ಬೊಮ್ಮಾಯಿ ಸರ್ಕಾರಕ್ಕೆ ವಿಧಾನಮಂಡಲ ಅಧಿವೇಶನ ಅಗ್ನಿಪರೀಕ್ಷೆ: 10 ದಿನಗಳ ಕಲಾಪದಲ್ಲಿ ಏನಿರಲಿದೆ?

author img

By

Published : Sep 13, 2021, 6:48 AM IST

cm-basavaraj-bommai-govts-first-legislature-session-from-today

ಇಂದಿನಿಂದ ಹತ್ತು ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲ ಅಧಿವೇಶನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಮಧ್ಯೆ ವಾಕ್ಸಮರ, ಆರೋಪ-ಪ್ರತ್ಯಾರೋಪ, ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗುವುದು ಖಚಿತ.

ಬೆಂಗಳೂರು: ಇಂದಿನಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೊಮ್ಮಾಯಿ ಅವರಿಗೆ ಇದು ಮೊದಲ ಅಗ್ನಿಪರೀಕ್ಷೆ. ಅತ್ತ ಪ್ರತಿಪಕ್ಷ ಬೊಮ್ಮಾಯಿ ಸರ್ಕಾರದ ಮೇಲೆ ಮುಗಿಬೀಳಲು ಸಜ್ಜಾಗಿದ್ದರೆ, ಇತ್ತ ಆಡಳಿತಾರೂಢ ಪಕ್ಷವೂ ತನ್ನದೇ ಆದ ಪ್ರತಿತಂತ್ರದೊಂದಿಗೆ ಅಣಿಯಾಗಿದೆ.

ರಾಜ್ಯದಲ್ಲಿ ನಡೆದ ನಾಯಕತ್ವ ಬದಲಾವಣೆ ಕ್ಷಿಪ್ರ ಬೆಳವಣಿಗೆಯ ನಂತರ ಮೊದಲ ಅಧಿವೇಶನ ನಡೆಯುತ್ತಿದೆ. ಹೊಸ ಮುಖ್ಯಮಂತ್ರಿಯ ಜೊತೆಗೆ ಕೆಲ ಮಂತ್ರಿಗಳೊಂದಿಗೆ ಹೊಸ ಸರ್ಕಾರ ಅಸ್ತಿತ್ವದಲ್ಲಿದೆ. ಸಿಎಂ ಆಗಿ ಬೊಮ್ಮಾಯಿ ಮೊದಲ ಅಧಿವೇಶನ ಎದುರಿಸುತ್ತಿದ್ದಾರೆ. ಇಂದಿನಿಂದ ಹತ್ತು ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲ ಅಧಿವೇಶನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಮಧ್ಯೆ ವಾಕ್ಸಮರ, ಆರೋಪ - ಪ್ರತ್ಯಾರೋಪ, ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗುವುದು ಖಚಿತ.

ಪ್ರತಿ ಬಾರಿಯ ಅಧಿವೇಶನವೂ ಜನಪ್ರತಿನಿಧಿಗಳ ನಿರುತ್ಸಾಹಕ್ಕೆ ಸಾಕ್ಷಿಯಾಗುತ್ತಿತ್ತು. ಶಾಸಕರ ಗೈರಿನೊಂದಿಗೆ ಬಹುತೇಕ ಕಲಾಪಗಳು ನೆರವೇರುತ್ತಿತ್ತು. ಈ ಬಾರಿಯ ಮಳೆಗಾಲದ ಅಧಿವೇಶವೂ ಜನಪ್ರತಿನಿಧಿಗಳ ನಿರುತ್ಸಾಹಕ್ಕೆ ಸಾಕ್ಷಿಯಾಗಲಿದೆಯಾ?,ಅಥವಾ ಸಕ್ರಿಯವಾಗಿ ಕಲಾಪದಲ್ಲಿ ಭಾಗವಹಿಸಿ ಕ್ಷೇತ್ರದ ಅಭಿವೃದ್ಧಿ, ಸಾರ್ವಜನಿಕ ಮಹತ್ವದ ವಿಚಾರ, ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದಾರೆಯೋ ಎಂಬುದು ಎಲ್ಲರ ನಿರೀಕ್ಷೆ.

ಜಾತಿ ಸಮೀಕ್ಷೆ ವರದಿ ಕುತೂಹಲ:

ಮಳೆಗಾಲದ ಅಧಿವೇಶನದಲ್ಲಿ ಬಹು ನಿರೀಕ್ಷಿತ ಜಾತಿಗಣತಿ ವರದಿ‌ ಮಂಡನೆಯ ವಿಚಾರ ಬಹಳ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಜಾತಿಗಣತಿ ವರದಿ ಮಂಡನೆಗೆ ಒತ್ತಾಯಿಸುತ್ತಿದೆ. ಹೀಗಾಗಿ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷ ಜಾತಿಗಣತಿ ವರದಿ ಮಂಡನೆಗೆ ಪಟ್ಟು ಹಿಡಿಯುವುದು ಬಹುತೇಕ ಖಚಿತ.

ಇತ್ತ ಬೊಮ್ಮಾಯಿ ಸರ್ಕಾರ ವಿವಾದಿತ ಜಾತಿಗಣತಿ ವರದಿಗೆ ಮಣೆ ಹಾಕುವುದು ಅನುಮಾನವಾಗಿದೆ. ಈಗಾಗಲೇ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಜಾತಿಗಣತಿ ವರದಿ ಮಂಡನೆ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಜಾತಿಗಣತಿ ವರದಿ ಮಂಡನೆ ವಿಚಾರ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ಮಧ್ಯೆ ಆರೋಪ - ಪ್ರತ್ಯಾರೋಪಕ್ಕೆ ಕಾರಣವಾಗಲಿದೆ.

ಉಳಿದಂತೆ ರಾಷ್ಟ್ರೀಯ ಶಿಕ್ಷಣ ನೀತಿ, ಕೋವಿಡ್ ನಿರ್ವಹಣೆ, ಕೋವಿಡ್ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರ, ನೆರೆ ಪರಿಹಾರ, ಅನುದಾನ ಕೊರತೆ, ಕಾನೂನು ಸುವ್ಯವಸ್ಥೆ ವಿಷಯಗಳು ಸದನದಲ್ಲಿ ಕಾವೇರಿದ ಚರ್ಚೆಗೆ ಗ್ರಾಸವಾಗಲಿದೆ.

ಅಧಿವೇಶನದಲ್ಲಿ ಮಂಡನೆಯಾಗಲಿದೆ 18 ಮಸೂದೆಗಳು:

ಈ ಬಾರಿಯ ಅಧಿವೇಶನದಲ್ಲಿ ಮಹತ್ವದ 18 ಮಸೂದೆಗಳು ಮಂಡನೆಯಾಗಲಿದೆ. ಇದರಲ್ಲಿ ನಾಲ್ಕು ಆಧ್ಯಾದೇಶಗಳನ್ನು ವಿಧೇಯಕವಾಗಿ ಅಧಿವೇಶನದಲ್ಲಿ ‌ಮಂಡಿಸಲಾಗುವುದು.‌ ಉಳಿದಂತೆ ನಾಲ್ಕು ವಿಧೇಯಕಗಳು ಕಳೆದ ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಿದ್ದು, ಅಂಗೀಕಾರಕ್ಕೆ ಬಾಕಿ ಉಳಿದ ಮಸೂದೆಗಳಾಗಿವೆ. 10 ವಿಧೇಯಕಗಳು ಹೊಸದಾಗಿ ಈ ಅಧಿವೇಶನದಲ್ಲಿ ಮಂಡನೆಯಾಗಲಿವೆ.

  • ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ, ಮೀಸಲಾತಿ) (ತಿದ್ದುಪಡಿ) ವಿಧೇಯಕ- 2018
  • ಕರ್ನಾಟಕ ಲೋಕಾಯುಕ್ತ' (ಮೂರನೇ ತಿದ್ದುಪಡಿ) ವಿಧೇಯಕ, 2020
  • ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2021
  • ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2021
  • ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧ್ಯಾದೇಶ, 2021
  • ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ಅಧ್ಯಾದೇಶ, 2021
  • ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧ್ಯಾದೇಶ 2021
  • ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ಅಧ್ಯಾದೇಶ 2021
  • ನೀರು ಸರಬರಾಜು ಮತ್ತು ಗ್ರಾಮಾಂತರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, 2021
  • ಕರ್ನಾಟಕ ಕಳಭಟ್ಟಿ ವ್ಯಾಪಾರಿಗಳು, ಮಾದಕವಸ್ತು ಅಪರಾಧಿಗಳ, ಜೂಜುಕೋರರ ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಹಾಗೂ ದೃಶ್ಯ ಅಥವಾ ಧ್ವನಿ ಕಳ್ಳಮುದ್ರಕರ ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ (ತಿದ್ದುಪಡಿ) ವಿಧೇಯಕ, 2021
  • ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021
  • ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021
  • ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳ ವಿಧೇಯಕ, 2021
  • ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ, 2021
  • ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, 2021
  • ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ 2021
  • ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ, 2021
  • ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2021
ETV Bharat Logo

Copyright © 2024 Ushodaya Enterprises Pvt. Ltd., All Rights Reserved.