ETV Bharat / state

ಇಂದು ಬೆಂಗಳೂರು ಬಂದ್: ಶಾಲಾ-ಕಾಲೇಜಿಗೆ ರಜೆ, ಆಟೋ, ಟ್ಯಾಕ್ಸಿ ಸಿಗಲ್ಲ; ಏನಿರುತ್ತೆ, ಏನ್ ಇರಲ್ಲ?

author img

By ETV Bharat Karnataka Team

Published : Sep 26, 2023, 7:35 AM IST

Updated : Sep 26, 2023, 9:12 AM IST

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಬೆಂಗಳೂರು ಬಂದ್. ಸರ್ಕಾರಿ ಸಾರಿಗೆ ಸೇರಿ ಅಗತ್ಯ ಸೇವೆಗಳು ಲಭ್ಯ ಇವೆ. ಆದ್ರೆ ಆಟೋ ಟ್ಯಾಕ್ಸಿ, ಸರ್ಕಾರಿ ಶಾಲೆ, ಅಂಗಡಿ ಮುಂಗಟ್ಟುಗಳು ಬಂದ್ ಇರಲಿವೆ.

ಬೆಂಗಳೂರು ಬಂದ್ Bengaluru Bandh
ಬೆಂಗಳೂರು ಬಂದ್

ಬೆಂಗಳೂರು ಬಂದ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ರೈತಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಇಂದು ಕರೆ ಕೊಟ್ಟಿರುವ ಬೆಂಗಳೂರು ಬಂದ್‌ಗೆ ರಾಜ್ಯ ರಾಜಧಾನಿ ಬಹುತೇಕ ಸ್ತಬ್ಧವಾಗಲಿದೆ. ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬೆಂಗಳೂರು ಬಂದ್ ಆಗಲಿದ್ದು, ಸಾರ್ವಜನಿಕರು ಮನೆಯಿಂದರ ಹೊರಬರುವ ಮುನ್ನ ನಗರದಲ್ಲಿ ಇಂದು ಏನೆಲ್ಲಾ ಲಭ್ಯ, ಅಲಭ್ಯ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇಂದು ಶಾಲಾ-ಕಾಲೇಜುಗಳಿಗೂ ರಜೆ ಇರಲಿದ್ದು, ಆಟೋ ಟ್ಯಾಕ್ಸಿ ಸೇರಿ ಖಾಸಗಿ ಸಾರಿಗೆ ಸಂಚಾರ, ಪೆಟ್ರೋಲ್ ಬಂಕ್, ಹೋಟೆಲ್ ಅಂಗಡಿ ಮುಂಗಟ್ಟುಗಳು ಹಾಗೂ ಕೆ.ಆರ್.ಮಾರುಕಟ್ಟೆ ಬಂದ್ ಇರಲಿದೆ.

ಏನ್ ಇರುತ್ತೆ?: ಬೀದಿಬದಿ ವ್ಯಾಪಾರ, ಸರ್ಕಾರಿ ಕಚೇರಿ, ಸರ್ಕಾರಿ ಸಾರಿಗೆ, ನಮ್ಮ ಮೆಟ್ರೋ, ಖಾಸಗಿ ಕಚೇರಿ, ಆಸ್ಪತ್ರೆ, ಔಷಧ ಅಂಗಡಿಗಳು, ಆಂಬ್ಯುಲೆನ್ಸ್, ಹಾಲು ಮತ್ತು ಅಗತ್ಯ ಸೇವೆಗಳು ದೊರೆಯಲಿವೆ.

ಏನ್ ಇರಲ್ಲ?: ಆಟೋ, ಟ್ಯಾಕ್ಸಿ, ಓಲಾ, ಊಬರ್ ಸೇರಿ ಖಾಸಗಿ ಸಾರಿಗೆ ಸಂಚಾರ, ಪೆಟ್ರೋಲ್ ಬಂಕ್, ಶಾಲಾ-ಕಾಲೇಜು, ಕೈಗಾರಿಕೆಗಳು, ವಾಣಿಜ್ಯೋದ್ಯಮ, ಅಂಗಡಿ ಮುಂಗಟ್ಟುಗಳು, ಕೆ.ಆರ್.ಮಾರುಕಟ್ಟೆ ಬಂದ್ ಇರಲಿದೆ.

Bengaluru Police security
ಬೆಂಗಳೂರಲ್ಲಿ ಪೊಲೀಸ್ ಬಂದೋಬಸ್ತ್

ಟೌನ್​ ಹಾಲ್​ನಿಂದ ಫ್ರೀಡಂ ಪಾರ್ಕ್​ವರೆಗೆ ಬೃಹತ್ ಮೆರವಣಿಗೆ: ಬಂದ್​ಗೆ ಕರೆ ನೀಡಿರುವ ಸಂಘಟನೆಗಳು ಬೆಳಗ್ಗೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್​ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿವೆ. ಬೆಂಗಳೂರು ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಜೊತೆಗೆ ಬಿಜೆಪಿ, ಜನತಾ ದಳ ಹಾಗೂ ಆಮ್ ಆದ್ಮಿ ಪಕ್ಷ ಕೂಡ ಬೆಂಬಲ ಘೋಷಿಸಿವೆ.

ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸುವುದರಿಂದ ಆರಂಭದಲ್ಲಿಯೇ ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜನ‌ರ ಗುಂಪು ಸೇರುವಂತಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯುವ ಸಾಧ್ಯತೆಯಿದ್ದು, ಕರೆದೊಯ್ಯಲು ಹತ್ತು ಬಿಎಂಟಿಸಿ ಬಸ್‌ಗಳನ್ನ ಈಗಾಗಲೇ ಕಾಯ್ದಿರಿಸಲಾಗಿದೆ. ಟೌನ್ ಹಾಲ್ ಬಳಿ ಮುನ್ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದಾರೆ.

ಪೊಲೀಸ್ ಬಂದೋಬಸ್ತ್: ಬೆಂಗಳೂರು ಬಂದ್​ ಹಾಗೂ ನಗರದಾದ್ಯಂತ ನಿಷೇಧಾಜ್ಞೆ ಜಾರಿ ಇರುವ ಹಿನ್ನೆಯಲ್ಲಿ ರಾತ್ರಿಯಿಂದಲೇ ಪೊಲೀಸರು ಬಂದೋಬಸ್ತ್ ನಲ್ಲಿ ನಿರತರಾಗಿದ್ದಾರೆ. ಹೆಚ್ಚು ಐಟಿ ಬಿಟಿ ಕಂಪನಿಗಳಿರುವ ವೈಟ್​​ಫೀಲ್ಡ್, ಮಹದೇಪುರ, ಟಿ.ಸಿ.ಪಾಳ್ಯ, ಮಾರತ್ ಹಳ್ಳಿ, ಕುಂದಲಹಳ್ಳಿ ಸೇರಿದಂತೆ ವಿವಿಧೆಡೆಯಲ್ಲಿ ಪೊಲೀಸರು ಸರ್ಪಗಾವಲು ಹಾಕಲಿದ್ದಾರೆ. ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ.ಎಂ.ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Bengaluru Police security
ಬೆಂಗಳೂರಲ್ಲಿ ಪೊಲೀಸ್ ಬಂದೋಬಸ್ತ್

ಬಂದ್​ಗೆ ಕನ್ನಡ ಸಂಘಟನೆಗಳ ವಿರೋಧ: ಆದ್ರೆ ಇಂದಿನ ಬಂದ್​ಗೆ ಕನ್ನಡ ಪರ ಸಂಘಟನೆಗಳು ಬೆಂಬಲ ಘೋಷಿಸಿಲ್ಲ. ಬದಲಾಗಿ, ಸೆ.29ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ಎಲ್ಲಾ‌ ನೀರಾವರಿ ಯೋಜನೆಗಳಿಗಾಗಿ ಆಗ್ರಹಿಸಿ ಸೆ.29ರಂದು ಅಖಂಡ ಕರ್ನಾಟಕ ಬಂದ್​​ಗೆ ಕರೆ ನೀಡಿದ್ದೇವೆ. ಆದ್ರೆ ಬೆಂಗಳೂರು ಬಂದ್​ಗೆ ನಮ್ಮ ಬೆಂಬಲ ಇಲ್ಲ ಎಂದು ವಾಟಾಳ್ ನಾಗರಾಜ್ ನಿನ್ನೆ ತಿಳಿಸಿದ್ದರು.

ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದ್ದೇವೆ. ಖಂಡಿತವಾಗಿಯೂ ಬಂದ್ ಮಾಡುತ್ತೇವೆ. ನೂರಕ್ಕೂ ಹೆಚ್ಚು ಸಂಘಟನೆಗಳು ಬಂದ್​ಗೆ ಬೆಂಬಲಿಸಿವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘಟನೆ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದರು.

ಶಾಲಾ-ಕಾಲೇಜುಗಳಿಗೆ ರಜೆ: ಮಂಗಳವಾರ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ಘೋಷಿಸಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಟಿ ಬಂದ್‌: ಐಟಿ ಕನ್ನಡಿಗರ ಬಳಗ ಮೂರೂವರೆ ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳ ನೌಕರರು ಕೆಲಸಕ್ಕೆ ರಜೆ ಹಾಕಿ ಬೈಕ್ ರ‍್ಯಾಲಿ ನಡೆಸಲಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ಶಿವಾನಂದ್ ಹೇಳಿದ್ದಾರೆ.

ಬಂದ್​ಗೆ ಚಿತ್ರೋದ್ಯಮ ಬೆಂಬಲ: ಬೆಂಗಳೂರು ಬಂದ್​ಗೆ ಕರ್ನಾಟಕ ಚಿತ್ರೋದ್ಯಮ ನೈತಿಕ ಬೆಂಬಲ ನೀಡಿದೆ. ಈ ಬಗ್ಗೆ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, "ನಾಡು ನುಡಿ ಜಲದ ವಿಷಯ ಬಂದಾಗ ನಾವೆಲ್ಲ ಒಂದು. ರೈತರ ಹೋರಾಟಕ್ಕೆ ಚಿತ್ರರಂಗದ ಪ್ರತಿಯೊಬ್ಬರು ಬೆಂಬಲ ಕೊಡುತ್ತಾರೆ" ಎಂದರು.

ಇದನ್ನೂ ಓದಿ: ಕಾವೇರಿ ಕಿಚ್ಚು: ಎರಡು ಬಣಗಳ ನಡುವೆ ಮೂಡದ ಒಮ್ಮತ... ನಾಳೆ ಬೆಂಗಳೂರು, ಸೆ.29ಕ್ಕೆ ಕರ್ನಾಟಕ ಬಂದ್

Last Updated : Sep 26, 2023, 9:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.