ETV Bharat / state

'ಮೋದಿ ಬೆಂಗಳೂರು ರೋಡ್​ ಶೋಗೆ 10 ಲಕ್ಷ ಜನ': ಮತಬೇಟೆ ಅವಧಿಯಲ್ಲಿ ಬದಲಾವಣೆ

author img

By

Published : May 4, 2023, 1:31 PM IST

Updated : May 4, 2023, 3:55 PM IST

ಬೆಂಗಳೂರಿನಲ್ಲಿ ಶನಿವಾರ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ.

modi road show
ಮೋದಿ ರೋಡ್​ ಶೋದಲ್ಲಿ ಬದಲಾವಣೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ನಡೆಸಲಿರುವ ರೋಡ್​ ಶೋ ಅವಧಿಯಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ರೋಡ್ ಶೋ ಶನಿವಾರ ದಿನದಂದು 2 ಹಂತದಲ್ಲಿ ನಿಗದಿಯಾಗಿತ್ತು. ಆದರೆ ಈಗ ಎರಡು ದಿನ ಅಂದರೆ ಶನಿವಾರ ಮತ್ತು ಭಾನುವಾರ ನಡೆಯಲಿದೆ.

ಮೇ 6 ರ ಶನಿವಾರ ಒಂದೇ ದಿನ ನಡೆಯಬೇಕಿದ್ದ ಮೋದಿ ರೋಡ್ ಶೋ ಅನ್ನು ಮಳೆ ಮತ್ತು ಟ್ರಾಫಿಕ್ ಸಮಸ್ಯೆ ಕಾರಣದಿಂದಾಗಿ ಎರಡು ದಿನಕ್ಕೆ ಹೊಂದಾಣಿಕೆ ಮಾಡಲಾಗಿದೆ. ಹೀಗಾಗಿ, ಶನಿವಾರ ಮತ್ತು ಭಾನುವಾರ ಬೆಳಗ್ಗೆ ಪ್ರಧಾನಿ ಮತಬೇಟೆ ನಡೆಸುವರು. ಶನಿವಾರ ಸಂಜೆ ನಿಗದಿಯಾಗಿದ್ದ ಮಾರ್ಗದಲ್ಲೇ ಭಾನುವಾರ ಬೆಳಗ್ಗೆ ರೋಡ್ ಶೋ ನಡೆಯಲಿದೆ. ಶನಿವಾರ ಬೆಳಗಿನ ರೋಡ್ ಶೋ ಈಗಾಗಲೇ ನಿರ್ಧಾರವಾದಂತೆಯೇ ಇರಲಿದೆ. ಆದರೆ ಶನಿವಾರ ಸಂಜೆಯ ಬದಲು ರವಿವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ತನಕ ಬೆಂಗಳೂರು ದಕ್ಷಿಣದಲ್ಲಿ ಮತ ಪ್ರಚಾರ ನಡೆಯಲಿದೆ.

ಶನಿವಾರ ಬೆಳಗ್ಗೆ ಒಟ್ಟು 10.1 ಕಿ.ಮೀ ರೋಡ್ ಶೋ ನಡೆಯಲಿದೆ. ಬೆಂಗಳೂರು ಕೇಂದ್ರ ಭಾಗದಲ್ಲಿ ಬರುವ ವಿಧಾನಸಭಾ ಕ್ಷೇತ್ರದ ರೋಡ್ ಶೋ ಸಿವಿ ರಾಮನ್ ನಗರದಿಂದ, ಬ್ರಿಗೇಡ್ ರೋಡ್‌ವರೆಗೂ ನಡೆಯಲಿದೆ. ಭಾನುವಾರ ಬೆಳಗ್ಗೆ 26.5 ಕಿ.ಮೀ ರೋಡ್ ಶೋ ನಡೆಯಲಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದವರೆಗೂ ಚುನಾವಣಾ ಪ್ರಚಾರ ನಡೆಯಲಿದೆ.

23 ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ಹಾದು ಹೋಗಲಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ತಿಳಿಸಿದ್ದಾರೆ. ರ‍್ಯಾಲಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಆಗದಂತೆ ಪೊಲೀಸರು, ಅಧಿಕಾರಿಗಳ ಜೊತೆ ಸಭೆ ನಡೆದಿದೆ. ಒಟ್ಟು 37 ಕಿ.ಮೀ ರ‍್ಯಾಲಿ ನಡೆಯಲಿದೆ. ನಮ್ಮ ರ‍್ಯಾಲಿ ಭಾರತ್ ಜೋಡೋ ರ‍್ಯಾಲಿಗಿಂತ ವಿಭಿನ್ನವಾಗಿರಲಿದೆ. ಮೋದಿ ಅವರಿಗೆ ಆಶೀರ್ವಾದ ಮಾಡಲು 10 ಲಕ್ಷ ಜನ ಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

17 ಕ್ಷೇತ್ರಗಳಿಗೆ ಭೇಟಿ ನೀಡಬೇಕೆಂಬ ಆಶಯದೊಂದಿಗೆ ಪ್ರಧಾನಿ ಭೇಟಿ-ಶೋಭಾ ಕರಂದ್ಲಾಜೆ: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮೇ 6, 7ರಂದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ ಹೆಸರಿನಲ್ಲಿ ಬೃಹತ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ರೋಡ್ ಶೋ ಕುರಿತು ವಿವರಿಸಿದ ಅವರು, ರಾಜಧಾನಿಯ ಎಲ್ಲರನ್ನೂ ನೋಡಬೇಕು, 17 ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂಬ ಆಶಯದೊಂದಿಗೆ ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಒಂದೇ ದಿನ ರೋಡ್ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿಯವರು ಎರಡು ದಿನ ರೋಡ್ ಶೋ ನಡೆಸುತ್ತಿದ್ದಾರೆ ಎಂದು ಹೇಳಿದರು.

6ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ರೋಡ್ ಶೋ ಹೊಸ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಹೊರಟು ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದಲ್ಲಿ ಕೊನೆಗೊಳ್ಳಲಿದೆ. ಮೇ 7ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ರೋಡ್ ಶೋ ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದಿಂದ ಹೊರಟು ಮಲ್ಲೇಶ್ವರದ ಸ್ಯಾಂಕಿ ಕೆರೆ ಬಳಿ ಮುಕ್ತಾಯಗೊಳ್ಳಲಿದೆ. ರೋಡ್ ಶೋ ಮಾರ್ಗದ ವಿವರಗಳನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಮೇ 5ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪ್ರಧಾನಿಯವರು ಬಳ್ಳಾರಿಯಲ್ಲಿ, ಸಂಜೆ 4.30ಕ್ಕೆ ತುಮಕೂರು ಗ್ರಾಮಾಂತರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೇ 6ರಂದು ಬೆಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ನಂತರ ಪ್ರಧಾನಿಯವರು ಸಂಜೆ 4 ಗಂಟೆಗೆ ಬಾದಾಮಿಯಲ್ಲಿ, ಸಂಜೆ 7 ಗಂಟೆಗೆ ಹಾವೇರಿಯಲ್ಲಿ ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ.

ಮೇ 7ರಂದು ಭಾನುವಾರ ಬೆಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ನಂತರ ಪ್ರಧಾನಿಯವರು ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಸಂಜೆ 7 ಗಂಟೆಗೆ ನಂಜನಗೂಡಿನಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ನಂಜನಗೂಡಿನಲ್ಲಿ ಸಾರ್ವಜನಿಕ ಸಭೆ ನಂತರ ಪ್ರಧಾನಿಯವರು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೇ 6 ರಂದು ಮೋದಿ 37 ಕಿ.ಮೀ ರೋಡ್ ಶೋ, ಸಿದ್ಧತಾ ಕಾರ್ಯ ಪೂರ್ಣ : ಸಂಸದ ಪಿ ಸಿ ಮೋಹನ್

Last Updated : May 4, 2023, 3:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.