ETV Bharat / state

ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕ ಸಭೆ; ಶಾಸಕ ರೇಣುಕಾಚಾರ್ಯ ವಿರುದ್ಧ ಎಫ್ಐಆರ್

author img

By

Published : Apr 7, 2023, 10:07 AM IST

Updated : Apr 7, 2023, 12:12 PM IST

ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

ಎಂ.ಪಿ ರೇಣುಕಾಚಾರ್ಯ
ಎಂ.ಪಿ ರೇಣುಕಾಚಾರ್ಯ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕ ಸಭೆ ನಡೆಸಿದ ಆರೋಪದಡಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಮಾಡಿ ಸಭೆ ನಡೆಸುತ್ತಿದ್ದ ಆರೋಪದಡಿ ಚುನಾವಣಾ ಅಧಿಕಾರಿಗಳು ನೀಡಿದ ದೂರಿನನ್ವಯ ಶಾಸಕ ರೇಣುಕಾಚಾರ್ಯ ಹಾಗೂ ಸಭೆಯ ಆಯೋಜಕ ಸಂತೋಷ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಏಪ್ರಿಲ್ 2ರಂದು ಮಧ್ಯಾಹ್ನ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ್ದ ಶಾಸಕ ರೇಣುಕಾಚಾರ್ಯ, ಕಾರ್ಯಕರ್ತರು ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಕ್ಷೇತ್ರದ ಜನರನ್ನ ಸೇರಿಸಿ ಮಾತನಾಡುತ್ತಿದ್ದರು. ಸಭೆ ವೇಳೆ ದಾಳಿ ಮಾಡಿದ್ದ ಚುನಾವಣಾಧಿಕಾರಿಗಳು ಶಾಸಕರ ಭಾಷಣದ ವೇಳೆ ಮೈಕ್ ಪಡೆದು ಕಾರ್ಯಕ್ರಮ ನಿಲ್ಲಿಸಿದ್ದರು. ಪರಿಶೀಲನೆ ವೇಳೆ ಸಂತೋಷ್ ಎಂಬುವವರ ಹೆಸರಿನಲ್ಲಿ‌ ಕಾರ್ಯಕ್ರಮ ಆಯೋಜನೆಯಾಗಿದ್ದು, ಸಭಿಕರಿಗೆ ಊಟದ ವ್ಯವಸ್ಥೆ ಸಹ ಮಾಡಿರುವುದು ಪತ್ತೆಯಾಗಿತ್ತು. ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಚುನಾವಣಾಧಿಕಾರಿ ವಿಜಯ್ ಕುಮಾರ್​ ಎಂಬುವವರು ನೀಡಿದ ದೂರಿನ ಮೇರೆಗೆ ಶಾಸಕ ರೇಣುಕಾಚಾರ್ಯ, ಕಾರ್ಯಕ್ರಮ ಆಯೋಜಕ ಸಂತೋಷ ಎಂಬುವವರ ಮೇಲೆ ಸದ್ಯ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಯ ನಿಂದನೆ ವ್ಯಕ್ತಿಯ ಮೇಲೆ ಕ್ರಿಮಿನಲ್ ಪ್ರಕರಣ(ದೊಡ್ಡಬಳ್ಳಾಪುರ): ಇನ್ನೊಂದು ಕಡೆ ಚುನಾವಣಾ ಪೂರ್ವಭಾವಿ ಸಭೆ ನಡೆಯುತ್ತಿದ್ದ ವೇಳೆ ಏಕಾಏಕಿ ಪ್ರವೇಶಿಸಿ ಗದ್ದಲ ಎಬ್ಬಿಸಿ ಚುನಾವಣ ಅಧಿಕಾರಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದಾತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದೆ.

ಏಪ್ರಿಲ್ 3 ರಂದು ಘಟನೆ ನಡೆದಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಗಡ್ಡಂಬಚ್ಚಹಳ್ಳಿ ನಿವಾಸಿ ಜಿ.ಎಂ ರಾಜಣ್ಣ ಎಂಬುವವರ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಭೆ ನಡೆಯುತ್ತಿದ್ದ ವೇಳೆ ಏಕಾಏಕಿ ಕಚೇರಿಗೆ ನುಗ್ಗಿದ ರಾಜಣ್ಣ, ನಿಮ್ಮ ನ್ಯಾಯಾಲಯದಲ್ಲಿ ನನ್ನ ಪ್ರಕರಣವಿದೆ. ಪ್ರಕರಣದ ಆದೇಶವನ್ನು ನನ್ನ ಪರ ಮಾಡಿಕೊಡಬೇಕು ಎಂದು ಉಪವಿಭಾಗಧಿಕಾರಿಗಳಾದ ತೇಜಸ್ ಕುಮಾರ್ ಅವರ ಮೇಲೆ ಕೂಗಾಡಿದ್ದಾನೆ. ಅಲ್ಲದೇ ನಾನೊಬ್ಬ ಪತ್ರಕರ್ತ ನನ್ನ ಪರವಾಗಿ ಆದೇಶ ಮಾಡಿಕೊಡದಿದ್ದರೆ ಕರ್ತವ್ಯ ಲೋಪದ ಆಪಾದನೆಯ ಅಪಪ್ರಚಾರ ಮಾಡಿ ಚುನಾವಣಾ ಆಯೋಗಕ್ಕೆ ನಿಮ್ಮ ವಿರುದ್ಧ ದೂರು ನೀಡುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಉಪವಿಭಾಗಾಧಿಕಾರಿ ತೇಜಸ್ ಕುಮಾರ್ ಅವರು ಪರಿಪರಿಯಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದು, ಇದು ಚುನಾವಣಾ ಪೂರ್ವಭಾವಿ ಸಭೆಯಾಗಿದೆ. ಸಭೆ ಮುಗಿದ ಬಳಿಕ ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಪರಿಹರಿಸುವುದಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಧಿಕಾರಿಗಳ ಮಾತಿಗೂ ಬೆಲೆ ಕೊಡದ ಆತ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಭಾವಚಿತ್ರವನ್ನು ಗೌಪ್ಯವಾಗಿ ಚಿತ್ರೀಕರಣ ಮಾಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಉಪವಿಭಾಗಾಧಿಕಾರಿ ತೇಜಸ್ ಕುಮಾರ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚುನಾವಣಾಧಿಕಾರಿಗಳ ದೂರಿನ ಅನ್ವಯ ಆರೋಪಿ ಜಿ ಎಂ ರಾಜಣ್ಣ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಪೊಲೀಸರು, ಆತನ ಮೇಲೆ ಐಪಿಸಿ ಸೆಕ್ಷನ್ 186, 189, 506, 504, ಮತ್ತು 353 ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕೆಆರ್​ಪಿಪಿ ಸಂಸ್ಥಾಪಕ ಸೇರಿ ಐದು ಜನರ ಮೇಲೆ ಪ್ರಕರಣ ದಾಖಲು

Last Updated : Apr 7, 2023, 12:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.