ETV Bharat / state

ಚೆಕ್ ಬೌನ್ಸ್ ಆರೋಪ: ಕಾಂಗ್ರೆಸ್​ ಮುಖಂಡ ದತ್ತಾ ವಿರುದ್ಧ ವಾರೆಂಟ್ ಜಾರಿ

author img

By

Published : Feb 16, 2023, 7:31 AM IST

ಚೆಕ್ ಬೌನ್ಸ್ ಪ್ರಕರಣ- ಕಾಂಗ್ರೆಸ್ ಮುಖಂಡ ವೈ.ಎಸ್.ವಿ ದತ್ತಾ ವಿರುದ್ಧ ವಾರೆಂಟ್ ಜಾರಿ- ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ

datta
ಕಾಂಗ್ರೆಸ್​ ಮುಖಂಡ ದತ್ತಾ ವಿರುದ್ಧ ವಾರೆಂಟ್ ಜಾರಿ

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ವೈ ಎಸ್ ವಿ ದತ್ತಾ ಅವರಿಗೆ ನಗರದ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿದೆ. ನಿತ್ಯಾನಂದ, ಸಿ.ಎಸ್ ಸೋಮೇಗೌಡ ಮತ್ತು ಪ್ರಕಾಶ್ ಜಿ.ಎಸ್ ಎಂಬವರು ಪ್ರತ್ಯೇಕವಾಗಿ ಚೆಕ್ ಬೌನ್ಸ್ ಆರೋಪದಲ್ಲಿ ಪ್ರತ್ಯೇಕ ದಾವೆ ಹೂಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಬಂಧನ ವಾರೆಂಟ್ ಜಾರಿ ಮಾಡಿದೆ.

ನಿತ್ಯಾನಂದ ಅವರು ಹೂಡಿರುವ ಪ್ರಕರಣದಲ್ಲಿ ಸತತ ನಾಲ್ಕನೇ ಬಾರಿಗೆ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದೆ. ಒಟ್ಟು ಐದು ಬಾರಿ ಜಾಮೀನುರಹಿತ ವಾರೆಂಟ್ ಹೊರಡಿಸಿದೆ. ಅಲ್ಲದೇ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಯ ಮೂಲಕ ಜಾಮೀನು ರಹಿತ ವಾರೆಂಟ್ ಜಾರಿ ಮಾಡುವಂತೆ ಬುಧವಾರದ ಆದೇಶದಲ್ಲಿ ತಿಳಿಸಿದೆ.

ಸಿ.ಎಸ್ ಸೋಮೇಗೌಡ ಅವರು ಹೂಡಿರುವ ದಾವೆಯಲ್ಲಿ ಸತತ 10ನೇ ಬಾರಿಗೆ ನ್ಯಾಯಾಲಯವು ಜಾಮೀನುರಹಿತ ವಾರೆಂಟ್ ಹೊರಡಿಸಿದ್ದು, ಕಳೆದ ಜನವರಿ 18ರಂದು ಬಂಧನ ವಾರೆಂಟ್ ಜಾರಿ ಮಾಡಿತ್ತು. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಅವರ ಮೂಲಕ ಮತ್ತೆ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ. 2022ರ ನವೆಂಬರ್​ನಲ್ಲಿ ಪ್ರಕಾಶ್ ಜಿ.ಎಸ್ ಎಂಬವರು ದತ್ತಾ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು, ಬುಧವಾರ ಸಮನ್ಸ್ ಜಾರಿ ಮಾಡಿದೆ. ಮೂರು ಪ್ರತ್ಯೇಕ ಪ್ರಕರಣಗಳ ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ: ಕಳಪೆ ಗುಣಮಟ್ಟದ ಔಷಧ ಮಾರಾಟ: ಸಂಸ್ಥೆ, ಪಾಲುದಾರರ ವಿರುದ್ಧ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.