ETV Bharat / state

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ ರಾಜ್ಯದ ಜನರಿಗೆ ಅನ್ಯಾಯ: ಕರವೇ ಅಧ್ಯಕ್ಷ ನಾರಾಯಣಗೌಡ

author img

By ETV Bharat Karnataka Team

Published : Sep 21, 2023, 10:43 PM IST

ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕರವೇ ಕಚೇರಿಯಿಂದ ಕಾರ್ಯಕರ್ತರು ವಿಧಾನಸೌಧವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

Karnataka rakshana vedike protest
ಕರವೇ ಪ್ರತಿಭಟನೆ

ಕರವೇ ಪ್ರತಿಭಟನೆ

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶದಲ್ಲಿ ಕನ್ನಡಿಗರಿಗೆ ತೀವ್ರ ಅನ್ಯಾಯ ಆಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ ಎ ನಾರಾಯಣಗೌಡ ಆತಂಕ ವ್ಯಕ್ತಪಡಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಗಾಂಧಿನಗರದ ಕರವೇ ಕೇಂದ್ರ ಕಚೇರಿಯಿಂದ ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ಕಾವೇರಿ ಕಣಿವೆ ಪ್ರದೇಶದಲ್ಲಿ ತೀವ್ರ ತರವಾದ ಬರಗಾಲವಿದ್ದರೂ ತಮಿಳುನಾಡಿಗೆ ಮತ್ತೆ 15 ದಿನಗಳ ಕಾಲ 5000 ಕ್ಯೂಸೆಕ್​ ನೀರು ಹರಿಸಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಪಾಲಿಸಬಾರದು ಎಂದು ಆಗ್ರಹಿಸಿದರು.

ಕರ್ನಾಟಕದ ರೈತರಿಗೆ, ಬೆಂಗಳೂರು ಮಹಾನಗರ ಮತ್ತಿತರ ನಗರಗಳ ಜನರಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು ಎಂದರು.

ಸರ್ಕಾರವು ಪೊಲೀಸರನ್ನು ಬಿಟ್ಟು ನಮ್ಮನ್ನೆಲ್ಲ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಎಂಥ ಪರಿಸ್ಥಿತಿ ಬಂದರೂ ನಮ್ಮ ಪ್ರತಿಭಟನೆಯನ್ನು ನಾವು ನಿಲ್ಲಿಸುವುದಿಲ್ಲ. ನಾಳೆ 31 ಜಿಲ್ಲೆಗಳಲ್ಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲೂ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ನಡೆಸಲು ಮುಂದಾಗುತ್ತದೆ. ನಮ್ಮ ಸಾವಿರಾರರು ಕಾರ್ಯಕರ್ತರನ್ನು ಬಂಧಿಸಿದರೂ ನಮ್ಮ ಚಳವಳಿ ಹಂತ ಹಂತವಾಗಿ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ರಾಜ್ಯದ ರೈತರಿಗೆ ಹಾಗೂ ಜನರಿಗೆ ಮೋಸವಾಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸಣ್ಣೀರಪ್ಪ, ರಾಜ್ಯ ಉಪಾಧ್ಯಕ್ಪ ಪಿ. ಆಂಜನಪ್ಪ, ಪುಟ್ಟೇಗೌಡ, ವೀರಭದ್ರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ಬಿಗೆರೆ ವಿನೋದ್, ಶ್ವೇತ ಮೋಹನ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಾವೇರಿ ನೀರು ಹರಿಸದಂತೆ ರೈತರ ರಕ್ಷಣಾ ಸಮಿತಿ ರಸ್ತೆ ತಡೆದು ಪ್ರತಿಭಟನೆ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಪ್ರಾಧಿಕಾರದ ಆದೇಶದಲ್ಲಿ ಮಧ್ಯ ಪ್ರವೇಶಿಸಲು ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಮಂಡ್ಯ ಜಿಲ್ಲಾ ರೈತರ ರಕ್ಷಣಾ ಸಮಿತಿ ರಸ್ತೆ ತಡೆದು ಪ್ರತಿಭಟಿಸಿದರು.

ನಗರದ ಸರ್ ​ಎಂವಿ ಪ್ರತಿಮೆ ಎದುರು ಸಮಿತಿ ಸದಸ್ಯರ ಜೊತೆಗೂಡಿ ಮೈ ಶುಗರ್ ಕಬ್ಬು ಬೆಳೆಗಾರರ ಸಂಘ, ನೀರು ಬಳಕೆದಾರರ ಸಂಘದ ಕಾರ್ಯಕರ್ತರು ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರು. ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಜಲಾಶಯಗಳ ವಾಸ್ತವ ಪರಿಸ್ಥಿತಿ ಅರಿಯದೆ ನೀರು ಬಿಡಲು ಪ್ರಾಧಿಕಾರ ಆದೇಶ ಮಾಡಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ. 15 ದಿನಗಳ ಕಾಲ ನೀರು ಬಿಟ್ಟರೆ ಜಲಾಶಯ ಸಂಪೂರ್ಣ ಬರಿದಾಗಲಿವೆ. ಕರ್ನಾಟಕ ಸರ್ಕಾರ ನ್ಯಾಯಾಲಯದಲ್ಲಿ ವಾಸ್ತವಾಂಶದ ಕುರಿತು ವಾದ ಮಂಡಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂಓದಿ:ಕಾವೇರಿ ಪ್ರಾಧಿಕಾರದ ಮುಂದೆ ರಾಜ್ಯ ಸರ್ಕಾರ ವಾಸ್ತವ ಸ್ಥಿತಿಯನ್ನು ತಿಳಿಸುವಲ್ಲಿ ವಿಫಲ: ರೈತ ಮುಖಂಡ ನಂಜುಂಡೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.