ETV Bharat / state

ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ :"ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ"- ಸಚಿವ ಈಶ್ವರ್​ ಖಂಡ್ರೆ

author img

By ETV Bharat Karnataka Team

Published : Sep 30, 2023, 7:09 AM IST

Updated : Sep 30, 2023, 7:31 AM IST

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಶುಕ್ರವಾರ ಸಂಜೆ ಅರಣ್ಯ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳ ಪದಕ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ
ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ

ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ

ಬೆಂಗಳೂರು: "ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ, ಇದಕ್ಕೆ ಆನೆ ಮತ್ತು ಹುಲಿ ಸಂಖ್ಯೆಯಲ್ಲಿ ರಾಜ್ಯ ಅಗ್ರ ಎರಡು ಸ್ಥಾನದಲ್ಲಿರುವುದು ಸಾಕ್ಷಿ" ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಶುಕ್ರವಾರ ಸಂಜೆ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸಮೃದ್ಧ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಹೊಂದಿದ್ದು ಸಸ್ಯಶ್ಯಾಮಲೆಯಾಗಿದೆ ಎಂದರು.

ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ
ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ

ನಮ್ಮ ರಾಜ್ಯದಲ್ಲಿ 6,395 ಆನೆಗಳಿವೆ. ಅದೇ ರೀತಿ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 560 ಹುಲಿಗಳಿವೆ. ಅಳಿವಿನಂಚಿನಲ್ಲಿರುವ ಹುಲಿಗಳನ್ನು ಸಂರಕ್ಷಿಸಲು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು 1973ರಲ್ಲಿ ಆರಂಭಿಸಿದ ಹುಲಿ ಯೋಜನೆಗೆ 50 ವರ್ಷ ತುಂಬಿರುವುದು ಮತ್ತೊಂದು ಸಂತೋಷದಾಯಕ ವಿಚಾರವಾಗಿದೆ.

1980ರಲ್ಲಿ ದೇಶದಲ್ಲಿ ಕೇವಲ 1,827ರಷ್ಟಿದ್ದ ಹುಲಿಗಳ ಸಂಖ್ಯೆ ಈಗ 3ಸಾವಿರ ದಾಟಿದೆ. ಅರಣ್ಯ, ವನ್ಯಜೀವಿಗಳ ಸಂರಕ್ಷಣೆಯಲ್ಲಿ ಇಂದಿರಾ ಗಾಂಧಿ ಅವರು ತಂದ ಕಾಯಿದೆ ಪರಿಣಾಮಕಾರಿಯಾಗಿದೆ ಎಂದರು. ರಾಜ್ಯದಲ್ಲಿ ಕೂಡ ಹುಲಿಗಳ ರಕ್ಷಣೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಹಿಂದೆ ಹುಲಿಗಳ ಚರ್ಮಕ್ಕಾಗಿ, ಉಗುರಿಗಾಗಿ ಹುಲಿಗಳ ಕಳ್ಳಬೇಟೆ ನಡೆಯುತ್ತಿತ್ತು. ಇದನ್ನು ಮನಗಂಡು ಅರಣ್ಯ ಇಲಾಖೆ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಕಳ್ಳಬೇಟೆ ತಡೆ ಶಿಬಿರ ಅಂದರೆ ಆ್ಯಂಟಿ ಪೋಚಿಂಗ್ ಕ್ಯಾಂಪ್ ತೆರೆದಿದೆ. ಇದರಿಂದ ಕಳ್ಳಬೇಟೆ ನಿಂತಿದ್ದು, ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಈವರೆಗೆ 57 ಅರಣ್ಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರೆಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಪದಕ ಪಡೆದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ
ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ

ಪಶ್ಚಿಮ ಘಟ್ಟ ಜೀವವೈವಿಧ್ಯತೆಯ ತಾಣ: ಕರ್ನಾಟಕ ಪಶ್ಚಿಮಘಟ್ಟಗಳಂತೂ ಸಾವಿರಾರು ಬಗೆಯ ಪಕ್ಷಿ ಪ್ರಭೇದ, ಜೀವಿ ಪ್ರಭೇದಗಳ ತಾಣವಾಗಿದ್ದು, ಹಲವು ನದಿಗಳ ಉಗಮಸ್ಥಾನವೂ ಆಗಿದೆ. ರಾಜ್ಯದಲ್ಲಿ ಸುಮಾರು 43 ಸಾವಿರ ಚದರ ಕಿಲೋ ಮೀಟರ್ ಅರಣ್ಯ ಪ್ರದೇಶ ಇದೆ. ಅಂದರೆ ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಶೇ.21ರಷ್ಟು ಮಾತ್ರ ಅರಣ್ಯವಿದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಅರಣ್ಯ ಒತ್ತುವರಿ ಆಗಿದೆ. ಅರಣ್ಯ ಕ್ಷೀಣಿಸಿದಂತೆ ವನ್ಯಮೃಗಗಳು ಕಾಡಿನಿಂದ ನಾಡಿಗೆ ಬರುವುದೂ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಪ್ರದೇಶ ಹೆಚ್ಚಿಸುವುದು ಮತ್ತು ಅರಣ್ಯ ಒತ್ತುವರಿ ತೆರವು ಮಾಡುವುದು ಅರಣ್ಯ ಇಲಾಖೆಯ ಸಿಬ್ಬಂದಿಯ ಆದ್ಯತೆ ಆಗಬೇಕು. ಮೂರು ತಲೆಮಾರಿನಿಂದ 1978ಕ್ಕೆ ಮುನ್ನ ಅರಣ್ಯದಲ್ಲಿರುವ ಮತ್ತು ಗಡುವಿನೊಳಗೆ ಅರ್ಜಿ ಸಲ್ಲಿಸಿರುವ ಬಡವರಿಗೆ ಹಕ್ಕುಪತ್ರಗಳನ್ನು 3 ತಿಂಗಳೊಳಗೆ ಕೊಡಿಸಲು ಶ್ರಮಿಸಬೇಕು ಎಂದು ಸೂಚಿಸಿದರು.

ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ
ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ

ಅರಣ್ಯ ವರ್ಧನೆಗೆ ಒತ್ತು: ತಾವು ಅರಣ್ಯ ಸಚಿವನಾದ ತರುವಾಯ 4 ಸಾವಿರ ಎಕರೆ ಭೂಮಿಯನ್ನು ಅರಣ್ಯ ಪ್ರದೇಶ ಎಂದು ಘೋಷಿಸಲಾಗಿದ್ದು, ರಾಜ್ಯದ ಅರಣ್ಯಕ್ಕೆ 4 ಸಾವಿರ ಎಕರೆ ಸೇರ್ಪಡೆಯಾಗಿದೆ ಎಂದರು. ಈ ವರ್ಷ 5 ಕೋಟಿ ಸಸಿ ನೆಟ್ಟು, ಜಿಯೋ ಟ್ಯಾಗ್ ಮಾಡಿ, ಅವುಗಳಲ್ಲಿ ಎಷ್ಟು ಸಸಿ ಉಳಿದಿವೆ ಎಂದು ತಿಳಿಯಲು ಮೂರನೇ ವ್ಯಕ್ತಿಯಿಂದ ಆಡಿಟ್ ಕೂಡ ಮಾಡಲು ಸೂಚಿಸಲಾಗಿದೆ. ಈವರೆಗೆ ಅಂದರೆ ಜುಲೈ 1ರಿಂದ ಆರಂಭವಾದ ವನಮಹೋತ್ಸವದಿಂದ ಇಲ್ಲಿಯವರೆಗೆ 3 ತಿಂಗಳಲ್ಲಿ ಸುಮಾರು 4 ಕೋಟಿ 75 ಲಕ್ಷ ಸಸಿ ನೆಡಲಾಗಿದೆ ಎಂದು ವಿವರಿಸಿದರು.

ಬೆಂಗಳೂರು ನಗರವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಬೆಂಗಳೂರು ನಗರವು ಭಾರತದಲ್ಲಿ ಮೂರನೇ ಅತಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ನಗರವಾಗಿದ್ದು, 89 ಚದರ್​ ಕಿಲೋಮೀಟರ್‌ನಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ ಎಂದು ತಿಳಿಸಿದರು.

ಇದೇ ವೇಳೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ 100 ದಿನಗಳ ಸಾಧನೆಯ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಪಡೆ ಮುಖ್ಯಸ್ಥ ರಾಜೀವ್ ರಂಜನ್ ಮತ್ತಿತರರು ಉಪಸ್ಥಿತರಿದ್ದರು.

ಮಾನವ- ವನ್ಯಮೃಗಗಳ ಸಂಘರ್ಷಗಳನ್ನು ತಡೆಯುವ ಕೆಲಸವಾಗಬೇಕು-ಸಿಎಂ: ಅರಣ್ಯ ಪ್ರದೇಶಗಳಿಂದ ಪ್ರಾಣಿಗಳು ಬಾರದಂತೆ ಬ್ಯಾರಿಕೇಡ್ ನಿರ್ಮಿಸಲು ಹೆಚ್ಚಿನ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಕಾಡು ಪ್ರಾಣಿಗಳಿಗೆ ಮೇವು, ಕುಡಿಯುವ ನೀರನ್ನು ಅರಣ್ಯ ಪ್ರದೇಶದೊಳಗೆ ಲಭ್ಯವಾಗಿಸುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಕಾಡುಗಳಲ್ಲಿ ಹುಲಿ, ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವುದು ಸಂತೋಷದ ವಿಷಯ. ಆದರೆ ಕಾಡುಪ್ರಾಣಿಗಳು ಜನರಿರುವ ಪ್ರದೇಶಕ್ಕೆ ಬರುತ್ತಿದ್ದು, ಅರಣ್ಯ ಇಲಾಖೆಯವರು ಹಾಗೂ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಅರಣ್ಯ ಪ್ರದೇಶ ಹೆಚ್ಚಳದಿಂದ ಹವಾಮಾನ ವೈಪರೀತ್ಯಗಳನ್ನು ತಡೆಯಬಹುದು: ರಾಜ್ಯದ ಭೂ ಪ್ರದೇಶದಲ್ಲಿ ಶೇ. 20 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ಕನಿಷ್ಠ ಶೇ. 33 ಕ್ಕೆ ಅರಣ್ಯ ಪ್ರದೇಶದ ವಿಸ್ತರಣೆಯಾಗಬೇಕಿದೆ. ಆಗಮಾತ್ರ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಾಧ್ಯ. ಈ ವರ್ಷ ಮಳೆಯಿಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕಾವೇರಿ ನೀರು, ಬರಗಾಲ, ಆಹಾರ ಉತ್ಪತ್ತಿ ಕೊರತೆಗಳು ತಲೆದೋರುತ್ತವೆ. ಈ ಪರಿಸ್ಥಿತಿ ರಾಜ್ಯದ ಜಿಡಿಪಿ, ತಲಾವಾರು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ. 50 ರಷ್ಟು ಬೆಳೆ ಹಾನಿಯಾಗಿದೆ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಇಂತಹ ಬರಗಾಲ ಪರಿಸ್ಥಿತಿ ಎದುರಾಗುತ್ತಿದ್ದು, ಅರಣ್ಯ ಪ್ರದೇಶ ಹೆಚ್ಚಿಸಿದರೆ ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿ ದಿನಾಚರಣೆ, 20ರಂದು ಬಂಡೀಪುರ ಸಫಾರಿ ಬಂದ್

Last Updated : Sep 30, 2023, 7:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.