaya Enterprises Pvt. Ltd., All Rights Reserved.