ETV Bharat / state

Cauvery issue: ಯಾಕೆ ಸತ್ಯ ಮುಚ್ಚಿಟ್ಟಿದ್ದೀರಿ, ವಾಸ್ತವಾಂಶ ಬಹಿರಂಗಪಡಿಸಿ: ಡಿಕೆಶಿಗೆ ಹೆಚ್​ಡಿಕೆ ಆಗ್ರಹ

author img

By ETV Bharat Karnataka Team

Published : Sep 25, 2023, 2:55 PM IST

Updated : Sep 25, 2023, 3:17 PM IST

''ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮ ಅಧಿಕಾರಿಗಳು ಇಲ್ಲಿ ಕುಳಿತುಕೊಂಡು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗುತ್ತಾರೆ. ಆದರೆ, ತಮಿಳುನಾಡಿನಿಂದ 15 ಜನ ನೇರವಾಗಿ ಬಂದು ಭಾಗಿಯಾಗುತ್ತಾರೆ. ನಮ್ಮ ಅಧಿಕಾರಿಗಳು ಒಂದು ಕಡೆ ಬ್ಯುಸಿಯಾದ್ರೆ ನಮ್ಮ ಆಡಳಿತಗಾರರು ಒಂದು ಕಡೆ ಬ್ಯುಸಿ'' ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

HD Kumaraswamy
Cauvery issue: ಯಾಕೆ ಸತ್ಯ ಮುಚ್ಚಿಟ್ಟಿದ್ದೀರಿ, ವಾಸ್ತವಾಂಶ ಬಹಿರಂಗಪಡಿಸಿ: ಡಿಕೆಶಿಗೆ ಹೆಚ್​ಡಿಕೆ ಆಗ್ರಹ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ''ಕಾವೇರಿ ವಿಚಾರದಲ್ಲಿ ಸತ್ಯ ಹೇಳಿದರೆ ಕರ್ನಾಟಕಕ್ಕೆ ಇನ್ನೂ ತೊಂದರೆ ಆಗುತ್ತದೆ ಅಂತ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಸತ್ಯ ಯಾಕೆ ಮುಚ್ಚಿಟ್ಟಿದ್ದೀರಿ? ಸತ್ಯಾಂಶ ಹೇಳದಿದ್ದರೆ, ನಿಮಗೆ ಗೌರವ ಎಲ್ಲಿ ಉಳಿಯಲಿದೆ. ಸತ್ಯಾಂಶ ಮುಚ್ಚಿಟ್ಟರೆ ನಿಮ್ಮ ಪರವಾಗಿ ಸುಪ್ರೀಂ ಕೋರ್ಟ್ ಹೇಗೆ ತೀರ್ಪು ಕೊಡಲಿದೆ?'' ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಜಲಶಕ್ತಿ ಸಚಿವರನ್ನು ಭೇಟಿ ಮಾಡಿದರು. ಇಬ್ಬರೂ ಹೋಗಿ ಏನು ಅರ್ಜಿ ಕೊಟ್ಟು ಬಂದರೂ ಎಂದು ಹೇಳಬೇಕಲ್ಲ. ಸುಪ್ರೀಂ ಕೋರ್ಟ್ ಮುಂದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಯಾವ ವಾಸ್ತವಾಂಶವನ್ನು ಈ ಸರ್ಕಾರ ಇಟ್ಟಿದೆ? ಸುಪ್ರೀಂ ಕೋರ್ಟ್ ಮುಂದೆ ಯಾವ ದಾಖಲೆಯನ್ನು ಇಟ್ಟಿದ್ದೀರಿ? ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಏನೇನು ಮಾತನಾಡಿದ್ದೆ ಎಂದು ನಂತರ ಮಾತನಾಡೋಣ. ನಾವು ಮಾತನಾಡಿರುವುದು ಬೇರೆ, ಅಮಿತ್ ಶಾ ಹಾಗೂ ನಮ್ಮ ಭೇಟಿಯದ್ದು ಒಂದು ಕಡೆ ಇಡಿ, ಅದನ್ನ ಬುಧವಾರ ಮಾತನಾಡುತ್ತೇನೆ. ಕಾಂಗ್ರೆಸ್ ನಾಯಕರಿಗೆ ಈಗ ಹೇಳಲು ಬಯಸುತ್ತೇನೆ. ದೇವೇಗೌಡರು ಮೊನ್ನೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರಲ್ಲ, ಅವರಿಗೆ ಏನಾದರೂ ಕಿಂಚಿತ್ತು ದೇವೇಗೌಡರ ಕಮಿಟ್ಮೆಂಟ್ ಬಗ್ಗೆ ಗೌರವ ಇದೆಯಾ?'' ಎಂದು ಪ್ರಶ್ನಿಸಿದರು.

''ಆರಂಭದಲ್ಲೇ ಪ್ರಾಧಿಕಾರದ ಸಭೆ ನಂತರ ಎರಡು ದಿನದಲ್ಲಿ ತಮಿಳುನಾಡಿನವರು ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಹಾಕಲು ಹೋದರು. ಆ ತಕ್ಷಣವೇ ನಾನು ನೀವೂ ಅರ್ಜಿ ಹಾಕಿ ಎಂದು ಸರ್ಕಾರಕ್ಕೆ ಹೇಳಿದ್ದೆ. ಸುಪ್ರೀಂ ಕೋರ್ಟ್ ಮುಂದೆ ಅವರು ಅರ್ಜಿ ಹಾಕಿ ಆಗಿದೆ, ಕಾವೇರಿ ನಿರ್ವಹಣಾ ಪ್ರಾಧಿಕಾರದ ನೀರು ಬಿಡಿ ಎಂದಿದೆ ಎಂದರೆ, ನೀವು ನೀರು ಏಕೆ ಬಿಟ್ಟಿರಿ? ಸುಪ್ರೀಂ ಕೋರ್ಟ್ ತೀರ್ಪು ಕೊಡುವವರೆಗೂ ಕಾಯಬೇಕಿತ್ತಲ್ಲವೇ? ನಾವು ಕೋರ್ಟ್ ಮುಂದೆ ಪ್ರಮಾಣ ಪತ್ರ ಹಾಕಬೇಕು. ಅಲ್ಲಿಯವರೆಗೂ 15-20 ದಿನ ವಿಳಂಬ ಮಾಡಿದ್ದರೆ ಅಷ್ಟು ನೀರು ಜಲಾಶಯದಲ್ಲಿ ಉಳಿಯುತ್ತಿರಲಿಲ್ಲವೇ? ಆಗ ಪ್ರಾಧಿಕಾರ ಹೇಳಿತು ಎಂದು ನೀರು ಬಿಟ್ಟಿರಿ. ಈಗ ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಈಗ ಅದಕ್ಕೂ ನೀರು ಬಿಡಬೇಕು'' ಎಂದರು.

''ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮ ಅಧಿಕಾರಿಗಳು ಇಲ್ಲಿ ಕುಳಿತುಕೊಂಡು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗುತ್ತಾರೆ. ಆದರೆ ತಮಿಳುನಾಡಿನಿಂದ 15 ಜನ ನೇರವಾಗಿ ಬಂದು ಭಾಗಿಯಾಗುತ್ತಾರೆ. ನಮ್ಮವರು ಆನ್ಲೈನ್ ನಲ್ಲಿ ಭಾಗಿಯಾಗುತ್ತಾರೆ. ನಮ್ಮ ಅಧಿಕಾರಿಗಳು ಒಂದು ಕಡೆ ಬ್ಯುಸಿ, ನಮ್ಮ ಆಡಳಿತಗಾರರು ಒಂದು ಕಡೆ ಬ್ಯುಸಿ'' ಎಂದು ಹೆಚ್​ಡಿಕೆ ಟೀಕಿಸಿದರು.

''ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದವರು ಮಾಹಿತಿಗಳನ್ನು ಕೊಡುವುದರಲ್ಲಿ ಎಡವಿದ್ದಾರೆ, ಅದನ್ನೆಲ್ಲ ಪ್ರಧಾನಿಗಳ ಗಮನಕ್ಕೆ ದೇವೇಗೌಡರು ತಂದಿದ್ದಾರೆ. ಕನಿಷ್ಠ ಐವರು ಸದಸ್ಯರ ತಜ್ಞರನ್ನು ಕಳುಹಿಸಿ, ಎರಡು ರಾಜ್ಯಗಳ ಗ್ರೌಂಡ್ ರಿಯಾಲಿಟಿ ತಿಳಿದು ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ. ಇಂದು ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಎಸಿ ರೂಮ್​ನಲ್ಲಿ ಕುಳಿತು ಕೆಲಸ ಮಾಡಿ ಎಂದು ರಚಿಸಿದ್ದಾರಾ? ಎರಡು ರಾಜ್ಯಗಳ ಗ್ರೌಂಡ್ ರಿಯಾಲಿಟಿ ತೆಗೆದುಕೊಳ್ಳಬೇಕು. ಇವರು ಯಾರೋ ಕೊಟ್ಟ ದಾಖಲೆ ಇರಿಸಿಕೊಂಡು ತೀರ್ಮಾನ ಮಾಡುವುದಾದರೆ, ನಾವು ಪ್ರಾಧಿಕಾರಕ್ಕೆ ಯಾಕೆ ಗೌರವ ಕೊಡಬೇಕು'' ಎಂದು ಖಾರವಾಗಿ ಪ್ರಶ್ನಿಸಿದರು.

''ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಸರಿಯಾಗಿ ವಾಸ್ತವಾಂಶ ಸಮಸ್ಯೆಗಳನ್ನು ಹೇಳದೆ ಎರಡು ತಿಂಗಳಿಂದ ನಡೆದುಕೊಂಡು ಬರುತ್ತಿದ್ದಾರೆ. ತಮಿಳುನಾಡಿದವರು ಏನು ಉಲ್ಲಂಘನೆ ಮಾಡಿದ್ದಾರೆ. ಅದನ್ನು ಪ್ರತಿಭಟಿಸಬೇಕಲ್ಲವೇ ಸುಮ್ಮನೆ ಪ್ರಾಧಿಕಾರದವರು ಹೇಳಿದರು ನೀರು ಬಿಡುತ್ತೇವೆ ಎಂದರೆ ಹೇಗೆ? ಒಂದು ಕಡೆ ನೀರಿಲ್ಲ ಎನ್ನುತ್ತಿರಿ ಮತ್ತೊಂದು ಕಡೆ ಕೋರ್ಟ್ ಮುಂದೆ ಹೋಗಿ ನೀರು ಬಿಡುತ್ತೀರಿ. ಯಾವ ರೀತಿಯ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ನಾನು ಹೇಳಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ನ್ಯಾಯಾಂಗ ನಿಂದನೆ ಆಗಲ್ಲ ಎಂದಿದ್ದೇನೆ. ಇದಕ್ಕೆ ಪೂರಕ ಮಾಹಿತಿಗಳನ್ನು ಕೊಟ್ಟಿದ್ದೇನೆ. ಆದರೂ ನ್ಯಾಯಾಂಗ ನಿಂದನೆ ಭಯದಿಂದ ಎಂದು ನೀರು ಬಿಡುತ್ತೇವೆ ಎಂದಿದ್ದಾರೆ. ಇಷ್ಟೆಲ್ಲಾ ಆಟಗಳನ್ನು ಯಾಕೆ ಆಡುತ್ತಿದ್ದೀರಿ. ಈಗಲೂ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ನೀರು ಹರಿಸುವುದನ್ನು ನಿಲ್ಲಿಸಿ'' ಎಂದರು.

ಸಂಸದ ಬಸವರಾಜು, ಸಚಿವ ರಾಜಣ್ಣ ವಿರುದ್ಧ ಹೆಚ್​ಡಿಕೆ ವಾಗ್ದಾಳಿ: ''ತುಮಕೂರು ಸಂಸದ ಬಸವರಾಜ್ ಹೇಳಿಕೆ ನೋಡಿದೆ. ಈ ನಾಡಿಗೆ ಅವರದ್ದೆಲ್ಲಾ ಏನು ಕೊಡುಗೆ ಇದೆ? ಕ್ರಿಮಿನಲ್ ರಾಜಕೀಯ ಮಾಡಿಕೊಂಡು ದೇವೇಗೌಡರ ಬಗ್ಗೆ ಚರ್ಚೆ ಮಾಡುತ್ತಾರೆ. ನಿಮ್ಮ ಚಿಲ್ಲರೆ ರಾಜಕಾರಣದಿಂದ ಜನ ಈಗ ಅನುಭವಿಸುವಂತಾಗಿದೆ. ನಿಮ್ಮ ಜಿಲ್ಲೆ ನಿಮ್ಮ ರಾಜಕಾರಣದಿಂದಾಗಿ ಏನಾಗಿದೆ. ಮತ್ತೆ ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಬೇಕು ಎಂದಿದ್ದೀರಿ. ಈಗ ಸಂಸದ ಆಗಿದ್ಯಲ್ಲಪ್ಪ ಏನು ಮಾಡಿದ್ದೀಯಾ? ತುಮಕೂರಿಗೆ ನೀರು ಸರಾಗವಾಗಿ ಹರಿಯಲು 700 ಕೋಟಿ ರೂ. ಕೊಟ್ಟು ಕಾಲುವೆ ದುರಸ್ತಿ ಮಾಡಿಸಿದ್ದು ನಾನು. ಆದರೆ ಇಲ್ಲಿ ಕುಳಿತುಕೊಂಡು ನೀನು ದೇವೇಗೌಡರು ನಿಂತರೆ ಅವರ ನೆಂಟರು ಮತ ಹಾಕಲ್ಲ ಎನ್ನುತ್ತೀಯಾ? ಅಂದು ತುಮಕೂರಿಗೆ ನೀರು ಹರಿಸಲು ದೇವೇಗೌಡರು ತೆಗೆದುಕೊಂಡ ನಿರ್ಧಾರದ ವಿರುದ್ಧ ತನಿಖೆಯನ್ನು ಮಾಡಿಸಿದ್ದರು. ತುಮಕೂರಿಗೆ ಗೌಡರ ಕೊಡುಗೆ ಏನು ಎನ್ನುವುದು ಅಲ್ಲಿನ ಜನರಿಗೆ ಗೊತ್ತು'' ಎಂದು ಟಕ್ಕರ್ ನೀಡಿದರು.

''ಸಹಕಾರ ಸಚಿವರೊಬ್ಬರು ವ್ಯಂಗ್ಯವಾಗಿ ಹೇಳುತ್ತಾರೆ, ದೇವೇಗೌಡರು ಮತ್ತೆ ತುಮಕೂರಿನಲ್ಲಿ ನಿಲ್ಲಬೇಕು. ನಾವು ಅವರ ಋಣ ತೀರಿಸಬೇಕು ಎಂದಿದ್ದಾರೆ. ಆದರೆ ನೀವೆಲ್ಲ ಕಳೆದ ಬಾರಿ ಋಣ ತೀರಿಸಿದ್ದನ್ನ ನಾವು ನೋಡಿದ್ದೇವೆ. ಕಾಲ ಇದೇ ರೀತಿ ಇರುವುದಿಲ್ಲ. ದೇವೇಗೌಡರ ಹೆಸರಲ್ಲಿ ನೀವೆಲ್ಲ ರಾಜಕೀಯಕ್ಕೆ ಬಂದಿದ್ದೀರಿ, 2004ರಲ್ಲಿ ಕೇವಲ 700 ಮತಗಳ ಗೆಲುವು ಸಿಕ್ಕಿದ್ದು ನೆನಪಿಡಿ. ಆಗ ನಿಮ್ಮನ್ನು ಕಾಂಗ್ರೆಸ್ ಅಲ್ಲ ಗುರುತಿಸಿದ್ದು, ಹುಷಾರಿಲ್ಲದೆ ಇದ್ದಾಗ ಅವರ ಪರವಾಗಿ ಹೋಗಿ ದೇವೇಗೌಡರು ಕೆಲಸ ಮಾಡಿದರು. ಈಗ ಲಘುವಾಗಿ ಮಾತನಾಡುತ್ತಿದ್ದಾರೆ. ಅವರ ಮಕ್ಕಳಾಗಿ ನಾವೆಲ್ಲ ಬದುಕಿದ್ದೇವೆ ರಾಜಕಾರಣ ಮಾಡೋಣ'' ಎಂದು ಕೆ.ಎನ್. ರಾಜಣ್ಣ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾವೇರಿ ನೆಪದಲ್ಲಿ ಬಿಜೆಪಿ, ಜೆಡಿಎಸ್​​ ರಾಜಕೀಯ: ಸಿಎಂ ಸಿದ್ದರಾಮಯ್ಯ

Last Updated : Sep 25, 2023, 3:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.