ETV Bharat / state

ವಿಜಯೇಂದ್ರ ಆಯ್ಕೆ: ಕಾಂಗ್ರೆಸ್​ ಟೀಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು

author img

By ETV Bharat Karnataka Team

Published : Nov 11, 2023, 1:52 PM IST

Updated : Nov 11, 2023, 2:55 PM IST

Chalawadi Narayanaswamy counter on Congress: ಬಿ ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಒಮ್ಮತದ ಆಯ್ಕೆ ಆಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

BJP SC Morcha State President Chhalavadi Narayanaswamy
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ನಕಲಿ ಗಾಂಧಿ ಕುಟುಂಬದ ಪಾದರಕ್ಷೆ ತಲೆ ಮೇಲೆ ಹೊತ್ತು ಕಾಲು ಸವೆಸಿಕೊಂಡಿರುವ ಕಾಂಗ್ರೆಸ್​ನವರು ಬಿಜೆಪಿ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ. ಈ ಗುಲಾಮರಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುವ ಕಾಲ ಬರಲಿದೆ. ಅದಕ್ಕೆ ಉತ್ತರ ಬಿಜೆಪಿಯ ಕಾರ್ಯಕರ್ತರು ಕೊಡಲಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರಿಗೆ ಅವಕಾಶ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಜೋತುಬಿದ್ದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಇಲ್ಲಿ ಯಾವುದೋ ಒಂದು ಅಕಸ್ಮಾತ್ ಒಬ್ಬ ಕಾರ್ಯಕರ್ತ ಒಬ್ಬ ಹಿರಿಯ ಮುತ್ಸದ್ಧಿ ಮಗ ಆಗಿದ್ದ ಎನ್ನುವ ಕಾರಣಕ್ಕೆ ಅವಕಾಶ ಕೊಟ್ಟಾಗ ಈ ರೀತಿ ಮಾತನಾಡುತ್ತೀರಲ್ಲ, ನೀವು ಇಂದು ಎಣಿಕೆ ಮಾಡಿ ನೋಡಿ ಎಷ್ಟು ಜನ ಶಾಸಕರು ನಿಮ್ಮ ನಿಮ್ಮ ಕುಟುಂಬಗಳಿಂದ ಮಾತ್ರ ಬಂದಿದ್ದಾರೆ? ಎಷ್ಟು ಜನ ಮಂತ್ರಿಗಳು ಕುಟುಂಬದ ಮಂತ್ರಿಗಳಿದ್ದಾರೆ? ಎಂದು ಮೆಲುಕು ಹಾಕಿ ನೋಡಿ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನವರ ಬಾಯಲ್ಲಿ ಈ ಮಾತು ಬರಬಾರದು. ಯಾಕೆಂದರೆ ಒಂದು ಕುಟುಂಬದ ಗುಲಾಮಗಿರಿ ಮಾಡುವ ಈ ಕಾಂಗ್ರೆಸ್ಸಿಗರು ಆ ಒಂದು ಕುಟುಂಬದ ಪಾದರಕ್ಷೆ ಹೊತ್ತು ಇಲ್ಲಿಯವರೆಗೂ ಕಾಲು ಸವೆಸಿದ್ದಾರೆ. ಅಂಥವರು ಇಂದು ಬಿಜೆಪಿಯ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಒಬ್ಬ ಉತ್ತಮ ಕಾರ್ಯಕರ್ತನನ್ನು ಗುರುತಿಸಿ ಬಿಜೆಪಿ ಜವಾಬ್ದಾರಿ ಕೊಟ್ಟಿದೆ. ಆದರೆ, ಕಾಂಗ್ರೆಸ್​ನವರು ನಕಲಿ ಗಾಂಧಿ ಕುಟುಂಬದ ಪಾದರಕ್ಷೆ ಹೊತ್ತು ಇಂತಹ ಮಾತು ಆಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಒಮ್ಮತದ ಆಯ್ಕೆ: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಆಯ್ಕೆ ಒಮ್ಮತದ ಆಯ್ಕೆಯಾಗಿದೆ. ವಿಜಯೇಂದ್ರರಿಗೆ ಹಿರಿಯರು ಕಿರಿಯರು ಎನ್ನುವ ವ್ಯತ್ಯಾಸ ಇಲ್ಲ. ಎಲ್ಲರನ್ನು ಗೌರವಿಸಿ ಜೊತೆಯಲ್ಲಿ ಕರೆದುಕೊಂಡು ಹೋಗುವ ಗುಣ ಅವರಲ್ಲಿದೆ. ಅದರ ಜೊತೆಗೆ ತಳ ಹಂತದಿಂದ ಪಕ್ಷದಲ್ಲಿ ತನ್ನನ್ನು ತಾನು ಜೋಡಿಸಿಕೊಂಡು ಇದುವರೆಗೂ ಪಕ್ಷದಲ್ಲಿ ಬೆಳೆದುಕೊಂಡು ಬಂದಿದ್ದಾರೆ. ಸಂಘಟನೆಯಲ್ಲಿ ಬಹಳಷ್ಟು ಅನುಭವ ಇದೆ, ಯುವ ಮೋರ್ಚಾದಿಂದ ಹಿಡಿದು ರಾಜ್ಯ ಉಪಾಧ್ಯಕ್ಷರವರೆಗೆ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಯಾವ ರೀತಿ ತಂತ್ರಗಾರಿಕೆ ಮಾಡಬೇಕು, ಯಾವ ರೀತಿ ಗೆಲ್ಲಬೇಕು, ಫಲಿತಾಂಶವನ್ನು ಯಾವ ರೀತಿ ತರಬೇಕು ಎನ್ನುವ ಬುದ್ಧಿವಂತಿಕೆ ಕೂಡ ಅವರಿಗೆ ಇದೆ. ಹೀಗಾಗಿ ಪಕ್ಷಕ್ಕೆ ಬಹಳ ಒಳ್ಳೆಯದಾಗಲಿದೆ. ಅವರ ಆಯ್ಕೆಯಿಂದ ಯುವ ಪೀಳಿಗೆಗೆ ಬಹಳ ಸಂತೋಷವಾಗಿದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಅದನ್ನು ಸಮರ್ಥವಾಗಿ ಮಾಡಲಿದ್ದಾರೆ ಎನ್ನುವ ವಿಶ್ವಾಸ ಇದೆ ಎಂದರು.

ಮೆರಿಟ್ ಮೇಲೆ ಆಯ್ಕೆ: ಕೆಲವರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದ ಮಾತ್ರಕ್ಕೆ ಅದನ್ನು ಅಸಮಾಧಾನ ಎಂದು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮಲ್ಲಿ ಸೆಲೆಕ್ಷನ್ ಕಷ್ಟ ಲಾಬಿ ಇಲ್ಲ ನಮ್ಮಲ್ಲಿ ಮೆರಿಟ್ ಮಾತ್ರ ನಡೆಯುತ್ತದೆ. ಹೈಕಮಾಂಡ್ ಮೆರಿಟ್ ವಿಚಾರವನ್ನು ತೆಗೆದುಕೊಂಡು ಈ ಆಯ್ಕೆ ಮಾಡಿದೆ. ಆದ್ದರಿಂದ ಅವರ್ಯಾರು ಮನಸ್ತಾಪ ಅಥವಾ ಬೇಸರದಲ್ಲಿ ಇದ್ದಾರೆ ಎಂದು ಎನಿಸುವುದಿಲ್ಲ. ಇದು ಎಲ್ಲರ ಒಮ್ಮತದ ಆಯ್ಕೆ. ಎಲ್ಲರೂ ಸೇರಿ ಸಂಘಟನೆಯನ್ನು ಬಲಗೊಳಿಸುವ ಕೆಲಸವನ್ನು ಮಾಡುವ ಕೆಲಸದಲ್ಲಿ ನಾವೆಲ್ಲ ತೊಡಗಲಿದ್ದೇವೆ ಎಂದರು.

ಇದನ್ನೂ ಓದಿ : ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನಿರೀಕ್ಷಿಸಿರಲಿಲ್ಲ, ಅವಕಾಶ ಕೇಳಿಯೂ ಇರಲಿಲ್ಲ: ಯಡಿಯೂರಪ್ಪ

Last Updated : Nov 11, 2023, 2:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.